ಓ ಎನ್ನ ಸೋದರಿ! ವೀರ ಭಾರತದ ನಾರಿ !
ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ
ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ
ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ
ನಿನಗಂದರವರಾರು ಅಬಲೆ ನೀನಿರುವಿ ಎಂದು
ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?
ಕೂರಸಿಗಳಾಟೋಪದಲಿ ಇದಿರಾದರಾರು ಅಂದು
ನಿನ್ನ ನೀ ತಿಳಿದು ಏಳು, ನಿನ್ನ ಆ ಹೃದಯವೆಮಗೆ ತೋರು
ಸಹನೆ ಸಹಕಾರ ಶಾಂತಿ ದೀಪ್ತಿಯ ಜ್ಯೋತಿ
ಹೃದಯ ತೈಲ ಹಾಕುತೆ ನಾಡದೀವಿಗೆ ಪ್ರಜ್ವಲಿಸಲಿ
ಎನ್ನ ಸೋದರಿ ನೀನು; ಕೂಡಿ ನಡೆ ಸುಮತಿ
ಭಾರತಾಂಬೆಯ ವೀರಮಕ್ಕಳ ಬಾಳು ಬೆಳಗಲಿ
ಮನೆಯ ಕೋಣೆಯ ಮರೆಯ ಸೆರೆಯಲ್ಲಿ !
ಒಲೆಯ ಮುಂದಣ ಝಳವೆ ನಿನ್ನದೋ ನೆಲೆಯು ?
ನಿನ್ನ ಕಲೆಯಲ್ಲಿ ಬಲಿಯಾಗಿಹುದೇನು ಅಲ್ಲಿ
ಓ ನಿಲ್ಲದಿರು ನಿಂತಲ್ಲಿ, ಕೇಳದೋ ಭಾರತಿಯ ಕರೆಯು !
ಮಿಂಚಿ ಮೇಲೇಳು; ನಿನ್ನ ಹೃದಯ ಹೇಳು
ನಿನ್ನೊಳಡಗಿದ ಸತ್ವ ಸತ್ಯದಾಗರವನರುಹು
ಮನವನಾವರಿಸಿಹ ಅಬಲತೆಯ ಶೀಳು
ನೀನಹುದು ಭಾವಿವಾಣಿಯ ನಾಂದಿ ಜೀವನ ಕುರುಹು
*****