ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ
ಆಣಿದ ಜಾಲಕೆ ನಿನ್ನಾ ಬೆನ್ನ ಹತ್ತಿ ಮುನಿ ಜನ
ನುಣ್ಣಗ ಸಂದಾನ್ನವರು ಮನುಜರು ಚನ್ನಚಲ್ವಿಕೆಗೆ ಸೋತು ಅರಣ್ಯದಿ
ರನ್ನ ಸಿದ್ಧ ಋಷಿಗಳನು ಕೆಣಕಿ ಬಲಗಣ್ಣು
ಸೊನ್ನಿಮಾಡಿ ಕಾಮ ಪಾಶದಿ ಮಣ್ಣುಗೂಡಿಸಿದೆ
ಬಿಡು ಮಾಯಿ ಹೌದು ಬಿಡು
ಘನ್ನ ಘಾತಕನ ಕಂಡೆ ನಮ್ಮನ್ನಾ || ೧ ||
ಮೊದಲಿಗೆ ಶಿವನೊಳು ಮುದದಿ ಮೋಹಿಸಿದಳು
ಕದನ ಹಚ್ಚಿ ಲಂಕಾದ್ರಿಯ ಸುಡಿಸಿದಿ
ಅದನ ತಿಳಿದು ಸುಗ್ರೀವನ ಮಡದಿಗೆ ನಜರಿಟ್ಟು
ವಾಲಿಯನು ಹೊಡಸಿದಿ
ಒದಗಿ ಬ್ಯಾಗ ಬ್ರಹ್ಮನ ಶಿರಗಡಿಸಿದಿ
ಇದನ ಕೇಳಿ ಎಮಗೆ ಹೆದರಿಕೆ ಬರುತಿರೆ
ಎದುರಿಗೆ ಬರದಿರು ಪದಮಸುನಿಯಳೆ || ೨ ||
ಆರೆಣೆಗಾಣೆ ನಿನಗೆ ನಾರಿಮಣಿಯರೊಳಗೆ
ಮೀರಿದೊಯ್ಯಾರೆ ಈಗ ಮೂರುಲೋಕಾ ನಿನ್ನ ಕೆಳಗೆ
ದ್ವಾರಕನಗರವ ನೀರೊಳು ಮುಣಗಿಸಿ
ನಾರಾಯಣನ ಮೆಟ್ಟಿ ಕುಳಿತೆ ಸಖಿ
ಧಾರಣಿಪತಿ ಪಾಂಡವರ ಜೂಜಿನಲಿ ಸೇರಿ ಅಡವಿಗಟ್ಟಿಸಿ ನಿನ್ನ ಗುಣಾ
ಸಾರಲೇನು ಶಿಶುನಾಳಧೀಶನ ಮುಂದೆ ತೋರಿಸದಿರು
ಬಡಿವಾರ ಬಜಾರಿ || ೩ ||
****