ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ,
ಸಂದೇಹದಲ್ಲಿ ಮುಳುಗಿ ಕಳವಳಿಸಿ ಕಾತರಿಸುವ ಅಣ್ಣಗಳಿರಾ,
ನೀವು ಕೇಳಿರೋ, ಹೇಳಿಹೆನು.
ಕಾಣಬಾರದ ಘನವ ಹೇಳಬಾರದಾರಿಗೆಯು.
ಹೇಳುವುದಕ್ಕೆ ನುಡಿ ಇಲ್ಲ.
ನೋಡುವುದುದಕ್ಕೆ ರೂಪಿನ ತೆರಹಿಲ್ಲ.
ಇಂತಾ ನಿರೂಪದ ಮಹಾ ಘನದ
ಶರಣರ ಹೃದಯಲದಲ್ಲಿ ನೆಲೆಗೊಂಬುದಲ್ಲದೆ,
ಈ ಜನನಮರಣಕ್ಕೊಳಗಾಗುವ ಮನುಜರೆತ್ತ
ಬಲ್ಲರು ಈ ಮಹಾಘನದ ನೆಲೆಯ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ