ಸಾಹಿತ್ಯವು ಮಡಿಯ ಮಂತ್ರವಲ್ಲ

ಸಾಹಿತ್ಯವು ಮಡಿಯ ಮಂತ್ರವಲ್ಲ

(ಸಿರಾದಲ್ಲಿ ನಡೆದ ತುಮಕೂರು ಜಿಲ್ಲೆಯ ಎಂಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ)

ಎಲ್ಲರಿಗೂ ನಮಸ್ಕಾರಗಳು

ನನ್ನನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಸಮಸ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಮ್ಮೇಳನದ ಎಲ್ಲ ವ್ಯವಸ್ಥಾಪಕರಿಗೂ ವಂದಿಸುತ್ತೇನೆ.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಸಾಹಿತ್ಯಾದಿ ಕಲೆಗಳನ್ನು ಕಟ್ಟಿದ ಮತ್ತು ಸಂಸ್ಕೃತಿಯನ್ನು ರೂಪಿಸಿದ ಸಮಸ್ತ ಚೇತನಗಳನ್ನು ಗೌರವಪೂರ್ವಕವಾಗಿ ನೆನೆಯುವುದು ನನ್ನ ಜವಾಬ್ದಾರಿಯೆಂದು ಭಾವಿಸುತ್ತೇನೆ – ಅಂತೆಯೇ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಪಾತ್ರವಾಗಿರುವ ನನ್ನನ್ನು ಹೆತ್ತವರು ಮತ್ತು ಹೊತ್ತ ಊರನ್ನೂ, ಕಲಿಸಿದ ಗುರುಗಳನ್ನೂ ನೆನೆಯುತ್ತೇನೆ. ಜೊತೆಗೆ ನನ್ನ ಅಣ್ಣಂದಿರು, ಅಕ್ಕಂದಿರು, ಅತ್ತಿಗೆಯರು ಚಿಕ್ಕಂದಿನಲ್ಲಿಯೇ ಕಣ್ಣು ಮುಚ್ಚಿದ ತಂಗಿ ಅಮ್ಮಾಜಮ್ಮ ಮತ್ತು ಬರಗೂರಿನ ಸಮಸ್ತ ಸಮುದಾಯವನ್ನೂ ಸ್ಮರಿಸುತ್ತೇನೆ. ನನ್ನ ಪತ್ನಿ ಮತ್ತು ಪುತ್ರರು ಕೊಟ್ಟ ಸುಖ-ಸಹಕಾರ ನನ್ನ ಸಾಧನೆಗೆ ಶಕ್ತಿಯಾಗಿರುವುದನ್ನು ಮರೆಯಲು ಸಾಧ್ಯವಿಲ್ಲ. ನಾಡಿನಾದ್ಯಂತ ಇರುವ ನನ್ನ ಹಿತೈಷಿಗಳು – ಸ್ನೇಹಿತರು ನನ್ನ ಭಾವಕೋಶದ ಒಂದು ಭಾಗವಾಗಿರುವುದನ್ನು ಮರೆಯಲಾಗದು. ಮುಖ್ಯವಾಗಿ ನನ್ನೂರಿನ ಮತ್ತು ನಾಡಿನ ಬೆವರಿನ ಮನುಷ್ಯರು ನನ್ನ ಚಿಂತನೆಯ ನದಿಯಾಗಿರುವುದನ್ನು ಇಲ್ಲಿ ಹೇಳಲೇಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಹೆಸರಿಲ್ಲದ ಅನೇಕರು ನನಗೆ ಹೆಸರು ತಂದುಕೊಟ್ಟಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ.

ಸಿರಾದಲ್ಲಿ ನಾನು ಓದಿದ ಪ್ರೌಢಶಾಲೆ, ಆಡಿದ ಮೈದಾನ, ಓಡಾಡಿದ ಮುಖ್ಯರಸ್ತೆ, ಬಸ್ಸಿಗೆ ಕಾಯುತ್ತಿದ್ದ ಹಳೇ ಬಸ್‌ಸ್ಟಾಂಡು, ಜಾಜಿಕಟ್ಟೆ, ರೂಮು ಮಾಡಿಕೊಂಡಿದ್ದ ಸೊಪ್ಪಿನ ಹಟ್ಟಿ-ಎಲ್ಲವೂ ನನ್ನ ನೆನಪಲ್ಲಿ ಉಳಿದಿವೆ ಎಂದು ಹೇಳಬಯಸುತ್ತೇನೆ.

ಬಹುಶಃ ನನ್ನ ತಾಲ್ಲೂಕು ಸಿರಾದಲ್ಲಿ ಈ ಜಿಲ್ಲಾ ಸಮ್ಮೇಳನ ನಡೆಯದೆ ಹೋಗಿದ್ದರೆ ನಾನು ಅಧ್ಯಕ್ಷನಾಗಲು ಒಪ್ಪುತ್ತಿರಲಿಲ್ಲವೇನೋ. ಅಷ್ಟೇ ಏಕೆ, ಸಿರಾದಲ್ಲಿ ಈ ಸಮ್ಮೇಳನ ಆಯೋಜಿಸಲ್ಪಡದಿದ್ದರೆ ನನ್ನ ಆಯ್ಕೆಯೂ ನಡೆಯುತ್ತಿರಲಿಲ್ಲವೇನೋ. ಹೀಗೆ ನಾನು ಹೇಳುವಾಗ ನಮ್ಮ ಸಂದರ್ಭದ ಸಾಂಸ್ಕೃತಿಕ ರಾಜಕೀಯವು ನನ್ನ ಮನಸ್ಸಿನಲ್ಲಿದೆ. ಆಯ್ಕೆಗೆ ಸಾಧನೆ ಮತ್ತು ಸಾಮಾಜಿಕ ಪ್ರಜ್ಞೆಗಳು ಮಾನದಂಡವಾಗದೆ ಇದ್ದಾಗ ವಿಪರ್ಯಾಸಗಳು ವಿಜೃಂಭಿಸುತ್ತವೆ. ಅದೇನೇ ಇರಲಿ, ನನ್ನ ಸಿರಾದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಮತ್ತು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದರಿಂದ ನನ್ನ ನೈತಿಕ ಜವಾಬ್ದಾರಿಯೂ ಹೆಚ್ಚಾಗಿದೆ. ನನ್ನ ನೈತಿಕ ಜವಾಬ್ದಾರಿಯು ಯಾವತ್ತೂ ಸಾಮಾಜಿಕ ಜವಾಬ್ದಾರಿಯಿಂದ ಪ್ರತ್ಯೇಕವಾದುದಲ್ಲ. ಆದ್ದರಿಂದಲೇ ನಾನು ಮೊದಲಿನಿಂದಲೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಮಾಜಿಕ ಜವಾಬ್ದಾರಿ ಮುಖ್ಯ ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ. ಈಗಲೂ ಅದನ್ನೇ ನಂಬಿದ್ದೇನೆ.

ರಷ್ಯಾದ ಲೇಖಕ ಪ್ಲಖನೋವ್ ಮಾತು ನೆನಪಿಗೆ ಬರುತ್ತದೆ: “ಕಲಾಕಾರರು/ಲೇಖಕರು ಜನರಿಂದ ಮನ್ನಣೆ ಮತ್ತು ಗೌರವಗಳನ್ನು ಬಯಸುತ್ತಾರೆ. ಜನರು ಅವರಿಂದ ಜವಾಬ್ದಾರಿಯನ್ನು ಬಯಸುತ್ತಾರೆ” – ಇದು ಪ್ಲಖನೋವ್ ಮಾತು. ನಿಜ, ನಾವು ಜನಗಳಿಗೆ ಜವಾಬ್ದಾರರಾಗಬೇಕು. ಇಲ್ಲದಿದ್ದರೆ ಸಾಮಾಜಿಕ ಮನ್ನಣೆಗಳಿಗೆ ಅರ್ಥವೇ ಇಲ್ಲ. ಯಾಕೆಂದರೆ ಜನಗಳಿಲ್ಲದೆ ಸಮಾಜವಿಲ್ಲ; ಬದುಕಿಲ್ಲ, ಸಮಾಜ ಮತ್ತು ಬದುಕು ಇಲ್ಲದಿದ್ದರೆ ಸಾಹಿತ್ಯವೂ ಇಲ್ಲ, ಸಂಸ್ಕೃತಿಯೂ ಇಲ್ಲ.

ಈ ‘ಜನ’ ಎಂದರೆ ಯಾರು? ಸಮಾಜವನ್ನು ಕಟ್ಟಿದವರು; ಸಂಸ್ಕೃತಿಯನ್ನು ರೂಪಿಸಿದವರು; ತಮ್ಮ ಶ್ರಮವನ್ನು ಧಾರೆಯೆರೆದು ಭೂಮಿಗೆ ಬೆಳಕು ತಂದವರು; ಆದರೆ ‘ದೊಡ್ಡವರಿಂದ ದೂರವೇ ಉಳಿದವರು; ಅಲ್ಲ, ದೂರ ಮಾಡಲ್ಪಟ್ಟವರು. ಆದರೂ ದೊಡ್ಡವರಿಗೆ, ದೊಡ್ಡದಕ್ಕೆ ಗೌರವ ಕೊಡುತ್ತಲೇ ಬಂದವರು. ಇವರು ಬರೆಯದ ಬರಹಗಾರರು; ಹಾಡದ ಹಾಡುಗಾರರು; ನರ್ತಿಸದ ನೃತ್ಯಗಾರರು ಬಣ್ಣವಾಗದ ಚಿತ್ರಕಲಾವಿದರು; ಸಾಮಾನ್ಯ ಜನರು. ರೂಸೊ ಹೇಳಿದಂತೆ ಈ ಸಾಮಾನ್ಯ ಜನರೇ ‘ಸಾಮಾಜಿಕ ಕ್ರಮಬದ್ಧತೆಯ ನಿರ್ಮಾತೃಗಳು; ತುಳಿತಕ್ಕೊಳಗಾದವರು’.

ಆದ್ದರಿಂದ, ನಾವು ಸಾಮಾನ್ಯರೆಂದು ಕರೆಯುವ ಇವರಲ್ಲಿ ‘ಅಸಾಮಾನ್ಯತೆ’ಯನ್ನು ಕಾಣುವ ಕಣ್ಣು ಇದ್ದರೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಬೇರೆಯದೇ ಒಳನೋಟ ಲಭ್ಯವಾಗುತ್ತದೆ. ಯಾಕೆಂದರೆ ಈ ಜನಸಾಮಾನ್ಯರ ಬದುಕೇ ಅಸಾಮಾನ್ಯವಾದುದು. ಬರೆಯಲಾಗದಿದ್ದರೂ ಬದುಕುವ ಜನ ಅವರು. ಇಲ್ಲಿ ಖಲೀಲ್ ಗಿಬ್ರಾನ್ ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ: “ನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ. ಆದರೆ ನೂರಾರು ಕವಿತೆಗಳನ್ನು ಬದುಕಿದಳು.”

ಹೀಗೆ ಕವಿತೆಗಳನ್ನು, ಕತೆಗಳನ್ನು, ಕಾದಂಬರಿಗಳನ್ನು ಬದುಕುವ ಜನರೇ ಸಾಹಿತ್ಯಕ್ಕೆ, ಒಟ್ಟು ಸಂಸ್ಕೃತಿಗೆ ಮೂಲಧಾತು. ಆದ್ದರಿಂದ ಬರಹಗಾರರು-ಬರೆಯದವರ ಬಗ್ಗೆ, ಹಾಡು ಗಾರರು ಹಾಡದವರ ಬಗ್ಗೆ, ನೃತ್ಯಗಾರರು ನರ್ತಿಸದವರ ಬಗ್ಗೆ, ಚಿತ್ರ ಕಲಾವಿದರು ಚಿತ್ರ ಬಿಡಿಸದವರ ಬಗ್ಗೆ ಪ್ರೀತಿ-ಗೌರವಗಳನ್ನು ಇಟ್ಟುಕೊಳ್ಳಬೇಕು. ಆಗ ನಾವೆಲ್ಲ ಮನುಷ್ಯರಾಗುತ್ತೇವೆ. ನಮ್ಮೊಳಗಿನ ಮೃಗೀಯತೆಯನ್ನು ನಾಶ ಮಾಡಿಕೊಳ್ಳುತ್ತೇವೆ. ಅಕ್ಷರಕ್ಕೆ ಅಂತಃಕರಣ ತರುತ್ತೇವೆ.

ಹೌದು, ಅಕ್ಷರ ಅಂತಃಕರಣವಾಗಬೇಕು, ಅಸ್ತ್ರವಾಗಬಾರದು; ಹುಸಿವೈಭವೀಕರಣವಾಗಬಾರದು, ಕಟುವಾಸ್ತವವಾಗಬೇಕು; ಭ್ರಮೆಯಾಗಬಾರದು, ಕನಸಾಗಬೇಕು.

ಅಕ್ಷರಕ್ಕಾಗಿ ಕನಸುಕಂಡ ಅಸಂಖ್ಯಾತರ ಎದುರು ಹುಸಿವೈಭವ ಮತ್ತು ಭ್ರಮೆಗಳನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಏಕರೇಖೆಯಲ್ಲಿ ಸಂಸ್ಕೃತಿಯ ಸಾರವನ್ನು, ಅಮಲಾಗುವ ಅಭಿಮಾನವನ್ನು ಗಟ್ಟಿಗೊಳಿಸುವ ವರ್ಗವಲಯ ಜಾಗೃತವಾಗಿದೆ. ಏಕರೇಖಾತ್ಮಕ ಸಂಸ್ಕೃತಿಸಾರವನ್ನೇ ಹೆಮ್ಮೆಯಿಂದ ಹೇಳುವ ಮತ್ತು ಕೇಳುವ ಕಂಠಪಾಠ ಸಂಪ್ರದಾಯವನ್ನು ಬೆಳೆಸುತ್ತ ಬರಲಾಗಿದೆ.

ನಮ್ಮ ಶಾಲಾದಿನಗಳನ್ನು ಜ್ಞಾಪಿಸಿಕೊಳ್ಳಿ. ‘ಕನ್ನಡ ನಾಡು ಶ್ರೀಗಂಧದ ನಾಡು’ ಎಂದು ನಮ್ಮ ಮೇಷ್ಟ್ರು ಹೇಳಿದರೆ ನಾವೆಲ್ಲ ಹೆಮ್ಮೆಯಿಂದ ಎದೆಯುಬ್ಬಿಸಿ ಕಂಠಪಾಠ ಒಪ್ಪಿಸುತ್ತಿದ್ದೆವು. ಆದರೆ ಹೀಗೆ ಹೇಳಿಕೊಟ್ಟ ಮೇಷ್ಟ್ರು ಶ್ರೀಗಂಧವನ್ನು ನೋಡಿರಲಿಲ್ಲ. ನಾವು ವಿದ್ಯಾರ್ಥಿಗಳೂ ನೋಡಿರಲಿಲ್ಲ. (ಇತ್ತೀಚೆಗೆ ಗೊತ್ತಾದದ್ದು-ಶ್ರೀಗಂಧವನ್ನು ಚೆನ್ನಾಗಿ ನೋಡಿರೋನು ವೀರಪ್ಪನ್ ಅಂತ!) ಒಟ್ಟಿನಲ್ಲಿ ಹೀಗೆ ಕಂಠಪಾಠ ಒಪ್ಪಿಸಿ ಆನಂದಿಸುವ ಬದಲು ನಮ್ಮೊಳಗೆ ನಾವೇ ಪ್ರಶ್ನೆ ಹಾಕಿಕೊಂಡರೆ ವಾಸ್ತವದ ಉತ್ತರ ಸಿಗುತ್ತದೆ. ಶ್ರೀಗಂಧವನ್ನು ನೋಡದ ನಾವು ನೋಡಿದ್ದು ಜಾಲಿಯಮರ, ಹೊಂಗೆ, ಹುಣಿಸೆ ಮರ ಎಂದು ಗೊತ್ತಾಗುತ್ತದೆ. ಆಗ ನಾವು ಬದುಕುತ್ತಿರುವ ಕರ್ನಾಟಕ ಮತ್ತು ಆಡುತ್ತಿರುವ ಕನ್ನಡಕ್ಕೆ ಜನಸ್ಪರ್ಶದ ಪರಿಭಾಷೆ ಲಭ್ಯವಾಗುತ್ತದೆ. ಹೊಸ ವಿವೇಕ ಹುಟ್ಟುತ್ತದೆ. ನಮ್ಮಲ್ಲಿ ಶ್ರೀಗಂಧದ ಕರ್ನಾಟಕವಷ್ಟೇ ಇಲ್ಲ, ಜಾಲಿಯ ಮರಗಳ ಕರ್ನಾಟಕವಿದೆ. ಕಡಲ ಕರ್ನಾಟಕದ ಜೊತೆಗೆ ಕೆರೆಗಳ ಕರ್ನಾಟಕವಿದೆ. ಕಾವೇರಿ ಕೃಷ್ಣೆಯರ ಜೊತೆಗೆ ಹಳ್ಳಕೊಳ್ಳಗಳ ಕರ್ನಾಟಕವಿದೆ. ಕೋಗಿಲೆಯ ಜೊತೆಗೆ ಕಾಗೆಗಳ ಕರ್ನಾಟಕವಿದೆ. ಗುಬ್ಬಚ್ಚಿಗಳ ಕರ್ನಾಟಕವಿದೆ. ತೆಂಗು ಕಂಗುಗಳ ಜೊತೆಗೆ ಹೊಂಗೆ ಹುಣಿಸೆಗಳ ಕರ್ನಾಟಕವಿದೆ. ಆದ್ದರಿಂದ ಶ್ರೀಗಂಧ, ಕೋಗಿಲೆ, ಕಡಲು, ಕಾವೇರಿ, ಕೃಷ್ಣಗಳನ್ನೇ ಹಾಡಿ ಹೊಗಳುತ್ತ ಜಾಲಿ, ಕಾಗೆ, ಕೆರೆ, ಹಳ್ಳಕೊಳ್ಳಗಳನ್ನು ಮರೆತರೆ ಅದು ನಿಸರ್ಗಕ್ಕೆ ಮಾಡುವ ಅನ್ಯಾಯ, ಜನಸಾಮಾನ್ಯರಿಗೆ ಮಾಡುವ ಅನ್ಯಾಯ. ‘ಸೃಷ್ಟಿಯಲ್ಲಿ ಯಾವುದೂ ವಿಫಲವಲ್ಲ’ ಅನ್ನೋ ಬೇಂದ್ರೆಯವರ ಮಾತನ್ನು ಮರೆಯಬಾರದು. ‘ಜಡವೆಂಬುದು ಬರಿ ಸುಳ್ಳು’ ಎನ್ನುತ್ತಾ ಎಲ್ಲದರಲ್ಲೂ ಚೈತನ್ಯ ಕಾಣುವ ಕುವೆಂಪು ನೋಟವನ್ನು ನಿರ್ಲಕ್ಷಿಸಬಾರದು. ಈ ಮೂಲಕ ಜನಸಾಮಾನ್ಯರ ಬದುಕನ್ನು ಕಡೆಗಣಿಸಬಾರದು. ಅಷ್ಟೇ ಅಲ್ಲ, ಏಕರೇಖಾತ್ಮಕ ಜಡನೋಟಗಳಿಂದ ಜನರ ಮನಸ್ಸನ್ನು ಕೆಡಿಸಬಾರದು.

ಈಗ ಏನಾಗುತ್ತಿದೆ? ಧರ್ಮ ಮತ್ತು ಸಂಸ್ಕೃತಿಗಳ ಹೆಸರಿನಲ್ಲಿ ಏಕರೇಖಾತ್ಮಕದ ಜಡ ವಾದ ವಿಚಾರಗಳನ್ನು ಬಿತ್ತಿ ಜನರ ಮನಸ್ಸನ್ನು ಕೆಡಿಸಲಾಗುತ್ತಿದೆ, ಒಡೆಯಲಾಗುತ್ತಿದೆ. ಧರ್ಮ ಮತ್ತು ರಾಜಕೀಯಗಳು ಜನರನ್ನು ಒಡೆಯುತ್ತಿರುವಾಗ ಸಾಹಿತ್ಯಾದಿ ಕಲೆಗಳು ಅಥವಾ ಸಾಹಿತಿಗಳು ಜನರ ಮನಸ್ಸನ್ನು ಒಂದಾಗಿಸುವ ಹೊಣೆ ಹೊರಬೇಕಾಗಿದೆ. ಯಾಕೆಂದರೆ ಜಡ ಹಾಗೂ ಏಕರೇಖಾತ್ಮಕ ವಿಚಾರಗಳನ್ನು ಬಿತ್ತಿ ಜನರಿಂದ ಸತ್ಯವನ್ನು ಮರೆಮಾಡುವ ಪ್ರಯತ್ನಗಳಿಗೆ ಸಾಹಿತ್ಯ ಕೃತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಹಿತ್ಯಾದಿ ಕಲೆಗಳ ಅರ್ಥ ವೈವಿಧ್ಯವನ್ನು ಅಲ್ಲಗಳೆದು, ಸಂವೇದನೆಗಳನ್ನು ಸಾಯಿಸಿ ಕೇವಲ ಸಾಧನ ಮಾತ್ರವಾಗಿಸಿಕೊಳ್ಳುವ ಹುನ್ನಾರಗಳು ನಡೆಯುತ್ತಲೇ ಬಂದಿವೆ. ಇಂಥ ಹುನ್ನಾರಗಳಿಗೆ ಸಮರ್ಥ ಸಾಧನವಾಗಿರುವುದು ನಮ್ಮ ಪುರಾಣ ಕಾವ್ಯಗಳು; ಪ್ರಧಾನವಾಗಿ ರಾಮಾಯಣ ಮತ್ತು ಮಹಾಭಾರತಗಳು.

ನಮ್ಮ ದೇಶದಲ್ಲಿ ಪುರಾಣಗಳನ್ನು ಕೇವಲ ಪುಣ್ಯಕತೆಗಳನ್ನಾಗಿ ಅರ್ಥೈಸಿ, ಪ್ರತಿಪಾದಿಸಿ, ಅವುಗಳ ನಿಜದ ನೆಲೆಯನ್ನು ನೆಲಮಾಳಿಗೆಯಲ್ಲಿ ಬಚ್ಚಿಡಲಾಗಿದೆ. ಅಂತೆಯೇ ಪುರಾಣಗಳೆಂದರೆ ಧರ್ಮಕೃತಿಗಳೆಂದೇ ನಂಬಬೇಕೆಂಬ ಮನೋಭೂಮಿಕೆಯನ್ನು ಸಿದ್ಧಗೊಳಿಸಲಾಗಿದೆ. ಇಂತಹ ಪ್ರವೃತ್ತಿಯಿಂದ ಜನರ ವಿವೇಕಕ್ಕೆ ವಂಚನೆ ಮಾಡಿದಂತಾಗಿದೆಯಷ್ಟೇ ಅಲ್ಲ, ಪುರಾಣಗಳ ಅರ್ಥವಿಸ್ತಾರವನ್ನು ಸಾಕಷ್ಟು ಸಂಕುಚಿತಗೊಳಿಸಲಾಗಿದೆ. ಪುರಾಣಗಳನ್ನು ಪ್ರವೇಶ ಮಾಡುವ ಇತರೆ ಬಾಗಿಲುಗಳನ್ನು ಮುಚ್ಚಿ, ಪುಣ್ಯಕಥಾ ಪ್ರತಿಪಾದನೆಯ ಧರ್ಮದ ಬಾಗಿಲನ್ನು ಮಾತ್ರ ತೆಗೆದು, ಓದುಗರು ಹಾಗೂ ಕೇಳುಗರನ್ನು ಕೇವಲ ಕುರುಡುಭಕ್ತರನ್ನಾಗಿ ಪರಿಗಣಿಸಲಾಗಿದೆ. ಇದೇ ಕಾರಣಕ್ಕೇ ಇರಬೇಕು, ಕೆ.ಕೆ. ರೂತ್ವೆನ್ ಎಂಬ ವಿದ್ವಾಂಸ “ಬೌದ್ಧಿಕವಾಗಿ ಹೆಳವಾದವರಿಗೆ ಮಾತ್ರ ಪುರಾಣಗಳಿಂದ ಪ್ರಯೋಜನವಾಗುತ್ತದೆ” ಎಂದಿದ್ದಾನೆ. ಅಷ್ಟೇ ಅಲ್ಲ, ಪುರಾಣಪರ ಆಧುನಿಕ ಲೇಖಕರನ್ನು “Living fossils, Psychopathalogical Degenerate” ಎಂದು ಕರೆಯುತ್ತಾನೆ. ವಾಲ್ಟೇರ್ ಪ್ರಕಾರ “ಪುರಾಣಗಳ ಅಧ್ಯಯನ ಹೆಡ್ಡರ ಉದ್ಯೋಗ”. ಆದರೆ ನನಗೆ ಅನ್ನಿಸುವುದು ಹೆಡ್ಡರನ್ನಾಗಿ ಮಾಡುವುದಕ್ಕೆ ಪುರಾಣಗಳ ಉದ್ಯೋಗವನ್ನು ಹಿಡಿಯಲಾಗಿದೆ; ಪುರಾಣಗಳ ನಿಜ ಅಧ್ಯಯನವನ್ನು ಹಿಂದಕ್ಕೆ ತಳ್ಳಲಾಗಿದೆ.

ಪುರಾಣಗಳನ್ನು ಕೇವಲ ಪುಣ್ಯಕತೆಗಳೆಂದೂ ಧರ್ಮಕೃತಿಗಳೆಂದೊ ಸಂಕುಚಿತ ಗೊಳಿಸುವುದರ ಜೊತೆಗೆ ಅವುಗಳನ್ನು ಇಡಿಯಾಗಿ ಚರಿತ್ರೆಯೆಂದು ಭಾವಿಸುವ, ನಂಬಿಸುವ, ಪಂಡಿತ ಪ್ರಯತ್ನಗಳು ನಮ್ಮಲ್ಲಿ ಪ್ರಸಿದ್ಧವಾಗಿದೆ. ಇದರ ಫಲವಾಗಿ ಪುರಾಣದ ಪಾತ್ರಗಳನ್ನು ಚಾರಿತ್ರಿಕ ವ್ಯಕ್ತಿಗಳೆಂದು ನಂಬಿ, ಅವರ ಜನ್ಮಸ್ಥಾನ, ಮೃತ್ಯುಸ್ಥಾನಗಳನ್ನು ಶೋಧಿಸಿ, ವೈಭವೀ ಕರಿಸುವ ಪುರಾಣೇತರ ಹಾಗೂ ಚರಿತ್ರೆತರ ಕೆಲಸಗಳು ನಡೆಯುತ್ತಿವೆ. ಜನ್ಮ ಸ್ಥಾನಗಳ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿರುವ ಶ್ರೀರಾಮ, ಆಂಜನೇಯ ಮತ್ತು ಶ್ರೀಕೃಷ್ಣರೆಂಬ ಪುರಾಣ ಪಾತ್ರಗಳ ಪಾಡು ಇದಕ್ಕೆ ಒಳ್ಳೆಯ ನಿದರ್ಶನ. ಈ ಪಾತ್ರಗಳ ಸಾಂಕೇತಿಕ ಆಶಯ ಹಾಗೂ ಆದರ್ಶಗಳನ್ನು ಅರ್ಥೈಸುವ ಮತ್ತು ಅಳವಡಿಸಿಕೊಳ್ಳುವ ಬದಲು ಚಾರಿತ್ರಿಕ ವ್ಯಕ್ತಿಗಳೆಂದಷ್ಟೇ ನಂಬಿಸುತ್ತ ಜನ್ಮಸ್ಥಾನ ವಿವಾದ ಸೃಷ್ಟಿಸುತ್ತ ಸಾಮಾನ್ಯ ಮುಗ್ಧ ಜನರ ಮನಸ್ಸನ್ನು ಕೋಮುವಾದದತ್ತ ಸೆಳೆಯುವ ಕೆಲಸ ನಡೆಯುತ್ತಿದೆ.

ಹಾಗಾದರೆ ಪುರಾಣಗಳಲ್ಲಿ ಚರಿತ್ರೆ ಇರುವುದಿಲ್ಲವೆ? ಇರಬಹುದು. ಆದರದು ಜೀವಂತ ವಾಗಿದ್ದ ವ್ಯಕ್ತಿಗಳ ಜೀವನ ಚರಿತ್ರೆಯಲ್ಲ. ಒಂದು ಸಮಾಜದ, ಒಂದು ಸಂಸ್ಕೃತಿಯ ಅಥವಾ ಸಂಸ್ಕೃತಿಗಳ ಇತಿಹಾಸದ ವಿನ್ಯಾಸಗಳು ಪುರಾಣಗಳಲ್ಲಿ ಇರುತ್ತವೆ. ಚರಿತ್ರೆಯನ್ನು ಕೇವಲ ರಾಜ ಮಹಾರಾಜರ ಅಥವಾ ಪ್ರಮುಖ ವ್ಯಕ್ತಿಗಣ್ಯರ ಕಾಲಾನುಕ್ರಮಣಿಕೆಯ ಜೀವನ ನಿರೂಪಣೆ ಯೆಂದಷ್ಟೇ ಭಾವಿಸುವುದು ಸರಿಯಲ್ಲ. ಈ ರೀತಿಯ ತಿಳುವಳಿಕೆಯಿಂದ ಪುರಾಣ ಪ್ರವೇಶ ಮಾಡಿ, ಪುರಾಣವನ್ನು ಇಡಿಯಾಗಿ ಚರಿತ್ರೆಯೆಂದೇ ಭಾವಿಸಿದಾಗ ಅರ್ಥಗ್ರಹಿಕೆಯ ಹಾದಿಗೆ ಅಮಲು ಸಾಧ್ಯ. ಪುರಾಣವನ್ನು ಚರಿತ್ರೆಯನ್ನಾಗಿಸುವ ಕ್ರಮದಲ್ಲೇ ಚರಿತ್ರೆಯನ್ನು ಪುರಾಣವಾಗಿಸುವ ಪ್ರವೃತ್ತಿಯೂ ಅಡಗಿದೆ. ಹೀಗಾಗಿ ನಮ್ಮ ಅನೇಕ ಚಾರಿತ್ರಿಕ ವ್ಯಕ್ತಿಗಳು ಕಾಲಾನುಕ್ರಮದಲ್ಲಿ ಪುರಾಣ ವ್ಯಕ್ತಿಗಳಾಗಿ ಪವಾಡಪುರುಷರಾಗಿ ಕಾಣಿಸಿಕೊಳ್ಳುತ್ತಾರೆ. ಅತಿಮಾನುಷತೆಯಲ್ಲಿ ನಂಬಿಕೆ ಯಿಟ್ಟ ಮನಸ್ಥಿತಿಯಿಂದ ಇಂತಹ ರೂಪಾಂತರ ಸಾಧ್ಯವಾಗುತ್ತದೆ.

ಚರಿತ್ರೆಯನ್ನು ಪುರಾಣವಾಗಿಸುವ ಮತ್ತು ಪುರಾಣವನ್ನು ಚರಿತ್ರೆಯಾಗಿಸುವ ಪ್ರವೃತ್ತಿ ಅಪಾಯಕಾರಿ, ಪುರಾಣಗಳ ಉಸುಕಿನಲ್ಲಿ ಚರಿತ್ರೆ ಚಡಪಡಿಸುವಂತಾಗಬಾರದು; ವಂಶ ಹಾಗೂ ವ್ಯಕ್ತಿ ನಿರೂಪಣೆಯಷ್ಟೇ ಚರಿತ್ರೆಯೆಂದು ಭಾವಿಸಲಾಗದು. “ರಾಜಕೀಯ ಇತಿಹಾಸ ಮತ್ತು ರಾಜವಂಶಗಳ ಅಧ್ಯಯನಗಳು ಚಾರಿತ್ರಿಕ ವ್ಯಾಖ್ಯೆಯ ಮುಖ್ಯ ಸಂಗತಿಗಳು” ಎಂದು ಒಪ್ಪುತ್ತಲೇ ಖ್ಯಾತ ಚರಿತ್ರೆಕಾರರಾದ ರೊಮಿಲಾ ಥಾಪರ್ ಅವರು “ಜನ ಮತ್ತು ಸಂಸ್ಕೃತಿಯನ್ನು ರೂಪಿಸುವ ಇತರೆ ಲಕ್ಷಣಗಳ ಬೆಳಕಿನಲ್ಲಿ ಈ ಸಂಗತಿಗಳನ್ನು ಕಂಡುಕೊಳ್ಳಬೇಕಾಗಿದೆ” ಎನ್ನುತ್ತಾರೆ. ಪ್ರಸಿದ್ಧ ಚಿಂತಕ ಡಿ.ಡಿ. ಕೊಸಾಂಬಿಯವರು ಹೇಳುವಂತೆ “ಉತ್ಪಾದನೆಯ ಸಂಬಂಧ ಮತ್ತು ಸಾಧನೆಗಳ ಕ್ರಮಾಗತ ಬೆಳವಣಿಗೆಯನ್ನು ಕಾಲಾನುಕ್ರಮಣಿಕೆಯಲ್ಲಿ ಪರಿಚಯಿಸುವುದೇ ಇತಿಹಾಸ.” ಪುರಾಣಗಳನ್ನು ಇಡಿಯಾಗಿ ಚರಿತ್ರೆಯನ್ನಾಗಿಸುವ ಮತೀಯ ಹುನ್ನಾರಗಳನ್ನು ವಿಫಲಗೊಳಿಸುವ ಒಂದು ವಿಧಾನವಾಗಿಯೂ ನಾವು ಪುರಾಣ ಮತ್ತು ಚಾರಿತ್ರಿಕ ವಿನ್ಯಾಸಗಳ ಸಂಬಂಧವನ್ನು ಸರಿಯಾಗಿ ತಿಳಿಯಬೇಕಾಗಿದೆ ಮತ್ತು ತಿಳಿಸಿಕೊಡಬೇಕಾಗಿದೆ. ಪುರಾಣದ ವಿವರಗಳೆಲ್ಲ ನಿಜವಾಗಿ ನಡೆದ ಘಟನೆಗಳಲ್ಲ, ಪುರಾಣದ ಪಾತ್ರಗಳೆಲ್ಲ ಹಿಂದೆ ಜೀವಂತವಿದ್ದ ವ್ಯಕ್ತಿಗಳಲ್ಲ. ಆದರೆ ಪುರಾಣಗಳಲ್ಲಿ ಸಮಾಜ ಹಾಗೂ ಸಂಸ್ಕೃತಿಗಳ ಚಾರಿತ್ರಿಕ ವಿನ್ಯಾಸಗಳು ಇರುತ್ತವೆ, ಪುರಾಣದ ಪಾತ್ರಗಳು ಬದುಕಿನ ವ್ಯಕ್ತಿರೂಪಕಗಳಾಗಿರುತ್ತವೆ; ನಿರ್ದಿಷ್ಟ ಸ್ವಭಾವ-ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂದು ತಿಳಿಯುತ್ತ ಪುರಾಣಗಳ ಒಳ ತಿರುಳನ್ನು ಹುಡುಕಬೇಕಾಗುತ್ತದೆ. ಚಾರಿತ್ರಿಕ ವ್ಯಕ್ತಿಗಳಿಗೆ ಮಾಡುವಂತೆ ಇಲ್ಲಿ ಹುಟ್ಟಿದ ತಾರೀಕನ್ನು ಹುಡುಕುವ ಅಗತ್ಯ ಇಲ್ಲ. ಇಂತಹ ದುಸ್ಸಾಹಸಗಳಿಂದ ಚರಿತ್ರೆಯ ಅರ್ಥ ಕೆಡಿಸುವುದು ಆರೋಗ್ಯಕರ ದೃಷ್ಟಿಯಲ್ಲ.

ಪುರಾಣಗಳನ್ನು ಪುಣ್ಯಕತೆ, ಧರ್ಮಕೃತಿ, ನಿಜದ ಚರಿತ್ರೆ-ಎಂಬ ನಂಬಿಕೆಗಳಿಂದ ದೂರ ಮಾಡಿ ನೋಡತೊಡಗಿದಾಗ ಹುಟ್ಟುವ ಅರ್ಥ ಪರಂಪರೆಯು ಸ್ವತಃ ಪುರಾಣಗಳ ಸಾಂಸ್ಕೃತಿಕ ಸಾಹಿತ್ಯಕ ಮೌಲ್ಯವನ್ನು ಹೆಚ್ಚಿಸುತ್ತದೆ. ಪುರಾಣಗಳನ್ನು ಬಾಳ ಪರಂಪರೆಯ ಪ್ರತೀಕಗಳೆಂದು ಭಾವಿಸಿ ಪ್ರವೇಶಿಸುವುದು ಹೆಚ್ಚು ಸೂಕ್ತವಾದ ವಿಧಾನ. ಇಲ್ಲದಿದ್ದರೆ ಅವು ಕೇವಲ ನೀತಿ ಪ್ರತಿಪಾದಕ ಪುಣ್ಯಕತೆಗಳಾಗಿ ಪೂಜಾರ್ಹವಾಗುತ್ತವೆ; ಅಧ್ಯಯನಾರ್ಹವಾಗುವುದಿಲ್ಲ, ಆದ್ದರಿಂದ ಪುರಾಣಗಳನ್ನು ಪ್ರವೇಶಿಸಲು ಇರುವ ಸಿದ್ಧಮಾದರಿಯನ್ನು ಮುರಿದು ಮುಂದೆ ಸಾಗುವುದು ನಮ್ಮ ಮೊದಲ ಕೆಲಸವಾಗಬೇಕು. ಇಲ್ಲದಿದ್ದರೆ ಪುರಾಣಗಳು ಏಕಕಾಲಕ್ಕೆ ಆಳುವ ವರ್ಗ ಮತ್ತು ಪುರೋಹಿತವರ್ಗದ ಪ್ರತಿನಿಧಿಯಾಗುತ್ತವೆ. ಸಾಮಾಜಿಕ-ರಾಜಕೀಯ ಪರಮಾಧಿಕಾರವನ್ನು ಪಡೆದು ಓದುಗರನ್ನು ಪರಮ ವಿಧೇಯತೆಗೆ ತಳ್ಳುತ್ತವೆ. ಹೀಗಾಗಿ ನಮ್ಮ ಪ್ರಮುಖ ಪುರಾಣಗಳು ಪೂಜೆಯನ್ನು ನಿರೀಕ್ಷಿಸುವಂತೆ, ಪ್ರಜ್ಞೆಯನ್ನು ನಿರಾಕರಿಸುವಂತೆ ಮಾಡಲಾಗುತ್ತದೆ. ವಾಸ್ತವವಾಗಿ ರಾಮಾಯಣ-ಮಹಾಭಾರತಗಳಾದಿಯಾಗಿ ನಮ್ಮ ಪ್ರಮುಖ ಹಾಗೂ ಪ್ರತೀಕಾತ್ಮಕ ಪುರಾಣಗಳು. ತಮಗೆ ತಾವೇ ಪ್ರಜ್ಞಾವಲಯವನ್ನು ನಿರಾಕರಿಸುವುದಿಲ್ಲ. ಆವುಗಳಿಗೆ ನಿರ್ಮಾಣ ಮಾಡಿದ ಧರ್ಮದಿಗ್ಭಂಧನದಿಂದ ಇಂತಹ ಸನ್ನಿವೇಶ ನಿರ್ಮಾಣವಾಗುತ್ತದೆ.

ಹಾಗೆ ನೋಡಿದರೆ ರಾಮಾಯಣ ಕೇವಲ ಶ್ರೀರಾಮನೊಬ್ಬನ ಕತೆಯಲ್ಲ. ಅದರಲ್ಲಿ ವಿವಿಧ ರೀತಿಯ ಸಾಮಾಜಿಕ ವಿನ್ಯಾಸಗಳಿವೆ. ಸಂಸ್ಕೃತಿ ವಿಕಾಸದ ವಿವಿಧ ಹಂತಗಳೂ ಇವೆ. ಮನುಷ್ಯನ ಮೂಲವೆಂದು ಗುರುತಿಸುವ ಮಂಗರೂಪದ ಒಂದು ಮುಂದುವರಿದ ಸಾಮಾಜಿಕ ಸಾಂಸ್ಕೃತಿಕ ಘಟಕವಾಗಿ ವಾಲಿ, ಸುಗ್ರೀವ, ಅಂಜನೇಯಾದಿಗಳ ಸಮೂಹವನ್ನು ನೋಡ ಬಹುದು. ಇದು ವಿಕಾಸದ ಆರಂಭಿಕ ಹಂತದ ಮನುಷ್ಯ ಬದುಕಿನ ಪ್ರತೀಕ. ಈ ಹಂತವನ್ನು ದಾಟಿ, ವಿಕಾಸ ಹೊಂದಿದ್ದರೂ ರೂಕ್ಷತೆಯನ್ನು ಉಳಿಸಿಕೊಂಡ ಮನುಷ್ಯ ಸಂಸ್ಕೃತಿಯ ಹಂತವಾಗಿ ಲಂಕೆಯ ರಾವಣಾದಿಗಳನ್ನು ಕಾಣಬಹುದು. ರೂಕ್ಷ ನಡವಳಿಕೆಯವರನ್ನು ‘ರಾಕ್ಷಸ’ ರೆಂದು ಕರೆದಾಕ್ಷಣ ಅವರನ್ನೆಲ್ಲ ನೀತಿಗೆಟ್ಟವರೆಂದು ಭಾವಿಸಬೇಕಿಲ್ಲ. ನೀತಿಗೆಟ್ಟವರೇ ಆಗಿದ್ದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಒಪ್ಪಿಗೆಗಾಗಿ ಕಾಯಬೇಕಿತ್ತೆ? ಇನ್ನು ಶ್ರೀರಾಮಾದಿಗಳ ಮನುಷ್ಯ ಸಮೂಹವು ರೂಕ್ಷತೆಯ ಹಂತವನ್ನು ಮೀರಿ ವಿಕಾಸಹೊಂದಿದ ನಯ ನಾಜೂಕಿನ ಘಟಕ. ಈ ಮೂರು ಸಾಮಾಜಿಕ-ಸಾಂಸ್ಕೃತಿಕ ಘಟಕಗಳಿಗೂ ಅವುಗಳದೇ ಆಚಾರ-ವಿಚಾರಗಳಿವೆ; ಅವುಗಳದೇ ನಂಬಿಕೆ ನಡವಳಿಕೆಗಳಿವೆ; ವ್ರತಗಳಿವೆ; ಆಚರಣೆಗಳಿವೆ; ದೈವಗಳಿವೆ; ಭಕ್ತಿ ವಿಧಾನಗಳಿವೆ. ಯುದ್ಧೋಪಕರಣಗಳಿವೆ.

ಶ್ರೀರಾಮ ಬಿಲ್ಲು ಬಳಸಿದರೆ ರಾವಣ ಗದೆ ಹಿಡಿಯುತ್ತಾನೆ; ವಾಲಿ ಕಲ್ಲಿನ ಆಯುಧಗಳನ್ನು ಬಳಸುತ್ತಾನೆ. ರಾವಣನು ಅಸಾಧಾರಣ ಶಿವಭಕ್ತನಾಗಿದ್ದಾನೆ; ತಪಸ್ಸಾಚರಣೆ ಮಾಡುತ್ತಾನೆ. ಈ ಎಲ್ಲ ವಿವರಗಳನ್ನು ಗಮನಿಸಬೇಕು. ಶ್ರೀರಾಮನ ಜೀವನ ವಿಧಾನವೊಂದೇ ಶ್ರೇಷ್ಠ, ಉಳಿದಿದ್ದೆಲ್ಲ ಕನಿಷ್ಠ ಎಂದು ಪ್ರತಿಪಾದಿಸುವುದಕ್ಕಾಗಿಯೇ ರಾಮಾಯಣವನ್ನು ಬಳಸಿಕೊಳ್ಳುವುದು ಸರಿಯೆ ? ಅಥವಾ ಸಾಮಾಜಿಕ-ಸಾಂಸ್ಕೃತಿಕ ವಿನ್ಯಾಸಗಳ ಸಂಬಂಧಾಂತರಗಳ ಅಧ್ಯಯನದ ಆಕರ ಮಾಡಿಕೊಳ್ಳುವುದು ಸರಿಯೆ ? ರಾವಣನ ಆವರಣದಲ್ಲಿದ್ದ ವಿಭೀಷಣ, ವಾಲಿಯ ಸೋದರ ಸುಗ್ರೀವ ಇಬ್ಬರೂ ಶ್ರೀರಾಮ ಪರವಾಗಿರುವುದು ಸ್ಥಿತ್ಯಂತರದ ದಿಕ್ಸೂಚಿಯೂ ಆಗಬಹುದಲ್ಲವೆ? ಕೃತಿಯ ಆಶಯವು ಈ ದಿಕ್ಸೂಚಿಯನ್ನು ಆಧರಿಸಿದೆ ಎಂದು ಭಾವಿಸಿದಾಗಲೂ ರಾಮಾಯಣಕ್ಕೆ ಇತರೆ ಅರ್ಥವಲಯಗಳಿರುವುದನ್ನು ನಿರಾಕರಿಸುವಂತೆ ಮಾಡುವವರು ಮೂಲ ಭೂತವಾದಿಗಳೇ ಹೊರತು ಮನುಷ್ಯವಾದಿಗಳಲ್ಲ; ಅಲ್ಲವೆ? ರಾಮಾಯಣದ ಶ್ರೀರಾಮ ಪಿತೃವಾಕ್ಯ ಪರಿಪಾಲನೆ ಮಾಡಿದ ಎನ್ನುವುದರ ಜೊತೆಗೆ ಆಸ್ತಿ ಮತ್ತು ಅಧಿಕಾರಗಳನ್ನು ತ್ಯಾಗ ಮಾಡಿದ ಎಂಬ ‘ಮೌಲ್ಯ’ ಮಹತ್ವದ್ದೆಂದು ನಾನು ಭಾವಿಸುತ್ತೇನೆ. ಆದರೆ ಶ್ರೀರಾಮನನ್ನು ಹೈಜಾಕ್ ಮಾಡಿದವರು ಆತನ ಹೆಸರಲ್ಲಿ ಅಧಿಕಾರವನ್ನೇ ಆಸ್ತಿ ಮಾಡಿಕೊಳ್ಳಲು ಹವಣಿಸಿದ್ದಾರೆ.

ರಾಮಾಯಣದ ಭರತನ ಪಾತ್ರ ಅಧಿಕಾರದ ವಿಷಯದಲ್ಲಿ ಅನುಕರಣೀಯವಾಗಿದೆ. ಸಿಂಹಾಸನದ ಮೇಲೆ ಕೂರದೆಯೇ ಅಧಿಕಾರ ನಡೆಸುವ ಭರತನ ಮೌಲ್ಯ ಇಂದಿನ ನಾಯಕರಿಗೆ ಆದರ್ಶವಾಗಬೇಕಾಗಿದೆ. ಕುರ್ಚಿ ಮೇಲೆ ಕೂರದೆಯೂ ಜನ ನಾಯಕರಾಗಬೇಕು ಎಂಬ ಆಶಯಕ್ಕೆ ಭರತನ ಪಾತ್ರ ಒಂದು ಉತ್ತಮ ಸಂಕೇತವಾಗಿದೆ. ಆದರೆ ರಾಮಾಯಣದಲ್ಲಿರುವ ಈ ಆಶಯಗಳನ್ನು ಜನರಿಗೆ ತಿಳಿಸದೆ ಶ್ರೀರಾಮನ ಹೆಸರಲ್ಲಿ ಭಾವೋದ್ರೇಕ ಉಂಟು ಮಾಡುವವರಿಗೆ ಶ್ರೀರಾಮನ ಮೌಲ್ಯವೂ ಬೇಕಿಲ್ಲ. ಭರತನ ಆದರ್ಶವೂ ಬೇಕಿಲ್ಲ, ಅಪವ್ಯಾಖ್ಯಾನದಿಂದ ಅಧಿಕಾರ ಬೇಕು; ಅಷ್ಟೆ…

ಇಷ್ಟಕ್ಕೂ ಪ್ರಧಾನವೆಂದು ಕರೆಸಿಕೊಳ್ಳುವ ರಾಮಾಯಣ-ಮಹಾಭಾರತಗಳಿಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಹುಟ್ಟಿರುವ ರಾಮಾಯಣ-ಮಹಾಭಾರತಗಳನ್ನು ನಿರ್ಲಕ್ಷಿಸಲಾದೀತೆ? ಚಿಕಾಗೊನಲ್ಲಿ ಪ್ರಾಧ್ಯಾಪಕರಾಗಿದ್ದ ಕನ್ನಡದ ಕವಿ ಎ.ಕೆ. ರಾಮಾನುಜನ್ ಅವರು ೩೦೦ ರಾಮಾಯಣಗಳ ಕುರಿತು ಬರೆದಿದ್ದಾರೆ. ವಿದ್ವಾಂಸ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಅನೇಕ ರಾಮಾಯಣಗಳ ಸಾರವನ್ನುಳ್ಳ ಪುಸ್ತಕವನ್ನು ಬರೆದಿದ್ದಾರೆ. ಈಗ ನಾನು ಸೀತಾ ಪರಿತ್ಯಾಗದ ಪ್ರಸಂಗವನ್ನು ಉದಾಹರಣೆಯಾಗಿ ಕೊಡಬಯಸುತ್ತೇನೆ. ಸೀತಾ ಪರಿತ್ಯಾಗಕ್ಕೆ ಮಡಿವಾಳ ಆಡಿಕೊಂಡ ಮಾತೊಂದು ಮೂಲವಾಯಿತೆಂದು ವಾಲ್ಮೀಕಿ ರಾಮಾಯಣದ ಸನ್ನಿವೇಶವನ್ನು ವ್ಯಾಖ್ಯಾನಿಸಲಾಗುತ್ತದೆ. ಆದರೆ ಸೀತಾ ಪರಿತ್ಯಾಗದ ಬಗ್ಗೆ ಕನ್ನಡದಲ್ಲಿರುವ ‘ಚಿತ್ರಪಟ ರಾಮಾಯಣ’ವೆಂಬ ಜನಪದ ಕೃತಿ, ಮಲೆಯಾಳಂನಲ್ಲಿರುವ ‘ಸೀತಾ ದುಃಖಂ’ ಕಾವ್ಯ ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಪದ ಕತೆಯೊಂದು ಹೇಳುವ ‘ಸೀತಾ ಪರಿತ್ಯಾಗ’ ಪ್ರಸಂಗವೇ ಬೇರೆಯಾಗಿದೆ. ಲಂಕೆಯಿಂದ ಮಧುರ ಸಂಬಂಧವನ್ನು ನೋಡುತ್ತ ಕೌಸಲ್ಯಯಾದಿಯಾಗಿ ಮೂವರು ತಾಯಂದಿರಿಗೆ ಅಸಹನೆ ಮೂಡುತ್ತದೆ. ಅವರು ಸೀತೆಯನ್ನು ಕೇಳುತ್ತಾರೆ- ‘ಆ ರಾವಣ ಹೇಗಿದ್ದ? ಚಿತ್ರ ಬರೆದು ತೋರಿಸು’ ಎಂದು. ಸೀತೆಯು ರಾವಣನ ಚಿತ್ರ ಬರೆಯುತ್ತಾಳೆ. ಈ ಚಿತ್ರವನ್ನು ಶ್ರೀರಾಮನಿಗೆ ಕಾಣುವಂತೆ ಕೌಸಲ್ಯ ಇಡುತ್ತಾಳೆ. ರಾಮನು ಈ ಚಿತ್ರ ಬಿಡಿಸಿದ್ದು ಯಾರೆಂದು ಕೇಳಿದಾಗ ಕೌಸಲ್ಯಯು ‘ಏನಪ್ಪ ಹೇಳಲಿ, ನಿನ್ನ ಹೆಂಡತಿ ಸೀತೆ ಇದನ್ನು ಬರೆದಿದ್ದಾಳೆ. ಅವಳಿಗೆ ರಾವಣನದೇ ಚಿಂತೆ’ ಎನ್ನುತ್ತಾಳೆ. ಆಗ ಶ್ರೀರಾಮ ಸಿಟ್ಟಿಗೆದ್ದು ಗರ್ಭಿಣಿ ಸೀತೆಯನ್ನು ಕಾಡಿಗಟ್ಟುತ್ತಾನೆ – ಇದು ನಾನು ಹೇಳಿದ ಮೂರು ರಾಮಾಯಣ ಕತೆ-ಕಾವ್ಯಗಳ ಸಾರ. ಇದು ನಮ್ಮ ಕುಟುಂಬಗಳಲ್ಲಿ ನಡೆಯುವ ನೈಜಘಟನೆಗಳಿಗೆ, ಮನುಷ್ಯ ಸ್ವಭಾವಕ್ಕೆ ಹತ್ತಿರವಾಗಿಲ್ಲವೆ? ಈ ದೃಷ್ಟಿಯಿಂದಲೂ ರಾಮ ಮತ್ತು ರಾಮಾಯಣವನ್ನು ಯಾಕೆ ನೋಡಬಾರದು? ನಮ್ಮ ನಾಡಿನ ಎಷ್ಟೋ ಊರುಗಳಲ್ಲಿ ಇಲ್ಲಿಯೇ ಶ್ರೀರಾಮಾದಿಗಳು ನಡೆದಾಡಿದ್ದು, ಇಲ್ಲಿಯೇ ಪಾಂಡವರು ಬೀಡುಬಿಟ್ಟಿದ್ದು ಎಂದು ತೋರಿಸುತ್ತಾರೆ. ಇದನ್ನು ಸಾಮಾನ್ಯ ಜನರ ಪುನರ್ ಸೃಷ್ಟಿ ಪ್ರಕ್ರಿಯೆಯಾಗಿ ಸ್ವೀಕರಿಸಬೇಕೊ, ಪ್ರಧಾನ ರಾಮಾಯಣ ಮಹಾಭಾರತಗಳಷ್ಟೇ ನಿಜ ಎಂದು ನಂಬಿಸಬೇಕೊ? ನಮ್ಮ ‘ಪ್ರಧಾನ’ ಪುರಾಣಗಳಿಗೆ ಇರುವ ಇಂತಹ ‘ಪರ್‍ಯಾಯ ಪುರಾಣ’ಗಳನ್ನು ಪ್ರಧಾನವಾಗಿ ಪರಿಶೀಲಿಸುವುದರಿಂದ ಪುರಾಣಗಳ ಪುನರ್‌ವ್ಯಾಖ್ಯಾನಕ್ಕೆ ಸಹಾಯವಾಗುತ್ತದೆ. ರಾಮಾಯಣಕ್ಕಷ್ಟೇ ಅಲ್ಲ ಮಹಾಭಾರತಕ್ಕೂ ಪರ್‍ಯಾಯ ಪುರಾಣಗಳಿವೆ. ದ್ರೌಪದಿಯು ತನ್ನನ್ನು ಪಣವಿಟ್ಟ ಧರ್ಮರಾಜನ ಮೇಲೆ ಸಿಟ್ಟಿಗೆದ್ದು ತಾನೇ ದುರ್ಯೋಧನನ ಬಳಿಗೆ ಬಂದು, ಪಗಡೆಗೆ ಆಹ್ವಾನಿಸಿ, ಆಟವಾಡಿ ಗೆದ್ದು ರಾಜ್ಯವನ್ನು ಪಾಂಡವರಿಗೆ ವಾಪಸ್ ಕೊಡಿಸಿದ ಕತೆಯೊಂದು ದಕ್ಷಿಣ ಕನ್ನಡದಲ್ಲಿದೆ. ಬಹುಶಃ ಇದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಇದ್ದ ಸಮಾಜ-ಸಂಸ್ಕೃತಿಯಲ್ಲಿ ಹುಟ್ಟಿದೆ. ಒಟ್ಟಾರೆ ರಾಮಾಯಣ, ಮಹಾ ಭಾರತಗಳು ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಹುಟ್ಟಿದ ಪುರಾಣಕಾವ್ಯಗಳಾಗಿವೆ.

ಮಹಾಭಾರತವನ್ನೇ ತೆಗೆದುಕೊಳ್ಳಿ, ಎಷ್ಟು ರೀತಿಯ ಸಂಸ್ಕೃತಿ ವಿನ್ಯಾಸಗಳು ಸಿಗುತ್ತವೆ! ಒಂದೇ ಕೃತಿಯಲ್ಲಿ ಬಹುಪತಿ ಪದ್ಧತಿ, ಏಕಪತಿ ಪದ್ಧತಿ, ಬಹುಪತ್ನಿಪದ್ಧತಿ, ಬ್ರಹ್ಮಚರ್ಯ, ಮುಂತಾದ ಸಾಮಾಜಿಕ ಅಂಶಗಳು ಸಿಗುತ್ತವೆ. ಅಧಿಕಾರ ಕೇಂದ್ರೀಕರಣದ ಊಳಿಗಮಾನ್ಯ ವ್ಯವಸ್ಥೆಯ ಪ್ರತೀಕವಾದ ದುರ್ಯೋಧನ, ಊಳಿಗ ಮಾನ್ಯ ವ್ಯವಸ್ಥೆಯಲ್ಲೇ ಉದಾರವಾದಿ ರಾಜ-ಧರ್ಮನಂದನ-ಎರಡೂ ‘ಪಾತ್ರ ಪ್ರತೀಕ’ಗಳಿವೆ; ಜಾತಿ-ಧರ್ಮಗಳ ಜಿಜ್ಞಾಸೆಯಿದೆ. ಮಹಾಭಾರತವು ಊಳಿಗಮಾನ್ಯ ಪ್ರಭುತ್ವದ ಬಿರುಕುಗಳು ಮತ್ತು ವಿಕಾಸಮುಖಿ ಸಂಸ್ಕೃತಿಯ ವಿಭಿನ್ನ ರೂಪಗಳನ್ನು ಒಟ್ಟಿಗೇ ಹಿಡಿದಿರುತ್ತದೆ.

ಜೊತೆಗೆ ಮಹಾಭಾರತವು ವಿವಿಧ ಮೌಲ್ಯಗಳ ಸಾರ್ಥಕ ಮುಖಾಮುಖಿಯನ್ನು ಒಳಗೊಳ್ಳುತ್ತ ಬೆಳೆಯುತ್ತದೆ. ರಾಮಾಯಣವಾದರೂ ಅಷ್ಟೆ; ಮಹಾಭಾರತವಾದರೂ ಅಷ್ಟೆ; ಮಹಾಭಾರತದ ಕಥಾಹಂದರಕ್ಕೆ ಇರುವ ವ್ಯಾಪಕತೆ ರಾಮಾಯಣಕ್ಕೆ ಇದೆಯೆ ಎಂಬುದು ಅಭ್ಯಾಸಯೋಗ್ಯ ಸಂಗತಿಯಾದರೂ ಮೌಲ್ಯಗಳ ಮುಖಾಮುಖಿಯಿರುವುದನ್ನು ಗುರುತಿಸಬಹುದು. ರಾಮಾಯಣದ ವಿಶೇಷವೆಂದರೆ ಮೌಲ್ಯ ಸಂಘರ್ಷ ಮತ್ತು ಸಾಂಸ್ಕೃತಿಕ ಸಂಘರ್ಷಗಳು ಒಂದೇ ಆಗಿ ಏಕೀಭವಿಸಿರುವುದು. ರಾವಣ ಮತ್ತು ವಾಲಿಯರು ಶ್ರೀರಾಮನಿಗೆ ಎದುರಾಗಿದ್ದಾರೆಂದರೆ ಅದು ಮೌಲ್ಯಗಳ ಮುಖಾಮುಖಿಯೂ ಹೌದು, ವಿಭಿನ್ನ ಸಂಸ್ಕೃತಿ ನೆಲೆಗಳ ಮುಖಾ ಮುಖಿಯೂ ಹೌದು.

ಮತ್ತೊಂದು ಮಾತು: ಪುರಾಣಗಳು ಮೂಲತಃ ಕವಿಯೊಬ್ಬನ ಸೃಷ್ಟಿಯಾದರೂ ಜನಸಮುದಾಯದಿಂದ ಬೆಳೆಯುತ್ತ ಬಂದಿವೆ. ಜನರು ಮೂಲಕೃತಿಗಳನ್ನೂ ತಕ್ಕಮಟ್ಟಿಗೆ ಬೆಳೆಸಿದ್ದಾರೆ; ಪರ್‍ಯಾಯ ಪುರಾಣಗಳನ್ನೂ ಬೆಳೆಸುತ್ತ ಬಂದಿದ್ದಾರೆ. ಮೂಲಪುರಾಣ ಮತ್ತು ಪರ್‍ಯಾಯ ಪುರಾಣಗಳನ್ನು ಒಟ್ಟಿಗೆ ಓದುವುದು ಸಹ ಅರ್ಥಪೂರ್ಣವಾದುದು. ಇದು ಪುರಾಣ ಗಳಿಗೆ ತೋರುವ ಓದಿನ ಗೌರವ.

ಮೂಲ ಪುರಾಣಗಳಿಂದ ಪ್ರೇರಣೆಗೊಂಡು ಕನ್ನಡದಲ್ಲಿ ಪುನರ್ ಸೃಷ್ಟಿಯಾದ ಕೃತಿಗಳ ಆಶಯಗಳು ಸಹ ಸದಾ ಅನುಕರಣೀಯವಾಗಿವೆ; ಮೂಲದಂತೆಯೇ ಕಪ್ಪು-ಬಿಳುಪು ಪಾತ್ರಗಳಿಂದ ಹೊರತಾಗಿವೆ. ರಾಮಾಯಣ ವಿಷಯಕ್ಕೆ ಬರುವುದಾದರೆ ಕನ್ನಡದಲ್ಲಿ ಬಂದ ನಾಗಚಂದ್ರ ಕವಿಯ ರಾಮಾಯಣವನ್ನು ಗಮನಿಸಬೇಕು. ಈ ಕಾವ್ಯದಲ್ಲಿ ರಾವಣನನ್ನು ಉದಾತ್ತವಾಗಿ ಚಿತ್ರಿಸಲಾಗಿದೆ. ಉದಾತ್ತರಾವಣನ ಪಾತ್ರಸೃಷ್ಟಿ ಈ ಕಾವ್ಯದ ವೈಶಿಷ್ಟ್ಯ. ಅಷ್ಟೇಕೆ, ಮೂಲ ವಾಲ್ಮೀಕಿ ರಾಮಾಯಣದ ರಾವಣನನ್ನೇ ನೋಡಿ : ಆತ ಸೀತೆಯನ್ನು ಅಪಹರಿಸಿದ; ನಿಜ; ಆದರೆ ಮಾನಭಂಗ ಮಾಡಲಿಲ್ಲ; ಶೀಲ ಕಳೆಯಲಿಲ್ಲ. ಒತ್ತಾಯವನ್ನಷ್ಟೇ ಮಾಡುತ್ತ ಒಪ್ಪಿಗೆಗಾಗಿ ಕಾಯುತ್ತ ಬಂದ. ಈಗಿನ – ನಮ್ಮ ಕಾಲದ ರಾವಣರು ಮಾಡುವ ಮೊದಲ ಕೃತ್ಯ ಶೀಲಭಂಗ! ಸಮಕಾಲೀನ ರಾವಣರ ಎದುರು ಶೀಲಭಂಗ ಮಾಡದ ರಾವಣನೇ ಶೀಲವಂತನಾಗುತ್ತಾನೆ. ಆದರೆ ರಾವಣನ ಈ ಮುಖವನ್ನು ಮರೆಯುವಂತೆ ಮಾಡಲಾಗುತ್ತಿದೆ. ರಾಮಾಯಣವು ಒಂದು ಸಾಂಸ್ಕೃತಿಕ ಹಾಗೂ ರಾಜಕಾರಣಗಳ ರೂಪಕ ಎಂಬುದನ್ನು ಮರೆಮಾಚಲಾಗುತ್ತಿದೆ.

ಇನ್ನು ಮಹಾಭಾರತದ ವಿಷಯಕ್ಕೆ ಬಂದರೆ-ಕನ್ನಡದ ಪಂಪ ಮಹಾಕವಿಯ ‘ವಿಕ್ರಮಾರ್ಜುನ ವಿಜಯ’ (ಪಂಪ ಭಾರತ) ರನ್ನಕವಿಯ ‘ಸಾಹಸಭೀಮವಿಜಯ’ (ಗಧಾಯುದ್ದ ಮತ್ತು ಕುಮಾರವ್ಯಾಸ ಕವಿಯ ‘ಕರ್ನಾಟ ಭಾರತ ಕಥಾಮಂಜರಿ’ಗಳನ್ನು ಒಳಹೊಕ್ಕು ನೋಡಿದರೆ ಏಕರೇಖಾ ಸಂಸ್ಕೃತಿಗೆ ಭಿನ್ನವಾದ ನೆಲೆಗಳು ಗೋಚರವಾಗುತ್ತವೆ. ಪಂಪಮಹಾಕವಿಯು ‘ಕರ್ಣರಸಾಯನ ಮಲ್ತೆ ಭಾರತಂ’ ಎಂದದ್ದಷ್ಟೇ ಅಲ್ಲ ‘ನೆನೆವೊಡೆ ಕರ್ಣನಂ ನೆನೆಯ’ ಎಂಬ ಮಾತುಗಳನ್ನು ಅಳವಡಿಸಿದ. ನಮ್ಮ ಹುಸಿಸಂಸ್ಕೃತಿ ನೇತಾರರು ಕರ್ಣನನ್ನು ನೆನೆಯುವುದಿಲ್ಲ. ಏಕಲವ್ಯನನ್ನು ನೆನೆಯುವುದಿಲ್ಲ. ಪಂಪಭಾರತದ ೧೩ ಮತ್ತು ೧೪ನೇ ಆಶ್ವಾಸದಲ್ಲಿ ದುರ್ಯೋಧನನ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಚಿತ್ರಿಸಿದ್ದು ಹುಸಿಸಂಸ್ಕೃತಿ ವೀರರಿಗೆ ಅದು ಮುಖ್ಯವಲ್ಲ. ಈ ಆಶ್ವಾಸಗಳ ಪ್ರೇರಣೆಯಿಂದಲೇ ರನ್ನಕವಿಯು ‘ಛಲದಂಕಮಲ್ಲ’ ದುರ್ಯೋಧನನನ್ನು ಚಿತ್ರಿಸುತ್ತಾನೆ. ಯುದ್ಧದಲ್ಲಿ ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ದುರ್ಯೋಧನನ ಬಾಯಲ್ಲಿ ಸತ್ಯವು ತಾನೇತಾನಾಗಿ ಬರುತ್ತದೆ. ಯುದ್ಧಭೂಮಿಯಲ್ಲಿ ಬಿದ್ದಿರುವ ಹೆಣಗಳ ನಡುವೆ ಬರಿಗಾಲಲ್ಲಿ ಬರುವ ದುರ್ಯೋಧನನ ಪಾದಕ್ಕೆ ಪಾದುಕೆಗಳಿಲ್ಲ; ರಥವಿಲ್ಲ; ವಂದಿಮಾಗಧರಿಲ್ಲ. ಈಗಾತನು ಬಂದದ್ದು ‘ದೇಸಿಗನವೊಲ್’, ರಾಜಮದವನ್ನು ಕಳೆದುಕೊಂಡ ಆತನ ಬಾಯಲ್ಲಿ ಬರುವುದು ಸತ್ಯದ ನುಡಿ; ಆತ್ಮನಿರೀಕ್ಷೆಯ ಮಾತು, ಕರ್ಣನಿಗೆ ದಕ್ಕಬೇಕಾಗಿದ್ದ ಅಧಿಕಾರವನ್ನು ತಾನು ಕಬಳಿಸಲು ಪ್ರಯತ್ನಿಸಿದೆ ಎಂಬ ಪಶ್ಚಾತ್ತಾಪ. ಅಭಿಮನ್ಯುವಿನ ಶವದ ಮುಂದೆ ಕೂತು ದುಃಖಿಸುತ್ತ ‘ನಿಜ ಸಾಹಸೈಕ ದೇಶಾನುಮರಣಂ ಎಮಗಕ್ಕೆ ಗಡ’ ಎನ್ನುವ ಗೌರವದ ಮಾತು (ಅಂದರೆ- ‘ನಿನಗೆ ಬಂದ ವೀರ ಮರಣ ನನಗೂ ಬರಲಿ’).

ಆಯಾ ಕಾಲಧರ್ಮ ಮತ್ತು ಕವಿಯ ದೃಷ್ಟಿಕೋನಕ್ಕನುಗುಣವಾಗಿ ಪುನರ್ ಸೃಷ್ಟಿಗೊಳ್ಳುವ ಪಾತ್ರಗಳನ್ನೂ ಕಾವ್ಯದ ಆಶಯಗಳನ್ನೂ ನಾವು ಜನರಿಗೆ ತಲುಪಿಸದಿದ್ದರೆ ಅದೊಂದು ವಿವೇಕ ವಂಚನೆಯೇ ಸರಿ. ಹುಸಿಸಂಸ್ಕೃತಿ ವೀರರು ವಿವೇಕ ವಂಚನೆಯಲ್ಲಿ ಆನಂದಿಸುವ ಅತಿರೇಕಕ್ಕೆ ಹೋಗಿದ್ದಾರೆ. ಆದ್ದರಿಂದ ಸಾಹಿತ್ಯ ಮತ್ತು ಸಂಸ್ಕೃತಿಯ ನಿಜ ವಿವೇಕವನ್ನು ವಿಸ್ತರಿಸುವ ಸಾಮಾಜಿಕ ಜಬಾಬ್ದಾರಿ ನಮಗಿಂದು ಮುಖ್ಯವಾಗಬೇಕಾಗಿದೆ.

ನಿಜ, ನಮ್ಮ ಆಧುನಿಕಪೂರ್ವ ಸಾಹಿತ್ಯದ ಪ್ರಮುಖ ಕೃತಿಗಳಲ್ಲಿ ಧರ್ಮ ಮತ್ತು ರಾಜ ಕಾರಣವು ಮುಖ್ಯವಸ್ತುವಾಗಿದೆ. ಆದರೆ ಅವುಗಳ ಅಂತರ್ಯವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಹೇಳಿಕೆಗಳ ಮಟ್ಟದಲ್ಲಿ ಹುಸಿಗೌರವ ತೋರಿಸುವ ಪರಿಪಾಟವನ್ನು ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ನಾಯಕರು ಪಾಲಿಸುತ್ತಿದ್ದಾರೆ. ಪಂಪಮಹಾಕವಿಯ ‘ಮನುಷ್ಯ ಜಾತಿ ತಾನೊಂದೆವಲಂ’ ಎಂಬ ಇಂದಿಗೂ ಪ್ರಸ್ತುತವಾದ ಪ್ರಸಿದ್ಧ ವಾಕ್ಯವನ್ನು ಉಲ್ಲೇಖಕ್ಕೆ ಮಾತ್ರ ಬಳಸಿಕೊಂಡು ಉಳಿದಂತೆ ಜಾತಿವಾದ ಮಾಡುತ್ತಿದ್ದಾರೆ. ‘ದೇಹವೇ ದೇವಾಲಯ’ವೆಂಬ ಅದ್ಭುತ ಪರಿಕಲ್ಪನೆ ಕೊಟ್ಟ ಬಸವಣ್ಣನವರನ್ನು ನೆನೆಯುತ್ತಲೇ ದೇಹ ಮತ್ತು ದೇವಾಲಯ ಎರಡನ್ನೂ ಮಲಿನಗೊಳಿಸುವವರು ನಮ್ಮಲ್ಲಿದ್ದಾರೆ. ‘ಭಕ್ತಿಯೆಂಬುದು ತೋರುಂಬ ಲಾಭ’ ಎಂಬ ಅಲ್ಲಮ ಪ್ರಭುಗಳ ಟೀಕೆಯನ್ನು ಲೆಕ್ಕಿಸದೆ ಭಕ್ತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುವವರು ಹೆಚ್ಚಿದ್ದಾರೆ. ಆಯ್ದಕ್ಕಿ ಮಾರಯ್ಯ ತನ್ನ ವಚನದಲ್ಲಿ ಬಳಸಿದ ‘ಕಾಯಕವೇ ಕೈಲಾಸ’ ಎಂಬ ಮಾತು ಉರುಹೊಡೆದ ಉಲ್ಲೇಖಮಾತ್ರವಾಗಿ ಉಳಿದು ಬಂದಿದೆ. ಇನ್ನು ಅಂಬಿಗರಚೌಡಯ್ಯ, ದೇವರದಾಸಿಮಯ್ಯ, ಮಾದಾರ ಚನ್ನಯ್ಯ, ಮುಂತಾದ ಕೆಳವರ್ಗದ ಮತ್ತು ಹಿಂದುಳಿದ ವರ್ಗದ ವಚನಕಾರರು ಆಯಾ ಜಾತಿ ಸಮ್ಮೇಳನಗಳಲ್ಲಿ ಮಾತ್ರ ಸ್ಮರಣಾರ್ಹರಾಗುತ್ತಿದ್ದಾರೆ. ಅಕ್ಕಮಹಾದೇವಿಯ ರಾಜವಿರೋಧಿ ಧೀಮಂತಿಕೆಯ ಬದಲು ಶಿವಸಾನ್ನಿಧ್ಯದ ಅಂಶಗಳನ್ನೇ ಮುಂದು ಮಾಡುತ್ತಿದ್ದಾರೆ. ಕನಕದಾಸರ ‘ರಾಮಧಾನ್ಯ ಚರಿತೆ’ಯನ್ನು ನೋಡಿ. ಶ್ರೀರಾಮನನ್ನು ಶ್ರಮಜೀವಿಗಳ ಆಹಾರವಾದ ರಾಗಿಯಲ್ಲಿ ಕಾಣುವ ಧ್ವನ್ಯರ್ಥವನ್ನು ವಿಸ್ತರಿಸುವ ವಿವೇಕಕ್ಕೆ ಒತ್ತಾಸೆಯಾಗುವ ವ್ಯಕ್ತಿತ್ವದ ಬದಲು ಹರಿದಾಸರಾಗಿ ನೋಡುವ ಹೆಮ್ಮೆ ಹೆಚ್ಚಾಗುತ್ತಿದೆ. ಇವರನ್ನೂ ಒಳಗೊಂಡಂತೆ ಇಂತಹ ಸಾಮಾಜಿಕ ವಿವೇಕವುಳ್ಳವರ ಆಶಯಗಳ ಮೂಲಕ ಹುಸಿಸಂಸ್ಕೃತಿಗೆ ಸೆಡ್ಡು ಹೊಡೆಯುವ ಬದಲು ಸ್ಮರಣೆಯ ಸಂಕೇತದಲ್ಲಿ ಸಂತೋಷ ಪಡಲಾಗುತ್ತಿದೆ.

ಆಳುವ ವರ್ಗದ ವೈಪರೀತ್ಯ ಮತ್ತು ಆರ್ಥಿಕ ಸನ್ನಿವೇಶದ ವಾಸ್ತವವನ್ನು ಕುಮಾರವ್ಯಾಸ ಭಾರತದ ಒಂದು ಪದ್ಯ ಸೊಗಸಾಗಿ ಹೇಳುವುದನ್ನಿಲ್ಲಿ ಗಮನಿಸಬೇಕು:

‘ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು’

ಆಳುವ ವರ್ಗದ ದೌರ್ಜನ್ಯ ಮತ್ತು ಬಡವರ ಸ್ಥಿತಿಯನ್ನು ಒಟ್ಟಿಗೆ ಹೇಳುವ ಪಾತ್ರವೊಂದರ ಈ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವು ಸಮಾನತೆಯೇ ಮುಖ್ಯ ಮೌಲ್ಯವೆಂದು ಪ್ರತಿಪಾದಿಸುತ್ತ ಬಂದಿದೆ. ನವೋದಯ ಸಾಹಿತ್ಯದ ರಮ್ಯತೆಯ ರೋಮಾಂಚನದ ನಡುವೆಯೂ ಅಲ್ಲಲ್ಲಿ ಸಮಾನತೆಯ ಧ್ವನಿ ಕೇಳಿ ಬಂದಿದೆ. ವೈಯಕ್ತಿಕ ಅನುಭವ ಪ್ರಾಮಾಣ್ಯವೇ ಮುಖ್ಯವೆಂದು ಭಾವಿಸಿದ ನವ್ಯಸಾಹಿತ್ಯದ ಪ್ರಮುಖರು ಸಹ ಮಾನವೀಯತೆಯ ಆಶಯಗಳನ್ನು ಕೈಬಿಟ್ಟಿರಲಿಲ್ಲ.

ನಾನು ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ಪುರಾಣಕೃತಿಗಳನ್ನೂ ಒಳಗೊಂಡಂತೆ ಪ್ರಮುಖ ಸಾಹಿತ್ಯ ಕೃತಿಗಳನ್ನು ಹುಸಿಸಂಸ್ಕೃತಿ ವೀರರು ಅಪವ್ಯಾಖ್ಯಾನ ಮಾಡುತ್ತಿದ್ದಾರೆ. ಧಾರ್ಮಿಕ ಮೂಲಭೂತವಾದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದೇವರು ಮತ್ತು ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಾಹಿತ್ಯದ ಅಪವ್ಯಾಖ್ಯಾನದಿಂದ ಇವರ ಹುನ್ನಾರಗಳಿಗೆ ಉಪಯೋಗವಾಗುತ್ತದೆ. ಆದ್ದರಿಂದ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಮೂಲಭೂತವಾದಿಗಳಿಂದ ವಿಮೋಚನೆ ಗೊಳಿಸಬೇಕಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿಗಳ ಜನಪರ ಮೌಲ್ಯಗಳನ್ನು ಅನುಸರಿಸಿದರೆ ಮಾತ್ರ ನಿಮಗೆ ಗೌರವ ಕೊಡುತ್ತೇವೆಂದು ಹೇಳಬೇಕಾಗಿದೆ.

ಬದುಕಿನಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತ್ಯದಿಂದ ಬದುಕಿಗೆ ಏನು ಪಡೆದುಕೊಂಡಿರಿ?- ಇದು ನನ್ನ ಮುಖ್ಯ ಪ್ರಶ್ನೆಯಾಗಿದೆ.

ಕನ್ನಡ ಸಾಹಿತ್ಯದಲ್ಲಿ ಸಮಾನತೆ ಮತ್ತು ಮಾನವೀಯತೆಗಳು ಮುಖ್ಯ ಮೌಲ್ಯವಾಗಿ ಪ್ರಕಟವಾಗಿರುವುದನ್ನು ಧರ್ಮ ಮತ್ತು ರಾಜಕಾರಣ ಕ್ಷೇತ್ರದ ನೇತಾರರು ಹೇಗೆ ಸ್ವೀಕರಿಸಿದ್ದಾರೆಂದು ನೋಡಿದಾಗ ನಿರಾಶೆಯುಂಟಾಗುತ್ತದೆ. ಪಂಪನ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಮಾತಿನಿಂದ ಹಿಡಿದು ವಚನಸಾಹಿತ್ಯ, ದಾಸಸಾಹಿತ್ಯವನ್ನು ಒಳಗೊಂಡಂತೆ ಎಲ್ಲರ ‘ಸೂಕ್ತಿ’ಗಳನ್ನು ವೇದಿಕೆಯ ಉಲ್ಲೇಖಗಳಾಗಿ ಬಳಸುವುದೇ ಸೂಕ್ತವೆಂದು ಭಾವಿಸಿದ ಧರ್ಮ ಗುರುಗಳೇ ಹೆಚ್ಚಾಗಿದ್ದಾರೆ, ನಾಡಿನಾದ್ಯಂತ ಇರುವ ಬಹುಪಾಲು ಮಠಮಾನ್ಯಗಳು ಧರ್ಮವನ್ನು ಜಾತಿಯ ಮಟ್ಟಕ್ಕೆ ಇಳಿಸಿವೆ. ಹೆಸರು-ಧರ್ಮ, ಆಚರಣೆ-ಜಾತಿ. ಇದು ಇವರ ಆದರ್ಶವಾಗಿಬಿಟ್ಟಿದೆ. ಮಠಗಳು ಜಾತಿಯ ಜೊತೆಗೆ ಆಸ್ತಿ ಅಧಿಕಾರದ ಕೇಂದ್ರಗಳೂ ಆಗುತ್ತಿವೆ. ಇನ್ನು ರಾಜಕಾರಣಿಗಳಿಗೆ ರಾಮಾಯಣದ ಭರತ ಮುಖ್ಯವಾಗುವುದಿಲ್ಲ. ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ಮತ್ತು ಅಧಿಕಾರದಲ್ಲಿರುವಾಗ ಹಣ, ಆಸ್ತಿ ಮಾಡಿಕೊಳ್ಳುವ ರಭಸವೇ ಮುಖ್ಯವಾಗಿದೆ. ಪ್ರಜೆಗಳ ಹೆಸರಿನಲ್ಲಿ ಪ್ರಭುಗಳಾಗಿ ಮೆರೆಯುವುದೇ ಪ್ರಜಾಪ್ರಭುತ್ವ ಎಂಬಂತಾಗಿದೆ. ಭ್ರಷ್ಟಾಚಾರವನ್ನು ಆಚಾರ ಮಾಡಿರುವುದೇ ಅಭಿವೃದ್ಧಿಯಾಗಿದೆ. ಈ ಎಲ್ಲವನ್ನೂ ನಾವು ವಿರೋಧಿಸಬೇಕಾಗಿದೆ.

ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಕೆಲವರು ಮೂಲಭೂತವಾದಿಗಳಿರುವುದು ನಿಜವಾದರೂ ಪ್ರಾಚೀನದಿಂದ ಆಧುನಿಕದವರೆಗಿನ ಪ್ರಮುಖ ಕವಿಗಳೂ ಲೇಖಕರೂ ಬಹುಪಾಲು ಪ್ರತಿಪಾದಿಸಿದ್ದು ನಿಜ ಧಾರ್ಮಿಕತೆ, ಭೋಗದ ನಶ್ವರತೆ, ಅಧಿಕಾರದ ಅನಿಶ್ಚಿತತೆ. ಇದನ್ನು ಸಾಹಿತ್ಯ ವಲಯವೂ ಅರ್ಥ ಮಾಡಿಕೊಳ್ಳಬೇಕು. ಮಠಾಧೀಶರೂ ಅರ್ಥ ಮಾಡಿಕೊಳ್ಳಬೇಕು; ರಾಜಕಾರಣಿಗಳೂ ತಿಳಿದುಕೊಳ್ಳಬೇಕು. ಆದರೆ ಈಗ ಸ್ವಾತಂತ್ರ್ಯ, ಸಮಾನತೆ, ಸೌಹಾರ್ದಗಳ ಸನ್ನಿವೇಶ ಕ್ಷೀಣವಾಗುತ್ತಿರುವ ಆತಂಕ ನಮ್ಮೆದುರಿಗಿದೆ. ಇಂತಹ ಸನ್ನಿವೇಶದಲ್ಲಿ ಸಾಹಿತ್ಯ ಹಾಗೂ ಒಟ್ಟು ಸಾಂಸ್ಕೃತಿಕ ಕ್ಷೇತ್ರ ಪ್ರಖರ ಸಾಮಾಜಿಕ ಕಾಳಜಿಗೆ ಬದ್ಧವಾಗಿ ಬದುಕಬೇಕು; ಬರೆಯಬೇಕು; ಮುಖಾಮುಖಿಯಾಗಬೇಕು.

ಹೀಗೆ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿಂದ ಮತೀಯತೆ ಮತ್ತು ಮಠೀಯತೆಗಳಿಗೆ ಮುಖಾಮುಖಿಯಾಗುವ ಬದಲು ಓಲೈಸುವಿಕೆಗೆ ಶರಣಾಗುತ್ತಿರುವುದಕ್ಕೆ ಅನೇಕ ಸಾಹಿತ್ಯ ಸಮ್ಮೇಳನಗಳು ಸಾಂಕೇತಿಕ ಸಾಕ್ಷಿಯಾಗಿವೆ. ರಾಜಕಾರಣಿಗಳು ಮತ್ತು ಮಠಾಧೀಶರಿಲ್ಲದೆ ಅದ್ದೂರಿ ಸಾಹಿತ್ಯ ಸಮ್ಮೇಳನಗಳು ಅಸಾಧ್ಯ ಎಂದು ಭಾವಿಸಲಾಗುತ್ತಿದೆ. ಸಾಹಿತ್ಯ-ಸಂಸ್ಕೃತಿಯಲ್ಲಿ ಆಸಕ್ತರಾದ ರಾಜಕಾರಣಿಗಳನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ತಪ್ಪಲ್ಲ. ಆದರೆ ಅಧಿಕಾರಸ್ಥರಿಗೇ ಆದ್ಯತೆ ಕೊಡುವುದು ತಪ್ಪು. ಆಹ್ವಾನಪತ್ರಿಕೆಯಲ್ಲಿ ಎಲ್ಲ ರಾಜಕಾರಣಿಗಳ ಹೆಸರನ್ನು ಅಚ್ಚುಮಾಡಿಸುವುದಂತೂ ಅನುಚಿತ. ಕೇಳಿದರೆ ಪ್ರೋಟೋಕಾಲ್ ಎನ್ನುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾಗಿರುವುದು ಪ್ರೋಟೋಕಾಲ್ ಅಲ್ಲ; ಪ್ರೀತಿಕಾಲ್, ಜನಗಳ ಪ್ರೀತಿಕಾಲ್. ಇದನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದಿದ್ದರೆ ಸಾಂಸ್ಕೃತಿಕ ಕ್ಷೇತ್ರದವರು ರಾಜಕೀಯ ಪ್ರೋಟೋಕಾಲ್ ಅನ್ನು ಧಿಕ್ಕರಿಸಿ ಅವರಿಗೆ ಅರ್ಥ ಮಾಡಿಸಬೇಕು; ಯಾಕೆಂದರೆ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳು ಜನರಿಗೆ ಜವಾಬ್ದಾರರಾಗಬೇಕು. ಆಳುವ ವರ್ಗಕ್ಕೆ ಮತ್ತು ಮಠ ಮಾನ್ಯಗಳಿಗಲ್ಲ. ಪ್ರೋಟೋಕಾಲ್ ಇರುವುದೇ ನಿಜವಾದರೆ ಅದು ಜನಗಳಿಗೆ ಕೊಡುವ ಗೌರವದಲ್ಲಿ ಮಾತ್ರ ಇರಬೇಕು. ಪ್ರೋಟೋಕಾಲ್ ಜಾಗವನ್ನು ಸಾರ್ವಜನಿಕ ಸಂಕೋಚ ಆವರಿಸಿಕೊಳ್ಳಬೇಕು. ಸಾರ್ವಜನಿಕ ಸಂಕೋಚವಿದ್ದರೆ ನಮ್ಮ ನಮ್ಮ ಜಾಗ ನಮಗೇ ಗೊತ್ತಾಗುತ್ತದೆ. ಇದು ರಾಜಕಾರಣಿಗಳಿಗೆ ಮಾತ್ರವಲ್ಲ ಸಾಹಿತಿಗಳನ್ನು ಒಳಗೊಂಡಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಸಾಹಿತಿಗಳನ್ನು ಹೊರತುಪಡಿಸಬೇಕಾಗಿಲ್ಲ. ಆಗ ಜನರ ಮೂಲಕ ಭಾಷೆ ಮತ್ತು ಬದುಕನ್ನು ನೋಡುತ್ತೇವೆ. ಕನ್ನಡವನ್ನು ಉಳಿಸಿ ಬೆಳೆಸುವ ಮಾತಿಗೂ ನನ್ನ ಪ್ರತಿಕ್ರಿಯೆ ಇದೇ ಆಗಿದೆ. ಕನ್ನಡ ಉಳಿಯಬೇಕಾದರೆ ಕನ್ನಡಿಗರನ್ನು ಮೊದಲು ಉಳಿಸಿ ಕನ್ನಡಿಗರ ಬದುಕನ್ನು ಹಸನುಗೊಳಿಸಿ, ಅವರು ಕನ್ನಡವನ್ನು ಉಳಿಸುತ್ತಾರೆ; ಸಾಹಿತ್ಯವನ್ನು ಓದುತ್ತಾರೆ. ಕಡೇಪಕ್ಷ ಕೇಳುತ್ತಾರೆ. ಇದು ಮೊದಲು ಕನ್ನಡಪರ ಚಿಂತಕರಿಗೆ ಅರ್ಥವಾಗಬೇಕು. ಅಧಿಕಾರಸ್ಥರಿಗೆ ಅರ್ಥ ಮಾಡಿಸಬೇಕು.

ಇನ್ನು ಜಾತಿವಾದ ಮತ್ತು ಕೋಮುವಾದವನ್ನು ಪೋಷಿಸುವ ಯಾವ ಮಠಮಾನ್ಯಗಳಿಗೂ ಮಣೆ ಹಾಕಬಾರದು. ಜಾತಿವಾದ ಮತ್ತು ಕೋಮುವಾದವನ್ನು ಪೋಷಿಸುವವರು ಧರ್ಮ ಗುರುಗಳೇ ಅಲ್ಲ ಎಂದು ನಾನು ಭಾವಿಸುತ್ತೇನೆ. ಈ ನನ್ನ ಮಾತುಗಳು ಹಿಂದು, ಮುಸ್ಲಿಂ, ಕ್ರೈಸ್ತ ಮುಂತಾದ ಎಲ್ಲಾ ಧರ್ಮಗುರುಗಳಿಗೂ ಅನ್ವಯಿಸುತ್ತದೆ. ಎಲ್ಲಾ ಧರ್ಮಗಳ ಕೋಮು ವಾದವನ್ನು ನಾನು ವಿರೋಧಿಸುತ್ತೇನೆ. ಧಾರ್ಮಿಕತೆ ಇರುವುದು, ಇರಬೇಕಾದ್ದು ಮಂತ್ರಗಳನ್ನು ಮೀರಿದ ಮನಸ್ಸಿನಲ್ಲಿ; ಶಾಸ್ತ್ರಗಳನ್ನು ಮೀರಿದ ಸಂವೇದನೆಯಲ್ಲಿ ಸಂವೇದನೆಯೇ ಜೀವಶಕ್ತಿ ಯಾಗಿರುವ ಸಾಹಿತ್ಯ ಕ್ಷೇತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಸೃಜನಶೀಲ ಗುಣಗಳಿಗೆ ಆದ್ಯತೆ ಕೊಡಬೇಕು.

ಮಂತ್ರದ ಮಡಿಯಾಗುವುದು ಸಾಹಿತ್ಯವಲ್ಲ, ಶಾಸ್ತ್ರದ ಶಸ್ತ್ರವಾಗುವುದು ಸಂಸ್ಕೃತಿಯಲ್ಲ. ಇವು ನಮ್ಮ ಧ್ಯೇಯ ವಾಕ್ಯಗಳಾಗಲಿ ಎಂದು ಹಾರೈಸುತ್ತ ಸದ್ಯದ ನನ್ನ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ.
*****
(ಜೂನ್ ೨೦೧೧)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ಯಮ
Next post ಕಣ್ಣೀರ ಹನಿಯುದುರಿದ್ದಕ್ಕೆ….

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…