ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ
ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ?
ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು
ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು
ದಿನದ ದುಃಖ ದುಡಿತ
ಇದ್ದಂತೇ ಇರುತ
ಹೊಸದಾಯಿತೆ ಇಡಿಯ ಲೊಕ ನೀ ಹಜ್ಜೆಯನಿಡುತ!
ಬೀಗಿ ನಿಂತ ಹೂವಿನೆದೆಯ ತಾಗಿ ಗಾಳಿ ಬೆರಳು
ಸಾಗಿ ಬಂತು ಕಂಪಿನ ಹೊಳೆ ಜೀವವಾಯ್ತು ಮರುಳು
ಸೊಕ್ಕಿ ಪ್ರಾಣ ತುಟಿಯಲಿ
ಉಕ್ಕಿತಲ್ಲೆ ಭಾವ
ಹಕ್ಕಿಯಾಗಿ ಆಗಸದಲಿ ತೇಲಿತಲ್ಲೆ ಜೀವ!
ಕಾಮವಿರದೆ ಜೀವಕೆ? ಅದೇ ಮೂಲ ಪ್ರೇಮಕೆ
ನೇಮವಿಲ್ಲ ಕನವರಿಕೆಯ ಭಾವಾಗ್ನಿಯ ಹೋಮಕೆ
ತೀರದಲ್ಲೆ ಉಳಿದು
ಕೂಗಿ ಕೂಗಿ ಕರೆದು
ಜೀವದ ಚೀರಾಟವೇ ಹಾಡಾಯಿತು ಒಲಿದು
*****
ಪುಸ್ತಕ: ನಿನಗಾಗೇ ಈ ಹಾಡುಗಳು