ಹಿಪಾಕ್ರಸಿ (ಬಡಾಯಿ)

ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ - ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?..... *****

ಜ್ಯೋತಿಷ್ಯ

ಇಂತಿಷ್ಟೇ ಆಯುಷ್ಯ ನಿನ್ನದು ತಗೋ ಈ ರತ್ನ ಹವಳ ಮುತ್ತು ಬದುಕಿ ಉಳಿಯುವೆ ಬಹಳಷ್ಟು ವರ್‍ಷ - ಸಾವಿರ ನೋಟುಗಳು ಕೊಟ್ಟು ಉಂಗುರ ಹಾಕಿಕೊಂಡು ಹರಬರುತ್ತಲೇ ಕಾರಿಡಾರ್‌ನಲ್ಲಿ ಬಿದ್ದು ಸತ್ತ ಈತ - ಆತ...

ಸನ್ಯಾಸಿ

ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****

ವಿಮರ್‍ಶಕ

ಪುಸ್ತಕಗಳನೋದದೇ ಮುನ್ನುಡಿ ಬರೆದ ಪುಟಗಳ ನೋಡಿ ಪತ್ರಿಕೆಗಳಿಗೆ ಬರೆದು ಹೆಸರುಗಳಿಸಿಕೊಳ್ಳಬಹುದು - ಬೇಡವೆಂದರೆ ಒಂದಿಷ್ಟು ಅಣಕಿಸಿ ಕೂಗಾಡಿಕೊಂಡರೂ ಸಾಕು - ಪ್ರಸಿದ್ಧಿಗೆ ಏರಿಬಿಡುತ್ತಾನೆ (ಳೆ). *****

ಆಂತರಿಕ

ತಲೆಬುರುಡೆಯಲ್ಲಿ ಏನೆಲ್ಲ ತುಂಬಿಕೊಂಡಂತೆ ಕಪಾಟಿನಲ್ಲಿಯೂ ಕೂಡಾ - ಆಸ್ತಿ ಅಂತಸ್ತಿಗೆ ತಕ್ಕಹಾಗೆ ಅವುಗಳವುಗಳದೇ ಧಿಮಾಕು ಹೆಚ್ಚಾದರೆ ತಲೆಸಿಡಿಯುತ್ತದೆ ತುಂಬಿ ಓವರ್‌ಲೋಡ್ ಆದರೆ ಕಚಡಾ ಹೊರಬೀಳುತ್ತದೆ. *****

ಹುಷಾರ್‍

ಬಲೆ ಹಾಕಬೇಡ ಹುಡುಗ ಆಕ್ಟೋಪಸ್ ಕೈಗಳಂತೆ ಎಲ್ಲೆಂದರಲ್ಲಿ - ಪ್ರೀತಿ ಅಷ್ಟೊಂದು ಹಗುರಾದುದಲ್ಲ ಸಹನೆ ತ್ಯಾಗ ಮನುಷ್ಯತ್ವ ತಳ್ಳಿ ಹಾಕಿದರೆ, ಚಿಲ್ಲರೆಯಾಗಿ ನಾಲ್ಕು ಜನರ ನಾಲಿಗೆಗೆ ಆಹಾರವಾಗುತ್ತದೆ. *****

ಇತಿಹಾಸ

ಅರಮನೆ ರಾಜ-ರಾಣಿ-ಮಕ್ಕಳು ಆಳು ಕಾಳು ಊಹಿಸಿ ಒಳಗೆ ಹೋದರೆ - ಸ್ಮಶಾನ ಮೌನ, ಧೂಳು ಜೇಡರ ಬಲೆ ಎಲ್ಲದರೊಳಗಿಂದ ಸಣ್ಣಾಗಿ ನರಳುವ ಧ್ವನಿ - ಪಾಪದ ಕಥೆಗಳ ಧ್ವನಿ ಸುರುಳಿ ಬಿಚ್ಚಿಕೊಳ್ಳುತ್ತಿವೆ. *****