ಏನು ಚೋದ್ಯ ಮಾಡಿದೆ ಹುಡುಗಿ
ಏನು ಚೋದ್ಯ ಮಾಡಿದೆ.
ಬಟ್ಟೆ, ಬಗೆ
ಹಾವ, ಭಾವ
ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ.
ಹೊಟ್ಟೆಯೊಳಗೆ ಹಾಲು ಹುಯ್ದು
ಬೆಟ್ಟದಷ್ಟು ಆಸೆ ಹುಟ್ಟಿಸಿ
ಜೀವನ ದೃಷ್ಟಿ ಬದಲಿಸಿ ಬಿಟ್ಟೆ.
ಕತ್ತಲ ಕರಗಿಸಿ
ರಾತ್ರಿಗಳ ಸುಂದರವಾಗಿ ಮಾಡಿ ಬಿಟ್ಟೆ
ಪ್ರೇಮ ಯಾತ್ರೆ ಎಬ್ಬಿಸಿ
ಭೂಮಿ, ಬಾನು ಏಕಮಾಡಿ
ಎಲ್ಲವನ್ನು ಹೊಸದು ಹೊಸದು ಮಾಡಿ ಬಿಟ್ಟೆ.
ಬೆನ್ನು ತಿರುಗಿಸಿ ಭೂಮಿಗೆ
ಎಣಿಸಿ ಎಣಿಸಿ ಚುಕ್ಕಿಯ
ದಣಿಯದಂತೆ ಮಾಡಿದೆ…
ಲಕ್ಷ ಲಕ್ಷ ಬೆಳ್ಳಿ ಕಿರಣ
ಹೊಕ್ಕು ಹೊಕ್ಕು ಇರಿದಂತೆ
ಉಕ್ಕಿ ಉಕ್ಕಿ ಸಂತಸ ಬುಗ್ಗೆ
ಏರಿ ಏರಿ ಎತ್ತರಕ್ಕೆ
ಅನೂಹ್ಯ ಸುಖದಿ ತೇಲಿಸಿ ಬಿಟ್ಟೆ.
ಈ ಭೂಮಿಯೊಂದು
ದೊಡ್ಡ, ವೈವಿಧ್ಯಪೂರ್ಣ ಉದ್ಯಾನ..
ಬಾ ಬಾರೆ! ಮುಕ್ತವಾಗಿ ನಾವು ವಿಹಾರ ಮಾಡೋಣ
ಜೀವ, ಬದುಕಿನ ಸೊಬಗ ಸವಿಯೋಣ.
*****