ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ
ಮೈದಾನದಲಿ ಬಾಳ ಋತು ವಸಂತದ ಸುಗ್ಗಿ
ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ
ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ
ನಲಿದಿತೋ, ಆಕೆ ಬರುವಳು ಇಂದು ! ಮತ್ತೊಮ್ಮೆ
ನಕ್ಕು ನಗೆಯಾಡಿಸುವೆ ! ನಾಚುತಲಿ ಕೆಂಪಾಗಿ.
ನಿರ್ಮಲತೆ ಕಂಗಳಲಿ ನಲುಮೆ ಬೀರುತಲೊಮ್ಮೆ
ಅಂದಿನೋಲು, ಕೊಂಕಿನಲಿ, ಒಂದು ಚಣ ತಲೆಬಾಗಿ,
ಮತ್ತೆ ಎದೆಯೆಡೆ ಸುಳಿದು, ನಗುವ ಸೂಸುತ ಬೀಗಿ,
ಕುಣಿಯುವಳು ಎಂದಿದ್ದೆ!
ಮುಂ ಬಂದು ಕಂಡೆನದ!
ಜೀವನದ ವಿಷದೊಡಲ ಸರ್ಪಗಳ ಉರಿ ತಾಗಿ,
ಸಾವಿನೆಡೆ ದಿಬ್ಬಣವ ಬೆಳಸಿರುವ ಎಳತನದ
ಉಷೆಯ ನನ್ನುಷೆಯನ್ನು ! ಒಲವಿಗಿದೆ ಕೊನೆಯೇನು ?
ಆದರೂ ಸ್ವರ್ಗದಲಿ ದೇವ ನಗುತಿಹನೇನು ?
*****