ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ
ಕೊರಗಿ ಕೊರಗಿ ಮರುಗುವೆ ಏಕೆ?
ಹಸಿರ ನೆಲದಾಗ ನೇಸರ ಬಾಳಿನಗಲ
ಜೀವ ಜೀವಕೆ ಬೇಸರ ಏಕೆ?
ನೀ ಯಾಕೆ ಹಿಂಗ್ಯಾಕೆ?
ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ
ನೇಸರ ಬಾಳಿನಗಲ ಪ್ರಕೃತಿ
ನನ್ನೆಲ್ಲ ಅಂಗಾಂಗಗಳು ಜೀವಜೀವಕೆ
ಚೈತನ್ಯ ನೀಡ್ಯಾವೋ ||
ಬೀಸುವ ಕೊಡಲಿಗೆ ಬೆಚ್ಚಿ ಬಿದ್ದಾಗ ನನ್ನ ಅಕ್ಕಾ…
ಬೆದರಿ, ಬೆದರಿ, ಹೆಪ್ಪಾಯ್ತೊ ರಕುತ!…
ಗೆಳೆಯ :- ನೀ ಅಳುವೆ ಏಕೆ ಗೆಳತಿ
ಕಾಣ್ವಾರು ಬಲ್ಲವರೂ ಕೇಳೇ
ದಯೆ, ಕ್ಷಮಾ ಕರುಣೆಯಿಂದಲಿ
ಕಾಯ್ವರೂ ಇಹರು ಬೇಸರವೇತಕೆ
ಬಿಡು ಚಿಂತೆ…
ಗೆಳತಿ :- ದಯೆ, ಅರ್ಥ ಬಲ್ಲವರೂ ಎಂತಿಹರು
ಇದ್ದು ಇಲ್ಲದ ಸಿರಿವಂತರೂ
ಅರೆ ಹೊಟ್ಟೆ ಕೂಗು ಕೇಳದವರು
ನೆಲಮನೆ ಗುಡಿಸಲು ಕಳೆಕಟ್ಟಿ
ಬೆಳೆಸಿದವರು
ಗೆಳೆಯ :- ಭಾವ ಬಾಗಿನಾ ವಿಧಿಯ ನಿಯಮ
ಅರೆಹೊಟ್ಟೆ ಸಿರಿಯು ಸಿರಿತನ
ಬಿಗುಮಾನ ಬಿಡು, ಮೂರೇ ದಿನದ ಸಂತೆ
ಹಾಡ್ಯಾರು ಮಾಲಿಕರು
ಅವರವರ ಜೀವನ ಅವರದೇ ಗೆಳತಿ ||
ಗೆಳತಿ – ಸಾರ್‍ಯಾರೋ ಜೀವನ
ಸಂತೆಯೊಳಗಿನ ಮಾಳಗಿ ತಿಳಿವುದೇ
ನಮ್ಮತನ ಹರಿ ಬಿಟ್ಟರೆ
ಉಳಿವುದೇನೋ ಹಿರಿತನ
ಬೆಳೆವುದೇ ಕುಲತನ
ಕೊಡಲಿ ಪೆಟ್ಟು ರೆಟ್ಟೆ
ಹಿಗ್ಗಿತೇನೋ ಗೆಳೆಯಾ… ||
ಗೆಳೆಯ :- ಹಿರಿತನ ಕುಲತನ ಅವರಲ್ಲಿ ಬೆಳೆವುದೇ
ಹಸಿರಾ ಭೂದೇವಿ ಜತನಕೆ
ಉಸಿರಾ ಕಟ್ಟಿದರೆ ಗೆಳತಿ
ಕೊಡಲಿ ಹಿಗ್ಗಿತೇನೇ
ಇರುವರು ಜಾಣರು ಕೇಳೇ ಸಖಿ ||
ಗೆಳತಿ :- ಹೂವು ಮುಡಿಪು ದೇವಗೆ ಹೊನ್ನ ಕಳಶಕೆ
ಮುಡಿಪು ನೀರೆಯರ ಬಾಳ ಚಂದನಕೆ
ಸಿಂಗಾರ ವನಕೆ ಸಿಂಗಾರ ಮನಕೆ ಜಗಕೆಲ್ಲಾ
ನರನಾಡಿ ಬಂಗಾರ ನಿಲುವಿಗೆ ತಿಳಿವರೇನೋ ಎನ್ನ ಗೆಳಯಾ ||
ಗೆಳೆಯ :- ತಿಳಿ ನೀನು ಗೆಳತಿ, ತಿಳಿವರು ಗೆಳೆಯರು
ಪ್ರೀತಿಯ ಭಾವನೆಗೆ ಸಿಕ್ಕಿದವರು
ಕಥೆಗಳ ಸುರುಳಿ ಹೊಯ್ದವರು
ಗೋಧೂಳಿ ಲಗ್ನವಾದವರು, ಅವರೇ ನಮ್ಮವರು
ಹಿರಿಯರು ಕಿರಿಯರು ನಾವಾದವರೂ
ಅಕ್ಷತೆ ಮಂತ್ರ ಬೆಳ್ ಮುಗಿಲ ಚಪ್ಪರ
ಗಿಣಿ ಕೋಗಿಲೆ ಮನಸಾರೆ ಹರಸಿದವರು
ತಿಳಿವರು ಗೆಳೆಯ ಗೆಳತಿಯರು ||
ಅವರೇ ನಮ್ಮವರು ಅಜ್ಜ ಅಜ್ಜಿಯಾದವರು
ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ
ಗೆಳತಿ :- ಹೊಕ್ಕಳೈಶ್ವರ್ಯ, ಪ್ರೀತಿಯು ಮಾನ್ಯ
ಪಡಬಾರದ ಕಷ್ಟಪಟ್ಟೆನೋ ಗೆಳೆಯಾ
ಯಾರಿದ್ದರೇನು ಯಾರಾದರೇನು!
ನಮ್ಮವರಿಲ್ಲದ ಮೇಲೆ ಅಕ್ಕತಂಗೀರು,
ತಂದೆ ತಾಯಿಯರು, ಬಂಧು ಬಳಗ,
ಅಜ್ಜ ಅಜ್ಜಿಯರು, ಬೇರು ಬಿಟ್ಟ ಗೆಳೆಯರು,
ಭೂಮಿ ಒಳಗಿನ ಚಿಗುರೊಡೆದವರು ||
ಬಿಟ್ಟಾರು ಬಿಡುದವರು ನನ್ನ
ರೆಂಬೆ ಕೊಂಬೆ ಕೊಚ್ಚಿ ಹಾಕಿದವರು
ನಿಲ್ಲಲಾರೆ, ಬದುಕು, ಇನ್ನೇಕೆ ದುಃಖದ
ಮಡುವು ಇನ್ನೇಕೇ ಗೆಳೆಯಾ ||…
ಗೆಳೆಯ :- ನಿರಾಭರಣ ಸುಂದರಿ, ಬಲ್ಲೇನು ನಿನ್ನ ಆತ್ಮ
ನಿನ್ನತನದ ಸೋಗು ಬಲ್ಲೇ ಕಾಣೆ
ನಿನ್ನಲೊಂದಾಗಿ ನಾನಿಲ್ಲವೇನೆ
ಬರುವರು ಮತ್ತೆ ನಮ್ಮೆಡೆಗೆ
ದಿಟ್ಟತನದಾ ಹೆಜ್ಜೆ ಹಾಕಿದವರು
ಶ್ರೀ ರಕ್ಷೆ ಹಸ್ತ ನೀಡುವವರು
ನಾಳೆಗಾಗಿ ಬೆಂಗಾವಲಾಗಿ
ನಾಡಿಗಾಗಿ ದುಡಿದು ಹೆಸರಾದವರು
ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ||
ಗೆಳತಿ :- ದಿಟ್ಟತನದ ಹೆಜ್ಜೆ ಹಾಕಲಿ
ಶ್ರೀ ರಕ್ಷೆ ಹಸ್ತ ನೀಡಲಿ
ಉಳಿದೆವು ನಾವು ಕುಲಜರು
ಉಳಿವು ಎಂತು ಬಲ್ಲವ ಬಲ್ಲವರು
ಒಲ್ಲೆ ಎನ್ನಲಾರೆ ಬಾಳಿದು ಸಂಚಾರ
ನಿನ್ನ ನುಡಿಯ ನನಗಾಧಾರ
ನೀನಿಲ್ಲದೆ ನಾನೆಂದು ಬಾಳೆನೋ
ನೀನೇ ಎನ್ನ ಪುರುಷ ಕಣೋ
ಪ್ರಕೃತಿ ನಾನಾಗಿ ಉಳಿದೆನೋ ಗೆಳೆಯಾ
ನಿನ್ನಲ್ಲಿ ನಾನಾಗಿ ಉಳಿವೆನು ||
ಗೆಳೆಯ :- ನಿನ್ನತನಕೆ ನಾನಾಗಿ ಬರುವೆನು ಗೆಳತಿ
ಉಸಿರಲ್ಲಿ ನಾವು ಹಸಿರಾಗಿ
ನಾವೇ ನಾವು…
ಪರಿಸರ ಮಕ್ಕಳ ನೇಸರ
ತಿಳಿ ನೀ ಗೆಳತಿ
ಕಲಿವರು ಅವರೇ ಅವರು
ಕಾಣುವುದು ದಿಟ ಸಂತೋಷ ಬಾಳಲಿ
ಭೂಮಿ ತಾಯ ಒಡಲ ಕುಡಿಗಳು ನಾವು ||
“ಕಿಲಕಿಲನೆ ಒಮ್ಮೆ ನಸು ನಕ್ಕಳು ಗೆಳತಿ
ಗೆಳೆಯಾ ಅವಳಲ್ಲಿ ಬೆರೆತ,
ಸ್ನೇಹ ಸಂಗಮವಾಯ್ತು ||
ಧರಣಿ ಅತ್ತೆಯಾದಳು
ಸೊಸೆಗೆ ಮುತ್ತಿನಾರತಿ ಎತ್ತಿ ಬರಮಾಡಿಕೊಂಡಳು.”
“ಚೈತ್ರ ಮಾಸ ಬಂದಾಯ್ತು
ಮರ ಚಿಗುರಿ ಹಸಿರು ನಿಂದಾಯ್ತು
ಕಣ್ಣಿಗೆ ಹಬ್ಬ ತಂದಾಯ್ತು”ಽಽಽಽ
ಹಾದಿಯಲಿ ಹೂವ ಹಾಸ್ಯಾರೋ
ಬಣ್ಣ ಬಣ್ಣದಾ ಉಡಿಗೆ ತೊಟ್ಟವರು
ನಮ್ಮ ಕುಲಜರು ||
ಎಲ್ಲೆಲ್ಲೂ ಸಂಭ್ರಮ ಹೂರಣ
ಸಿರಿತನ ಹಿರಿತನ ಪಡೆದವರು
ಕಿವಿಗೆ ಇಂಪು, ಮನಕೆ ತಂಪು
ಕಂಪಿಗೆ ಸ್ಫೂರ್ತಿಯಾದವರು
ಇವರು ನಮ್ಮವರು
ಇವರೇ ಇವರು ನಮ್ಮವರು, ನಮ್ಮವರು ||
*****