ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ - ವಿಜ್ಞಾನೇಶ್ವರಾ *****

ಸಾವಯವವೆಂದರದೆಂತು ಹಿನ್ನಡೆದಂತೆ?

ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು? ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ ನಾವೀಗ ಪೋಗಬೇಕರ್ಧ ಶತಮಾನ ಹಿಂದೆ - ವಿಜ್ಞಾನೇಶ್ವರಾ *****

ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಖುಷಿಯಿಂದ ನಡೆಯುತಲಿದ್ದ ಶ್ರೀಮಂತ ಕೃಷಿ ಬದುಕಿಂದು ಕಸಿವಿಸಿಯ ಜೈಲು ಹುಸಿಯನುಸುರುವ ತಜ್ಞ ತಾ ಜೈಲರು ಕೃಷ್ಣನೆಂದು ಬರುವನೋ ಎಂದು ಕೃಷಿಯು ಕಾಯುತಿದೆ ನರಕವಾಸದೊಳು - ವಿಜ್ಞಾನೇಶ್ವರಾ *****

ಸಲಹೆ ಕೊಡಬೇಕಾದರೆ ಮಾಡಿದನುಭವ ಬೇಡವೇ ?

ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ - ವಿಜ್ಞಾನೇಶ್ವರಾ *****

ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?

ಕೃಷಿಯೆಂದರದೊಂದು ಸಂಭ್ರಮದ ಸಂತೆ ಕೇಳ್ ಕಾಣ್ಕೆ ಇರಲೆಲ್ಲ ದೊರೆಯುವುದಲ್ಲಿ ಉಚಿತದೊಳು ಕಾಸಿನವಸರವಲ್ಲಿಲ್ಲ ನಿತ್ಯವಸಂತದುತ್ಸವವು ಕಷ್ಟ ದುಡಿತದೊಳೆಲ್ಲ ರುಚಿಗಳಿಮ್ಮಡಿಯು ಕನಸು ಕೆಡಿಸದ ಗಾಢ ನಿದ್ರೆಯೊಳೆಲ್ಲ ಖುಷಿಗಳಿಮ್ಮಡಿಯು - ವಿಜ್ಞಾನೇಶ್ವರಾ *****

ಬರಿದರ್ಥಕಾಮದ ಮರವುಳ್ಳವುದೆಂತು?

ಬೇರು ಹುಳದಿಂದಡಿಕೆ ಬುಡದಲಿ ಕೊಳೆಯು ತಿರೆ ಬೆಳೆಗಾರ ನೊಂದಿಹನು, ಸುಳಿ ಬಾಡಿತೆಂದು ವರ ಭತ್ತ ಬೆಳೆವಲ್ಲಿ ಜೀವನವೆ ಇರುವಲ್ಲಿ ಬರಿದಡಿಕೆಯನ್ನು ಬೆಳೆಯುತಿರೆ ಘನ ಸಂಸ್ಕೃತಿಯ ಬೇರೆ ಕೊಳೆಯುತಿದೆ. ಭೀಕರವು ಮುಂದೆ - ವಿಜ್ಞಾನೇಶ್ವರಾ *****

ಬೇಡದುದನೆಳೆದು ಕೊಂಡೊಡಿನ್ನೇನು?

ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ - ವಿಜ್ಞಾನೇಶ್ವರಾ *****

ಕೃಷಿಕನೊಳು ಹಸುವೋ? ಕೃಷಿಕನೇ ಹಸುವೋ?

ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು ಕಾಡೊಳಗೆ ಮೆದ್ದು ಬರೆ ಹಸುವನು ಕೊಂಡಾಡುತಲಿದ್ದ ರೈತರಿಂದಾಧುನಿಕ ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು ಕಟ್ಟಿ ಸಾಕುವ ಹಸುಗಳಾಗಿಹರೋ - ವಿಜ್ಞಾನೇಶ್ವರಾ *****

ಘಾಸಿಗೊಳ್ಳುವುದಿನ್ನೆಷ್ಟು? ಪ್ರೇಯಸಿಯಾಸೆಯಲಿ?

ಕಾಸಿಗವಕಾಶವಿಹುದೋ ಇಲ್ಲವೋ ಎಂದೆಂಬ ಬೂಸು ಚರ್ಚೆಯೊಳೇನು ದಿನ ಕಳೆವುದೋ ಕೃಷಿಯೊಳು ಸಾವಯವದುನ್ನತಿಯ ಬಗೆಗೆ ಲೇಸಲ್ಲವೆಂದಿಗಾದರು ಗಣಿಕೆ ಸಹವಾಸ ವಸುಧೆಯುರಿ ಏರುತಿದೆ ಏಡ್ಸ್ ಬಲು ಮೋಸ - ವಿಜ್ಞಾನೇಶ್ವರಾ *****

ಸಾವನ್ನೊಪ್ಪದೆ ಸಂಕಟವನಪ್ಪಿದೊಡೆಂತು?

ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು - ವಿಜ್ಞಾನೇಶ್ವರಾ *****