ಇಬ್ಬನಿ ಹನಿ ಹನಿ ಸುರಿದು
ಹಾಸಿದ ತಂಪಿನ ಹೊತ್ತು
ನಿನ್ನ ಕಣ್ಗಳು ನನ್ನ ದಿಟ್ಟಿಸುತ್ತಿದ್ದವು
ಎಲ್ಲಾ ನೀರಸಗಳ ಸರಿಸಿ ಸೂರ್ಯ
ನಮ್ಮಿಬ್ಬರನು ತಬ್ಬಲು ಏರಿಬಂದ
ಹಕ್ಕಿ ಹಾರಿಹೋದ ತೇಲು ಬೆಳಗು
ಎದೆಯ ನದಿಯಲಿ ರಂಜಕದಲೆಗಳು.
ಪುಟ್ಟ ಇರುವೆ ಗೂಡ ಸರಿಸಿ
ಚಲಿಸಿದ ಚಲನೆ ಅಂಗಾಲು ತುಂಬ
ಕಚಗುಳಿ ಕಂದು ಬಣ್ಣದ ಎಲೆಯ
ತುಂಬ ವಿಷಾಧದ ಮೌನ ಕನಸುಗಳ
ದಿಗಂತ ಒಮ್ಮೆ ನೀಲಿಯಾಗಿ ಬಿಳಿಯಾಗಿ
ಮರದ ಎಲೆ ತುಂಬಾ ಕರಿನೆರಳ ಹಾಡು.
ಮೌನ ಕಳೆದು ಮಾತುಗಳ ಲಂಗರು
ಅಪ್ಪಳಿಸಿದ ಅಲೆಗಳ ಒಲವು
ದಟ್ಟ ಹೊಲದಲಿ ಅರಳಿದ ಸೂರ್ಯಕಾಂತಿ
ಮಂಜು ಮುಸುಕಿದ ಬಯಲು ಆಲಯ
ಮಾಗಿದ ಪ್ರೇಮ ನಿವೇದನೆ
ಮರದಡಿ ಗಡಿಯಾರದ ಚಲನೆ.
ನಾವು ಹಾಡಲಾಗದ ಹಾಡು ಕತ್ತಲೆ
ಬರೆಯಲಾರದ ಕವಿತೆಗಳು ಮಬ್ಬು
ಎಲ್ಲವೂ ಆಗಿ ಆಗದೇ ಅರಳಿ ನಿಂತ
ಮೌನ ಮರ ನೆರಳು ಬಿಂಬದಲಿ
ಮೂಡಿದ ಪ್ರತಿಬಿಂಬ ಲಂಬಕೆ
ಸಾಕ್ಷೀ ಅಂತರಂಗದ ಚಿಗುರು ಹಸಿರು.
*****