ಜೋಗತಿ ನಾನು ಬೀಗತಿ
ಕಾಡತಿ ಯಾಕ ನೋಡತಿ ||ಪ||
ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ
ತುಂಬೀದ ಮಂದ್ಯಾಗ ಕುಣದೇನ
ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ
ಬೀದೀಯ ಬಸವೆಂದ್ರು ಬಂದೇನ ||೧||
ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ
ಪಕ್ಕಂತ ಹಾರೀತ ಪರಭಾರೆ
ನಕ್ಕೊಂತ ನಿಂದೋರು ಚಕ್ಕಂತ ನೋಡ್ಯಾರೆ
ಧಕ್ಕಂತ ಧಸ್ಸಂತ ಎದಿಭಾರೆ ||೨||
ಏನೈತೆ ನನ್ನಾಗ ಗೇಣ್ಗೆಳತಿ ನೀಹೇಳ
ಬೀದ್ಯಾಗ ಕ್ಯಾದಿಗಿ ನಾ ಕುಣಿದೆ
ಹೋದಾನ ಮೇದಾನ ಹೋಲಗಾರ ಛಲಗಾರ
ಫಲಗಾರ ಹೂಗಾರ ನಾಕರೆದೆ ||೩||
ಕೇರೆಣ್ಣೆ ಮಗಿಯಾದೆ ಗಾಂದಣ್ಣಿ ಗಡಿಗ್ಯಾದೆ
ಗಾದೀಯ ಹುಡಿಗ್ಯಾದೆ ಗೆಳತ್ಯಾರೆ
ಕಾಡ್ಯಾರು ಭಾಡ್ಯಾರು ಪುಗಸಟ್ಟೆ ಸೆಟ್ಟ್ಯಾರು
ಜೊಟ್ಟೀಯ ಕಾಳ್ಹೆಕ್ಕಿ ತಿಂದರೆ ||೪||
ಬುಸರ್‍ಬುಳ್ಳಿ ಅಂದಾರು ಕಿಸಬಾಯಿ ಅಂದಾರು
ಜಾತ್ರ್ಯಾಗ ಜೋರ್ಮಾಡಿ ಎಳದಾರೆ
ಕೊಡಪಾನ ಬೀಳ್ದಂಗ ಕೆರುವೀಲಿ ಹೊಡೆದೇನೆ
ಗುರಪಾದ ಪಲ್ಲಕ್ಕಿ ಹೊತ್ತೇನೆ
ಹರಪಾದ ಪಲ್ಲಕ್ಕಿ ಹೊತ್ತೇನೆ
ಶಿವಪಾದ ನೆಲ್ಲಕ್ಕಿಯಾದೇನೆ ||೫||
*****
ಜೋಗತಿ = ಆತ್ಮ
ಬೀಗತಿ = ಶಿವನ ಬೀಗತಿ
ಹೂಗಾರ = ಪರಮಾತ್ಮ
ಪುಗಸಟ್ಟೆ ಸೆಟ್ಟ್ಯಾರು = ಕಾಮ ಕ್ರೋಧ ಮುಂ.