ಎಲ್ಲಿ ಅಡಗಿರುವೆ ಹೇಳೆ
ಕೋಗಿಲೆ ನಿನ್ನ ದನಿಯು
ಕೇಳಿ ಬರುತಿದೆ ||

ಯಾವ ರಾಗದ ಭಾವವೂ
ಯಾವ ತಾಳದ ವೇಗವೂ
ಯಾರ ಪ್ರೇಮದ ಪಲ್ಲವಿಯು
ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ ||

ಎಷ್ಟು ದೂರವಿರುವೇ ನೀನು
ಯಾವ ಮರದಲ್ಲಡಗಿರುವೇ
ನಿನ್ನ ಪ್ರೇಮ ಪಲ್ಲವಿಗೆ
ಚರಣಗಳ ಸಾಲು ಬರೆಯುವೆ ||

ಹೂ ಗೊಂಚಲುಗಳ ನಡುವೆ
ಕುಳಿತು ಭ್ರಮರಗಳ ಸ್ಪರ್‍ಶ
ತಿಳಿದು ಪಲ್ಲವಿಯ ಸಾಲು
ಹಾಡಿದೇ ನೀನು ಕೋಗಿಲೆ ||

ಹೂವಿನ ಮನದಾಳದ ಮಾತನರಿತು
ಸಂತಸದಿಂ ನಲಿದು ಹಾಡಿದೆ ಏನು
ನಿನ್ನ ಹಾಡ ಕೇಳಿ ನೋವ ಮರೆತೆ
ಎಂಥಾ ಸೊಗಸು ರಾಗಲಾಪ ||

ರೆಂಬೆಕೊಂಬೆಗಳ ನಡುವೆ
ಕಟ್ಟಿದ ಗೂಡುಗಳ ಸಂಸಾರ
ನಿನ್ನ ನೋಡುತ ಹಿಗ್ಗಿ ರೆಕ್ಕೆಗಳ
ಬಡಿದು ಯಾವ ತಾಯ್ ಹಕ್ಕಿಯ ಕರುಳು
ಎಂದು ಕೇಳುತಿದೆ ||

ನಿನ್ನ ಅರಿವಾಗದ ರೀತಿನೀತಿ
ದೇವನಿರಿಸಿದ ಕಂಠವೂ
ನಿನ್ನ ಮೈಬಣ್ಣ ಕಪ್ಪಾದರೂ
ಮನವು ಕಾವ್ಯವದೂ ಕೋಗಿಲೆ ||
*****