ಮರದ ಕೊಂಬೆಗೆ ಒಂದು
ತೊಟ್ಟಿಲವ ಕಟ್ಟಿಹುದು
ತೊಟ್ಟಿಲಲಿ ಆಡುತಿದೆ
ಕೈಕಾಲುಗಳ ಬಿಚ್ಚಿ
ಈಗ ಕಣ್ದೆರೆದಿರುವ
ಹೊಚ್ಚ ಹೊಸ ಎಳೆಯ ಕೂಸು ||
ಮರದ ಮೇಲ್ಬದಿಯಲ್ಲಿ
ಮರಜೇನು ಹುಟ್ಟಿಹುದು
ದೇವರಾಯನ ಕರುಣೆ
ಯಿಂದ ಹುಟ್ಟಿಗೆ ಸಣ್ಣ
ಹುಗಿಲು ಕೊರೆದಿಹುದಲ್ಲಿ
ಹನಿಯುತಿದೆ ಸವಿಜೇನು
ಒಂದೊಂದು ಹನಿಯಾಗಿ
ಧಾರೆಯಾಗಿಳಿಯುತಿದೆ
ಹನಿಗಡಿದು ಆ ಧಾರೆ
ಮತ್ತೆ ಮೇಲಕೆ ಏರಿ
ಹನಿಗೊಂಡು ಇಳಿಯುತಿಹುದು||
ತೂಗುತಿದೆ ತೊಟ್ಟಿಲವು
ಬಿಡದೆ ತೂಗಲು ಬೇಕು
ತೂಗು ನಿಂತರೆ ಹಸುಳೆ
ಕಿರಚಿ ಕೂಗುವದೆನಿತೊ.
ಹುಟ್ಟಿರುವ ರೆಂಬೆಯದು
ಅಂತರದಿ ತೇಲುತಿದೆ
ರೆಂಬೆಯಲಿ ಹುಟ್ಟಿಹುದು
ಹುಟ್ಟಿನಲಿ ಜೇನಿಹುದು
ಜೇನಿನಲಿ ಸವಿಯಿಹುದು
ಸವಿಯಲ್ಲಿ ಸುಧೆಯಿಹುದು
ಅದು ಒಸರಿ ಇಳಿವಂತೆ
ದೇವರಾಯನ ಕರುಣೆ
ಹುಗಿಲು ಕೊರೆದಿಹುದಲ್ಲಿ
ಹನಿಹನಿದು ಹನಿಯುತಿದೆ
ಇತ್ತ ಈ ತೊಟ್ಟಿಲಲಿ
ಅಮರಶಿಶು ಅಳುತಲಿದೆ
ತಿನ್ನಲಿಕೆ ಬಾಯಿಹುದು
ಸಹಿಸಲಾಗದೆ ಅಳುತ
ತೊಟ್ಟಿಲಲಿ ತೂಗುತಿದೆ
ಇಂತಿರಲು ಆ ಅಮೃತ
ತನ್ನ ಬಾಯಿಗೆ ಎಂದು
ಎಂತು ಬೀಳುವುದದನು
ತಿಳಿಯುವುದೆ ಆ ಕೂಸು?
ಜೀಕು ನಿಂತಿರಲಾಗ ಲೇಸು! ಲೇಸು !!
*****
ಪುಸ್ತಕ: ಸಾಗರ ಸಿಂಪಿ