ಕರ್ನಾಟಕದ ಡಾಬಾ ಸಂಸ್ಕೃತಿ

ಕರ್ನಾಟಕದ ಡಾಬಾ ಸಂಸ್ಕೃತಿ

ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮೂಲಕವಾಗಿ ತನಗೊಂದು ಅನನ್ಯತೆಯೂ ಪ್ರಾಪ್ತವಾಗುತ್ತದೆ. ಆದರೂ ತನಗೊದಗುವ ಬಹುಮುಖಿ ಆಯಾಮಗಳು ತನ್ನ ತಾಯಿಯಾದ ಸಂಸ್ಕೃತಿಯ ಸಂಕೀರ್ಣತೆಯನ್ನು ಗ್ರಹಿಕೆಗೆ ತಂದುಕೊಡುತ್ತದೆ. ಈ ಹಿನ್ನೆಲೆಯಲ್ಲಿ ಡಾಬಾ ಎಂಬ ಸಾಂಸ್ಕೃತಿಕ ಘಟಕವು ಸಹ ಸ್ವತಂತ್ರ ಘಟಕವಾಗದೆ, ತನ್ನ ಅನನ್ಯತೆಯ ಮೂಲಕವಾಗಿ ತನಗೆ ಹಿನ್ನೆಲೆಯಾಗಿರುವ ಸಾಂಸ್ಕೃತಿಕ ಸಂದರ್ಭದ ಸಂಕೀರ್ಣತೆಯನ್ನು ವಿವರಿಸುವ ಒಂದು ಸಾಂಸ್ಕೃತಿಕ ಆಕರವಾಗಿ ನಮ್ಮ ಗಮನವನ್ನು ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಡಾಬಾ ಸಂಸ್ಕೃತಿಯನ್ನು ಇಲ್ಲಿ ವಿವಕ್ಷಿಸಲಾಗುವುದು.

ಕರ್ನಾಟಕದಲ್ಲಿ ಡಾಬಾಗಳು ಯಾವಾಗ ಆರಂಭಗೊಂಡವು ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಆದರೆ ಇವುಗಳ ಸಂಖ್ಯೆ ೮೦-೯೦ರ ದಶಕದಲ್ಲಿ ಗಣನೀಯವಾಗಿ ಹೆಚ್ಚಿತು ಎಂಬುದರಲ್ಲಿ ಎರಡು ಮಾತಿಲ್ಲ. ಇವುಗಳೆಲ್ಲವೂ ಮೊದಲಿಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಾರ್ಯಾರಂಭ ಮಾಡಿದವು ಎಂಬುದು ಸ್ಪಷ್ಟ. ಆಗಿನಿಂದಲೂ ಬಹುತೇಕ ಡಾಬಾಗಳಿಗೆ ಹಗಲು-ರಾತ್ರಿಗಳ ಪರಿವೆ ಇಲ್ಲ. ಕಾರಣ, ಇವು ಪ್ರಯಾಣಿಕರ ಅನುಕೂಲವನ್ನು ಆಧರಿಸಿರುವುದಾಗಿರುವುದರಿಂದ.

ಆದರೆ ಕಳೆದ ಕೆಲವು ವರ್ಷಗಳಿಂದ ಕೆಲವು ಡಾಬಾಗಳು ನಗರಗಳ ಒಳಭಾಗದಲ್ಲೂ ಕಾಣಿಸಿಕೊಂಡಿವೆ. ಇವುಗಳ ಗ್ರಾಹಕರು ಪ್ರಯಾಣಿಕರಲ್ಲ; ವಿಶೇಷವಾಗಿ ನಗರವಾಸಿ ಯುವಕರು. ಇವರ ಸೇವನೆ ಸಹ ವಿಶೇಷವಾಗಿ ಮದ್ಯ ಮಾಂಸಗಳೇ ಆಗಿವೆ. ಇವರು ಇಲ್ಲಿ ಕಳೆಯುವ ಕಾಲವೂ ದೀರ್ಘವಾದದ್ದೇ.

ಹೀಗೆ ನಗರಗಳ ಒಳಭಾಗ ಹಾಗೂ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಾಣಿಸಿಕೊಂಡಿರುವ ಡಾಬಾಗಳ ಇಂತಹ ವಿಶಿಷ್ಟ ಚಿತ್ರಗಳು ಮನೋವೈಜ್ಞೆನಿಕ, ಸಮಾಜಶಾಸ್ತ್ರೀಯ ಮೊದಲಾದ ಹಲವು ಶಿಸ್ತುಗಳ ಅಧ್ಯಯನಕ್ಕೆ ಪ್ರೇರಣೆಯನ್ನೊದಗಿಸುತ್ತದೆ. ಈ ನಿಟ್ಟಿನಲ್ಲಿ ಮೂಡುವ ಕುತೂಹಲಕರ ಪ್ರಶ್ನೆಗಳೇ ಇಲ್ಲಿ ಪ್ರಮೇಯದ ಹಂತದವರೆಗೆ ಬಂದು ನಿಲ್ಲುತ್ತವೆಂಬುದು ನನ್ನ ಭಾವನೆ.

ವಾಸ್ತವವಾಗಿ ನಗರಗಳು ಕೈಗಾರಿಕೀಕರಣದ ಫಲಿತಗಳಾಗಿವೆ. ನಗರಗಳ ಸೃಷ್ಟಿ ಹೊಸ ಮಧ್ಯಮ ವರ್ಗವೊಂದನ್ನು ನಿರ್ಮಿಸುತ್ತದೆ. ಈ ವರ್ಗವು ಬೆಂಕಿಪೊಟ್ಟಣದಂತಹ ಮನೆಗಳಲ್ಲಿ, ಸ್ಲಂನಂತಹ ಅವ್ಯವಸ್ಥಿತ ನಗರ ಕೇರಿಗಳಲ್ಲಿ ವಾಸಿಸುತ್ತದೆ. ಈ ವರ್ಗವು ಆರ್ಥಿಕ ಅಸಮತೋಲನದ ಮತ್ತು ಉಳ್ಳವರ ಪರವಾದ ಅರ್ಥವ್ಯವಸ್ಥೆಯಲ್ಲಿ ದುಡಿಮೆಗೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುವುದು ದುಸ್ಸಾಧ್ಯವಾದ ಮಾತು. ಆದ್ದರಿಂದ ಇವರ ಕನಸುಗಳು ಇಲ್ಲಿ ಕನಸುಗಳಾಗಿಯೇ ಉಳಿಯುತ್ತವೆ. ಇವುಗಳ ತಾತ್ಕಾಲಿಕ ಉಪಶಮನವು ಅಗ್ಗದ ಮನರಂಜನಾ ಮಾದರಿಗಳಿಂದ ಆಗುತ್ತದೆ. ಆದರೆ ದೀರ್ಘಕಾಲಿಕವಾದ ಪರಿಹಾರ ಇದರಿಂದ ಪ್ರಾಪ್ತವಾಗುವುದಿಲ್ಲ. ಆದ್ದರಿಂದ ನಗರ ಸಂಸ್ಕೃತಿಯ ಇಂತಹ ಇಕ್ಕಟ್ಟಿನಿಂದ ಬಿಡುಗಡೆಗೊಳ್ಳಲು ಇಲ್ಲಿಯ ಮನಸ್ಸು ಸದಾ ತಹತಹಿಸುತ್ತಿರುತ್ತದೆ. ಅದಕ್ಕಾಗಿ ನಗರ ಸಂಸ್ಕೃತಿಗೆ ಪ್ರತಿಯಾದ ದಿಕ್ಕಿನಲ್ಲಿರುವ ಹಳ್ಳಿಯನ್ನು ಎದುರು ನೋಡುತ್ತಿರುತ್ತದೆ. ಅಲ್ಲಿಯ ಜೀವನ ವಿಧಾನವನ್ನು ಅಪೇಕ್ಷಿಸುತ್ತಿರುತ್ತದೆ. ಅದರ ಭಾಗವಾದ ಆರಾಮುತನವನ್ನು ತೀವ್ರವಾಗಿಯೆ ಹಂಬಲಿಸುತ್ತಿರುತ್ತದೆ.

ಹೀಗೆ ನಗರ ಸಂಸ್ಕೃತಿ ನಿರ್ಮಿಸಿದ ಹಲವು ಭೌತಿಕ ಹಾಗೂ ಮಾನಸಿಕ ಇಕ್ಕಟ್ಟುಗಳಿಂದ ಪಾರಾಗಲು ಮಧ್ಯಮ ವರ್ಗದ ಅದರಲ್ಲೂ ಅಲ್ಲಿ ಹೆಚ್ಚು ಸ್ವಾತಂತ್ರ್ಯ ಗಳಿಸಿರುವ ಯುವ ಸಮುದಾಯವು ಹಳ್ಳಿಯ ಪ್ರತೀಕವಾದ ಡಾಬಾಗಳಿಗೆ ಪ್ರವೇಶಿಸುತ್ತದೆ. ಅಲ್ಲಿ ಹಳ್ಳಿಯ ಸಂವೇದನೆಗಳಾದ ಬೆಳಕು, ಕತ್ತಲು, ಬೆಳದಿಂಗಳು, ಅಂಗಳದ ಆರಾಮುತನ ಇತ್ಯಾದಿಗಳನ್ನು ಅಸ್ವಾದಿಸುತ್ತದೆ.

ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ವಿವಿಧ ಸದಸ್ಯರ ನಡುವೆ ಮುಕ್ತ ಸಂವಾದರಹಿತ ಸ್ಥಿತಿ ಏರ್ಪಟ್ಟಿರುತ್ತದೆ. ಆದ್ದರಿಂದ ಇಲ್ಲಿ ಪ್ರತಿಯೊಬ್ಬರೂ ದ್ವೀಪಗಳಾಗಿರುತ್ತಾರೆ. ಆದ್ದರಿಂದ ತಮ್ಮ ಹೃದಯ ಸಂವಾದಕ್ಕಾಗಿ ಸೂಕ್ತ ಸಂಗಾತಿಗಳನ್ನು ಆಶ್ರಯಿಸುತ್ತಾರೆ. ಅವರೊಂದಿಗೆ ನಡೆಸುವ ಸಂವಾದಕ್ಕಾಗಿ ಮುಕ್ತ ಡಾಬಾಗಳನ್ನೇ ಆರಿಸಿಕೊಳ್ಳುತ್ತಾರೆ. ಆಗ ಅಲ್ಲಿಯ ಅತ್ಯುಚ್ಫ ತಿನಿಸುಗಳಾದ ಮದ್ಯ-ಮಾಂಸಗಳನ್ನು ಸಾಮಾನ್ಯವಾಗಿ ಸೇವಿಸುತ್ತಾ, ತಮ್ಮ ’ಇಕ್ಕಟ್ಟಿ’ನ ಮನೆಯಲ್ಲಿ ಅದುಮಿಟ್ಟಿದ್ದ ಭಾವನೆಗಳಿಗೆ ಇಲ್ಲಿ ಮೂರ್ತ ರೂಪವನ್ನು ಕೊಡಲಾರಂಭಿಸುತ್ತಾರೆ. ಇದಕ್ಕೆ ಪೂರಕಾಗಿಯೇ ಸಂಗಾತಿಗಳು ಸ್ಪಂದಿಸುವುದರಿಂದ ಮಾತು ಸಮಯವನ್ನು ಮೀರುತ್ತದೆ. ಅಂತೂ ಮನಸ್ಸು ಹಗುರವಾಗಿ, ಅಲ್ಲಿಂದ ಭಾರವಾದ ದೇಹವನ್ನು ಹೊರಗೆ ತರುತ್ತದೆ. ಈ ದೀರ್ಘಕಾಲೀನ ಪ್ರಕ್ರಿಯೆಯಲ್ಲಿ ಪ್ರೀತಿ, ಸ್ನೇಹ, ವಾತ್ಸಲ್ಯ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳು ಪರಸ್ಪರ ವಿನಿಮಯಕ್ಕೊಳಗಾಗಿ, ಎಲ್ಲಾ ಮನಸ್ಸುಗಳಲ್ಲಿಯೂ ತೃಪ್ತಿ, ನೆಮ್ಮದಿ, ಸಮಾಧಾನಗಳು ತಾತ್ಕಾಲಿಕವಾಗಿಯಾದರೂ ನೆಲೆಸುವಲ್ಲಿ ಯಶಸ್ಸನ್ನು ಸಾಧಿಸುತ್ತವೆ.

ಡಾಬಾಗಳ ಮುಖ್ಯ ಗ್ರಾಹಕರೆಂದರೆ ಪುರುಷರು ಮಾತ್ರ. ಅದರಲ್ಲೂ ಈಗಾಗಲೇ ಹೇಳಿರುವಂತೆ ಯುವಕರು ಮತ್ತು ನಡುವಯಸ್ಸಿನವರು. ಇಲ್ಲಿ ಸ್ತ್ರೀಯರ ಸಂಖ್ಯೆ ನಗಣ್ಯ. ಆದ್ದರಿಂದ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಸಹಜವಾಗಿಯೇ ಡಾಬಾಗಳು ಸ್ತ್ರೀಯರಿಗೆ ದೂರ ಉಳಿಯುತ್ತವೆ. ಹಾಗೊಮ್ಮೆ ಆಗುವ ಅವರ ಪ್ರವೇಶವೂ ಪುರುಷನ ಆಶ್ರಯದಲ್ಲಿಯೆ ಎಂಬುದು ಇಲ್ಲಿ ಇದೇ ಸತ್ಯಕ್ಕೆ ಪೋಷಕವಾಗಿ ನಿಲ್ಲುತ್ತದೆ.

ಇತ್ತೀಚಿನ ದಿನಗಳಲ್ಲಿ ನಗರ ಸಂಸ್ಕೃತಿ ಎಂಬುದು ಹಿಂದೆಂದಿಗಿಂತಲೂ ಸಂಕೀರ್ಣವಾಗುತ್ತಿದೆ. ಕಂಪ್ಯೂಟರ್, ಬಾಂಬ್, ಇಂಗ್ಲಿಷ್ ಮೊದಲಾದ ಪ್ರತಿಮೆಗಳು ಒಟ್ಟೊಟ್ಟಿಗೆ ಮಧ್ಯಮ ವರ್ಗದ ಮೇಲೆ ತೀವ್ರವಾಗಿ ಎರಗುತ್ತಿವೆ. ಇದರಿಂದ ಮತ್ತಷ್ಟು ತಬ್ಬಿಬ್ಬಾಗುತ್ತಿರುವ ಇಲ್ಲಿಯ ಮನುಷ್ಯ ಸಂವೇದನಾ ರಹಿತ ಸ್ಥಿತಿಯನ್ನು ಮುಟ್ಟುತ್ತಿದ್ದಾನೆ. ಗಾಳಿ ನೂಕಿದ ಕಡೆಗೆ ತರಗೆಲೆಯಾಗಿ ಹಾರುತ್ತಿದ್ದಾನೆ. ಇಂತಹ ವಿಷಮ ಸನ್ನಿವೇಶದಲ್ಲಿ ಯುವ ಜನಾಂಗದಲ್ಲಿ ಪ್ರಕ್ಷುಬ್ಧತೆ ನೆಲೆಯೂರುತ್ತಿದೆ. ಬಂಧುತ್ವದ ಭಾವನೆಗಳೂ ಅಪ್ರಸ್ತುತವಾಗುತ್ತಿವೆ. ಪರಿಣಾಮವಾಗಿ ಕೌಟುಂಬಿಕ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬಿರುಕುಗಳು ಕಾಣಲಾರಂಭಿಸುತ್ತಿವೆ. ಇವು ಹಗಲು-ರಾತ್ರಿಗಳ ಪರಿವೆಯನ್ನು ಕಳೆದುಕೊಂಡ ಡಾಬಾಗಳ ಮದ್ಯ-ಮಾಂಸ-ಮದಿರೆಗಳಂತಹ ರಾತ್ರಿ ಚಟುವಟಿಕೆಗಳಲ್ಲಿ ಕ್ರಿಯಾ ಪ್ರತಿಮೆಗಳಾಗಿ ವೇದ್ಯವಾಗತೊಡಗಿವೆ.

ಹೀಗೆ ಹಳ್ಳಿ ಮತ್ತು ನಗರ ಹಾಗೂ ಕನಸು ಮತ್ತು ವಾಸ್ತವಗಳ ಜಂಜಾಟದಲ್ಲಿ ಸಿಲುಕಿರುವ ನಗರೀಕರಣದ ಕೂಸುಗಳ ವಕ್ತಾರರು ಸಮಕಾಲೀನ ಸಂದರ್ಭದ ಸಾಂಸ್ಕೃತಿಕ ಮುಖಾಮುಖಿಗೆ ತೀವ್ರ ಸ್ವರೂಪದ ಆಕರಗಳಾಗುತ್ತಿದ್ದಾರೆ. ಇದಕ್ಕೆ ಪೋಷಕವಾಗಿ ಡಾಬಾಗಳು ಸೂಕ್ತ ಕಾರ್ಯಕ್ಷೇತ್ರವಾಗಿ ಮಾರ್ಪಡುತ್ತಿವೆ.
*****
ತಳಮಳ, ೨೪ ಜನವರಿ-೭ ಫೆಬ್ರವರಿ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಮರ
Next post ಅಳುವ ಮಗು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…