ಕೂತಲ್ಲಿ ಕೂಡಲಾರದ
ನಿಂತಲ್ಲಿ ನಿಲಲಾರದ ಮನವೀಗ
ಕಲ್ಲು ಬಿದ್ದ ಕೊಳ
ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ?
ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು
ನನಗಾದರೂ ಏನು ಗೊತ್ತಿತ್ತು…?
ಗೋಡೆಗಳು ಕೇಳಿಸಿಕೊಳ್ಳುವುದು
ಹಲ್ಲಿಗಳು ಮಾತನಾಡುವುದು
ಅದನ್ನೇ ಸಾಕ್ಷಿಯೆಂದು ನಂಬುವುದು
ರಸ್ತೆಗಳೇ ಕಟಕಟೆಗಳಾಗುವುದು
ಕಣ್ಣಿದ್ದವರೆಲ್ಲಾ ಜಾಣ ಕುರುಡರಾಗಿರುವುದು
ನಟನೆಯೇ ಬದುಕಾಗಿರುವುದು
ಎಲ್ಲಾ ಹೆಣ್ಣಿಗೆ ಬರೆದ ಸಂವಿಧಾನ?
ಕಟ್ಟಿಕೊಂಡವ
ಕಾದ ಹೆಂಚಿನ ಮೇಲೆ
ನಾಲ್ಕು ಹನಿ
ಹಲ್ಲಿಯಂತೆ ಹೊಯ್ಯದೇ
ಉತ್ತರೆಯ ಮಳೆಯಾಗಿದ್ದರೆ….?
ಯಾರದೋ ಮುತ್ತು
ಈ ಒಡಲ ಚಿಪ್ಪಿನೊಳಗೆ ಫಳ್ ಅಂತ
ಹೊಳೆದು
ರಾಡಿ ರಂಪ ಎಬ್ಬಿಸುತ್ತಿರಲಿಲ್ಲ
ಕುಂತಿ ಗಾಂಧಾರಿಯರು
ಬೇಡವೆಂದರೂ ನೆನಪಾಗುತ್ತಾರೆ
ಕಣ್ಣು ಹೊರಳಿಸಿದ ಕಡೆ ನಿಂತು
ಸೆರಗು ಬಾಯಲಿ ಕಚ್ಚಿ
ನಗುತ್ತಾರೆ
ನನಗೋ ಕಣ್ಣು ತುಂಬಾ
ಉಪ್ಪು ಕಡಲು
ಕತ್ತಲ ರಾತ್ರಿಗಳ ಹೆರುವ
ನಾಳೆಗಳು
‘ಅಮ್ಮಾಽಽಽ’ ಎಂದರೆ
ತುಂಬಿದೊಡಲ ಮೇಲೆ ಅರಿವಿಲ್ಲದೇ
ಹರಿವ ನಡುಗುವ ಕೈಗಳು
ಮಿಸುಕಾಡುವ ಎಳೆಯ ಕನಸು ತಾಕಿ
ಹಣೆಯ ಮೇಲೆ ಬೆವರ ಸಾಲು
ಅವುಗಳನ್ನೂ ಯಾರಾದರೂ ಮುತ್ತೆಂದು
ಕರೆದುಬಿಟ್ಟರೆ?
ಛೆ! ಎಂಥ ರೂಪಕ
ಎಂದು ನಕ್ಕು ಸುಮ್ಮನಾಗಲೇ
ಅಥವಾ ಅತ್ತು ಕೂಗಲೇ
*****