ಸ್ಫೂರ್ತಿಯ ಮದುವೆ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಇಳಾ ಅದೇ ಗುಂಗಿನಲ್ಲಿದ್ದಳು. ಅವಳ ಮದುವೆಯದ್ದೆ ಮಾತು ಮನೆಯಲ್ಲಿ. ಅಜ್ಜಿಯ ಬಳಿ, ನೀಲಾಳ ಬಳಿ ಆ ಬಗ್ಗೆ ಹೇಳಿದ್ದ ಹೇಳಿದ್ದು. ನಿಜಕ್ಕೂ ಈ ಕಾಲದಲ್ಲಿ ಇಂತಹ ಮದುವೆಗಳ ಅವಶ್ಯಕತೆ ಇದೆ. ಸುಮ್ಮನೆ ಮದುವೆಗಾಗಿ ಲಕ್ಷಾಂತರ ಖರ್ಚು ಮಾಡುವುದು ಅದೆಷ್ಟು ವ್ಯರ್ಥ. ಹಾಗಾಗಿಯೇ ಹೆಣ್ಣುಮಕ್ಕಳನ್ನು ಸಮಾಜದ ಹೊರೆ ಎಂದು ಭಾವಿಸುವಂತಾಗಿದೆ. ಹಾಗೆ ಖರ್ಚು ಮಾಡುವುದರಿಂದ ಏನಾದರೂ ಉಪಯೋಗವಿದೆಯೇ. ಅದೇ ಹಣವನ್ನು ಹುಡುಗಿಯ ಹೆಸರಿನಲ್ಲಿಟ್ಟರೆ, ಅಥವಾ ಆಸ್ತಿಯ ಮೇಲೆ ಹಾಕಿದರೆ, ಅವಳಿಗೆ ಭದ್ರತೆ ಉಂಟಾಗುವುದಿಲ್ಲವೇ ಎಂದೆಲ್ಲ ಇಳಾ ಹೇಳಿದ್ದೇ ಹೇಳಿದ್ದು.
ನೀಲಾ ಮತ್ತು ಅಂಬುಜಮ್ಮ ಮದುವೆಗೆ ಹೋಗದಿದ್ದರೂ ಮದುವೆಗೇ ಹೋಗಿ ಬಂದ ಅನುಭವವಾಗುವಷ್ಟು ಮದುವೆ ಬಗ್ಗೆ ಹೇಳಿದ್ದಳು. ಕೆಲ ದಿನ ಅದೇ ಗುಂಗಿನಲ್ಲಿದ್ದಳು. ಮನಸ್ಸಿನಲ್ಲಂತೂ ನಿರ್ಧಾರ ತಳೆದುಬಿಟ್ಟಿದ್ದಳು. ತಾನು ಮದುವೆ ಆಗುವುದೇ ಆದರೆ ಅದೇ ರೀತಿಯ ಸರಳ ಮದುವೆ ಆಗುತ್ತೇನೆ. ಅದಕ್ಕಾಗಿ ಯಾರನ್ನು ಬೇಕಾದರೂ ಎದುರಿಸಲು ಸಿದ್ಧ ಎಂದು ತೀರ್ಮಾನಿಸಿಬಿಟ್ಟಿದ್ದಳು. ಸಧ್ಯಕ್ಕಂತು ಮದುವೆಯ ವಿಚಾರವಿಲ್ಲ. ಆದರೆ ಎಂದಾದರೊಮ್ಮೆ ಮದುವೆ ಆಗಲೇ ಬೇಕಲ್ಲ- ಮದುವೆಯಾಗದ ಹಾಗೆ ಉಳಿಯುತ್ತೇನೆ ಎಂದರೆ ನನ್ನನ್ನ ಬಿಟ್ಟಾರೆಯೇ. ಥೂ ಏನು ಹಾಳು ಸಮಾಜವೋ. ನಮಗೆ ಇಷ್ಟ ಬಂದ ಹಾಗೆ ನಾವು ಬದುಕುವಂತಿಲ್ಲ. ಈ ಮದುವೆ ಸಂಸಾರ ಯಾರಿಗೆ ಬೇಕಾಗಿದೆ. ಎಂತವನು ಗಂಡನಾಗಿ ಬರುತ್ತಾನೋ. ಎಂತವನೊಂದಿಗೆ ತಾನು ಏಗಬೇಕಾಗಿದೆಯೋ. ಮದುವೆಯ ನಂತರ ಈ ತೋಟ, ಈ ಗದ್ದೆ, ಈ ಮನೆ, ಅಮ್ಮ ಅಜ್ಜಿ ಎಲ್ಲರನ್ನೂ ಬಿಟ್ಟು ಕೋಲೇ ಬಸವನಂತೆ ಗಂಡನ ಹಿಂದೆ ನಡೆದು ಬಿಡಬೇಕು. ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. ನಮ್ಮ ಸ್ವತಂತ್ರ್ಯಕ್ಕೆ, ನಮ್ಮ ಸ್ವಂತಿಕೆಗೆ, ನಮ್ಮ ಆಸಕ್ತಿಗೆ, ನಮ್ಮ ಆಸೆಗಳಿಗೆ ಬೆಲೆ ಎಲ್ಲಿರುತ್ತದೆ?
ನಾನು ಮದುವೆಯಾಗಿ ಹೋಗಿ ಬಿಟ್ಟರೆ ಈ ಜಮೀನನ್ನು ಯಾರು ಮಾಡಿಸುತ್ತಾರೆ. ಅಮ್ಮನನ್ನು ಯಾರು ಕೊನೆಯತನಕ ನೋಡಿಕೊಳ್ಳುತ್ತಾರೆ. ಅಜ್ಜಿ ಇರುವತನಕ ಪರವಾಗಿಲ್ಲ. ಆ ಮೇಲೆ ಅಮ್ಮ ಒಂಟಿಯಾಗಿ ಬಿಡುತ್ತಾಳೆ. ಅಳಿಯನ ಮನೆಗೆ ಬಂದಿರಲು ಒಪ್ಪುತ್ತಾಳೆಯೇ? ಸ್ವಾಭಿಮಾನಿ. ಹಾಗೆಲ್ಲ ಬರಲು ಸಾಧ್ಯವೇ ಇಲ್ಲ. ನಾನೇ ಇಲ್ಲಿರುವಂತಾದರೆ, ಅಂತಹ ಹುಡುಗ ಎಲ್ಲಿ ಸಿಗುತ್ತಾನೆ. ಮನೆ ಅಳಿಯ ಬೇಕು ಅಂತಾದರೆ, ಆಸ್ತಿ ಆಸೆಗೆ ಬರುತ್ತಾನೆ. ಅಂತಹವನನ್ನು ತಾನು ಒಪ್ಪುವುದಾದರೂ ಹೇಗೆ, ಥೂ ಈ ಮದುವೆ ಅಂತ ಯಾಕಾದರೂ ಮಾಡಿದ್ದಾರೋ. ನಾನಂತು ಈ ತೋಟ, ಗದ್ದೆ ಅಂತ ಒಂಟಿಯಾಗಿ ಇರಬಲ್ಲೆ. ಸಾಧನೆಗೆ ಮದುವೆಯೇ ಮುಖ್ಯ ತೊಡಕು. ಅಮ್ಮ, ಅಜ್ಜಿ, ದೊಡ್ಡಪ್ಪ ಅಂತೂ ಸಾಧನೆಯೇ ಬೇಡ. ಮದುವೆಯೇ ಮುಖ್ಯ ಎನ್ನುತ್ತಾರೆ ಎಂದು ಗೊತ್ತಿದ್ದ ಇಳಾ, ಸಧ್ಯಕ್ಕಂತೂ ಸುಮ್ಮನಿರುವುದು. ಮುಂದೆ ಮದುವೆ ವಿಚಾರ ಬಂದಾಗ ನೋಡಿಕೊಳ್ಳೋಣ ಎಂದು ಮದುವೆಯ ವಿಚಾರವನ್ನು ಮನಸ್ಸಿನಿಂದ ತೆಗೆದು ಹಾಕಿದಳು. ತೋಟದ ಕಡೆ ಗಮನ ಹರಿಸಿದಳು.
ಬಾಳೆ ಗಿಡಗಳು ಚೆನ್ನಾಗಿ ಬಂದಿದ್ದವು. ಪ್ರತಿ ಗಿಡಕ್ಕೂ ಒಂದೊಂದು ಬುಟ್ಟಿ ಗೊಬ್ಬರ ನೀಡುತ್ತಿದ್ದು, ನಾಲ್ಕು ದಿನಗಳಿಗೊಮ್ಮೆ ಮೇಲಿಂದ ಮೇಲೆ ನೀರು ಹಾಯಿಸಲಾಗುತ್ತಿತ್ತು. ಸ್ಪಿಂಕ್ಲರ್ ಇದ್ದುದರಿಂದ, ಪಕ್ಕದಲ್ಲಿಯೇ ಹಳ್ಳದ ನೀರು ಹರಿಯುತ್ತಿದ್ದು ನೀರಿಗೇನು ತೊಂದರೆ ಇರಲಿಲ್ಲ. ಮೊದಲ ಬಾರಿ ಇಷ್ಟೊಂದು ಬಾಳೆ ಬೆಳೆದಿರುವುದರಿಂದ ಇಳಾ ಅತ್ಯಂತ ಎಚ್ಚರಿಕೆ ವಹಿಸಿದ್ದಳು. ಕೃಷಿ ತಜ್ಞರ ಸಲಹೆ ಪಡೆಯುತ್ತಿದ್ದು ಅವರ ಸೂಚನೆಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಿದ್ದಳು. ತಜ್ಞರು ಸೊರಗು ರೋಗ ಹಾಗೂ ಬೇರು ಕೊಳೆಯುವ ರೋಗ ಭಾದಿಸಬಹುದು ಎಂದು ಎಚ್ಚರಿಸಿದ್ದರು. ಕಾಲಕಾಲಕ್ಕೆ ನೀರು, ಗೊಬ್ಬರ ನೀಡಿಕೆಯ ಬಗ್ಗೆ ಹಾಗೂ ಬಾಧಿಸುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ವರ್ಷದಲ್ಲಿ ನಿರಂತರ ಬೆಳೆ ಪಡೆಯುವುದು ಕಷ್ಟವಲ್ಲ ಎಂದು ತಿಳಿಸಿದ್ದರು. ಮೊದಲನೆಯ ಬೆಳೆ ವರ್ಷ ಪೂರ್ತಿ, ಎರಡನೆಯ ಮೂರನೆಯ ನಾಲ್ಕನೆಯ ಬೆಳೆಯನ್ನು ಒಂಬತ್ತರಿಂದ ೧೦ ತಿಂಗಳವರೆಗೂ ಪಡೆಯಬಹುದು. ಕಳೆ, ಕಸ ತೆಗೆದು ಸ್ವಚ್ಛವಾಗಿರಿಸಿ ಗಿಡಗಳ ಕಾಳಜಿ ವಹಿಸಿದರೆ ಐದನೆಯ ಬೆಳೆಯನ್ನೂ ಬೆಳೆದು ಭರ್ಜರಿ ಲಾಭ ಪಡೆಯಬಹುದು ಎಂದು ಬಾಳೆ ಬೆಳೆದು ಲಾಭ ಗಳಿಸಿದ್ದ ರೈತರು ಹೇಳಿದ್ದು ಇಳಾಳ ಮನಸ್ಸಿನಲ್ಲಿತ್ತು.
ಈಗಾಗಲೇ ಎಕರೆಗೆ ೧,೫೦೦ ಗಿಡ ನೆಟ್ಟಿದ್ದಳು. ಖರ್ಚು ಸಾಕಷ್ಟು ಆಗಿತ್ತು. ಆದರೆ ಗಿಡಗಳು ಬೆಳೆದು ನಿಂತು ಗೊನೆ ಹೊತ್ತು ತೂಗುತ್ತಿದ್ದರೆ ನೋಡಲೇ ಕಣ್ಣಿಗೆ ಆನಂದವಾಗುತ್ತಿತ್ತು. ಒಂದೊಂದು ಗೊನೆ ೫೦-೬೦ ಕೆ. ಜಿ. ಭಾರ ತೂಗುವಂತಿತ್ತು. ತೋಟದ ಮದ್ಯೆ ಬೆಳೆದ ಬಾಳೆ ಗಿಡಗಳೂ ಹುಲುಸಾಗಿ ಬೆಳೆದು ಗೊನೆ ತೂಗುತ್ತಿದ್ದವು. ಗದ್ದೆಯ ಚಿತ್ರಣವೇ ಬದಲಾಗಿ ಹೋಗಿತ್ತು. ಬಾಳೆ ಇದ್ದ ಗದ್ದೆಗಳು ಹಸಿರು ವನದಂತೆ ಬಹು ದೂರದವರೆಗೂ ಕಾಣಿಸುತ್ತಿತ್ತು. ಬಾಳೆ ಗಿಡಗಳಲ್ಲಿ ಬಂಪರ್ ಬೆಳೆ ಬಂದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳತೊಡಗಿದರು. ಕೃಷಿ ಇಲಾಖೆಯವರು ಖುದ್ದಾಗಿ ಇಳಾಳ ತೋಟಕ್ಕೆ ಬಂದು ಬಾಳೆ ಬೆಳೆಯನ್ನು ಪರಿಶೀಲಿಸಿ, ಈ ಭಾಗದಲ್ಲಿ ಯಾರೂ ಈ ರೀತಿಯ ಬೆಳೆಯನ್ನು ಬೆಳೆದಿಲ್ಲ. ಇಳಾ ಧೈರ್ಯ ಮಾಡಿ ನಾಲ್ಕು ಎಕರೆಗೆ ಬಾಳೆ ಹಾಕಿದ್ದು, ಅಂಗಾಂಶ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದು-ಈ ಸಾಹಸ ಎಲ್ಲರ ಗಮನ ಸೆಳೆಯಿತು.
ರೋಗ ರಹಿತ ಹಾಗೂ ಅಧಿಕ ಇಳುವರಿ ಸಾಮರ್ಥ್ಯದ ಗಜಬಾಳೆ ಸಸಿಗಳನ್ನು ಅಂಗಾಂಶ ಕೃಷಿ ತಂತ್ತಜ್ಞಾನದ ಮೂಲಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಳಾಳ ಶ್ರಮ, ಸಾಧನೆಯ ಯಶಸ್ಸು ಅನೇಕ ರೈತರನ್ನು ಆಕರ್ಷಿಸಿತು. ತಂಡ ತಂಡವಾಗಿ ರೈತರು ಇಳಾಳ ಬಾಳೆ ತೋಟವನ್ನು ನೋಡಿ ಅಂಗಾಂಶ ಕಸಿ ಪದ್ಧತಿಯ ಬಗ್ಗೆ ಮಾಹಿತಿ ಪಡೆದರು. ಒಟ್ಟಿನಲ್ಲಿ ಬೆಳೆ ಬೆಳೆದು ಇಳಾ ಒಂದೇ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನ ಸೆಳೆದಳು.
ಬಾಳೆ ಗೊನೆಗಳನ್ನು ಮಾರಿದಾಗ ಇಳಾಗೆ ದೊರೆತ ಹಣ ನಾಲ್ಕು ಲಕ್ಷದ ಎಂಬತ್ತೈದು ಸಾವಿರ. ಅಷ್ಟೊಂದು ಹಣವನ್ನು ಒಟ್ಟಿಗೆ ನೋಡಿ ಗಳಗಳನೇ ಅತ್ತು ಬಿಟ್ಟಳು ಇಳಾ. ಭೂಮಿತಾಯಿ ಅವಳ ಕೈ ಬಿಡದೆ ಕಾಪಾಡಿತ್ತು. ಒಂದಕ್ಕೆ ಮೂರರಷ್ಟು ಲಾಭ ತಂದುಕೊಟ್ಟಿತ್ತು. ಭೂಮಿಗಿಳಿದ ಮೊದಲ ವರ್ಷದಲ್ಲಿಯೇ ತಾನು ಯಶಸ್ಸು ಸಾಧಿಸುವೆನೆಂಬ ಯಾವ ಭರವಸೆಯೂ ಅವಳಲ್ಲಿ ಇರಲಿಲ್ಲ. ಇವಳ ಕೆಲಸ ಕಾರ್ಯಗಳನ್ನು ಹೊರಗಿನವರು ಇರಲಿ, ಮನೆಯವರು, ಆಳು ಕಾಳುಗಳು ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏನೋ ಓದಿದ್ದನ್ನು, ಕೇಳಿದ್ದನ್ನು ಪ್ರಯೋಗ ಮಾಡೋಕೆ ಹುಡುಗಿ ಹೊರಟಿದೆ, ಚಿಕ್ಕ ವಯಸ್ಸು ಅನುಭವ ಸಾಲದು ಅಂತ ಗೇಲಿ ಮಾಡಿದ್ದವರೆಲ್ಲ ಈಗ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದಳು.
ಪತ್ರಿಕೆಯಲ್ಲಿ ಅವಳ ಫೋಟೋ, ರೇಡಿಯೋದಲ್ಲಿ ತೋಟದ ವಿವರ ಕೇಳಿ-ಓದಿ ಸೋಜಿಗಪಟ್ಟಿದ್ದರು. ಸುಂದರೇಶ್ ಬಾಳೆ ಗಿಡ ನೋಡಿ ನಾವಿಷ್ಟು ವರ್ಷ ಬೇಸಾಯ ಮಾಡಿದ್ದೇ ದಂಡ. ನಮಗಾಗಿರೋ ಅನುಭವ ನಾವು ತಿಳಿದು ಕೊಂಡಿದ್ದ ವಿಚಾರಗಳೆಲ್ಲ ನಿನ್ನ ಮುಂದೆ ಪ್ರಯೋಜನಕ್ಕೆ ಬಾರದಾದವು. ನಿಜಕ್ಕೂ ನೀನು ಮಣ್ಣಿನ ಮಗಳು. ಭೂಮಿ ಸೇವೆ ಮಾಡಲೇ ಹುಟ್ಟಿದವಳು. ನಿನ್ನಿಂದ ನಾವು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದಾಗ ಸಂತಸದ ಅಲೆ ಎದ್ದು ಇಳಾ ಧನ್ಯತೆ ಅನುಭವಿಸಿದಳು. ನೀಲಾ ಕೂಡ ಬೆರಗಾಗಿ ಹೋಗಿದ್ದಳು. ಈ ಸಾಧನೆ ಮಾಡಿರುವುದು ತನ್ನ ಮಗಳೇ! ನೆನ್ನೆ ಮೊನ್ನೆ ಇನ್ನು ಅಂಬೆಗಾಲಿಟ್ಟು ನಡೆದದ್ದು ನೆನಪಿದೆ. ಇಷ್ಟು ದೊಡ್ಡ ಸಾಧನೆ ಮಾಡುವಷ್ಟು ಬೆಳೆದು ಬಿಟ್ಟಳೇ. ಇಷ್ಟೊಂದು ಸೀರಿಯಸ್ಸಾಗಿ ಕೃಷಿ ಬಗ್ಗೆ ಕೆಲಸ ಮಾಡುತ್ತಾಳೆ ಎಂಬ ಯಾವ ಭರವಸೆಯೂ ಅವಳಲ್ಲಿ ಇರಲಿಲ್ಲ.
ಮೋಹನನಂತ ಮೋಹನನೇ ಕೃಷಿ ಬಗ್ಗೆ ಅಪಾರ ಆಸಕ್ತಿ.
ಶ್ರದ್ದೆ ಇಟ್ಟುಕೊಂಡವನೇ ಕೃಷಿ ನಂಬಿ ಮುಳುಗಿ ಹೋಗಿ ಮಣ್ಣು ಸೇರಿರುವಾಗ, ಈಗಿನ್ನೂ ಕೃಷಿ ಜಗತ್ತಿಗೆ ಕಾಲಿಟ್ಟ ಪುಟ್ಟ ಹುಡುಗಿ ಏನುತಾನೇ ಮಾಡಿಯಾಳು. ಹೇಗೋ ಸಮಯ ಕಳೆಯಲಿ ಎಂದೂ ಅವಳ ಯಾವ ಕೆಲಸದ ಬಗ್ಗೆಯೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇದ್ದ ಹಣವನ್ನೆಲ್ಲ ಖರ್ಚು ಮಾಡತೊಡಗಿದಾಗ ಆತಂಕವಾಗಿತ್ತು. ತಿಳುವಳಿಕೆ ಇಲ್ಲದೆ ಎಲ್ಲಿ ಹಣವನ್ನೆಲ್ಲ ಹುಡಿ ಮಾಡಿಬಿಡುತ್ತಾಳೋ ಎಂದು ಮಗಳನ್ನು ಎಚ್ಚರಿಸಿದ್ದಳು. ಇರುವ ಸಾಲದ ಮೇಲೆ ಮತ್ತಷ್ಟು ಎಲ್ಲಿ ಸಾಲ ಮಾಡಬೇಕಾದೀತೋ, ಸಾಲ ತೀರಿಸುವುದಿರಲಿ, ಮತ್ತೆ ಸಾಲವಾದರೆ ಮುಂದೆ ಇಳಾಳ ಭವಿಷ್ಯ ಹೇಗೋ ಏನೋ ಎಂದು ಹೆದರಿದ್ದಳು.
ಆದರೆ ಇಳಾ ಇಷ್ಟೊಂದು ಆಳವಾಗಿ ಕೃಷಿಯನ್ನು ಅಭ್ಯಸಿಸಿ ಒಳ ಹೊರಗನ್ನು ತಿಳಿದುಕೊಂಡು, ಹತ್ತಾರು ಕಡೆ ನೋಡಿ, ಕೇಳಿ ನಂತರವೇ ಪ್ರಯೋಗಕ್ಕಿಳಿಯುವ ಸಾಹಸ ಮಾಡಿ, ಅತ್ಯುತ್ಸಾಹದಿಂದಲೇ ಗದ್ದೆ ಗೆಲ್ಲುವೆ ಎಂಬ ದೃಢತೆಯಿಂದಲೇ ಮುಂದಡಿ ಇರಿಸಿದ್ದು, ಕಷ್ಟಪಟ್ಟು ದುಡಿದು ಈಗ ಇಷ್ಟೊಂದು ಹಣ ಸಂಪಾದಿಸಿ ಗೆಲುವು ಸಾಧಿಸಿದ್ದು ನೀಲಾಗೆ ನಂಬಲೇ ಆಗುತ್ತಿಲ್ಲ. ತಾನಿನ್ನೂ ಮಗು ಎಂದು ಕೊಂಡಿದ್ದ ಇಳಾ ಅಪಾರ ಬುದ್ಧಿವಂತೆ, ವ್ಯವಹಾರಸ್ಥೆ, ವಾಸ್ತವತೆ ತಿಳಿದು ಕೊಂಡ ವಿಚಾರವಂತೆ ಎಂದು ಅವಳ ಗೆಲುವು ಸೂಚಿಸಿತ್ತು. ವಯಸ್ಸು ಚಿಕ್ಕದಾದರೂ ತಾನು ಮಾಡಿದ ಕೆಲಸ ಚಿಕ್ಕದಲ್ಲ, ತನ್ನ ವಿಚಾರಧಾರೆ ಚಿಕ್ಕದಲ್ಲ, ತನ್ನ ಶ್ರಮ ಅಲ್ಪವಲ್ಲ. ತನ್ನ ಶ್ರದ್ಧೆ, ಆಸಕ್ತಿ ಅಪ್ರಯೋಜಕವಲ್ಲ ಎಂದು ತನ್ನ ಕೃತಿಯಲ್ಲಿ ಮಾಡಿ ತೋರಿಸಿದ್ದಳು.
ಇಷ್ಟೆಲ್ಲ ಹಿರಿಮೆಗೆ ಮತ್ತೂಂದು ಗರಿ ಎಂಬಂತೆ ಈ ವರ್ಷದ ‘ಅತ್ಯುತ್ತಮ ಕೃಷಿ ಸಾಧನೆ ಪ್ರಶಸ್ತಿ’ ಅವಳನ್ನು ಹುಡುಕಿಕೊಂಡು ಬಂದಿತು. ರಾಜ್ಯಮಟ್ಟದ ಪ್ರಶಸ್ತಿ ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು ಕಾರ್ಯಕ್ರಮದಂದು ಸನ್ಮಾನ ಕೂಡ ಇತ್ತು. ಸಾವಯವ ಕೃಷಿಯನ್ನೆ ಆಧರಿಸಿ ಯಾವುದೇ ರಾಸಾಯನಿಕ ಬಳಸದೆ ಹೊಸ ತಂತ್ರಜ್ಞಾನದ ಅಂಗಾಂಶ ಕಸಿ ಪದ್ಧತಿಯಿಂದ ಇಳಾ ದಿಢೀರನೆ ಜನಪ್ರಿಯಳಾಗಿದ್ದಳು. ಅಭಿನಂದನೆಗಳ ಸುರಿಮಳೆಯೇ ಆಯಿತು. ಮೌನವಾಗಿದ್ದುಕೊಂಡೇ ತನ್ನ ಗುರಿ ಸಾಧಿಸಿಕೊಂಡಿದ್ದಳು. ಅಪ್ಪ ಸೋತು ಹೋದಲ್ಲಿಯೇ ತಾನು ಗೆಲುವು ಸಾಧಿಸಿದ್ದಳು. ಸೋತು ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಿನ ವ್ಯಕ್ತಿಗಳಿಗೆ ಹೊಸ ದಾರಿ ತೋರುವ ದಾರಿ ದೀಪವಾದಳು. ಸಾಧಿಸಲು ಹೊರಟರೆ ನೂರಾರು ದಾರಿಗಳಿವೆ, ಕೊಂಚ ವಿವೇಚನೆ, ಕೊಂಚ ಜವಾಬ್ದಾರಿ, ಹತ್ತಾರು ಸಾಧಕರ ಅನುಭವ ಒಂದಿಷ್ಟು ಎದೆಗಾರಿಕೆ, ಸಾಕಷ್ಟು, ಶ್ರಮ ಇವೆಲ್ಲ ಇದ್ದಲ್ಲಿ ಸಾಧಿಸುವುದೇನೋ ಕಷ್ಟಕರವಲ್ಲ ಎಂದು ಅನುಭವದ ಮೂಲಕ ತೋರಿಸಿಕೊಟ್ಟಳು. ಕೃಷಿಯನ್ನು ನಂಬಿಯೂ ಬದುಕಬಹುದು. ಗೆಲ್ಲಬಹುದು. ಕೈತುಂಬಾ ಸಂಪಾದಿಸುವ ಮಾರ್ಗ ಇದೆ ಎಂದು ಕೃಷಿ ಎಂದರೆ ಮೂಗು ಮುರಿಯುವವರಿಗೆ ಪಾಠ ಕಲಿಸಿದಳು.
ಎರೆಹುಳು ಗೊಬ್ಬರ ತಯಾರಿಸುವ ಫಟಕದಲ್ಲಿ ಹುಳುಗಳು ಹೆಚ್ಚಾಗಿದ್ದು, ಹುಳುಗಳನ್ನು ಮಾರಾಟ ಮಾಡಿದ್ದಳು. ತಮ್ಮ ತೋಟಕ್ಕೆ ಅಗಿ ಮಿಕ್ಕ ಗೊಬ್ಬರಕ್ಕೂ ಗಿರಾಕಿಗಳಿದ್ದರು. ಅದೂ ಆದಾಯದ ಮೂಲವಾಯಿತು. ಒಟ್ಟಿನಲ್ಲಿ ಹೊಸ ಕೃಷಿ ವಿಧಾನದಿಂದ ನಷ್ಟವೇನೂ ಇಳಾಗೆ ಆಗಲಿಲ್ಲ. ಈ ವರ್ಷ ಕಾಫಿಯಿಂದೇನೂ ಲಾಭವಾಗಲಿಲ್ಲ. ಆದರೆ ಎದೆ ಗುಂದಲಿಲ್ಲ. ಮುಂದಿನ ಬಾರಿ ಅದು ಲಾಭ ತಂದು ಕೊಟ್ಟೆ ಕೊಡುತ್ತದೆ ಎಂಬ ತುಂಬ ಭರವಸೆ ಅವಳಲ್ಲಿತ್ತು. ಬಂದ ಆದಾಯದಲ್ಲಿ ಬೋನಸ್ಸು ರೂಪದಲ್ಲಿ ತೋಟದ ಕೆಲಸದಾಳುಗಳಿಗೂ ಸ್ವಲ್ಪ ಭಾಗ ಹಂಚಿ, ಸ್ವತಃ ದುಡಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಆಳುಗಳನ್ನು ಪ್ರಚೋದಿಸಿದಳು. ಬೆಳೆಗೆ ಲಾಭ ಬಂದರೆ, ಆದರ ಲಾಭ ತಮಗೂ ಸಂದಾಯವಾಗುತ್ತದೆ ಎಂದು ತಿಳಿದಾಗ ಆಳುಗಳೂ ಕೂಡ ಹೊಸ ಹುರುಪಿನಿಂದ ಕೆಲಸ ಮಾಡಲು ಉತ್ತೇಜಿತರಾದರು. ಈ ಸಂಬಳದ ಜೊತೆಗೆ ಬೋನಸ್ಸಿನ ಆಸೆಗೆ ಹೊರಗಡೆಯಿಂದಲೂ ಆಳುಗಳು ಬರತೊಡಗಿದರು. ಅಲ್ಲಿಗೆ ಆಳುಗಳ ಸಮಸ್ಯೆಯೂ ತೀರಿದಂತಾಯಿತು.
ವಿಸ್ಮಯ, ಇಳಾಳ ಸಾಧನೆಯನ್ನು ಅಭಿನಂದಿಸಲು ಶಾಲೆಯಲ್ಲಿಯೇ ಒಂದು ಸಮಾರಂಭ ಏರ್ಪಡಿಸಿದನು. ಸುತ್ತಮುತ್ತಲ ತೋಟದವರು ಕೃಷಿ ಇಲಾಖೆಯ ಅಧಿಕಾರಿಗಳು, ಸುದ್ದಿ ಮಾಧ್ಯಮದವರನ್ನು ಆಹ್ವಾನಿಸಿದ್ದನು. ಇಂತಹ ಪ್ರಚಾರ ತನಗೆ ಬೇಡವೇ ಬೇಡ, ತಾನು ಈಗಷ್ಟೆ ಈ ಕ್ಷೇತ್ರಕ್ಕೆ ಕಾಲಿಟ್ಟರುವವಳು. ಸಾಧನೆ ಮಾಡಿದವರು ಸಾಕಷ್ಟು ಜನರಿದ್ದಾರೆ, ತನಗೆ ಇದು ಇಷ್ಟವಿಲ್ಲ ಎಂದು ಸಾಕಷ್ಟು ವಿರೋಧಿಸಿದಳು. ಆದರೆ ವಿಸ್ಮಯ್ ಹಾಗೂ ಸುತ್ತಮುತ್ತಲಿನ ನಾಗರಿಕರು ಅವಳ ವಿರೋಧವನ್ನು ಲೆಕ್ಕಿಸದೆ ಕಾರ್ಯಕ್ರಮ ಏರ್ಪಡಿಸಿಯೇಬಿಟ್ಟರು. ಮುಖ್ಯವಾಗಿ ವಿಸ್ಮಯನಿಗೆ ಈ ಕಾರ್ಯಕ್ರಮ ಮಾಡಲೇಬೇಕೆಂಬ ಅಭಿಲಾಶೆ ಉಂಟಾಗಿತ್ತು. ಹೀಗೊಂದು ಸಾಹಸಗಾಥೆಯನ್ನು ಹತ್ತಾರು ಜನರಿಗೆ ತಿಳಿಸುವಂತಹ ಸಾಧನೆಯನ್ನು ಪ್ರಶಂಸಿಸಿ ಗೌರವ ನೀಡುವ ಜವಾಬ್ಧಾರಿ ಹೊತ್ತು ಅತ್ಯಂತ ಉತ್ಸಾಹದಿಂದ ಮುನ್ನುಗಿದ್ದನು.
ಅಂದು ಭಾನುವಾರ ಶಾಲೆಯ ಮುಂಭಾಗದಲ್ಲಿ ದೊಡ್ಡದಾಗಿ ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಿದ್ದರು. ಆಹ್ವಾನಿತರೆಲ್ಲ ಬಂದರು. ಊರ ಜನ ಕೂಡ ತಮ್ಮ ಹುಡುಗಿ ತಮ್ಮೂರಿನ ಹೆಸರನ್ನು ಖ್ಯಾತಿಪಡಿಸಿದವಳು ಎಂಬ ಅಭಿಮಾನದಿಂದ ಸೇರಿದರು. ಅದೊಂದು ಖಾಸಗಿ ಕಾರ್ಯದಂತೆ ಭಾಸವಾಗದಂತೆ ಜನ ಸೇರಿದ್ದರು. ಆ ಊರಿನಲ್ಲಿ ಅದೇ ಮೊದಲು ಅಂತಹ ಕಾರ್ಯಕ್ರಮ. ಕುತೂಹಲದಿಂದಲೋ, ಆಸಕ್ತಿಯಿಂದಲೋ ಸುತ್ತಮುತ್ತಲಿನ ಹಳ್ಳಿಯವರು ಸೇರಿದ್ದರು. ಆಹ್ವಾನಿತರೆಲ್ಲ ಇಳಾಳನ್ನು ಕೊಂಡಾಡಿದರು. ಕೃಷಿ ಸಾಧಕಿ ಪ್ರಶಸ್ತಿ ಪಡೆದದ್ದು ತಮ್ಮೂರಿಗೆ ಹೆಮ್ಮೆಯ ವಿಜಾರ, ಇಡೀ ಊರಿಗೆ ಕೀರ್ತಿ ತಂದಿದ್ದಾಳೆ. ಇದುವರೆಗೂ ಯಾರು ಮಾಡದ ಈ ಸಾಧನೆಯನ್ನು ಮಾಡಿ ಹೆತ್ತವರಿಗೆ ಗೌರವ ಹೆಚ್ಚಿಸಿದ್ದಾಳೆ. ಈ ಪ್ರಾಂತ್ಯದಲ್ಲಿ ಎಲ್ಲರೂ ಕೃಷಿ ಮಾಡುತ್ತಿದ್ದರೂ ಹಳೆ ವಿಧಾನಗಳಿಗೆ ಅಂಟಿಕೊಂಡು ಹೊಸತನ್ನು ಅಳವಡಿಸಿಕೊಳ್ಳುವ ಎದೆಗಾರಿಕೆ ಇದೆಲ್ಲ. ಕೃಷಿ ಪ್ರಯಾಸಕರ ಕಷ್ಟಕರ ಎಂಬುದನ್ನ ಬಿಂಬಿಸುತ್ತಿದ್ದ ಈ ದಿನಗಳಲ್ಲಿ ಆಗಷ್ಟೆ ಕೃಷಿ ಕ್ಷೇತ್ರದಲ್ಲಿ ಕಣ್ಣು ಬಿಡುತ್ತಿದ್ದರೂ, ಸಾಧನೆ ಗೈದಿರುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಹಾಡಿ ಹೊಗಳಿದರು.
ಶಾಲು ಹೊದಿಸಿ ಫಲಪುಷ್ಟ ನೀಡಿ ನಟರಾಜನ ವಿಗ್ರಹ ನೀಡಿ ಸತ್ಕರಿಸಿದರು. ಈ ಅಭೂತಪೂರ್ವ ಸನ್ಮಾನದಿಂದ ಇಳಾ ಭಾವ ಪರವಶಳಾದಳು. ಸಂಕೋಚದಿಂದ ತಗ್ಗಿಸಿದ ತಲೆಯನ್ನು ಎತ್ತಲಾಗಲೇ ಇಲ್ಲ. ಮಾತನಾಡಿ ಎಂದು ಮೈಕ್ ಕೊಟ್ಟರೆ ಗಂಟಲುಬ್ಬಿ ಒಂದು ಒಂದೂ ಮಾತನಾಡಲಾರದೆ ಆನಂದಭಾಷ್ಪ ಸುರಿಸಿದಳು. ಮೂಲೆಯಲ್ಲಿ ನಿಂತಿದ್ದ ವಿಸ್ಮಯ್ ಕೈಕಟ್ಟಿ ನಿಂತು ಎಲ್ಲವನ್ನು ನೋಡುತ್ತಿದ್ದು, ಇಳಾ ಅವನತ್ತ ಕೃತಜ್ಞತೆಯಿಂದ ನೋಡಿದಾಗ ನಸುನಕ್ಕನು. ಈ ಕಾರ್ಯಕ್ರಮದ ರೂವಾರಿಯಾದ ವಿಸ್ಮಯ್ ಯಾರೆಷ್ಟೇ ಕರೆದರೂ ವೇದಿಕೆ ಏರಲಿಲ್ಲ. ದೂರದಲ್ಲಿ ನಿಂತುಕೂಂಡೇ ಈ ಅಪೂರ್ವ ಗಳಿಗೆಯನ್ನು ಆಸ್ವಾದಿಸಿದ್ದ. ವರ್ಷದ ಹಿಂದೆ ಹೇಗೊ ಎಲ್ಲೋ ಇದ್ದ ವಿಸ್ಮಯ್ ಇಂದು ಇಲ್ಲಿ ಎಲ್ಲರ ಗೌರವ ಪ್ರೀತಿಗೆ ಪಾತ್ರನಾಗಿ ಅವರಲ್ಲೊಬ್ಬನಂತೆ ಬೆರೆತು ಹೋಗಿದ್ದಾನೆ. ನೋವುಂಡ ಎರಡು ಜೀವಗಳು ಇಂದು ವಿಸ್ಮಯನಿಂದಾಗಿ ಧನ್ಯತೆಯಿಂದ ಪುಳಕಗೊಂಡಿವೆ. ಶಾಲೆ ತೆಗೆದು ನೀಲಾಳ ಬದುಕಿಗೆ ಓಯಸ್ಸಿಸ್ ಆದರೆ, ಅವಳ ಮಗಳಿಗೆ ಗೌರವ ನೀಡಿ ಈ ಅಭೂತಪೂರ್ವವಾದ ಹಾಗೂ ಎಂದೂ ಮರೆಯಲಾರದ ಸನ್ಮಾನ ನೀಡಿ ಊರಿನ ಗೌರವ ಹೆಚ್ಚಿಸಿದ್ದಾನೆ. ಯಾರೂ ಮಾಡದ ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಹೀಗೆ ಗೌರವಿಸುವುದು ತನ್ನ ಕರ್ತವ್ಯವೆಂದೇ ಭಾವಿಸಿರುವ ವಿಸ್ಮಯಗೆ ಇದರಲ್ಲೇನು ಹೆಚ್ಚುಗಾರಿಕೆ ಕಾಣಿಸುತ್ತಿಲ್ಲ. ಅದು ಅವನ ದೊಡ್ಡತನವೆಂದೇ ಎಲ್ಲರೂ ಕೊಂಡಾಡಿದರು.
ವೇದಿಕೆಯ ಮೇಲೆ ಕುರ್ಚಿಯೊಂದರಲ್ಲಿ ಕೂರಿಸಿ ಇಳಾಳಿಗೆ ಗಂಧದ ಹಾರ ಹಾಕಿ, ಶಾಲು ಹೊದಿಸುತ್ತಿದ್ದರೆ-ನೀಲಾ ಮತ್ತು ಅಂಬುಜಮ್ಮ ಹೆಮ್ಮೆಯಿಂದ ಬೀಗಿದರು. ಇಂತ ಸನ್ಮಾನವನ್ನು ತನ್ನ ಜೀವಮಾನದಲ್ಲಿ ನೋಡುತ್ತಿರುವುದು ಮೊದಲು, ತಮ್ಮ ಮನೆತನದಲ್ಲಿ ಯಾರೂ ಇಂತಹ ಗೌರವಕ್ಕೆ ಪಾತ್ರರಾಗಿರಲಿಲ್ಲ. ತಮ್ಮ ಕಣ್ಮುಂದಿನ ಪೋರಿ ತಮ್ಮ ಮನೆತನದ ಕುಡಿ ಸಾವಿರಾರು ಜನರ ಮುಂದೆ ಗೌರವ ಸ್ವೀಕರಿಸಿದ್ದು ಸುಂದರೇಶರಿಗೂ ಸಂತೋಷದಿಂದ ಕಣ್ಣು ತುಂಬಿ ಬಂದು ಶಾಲಿನ ತುದಿಯಿಂದ ಕಣ್ಣೊರಿಸಿಕೊಂಡು ಆ ಆನಂದದ ಕ್ಷಣಗಳನ್ನು ಸವಿದರು. ಮನೆಯವರನ್ನೆಲ್ಲ ಕರೆತಂದು ಮುಂದಿನ ಸಾಲಿನಲ್ಲಿಯೇ ಕೂರಿಸಿಬಿಟ್ಟಿದ್ದರು. ಮುಖ್ಯವಾಗಿ ಮಗ ಇದನ್ನು ನೋಡಿ ಕಲಿತುಕೊಳ್ಳಲಿ ಎಂದೇ ಆಶಿಸಿದರು.
*****