ಲಾಭವದಾರಿಗೊ? ರಸ ಗೊಬ್ಬರವಿದ್ಯಾಕೋ?

ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ - ವಿಜ್ಞಾನೇಶ್ವರಾ *****

ಬೋರಿನಾಳದಿಂದೆಂತೆತ್ತುವುದೋ ಕೃಷಿಯನ್ನು?

ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ - ವಿಜ್ಞಾನೇಶ್ವರಾ *****

ನೋವಿಲ್ಲದೌಷಧವಿಲ್ಲದಾರೋಗ್ಯ ಮೇಲಲ್ಲವೇ?

ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? - ವಿಜ್ಞಾನೇಶ್ವರಾ *****

ಯೂರಿಯಾದಿಂದೇರಿದ್ದು ವರಿಯಾ? ಇಳುವರಿಯಾ?

ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ - ವಿಜ್ಞಾನೇಶ್ವರಾ *****

ಯಾವಾಗಲೂ ನಿಯಮ ಮೀರಿದರೆ ಬಚಾವಾದೀತೇ?

ಸಾವಯವವೆಂದೇಕೆ ಬರಿದೆ ಗಳಹುವಿರಿ ನಾವೇನೆಲ್ಲವನು ತಿಂದೇನಾಗಿಹುದೆನ್ನದಿರಿ ಸಾವಯವವೆಂದೊಡದು ಜೀವ ದೇವ ನಿಯ ಮವಿದ ಮೀರಿದರೆ ರಸ್ತೆ ನಿಯಮದವೊಲ್ ಅವಗಣಿಪರೇರಿದರೆ ಅಪಘಾತವೇರುವುದು - ವಿಜ್ಞಾನೇಶ್ವರಾ *****

ಜೀವನಕೆ ಕೃಷಿ ಬೇಕಲ್ಲದೆ ಕೊಲೆ ಬೇಕೇ?

ಜೀವವನು ಜೊತೆಗೂಡಿ ಜೀವ ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ ಜೀವಿಗಳ ಕೊಲ್ಲುವುದೆ ಕೃಷಿಯೆಂ ಬವಸಕೆ ಬಿದ್ದಿರಲೀ ಯುದ್ಧದೊಳು ಸಾವವರಾರೆಂದು ಆರು ಪೇಳುವುದೆಂತು? - ವಿಜ್ಞಾನೇಶ್ವರಾ *****

ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ - ವಿಜ್ಞಾನೇಶ್ವರಾ *****

ಸಾವಯವವೆಂದರದೆಂತು ಹಿನ್ನಡೆದಂತೆ?

ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು? ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ ನಾವೀಗ ಪೋಗಬೇಕರ್ಧ ಶತಮಾನ ಹಿಂದೆ - ವಿಜ್ಞಾನೇಶ್ವರಾ *****

ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಖುಷಿಯಿಂದ ನಡೆಯುತಲಿದ್ದ ಶ್ರೀಮಂತ ಕೃಷಿ ಬದುಕಿಂದು ಕಸಿವಿಸಿಯ ಜೈಲು ಹುಸಿಯನುಸುರುವ ತಜ್ಞ ತಾ ಜೈಲರು ಕೃಷ್ಣನೆಂದು ಬರುವನೋ ಎಂದು ಕೃಷಿಯು ಕಾಯುತಿದೆ ನರಕವಾಸದೊಳು - ವಿಜ್ಞಾನೇಶ್ವರಾ *****

ಸಲಹೆ ಕೊಡಬೇಕಾದರೆ ಮಾಡಿದನುಭವ ಬೇಡವೇ ?

ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ - ವಿಜ್ಞಾನೇಶ್ವರಾ *****