ಅಶ್ವಯುಜ ಸೂರ್ಯ ಚಿಮ್ಮಿದಾಗ
ಕಿರಣಗಳು ಬೆಳಕ ಬೀಜಗಳು
ರೆಂಬೆಕೊಂಬೆಗಳ ಪಣತಿಗಳಲಿ
ಮಿಂಚುಗೊಂಚಲುಗಳು ಪತಂಗಗಳು
ಭೂಮಿ ಬಾನಂಗಳದಲಿ ಚಿನಕುರುಳಿಗಳು.
ಸಂಭ್ರಮದ ಅಲೆಅಲೆಗಳಲಿ ತೇಲಿವೆ
ನಮ್ಮೆಲ್ಲರ ಮಿನುಗು ಕಣ್ಣೋಟಗಳು
ಮಾತು ಹಾಡಿನ ಸಿರಿಶುಭದ ಸುಗ್ಗೀ
ಪೇಟೆತುಂಬ ಹರಡಿಹಾಸಿದ ಗೌಜುಗದ್ದಲ
ಬೀದಿ ತುಂಬ ಮಿನುಗುವ ಜ್ಯೋತಿರ್ಮಯಿಗಳು.
ತೆಳುಫರದೆಯ ತಿಳಿಮಂಜು ಹನಿಗಳು
ತಬ್ಬಿ ಮುದ್ದಿಸಿಕೊಂಡ ಸೂರ್ಯಕಾಂತಿ ಚೆಲುವು
ಬೆಳದಿಂಗಳ ಚಂದಿರ ಮುನಿಸು ಮುರಿದು
ಸೇವಂತಿಗೆ ಹೂಗಳ ಹರಿದ ಗಂಧಗಾಳಿ
ತೇವತೀಡಿ ನೇವರಿಸಿಕೊಂಡ ಗರಿಕೆ ಹಸಿರುಸೂಸಿ.
ಕಾಲ ಕ್ರಿಯೆ ಸ್ಥಳ ಮೇಳೈಸಿ ಸಹಜಪ್ರೀತಿ
ಅರಳಿದ ಪ್ರೇಮ ಅತಿಮಧುರ ಶಿಲೆಸುಂದರ
ಸಾಕ್ಷೀ ಪ್ರಜ್ಞೆಯಲಿ ಹುಟ್ಟಿದ ಬೆಳಕಭಾವ
ಕಲೆ ಸುಂದರ ಅದು ಮಂದಿರ ಸಂತಮರ
ಬಂಗಾರದ ಕಿರಣಗಳ ಸೂಸುವ ದೀಪಾವಳಿ.
ಮಂಜು ಮುಸುಕಿದ ಸಂಜೆ ಇಳಿದ ರಾಗ
ಮಾಲಕಂಸ ಹಾಡಿದ ಹೃದಯ ಇಂಪು
ಹೊಸ ಹುರುಪಿನಲಿ ಕನಸುಗಳು ತೇಲಿ
ಹಗಲು ಹೊಳೆದು ರಾತ್ರಿ ಉಳಿದ ಜಗದಸ್ನಾನ
ಇನ್ನು ಹಾರಬಹುದು ರೆಕ್ಕೆ ಬಿಚ್ಚಿದ ಹಕ್ಕಿ ಬಾನತುಂಬ.
*****