ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ
ಜಯ ಜಯತು ಜಗದಾಂಬೆ ಸಾಂಬೆ
ತ್ರಯ ಜಗವನೆಡಬಿಡದೆ ತುಂಬೆ ನಯ
ವಿನಯಗುಣ ಗಣಕದಂಬೆ
ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ||
ಏನು ಇಲ್ಲದಲಂದು ಓಂಕಾರ ಪ್ರಣಮದಿ
ನೀನು ಮೂಲದಿ ಬಂದು
ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾನೌಘಸಿಂಧು
ತಾನೆ ಸ್ಥೂಲತಿಸೂಕ್ಷ್ಮಕಾರಣ
ಬಾನು ಬಹುರುಚಿ ವಿಶ್ವತೈಜಸವ
ಮಾನ ಪ್ರಜ್ಞಾನಿಸುವ ಜನನಿ ಮೌನ
ರಾಜಸ ಸತ್ವ ತಾಮಸ ಏನು ಇಲ್ದಿರಲಾಗ
ಅಜ ವಿಷ್ಣು ರುದ್ರರು ನಿನ್ನ ಸ್ಥುತಿಸಲು ಬೇಗ
ಪದರೇಣುವನು ಕೃಪೆಯಿಂದ ಪಾಲಿಸಿದಾಗ ಆನಂದ ರಾಗ
ಮಾನ ನಿಧಿ ಉತ್ಪತ್ಯ ಸ್ಥಿತಿ ಲಯ
ಮೌನಮುದ್ರಿ ಸಮಾಧಿಭೇದವು
ಭಾನುವಿನ ಓಲ್ ಬೆಳಗು ಮುಸುಗುವ-
ದೇನು ನಿನ್ನಾಧೀನ ತ್ರೈಜಗ
ನೀನೆ ನೀನೆಯು ತತ್ವ ಕಲ್ಪನೆ
ನೀನೆಯೆಂಬೆನು ಗಹನ ನಾನೆನೆ
ನಾನು ರಹಿತ ನಿರಾಳದೇವಿಗೆ ಜಯ ಜಯತು ಜಗದಾಂಬೆ ||೧||
ಓಂಕಾರಿ ಶರ್ವಾಣಿ ಆಖಳಾಂಡ ಜಗಮಯೆ
ಝೇಂಕಾರಿ ಸತ್ರಾಣಿ ಜಡಮೂಢ ಶುಂಭರ
ಹಂಕಾರಿ ನಿರ್ವಾಣಿ ಕಿಂಕರಪ್ರಾಣಿ
ಶಂಕರಿಯು ಶಿವೆ ಶಾಂಭವಿಯೆಂಬೆನಲು
ಭೀಂಕರಿಯು ಮಧುಕೈಟಭ್ರಾಂತಕಿ
ಓಂಕಾರಿಯು ಮಧುಪೀವಿರಕ್ತಬೀ-
ಜಾಂಕ ಮೂಲಕೆ ಕಾಲಭೈರವಿ
ಅಂಕ ವಿಜಯ ಶರಾಳಿ ಪ್ರತಿವೀರ-
ಗಂಕಣ ವಿಮಲ ಹಸ್ತಕರಾಳಿ ಧೀಂಕರವತಾಳಿ
ನೂಂಕಿ ಮಹಿಷನ ದಾಳಿ ಧೀಂಕರವತಾಳಿ
ಠೇಂಕರಿಸಿ ನಿಶಿಂಜಿನಿಧ್ವನಿ
ಭೋಂಕರಿಸಿ ವರಸಿಂಹ ನಾದದಿ
ಕೇಂಕರಿಸಿ ಹರಿ ಹವಕೆ ಹಾರಿದಿ
ಮುಂಕರಿದು ಮೃತವಾದದನುಜರ
ಆ೦ಕಿಲಾಲ ಕಿಲಾಲ ಕಿಲಿಕಿಲಿ
ಓಂ ಕಿಂ ಸೋಹಂ
ಸರ್ವದೇವರ ದೇವಿಗೆ ಜಯ ಜಯತು ಜಗದಾಂಚಿ ||೨||
ಸಕಲ ಲೋಕದ ಮಾತೆ ಪರಬ್ರಹ್ಮ ಮೂಲವೆ
ಪ್ರಕೃತಿ ನಿನ್ನಿಂದಾಯ್ತೆ ಪಂಚಾದಿ ತತ್ವವು
ವಿಕೃತಿ ನಿನ್ನಿಂ ಪೋಯೇ ನೀಂ ಪೃಥ್ವಿ ದೇವತೆ
ಥಕ ಥಕನೆ ಕುಣಿಸಿದೀ ಜಗವಖಿಲ ಸೂತ್ರದ ಬೊಂಬೆ ತೆರದಲಿ
ಸುಖ ವಿಲಾಸಿಯೆ ಬಹಳ ಮಾಯದಿ
ಪ್ರಕಟಿಸಿದೆ ಆಕಾಶ ನಿಮಿಷಕೆ
ಅಖಿಳ ವೇದಗಳನ್ನು ಇಂದ್ರಾ,ದಿ ಸುರಮುನಿ
ನಿಖಿಳರೂಪಗಳನ್ನು ಈರೇಳು ಭುವನದ
ಭಕ್ತವತ್ಸಲೆ ನೀನು ಮಂತ್ರಾದಿ ದೇವತೆ
ಚಕಿತಗುಣ ಗಣ ಚಂಚಢಾಳಿಯೆ
ರಕುತಬೀಜಾಂಶಾಪಹಾರಿಯೆ
ಕಕುಲತಿಲಿ ಮಹಮುಕ್ತಿದಾಯಕಿ
ಪ್ರಕಟ ಗುರುಗೋವಿಂದನಣುಗಗೆ
ಸುಖ ಸಾಯುಜ್ಯ ಕೊಡುವ
ಸಕಲದೇವರ ದೇವಿ ಪಾದಕೆ ಜಯ ಜಯತು ಜಗದಾಂಬೆ ||೩||
*****
Little faults in literature.