ಸಲಹೆ ಕೊಡಬೇಕಾದರೆ ಮಾಡಿದನುಭವ ಬೇಡವೇ ?

ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ - ವಿಜ್ಞಾನೇಶ್ವರಾ *****

ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?

ಕೃಷಿಯೆಂದರದೊಂದು ಸಂಭ್ರಮದ ಸಂತೆ ಕೇಳ್ ಕಾಣ್ಕೆ ಇರಲೆಲ್ಲ ದೊರೆಯುವುದಲ್ಲಿ ಉಚಿತದೊಳು ಕಾಸಿನವಸರವಲ್ಲಿಲ್ಲ ನಿತ್ಯವಸಂತದುತ್ಸವವು ಕಷ್ಟ ದುಡಿತದೊಳೆಲ್ಲ ರುಚಿಗಳಿಮ್ಮಡಿಯು ಕನಸು ಕೆಡಿಸದ ಗಾಢ ನಿದ್ರೆಯೊಳೆಲ್ಲ ಖುಷಿಗಳಿಮ್ಮಡಿಯು - ವಿಜ್ಞಾನೇಶ್ವರಾ *****

ಬರಿದರ್ಥಕಾಮದ ಮರವುಳ್ಳವುದೆಂತು?

ಬೇರು ಹುಳದಿಂದಡಿಕೆ ಬುಡದಲಿ ಕೊಳೆಯು ತಿರೆ ಬೆಳೆಗಾರ ನೊಂದಿಹನು, ಸುಳಿ ಬಾಡಿತೆಂದು ವರ ಭತ್ತ ಬೆಳೆವಲ್ಲಿ ಜೀವನವೆ ಇರುವಲ್ಲಿ ಬರಿದಡಿಕೆಯನ್ನು ಬೆಳೆಯುತಿರೆ ಘನ ಸಂಸ್ಕೃತಿಯ ಬೇರೆ ಕೊಳೆಯುತಿದೆ. ಭೀಕರವು ಮುಂದೆ - ವಿಜ್ಞಾನೇಶ್ವರಾ *****

ಬೇಡದುದನೆಳೆದು ಕೊಂಡೊಡಿನ್ನೇನು?

ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ - ವಿಜ್ಞಾನೇಶ್ವರಾ *****

ಕೃಷಿಕನೊಳು ಹಸುವೋ? ಕೃಷಿಕನೇ ಹಸುವೋ?

ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು ಕಾಡೊಳಗೆ ಮೆದ್ದು ಬರೆ ಹಸುವನು ಕೊಂಡಾಡುತಲಿದ್ದ ರೈತರಿಂದಾಧುನಿಕ ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು ಕಟ್ಟಿ ಸಾಕುವ ಹಸುಗಳಾಗಿಹರೋ - ವಿಜ್ಞಾನೇಶ್ವರಾ *****

ಘಾಸಿಗೊಳ್ಳುವುದಿನ್ನೆಷ್ಟು? ಪ್ರೇಯಸಿಯಾಸೆಯಲಿ?

ಕಾಸಿಗವಕಾಶವಿಹುದೋ ಇಲ್ಲವೋ ಎಂದೆಂಬ ಬೂಸು ಚರ್ಚೆಯೊಳೇನು ದಿನ ಕಳೆವುದೋ ಕೃಷಿಯೊಳು ಸಾವಯವದುನ್ನತಿಯ ಬಗೆಗೆ ಲೇಸಲ್ಲವೆಂದಿಗಾದರು ಗಣಿಕೆ ಸಹವಾಸ ವಸುಧೆಯುರಿ ಏರುತಿದೆ ಏಡ್ಸ್ ಬಲು ಮೋಸ - ವಿಜ್ಞಾನೇಶ್ವರಾ *****

ಸಾವನ್ನೊಪ್ಪದೆ ಸಂಕಟವನಪ್ಪಿದೊಡೆಂತು?

ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು - ವಿಜ್ಞಾನೇಶ್ವರಾ *****

ನಡು ಬಡವಾದೊಡಲ್ಲಿಪ್ಪ ಸಿರಿತನಕೆಣೆಯುಂಟೇ?

ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು - ವಿಜ್ಞಾನೇಶ್ವರಾ *****

ದುಡಿಮೆಗೊಲಿಯದ ಜ್ಞಾನ ನಿಧಿಯುಂಟೇ?

ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು - ವಿಜ್ಞಾನೇಶ್ವರಾ *****

ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?

ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ - ವಿಜ್ಞಾನೇಶ್ವರಾ *****