ನಡಿಯೋ ದೇವರ ಚಾಕರಿಗೆ ಮುಕ್ತಿ-
ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ ||ಪ||
ಎಡಬಲಕೆ ನೋಡುತಲಿ ಷಣ್ಮುಖ
ಒಡಲೊಳಗೆ ತನ್ನ ಮನವ ಸೇರಿಸಿ
ಕಡು ವಿಷಯ ಕರುಣಾಬ್ದಿಗಳ ಕೈ
ಹೊಡೆದು ಮುಂದಕೆ ಒಡುತೋಡುತ ||ಅ.ಪ.||
ಬಯಲೊಳು ಬಯಲು ಪುಟ್ಟಿಸಿದಾ ನಿರ್-
ಬಯಲಿನೊಳಗೆ ತನ್ನಾಲಯವ ಕಟ್ಟಿಸಿದಾ
ಭವನಿವಾರಣ ಭಕ್ತವತ್ಸಲ
ಅಹುದೆನಿಸಿ ನಿಶ್ಚಯಿಸಿ ಮನದೊಳು
ತವಕ ತೂರ್ಯದ ಲಕ್ಷದಿಂದಲಿ
ಭವಸಮುದ್ರವ ದಾಂಟು ದಾಟುತ ||೧||
ಆ ಮಹಾಮಹಿಮ ಪೇಳಿದನು ಈ
ಭೂಮಿಯೋಳ್ ಹುಲಗೂರ ಗ್ರಾಮಕಿಳಿದನು
ನಾಮ ರೂಪ ಕ್ರಿಯಾ ಕಲಾಪದಿ
ಸೀಮೆಯನು ಗೆಲಿದಂಥ ಸ್ವಾಮಿಯ
ನೇಮ ಹಿಡಿದಾತ್ಮನೊಳು ಭಜಿಸುತ
ಕಾಮ ಕ್ರೋಧವ ಕಾಲಿಲೊದೆಯುತ ||೨||
ಜೀವ ಪರಮರೊಂದುಗೂಡಿ ಅನು
ಭಾವದಿ ಸಾಯ್ಯುಜ್ಯ ಪದವಿಯ ಬೇಡಿ
ಕಾಯಿ ಸಕ್ಕರಿ ಊದನೀಡುತ
ಜಿವ್ಹೆಯೊಳು ಮಂತ್ರವನು ಜಪಿಸುತ
ಠಾವು ಶಿಶುವಿನಾಳಿಂದ ಹೊರಟು
ಮಾಯಿಯನು ಮುರಿದೊತ್ತಿ ಮೌಜಿಲೆ ||೩||
* * * *