Home / ಕವನ / ಕವಿತೆ / ಬುರುಗಿನ ವಿದ್ಯೆಗೆ ಧಿಕ್ಕಾರ

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು
ಕಣ್ಣೆತ್ತಿ ನೋಡದ ಹಾಗೆ ಮಾಡುವ
ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ

ಜೀವನವೆಂದರೆ ಬದುಕೇನೆಂದರೆ
ಗೊತ್ತೇ ಇಲ್ಲದ ಮುಗುದ ಮಕ್ಕಳು
ಅನಂತ ವಿಶ್ವದ, ಅರಿಯದ ಭವಿಷ್ಯ
ಕಲ್ಪನೆ ಕನಸಿನ ಕಣ್ಣುಗಳು

ಬುರುಗು ಜೀವನಕೆ ಒಗ್ಗಿ ಹೋಗುತಿವೆ
ಬ್ಯಾಗಡಿ ಬದುಕಿಗೆ ಮಾರು ಹೋಗುತಿವೆ
ತಮಗೇ ತಿಳಿಯದ ರೀತಿಯಲಿ ಈ
ವಿದೇಶಿ ಮಾದರಿ ಓದಿನಲಿ

ಸಮವಸ್ತ್ರದ ಬೂಟ್ ಟೈ ಬಿಗಿತಗಳಲಿ
ಉಸಿರು ಕಟ್ಟುತಿದೆ ದೇಶೀಯತೆ
ಬುರುಗು ಪಾಠಗಳು ಬುರುಗು ನೋಟಗಳು
ಸಸಿಯದು ಬೆಳೆವುದು ಪರಕೀಯತೆ

ನೆಲದ ವಾಸನೆಯ ಹೀರದ ಪರಿಯಲಿ
ಕೃತಕ ವಾಸನೆಯ ಲೇಪನವು
ತಿಳಿಗಣ್ಣಲಿ ತಿಳಿದೃಶ್ಯವ ನೋಡಲು
ಬಣ್ಣ ಕನ್ನಡಕ ಅಂತರವು

ಬಟ್ಟೆಯಂಗಡಿಯ ಮಾಡೆಲ್ ಟೀಚರ್
ಮಾತು ಕೃತಿಗಳಲಿ ಕೃತಕತೆಯು
ಸಿನಿಮ ಟಿ.ವಿ.ಗಳ ಪರದೆ ಪಾತ್ರಗಳ
ಮಾದರಿ ಎದುರಲಿ ದಿನ ಕತೆಯು

ಮಾರ್ಕು ಉನ್ನತಿಯ ಹೋಂವರ್ಕ್ ಯಂತ್ರದಿ
ಬದುಕಿಗೆ ಮುಚ್ಚಿದ ಚಪ್ಪಡೆಯು
ಆಂಗ್ಲೀಕರಣದ ಮಾದರಿಯಚ್ಚಿನ
ಪ್ಲಾಸ್ಟಿಕ್ ಪದವೀಧರ ಪಡೆಯು

ಈ ನೆಲ ಯಾವುದು ಈ ಜನ ಯಾರು
ಈ ದೇಶದ ಬದುಕೆಂತಿಹುದು
ನಾಡನು ಕಟ್ಟುವ ಕೆಳಜನ ಯಾರು
ಅರಿವೇ ಇಲ್ಲದ ಪೀಳಿಗೆಯು

ಪಟ್ಟಣ ಸಂಸ್ಕೃತಿ ಧನಿಕರ ಸಂಸ್ಕೃತಿ
ಮಾದರಿಯಾಗಿದೆ ಎಲ್ಲರಿಗೆ
ವಿಷವು ರಕ್ತದಲಿ ಎಲ್ಲಿಡೆ ಹರಿದಿದೆ
ದೇಶವು ವಿಷಮಯವಾಗುತಿದೆ

ಮುಳ್ಳಿನ ಸಸಿಗಳು ಮರವಾಗಿ ಬೆಳೆದು
ದೇಶವು ಮುಳ್ಳಿನ ಕಾನನವು
ಮಣ್ಣಿನ ಜನರನು ಮೆತ್ತನೆ ಹಸಿರನು
ತೊತ್ತಳು ತುಳಿಯುವ ನರ್ತನವು

ಹಳ್ಳಿಯ ಜನಗಳು ಅವರ ಬದುಕುಗಳು
ಹೇಸಿಗೆ ಈ ಬುರುಗಿನ ಜನಕೆ
ಇಂಥ ಹೊದರು ಮುಳ್ಳುಗಳ ಸೃಷ್ಟಿಸುವ
ವಿದೇಶಿ ವಿದ್ಯೆ ನಮಗ್ಯಾಕೆ

ನಿಂತ ನೆಲವನೇ ಅಸಹ್ಯ ಕಾಣುವ
ಬೆಂತರ ಓದಿಗೆ ಧಿಕ್ಕಾರ
ತಾಯಿನಾಡ ಪರದೇಶಿ ಮಾಡುತಿಹ
ಬುರುಗು ಪೀಳಿಗೆಗೆ ಧಿಕ್ಕಾರ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...