ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ - ವಿಜ್ಞಾನೇಶ್ವರಾ *****

ಎಂಮಾಯ್ಕೆಯಾಹಾರ ಶುದ್ಧಬುದ್ಧಿಗಾಗಬೇಡವೇ?

ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು - ವಿಜ್ಞಾನೇಶ್ವರಾ *****

ಇಂನ್ಯಾರೋ ದುಡಿದನ್ನದ ಕತ್ತಲಿನೊಳೆಷ್ಟು ದಿನ ನಿದ್ರೆಯೋ?

ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ - ವಿಜ್ಞಾನೇಶ್ವರಾ *****

ಮುಂದೇನು? ಇಂದೆಲ್ಲ ತಿಂದು ಮುಗಿಸಿದರೆ?

ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ - ವಿಜ್ಞಾನೇಶ್ವರಾ *****

ಇದ್ದಲ್ಲೇ ಮೇಲೇರ್‍ವ ಉದ್ಯೋಗವನಂತೆ ಅಡ್ಡ ಗೊಳಿಸಿದೊಡೆಂತು?

ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು - ವಿಜ್ಞಾನೇಶ್ವರಾ *****

ಹಕ್ಕೆಂದು ಬರಿ ರೊಕ್ಕವನೆ ಬೆಳೆದುಂಡೊಡೆಂತಕ್ಕು?

ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ - ವಿಜ್ಞಾನೇಶ್ವರಾ *****

ಅಲಲಾ ಸೃಜನ ಶೀಲತೆಯೆಂದೊಡೇಂ?

ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು - ವಿಜ್ಞಾನೇಶ್ವರಾ *****

ಎಮ್ಮನಾಳುವ ಬ್ರಿಟಿಷರ ಶಕ್ತಿ ಮೂಲವಾವುದು ಗೊತ್ತೇ?

ತಮ್ಮದೇ ರುಚಿಯೆಂದವರಿವರ ರುಚಿಗಳನ್ನು ನೆರೆಗಳೆದು ಹಮ್ಮಿನೊಳಿರ್‍ಪುದೆಲ್ಲರ ಗುಣ ಸಹಜವಿರುತಿರಲಿದನು ತಮ್ಮ ರುಚಿಗೆಳೆದಾ ಬ್ರಿಟಿಷರ ತಾಕತ್ತದದ್ಭುತವಲಾ ನಮ್ಮನೆರಡು ಶತಮಾನವಾಳಿದ ಶಕ್ತಿಗಿಂತಧಿಕವಿದು ಜ್ಯಾಮ್ ಬ್ರೆಡ್ ಬಿಸ್ಕೆಟು ಮಂಚೂರಿಗಳೆಮ್ಮನಾಳುತಿದೆ - ವಿಜ್ಞಾನೇಶ್ವರಾ *****

ಯೋಗ ಬೇಕಲ್ಲವೇ? ಇಳೆಯ ಕಳೆಯ ಕಾಣಲು

ಬಿಗುವನೆಲ್ಲವ ಹಗುರ ಮಾಡುವ ನಗುವೆ ನೆಲದ ನೆಕ್ಕರೆಯಾಗಿ ಚಿಗುರಿಹುದಿಲ್ಲಿ ನೋಡಾ ತಂಬುಳಿ ಗಾಗಿ ಹೊಟ್ಟೆಯುರಿ ಕಳೆವನು ರಾಗಿ ನಗಲೆಂದೆಲ್ಲರೊಂದಾಗಿ - ವಿಜ್ಞಾನೇಶ್ವರಾ *****

ಎಲ್ಲ ರೋಗದ ಮೂಲ ಮಾಲಿನ್ಯವೆಲ್ಲಿಹುದು ಗೊತ್ತಾ?

ಮೂಲ ಪ್ರಕೃತಿಯನಾಂತು ನೋಡಿದೊಡರಿಯುವುದು ಶಾಲ್ಯ ಧಾನ್ಯಗಳೆಮಗಲ್ಲ, ಹಕ್ಕಿಗಳಾಹಾರವದು ಸುಲಿದಂತುಣಲಪ್ಪ ಹಣ್ಣುಗಳೆಮ್ಮ ಪಾಲಿನದು ಹುಲ್ಲೆಯನುಣುವ ಹುಲಿಯೆಂದು ಹುಲ್ಲುಣದು ಮಲಬದ್ಧತೆಯ ಪೇಟೆ ಬೆಳೆದಿಹುದೀ ಕಾರಣದಿ - ವಿಜ್ಞಾನೇಶ್ವರಾ *****