ಗಾಳಿ ಸುಮ್ಮನೆ ಸರಿದು ಹೋಗಿದೆ
ಎದೆಯ ತಳಮಳ ಕಂಪನ ಹೊತ್ತು
ಈಗ ಸೂರ್ಯ ಮುಳುಗಿದ್ದಾನೆ
ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು
ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ
ಸುಮ್ಮನೆ ಒಂದನ್ನೊಂದು.
ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ
ಸರಿದು ಹೋದಗಾಳಿ ಮತ್ತೆ ಮರಳಿ ಬಂದು
ಕಿಟಕಿಯ ಸಂದಿಯಲಿ ಕೇದಿಗೆ ಹೂವ
ಗಂಧ ಸೂಸಿ ಮುಸುಕು ಹೋದ ರಾತ್ರಿ
ಮಬ್ಬು ಹಳದಿ ಬೆಳಕಕೋಲು ತೂರಿದೆ
ಕಂದು ಹೂವಿನ ತಲೆದಿಂಬಿನಲಿ.
ಮುದ್ದೇ ಮುದುಡಿದ ಕನಸ ತುಂಬ
ಹಾರಾಟ ತೇಲುಗಣ್ಣಿನ ಮಂಪರು
ಗಾಳಿಸುಮ್ಮನಿರುವದಿಲ್ಲ ಮತ್ತೆ
ಬೆವರ ಕಪ್ಪಕೂದಲ ನೇವರಿಸಿ
ಕಚಗುಳಿ ಇಟ್ಟಿದೆ ದಿಗ್ಗನೆ ಎದ್ದಿದ್ದಾಳೆ
ತಣ್ಣನೆ ಸ್ಪರ್ಶಕ್ಕೆ ಅವಳು, ಕಾಲಿನಿಂದ
ಸರಿದು ಹೋದ ಚಾದರು.
ಗಾಳಿಗೆ ಗಾಳಿಮಾತು ಗಂಧಸ್ಪರ್ಶ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹರಡಿ ಹಾರಾಡಿ
ತೇಲುಪಟ ಬಾಲಂಗೋಚಿ ಸೆಳವು
ಒಂದಾದ ವಾಸನೆ ತೇಲುಕೊಳ ಚಿಮ್ಮಿ
ಎದ್ದ ಮುಖದ ಜಾರು ನೀರು ಹರಿದು
ಬೆಳದಿಂಗಳ ಮಾಯೆ ಅಂಗಳದಲಿ.
ಹೀಗೆ ಗಾಳಿ ಸುಮ್ಮನೆ ಸರಿದು ಹೋಗಿದೆ
ಎದೆಯ ಬದುವಿನಲಿ ಸುಂಟರಗಾಳಿಯಾಗಿ
*****