ಹಸುಗಳ ಕದ್ದ ನೆಪಕೆ
ಬೆಂಕಿಹೊತ್ತಿಕೊಂಡಿತು ಬೆಳವಡಿಗೆ
ಧಗಧಗಿಸಿದ್ದು ಶಿವಾಜಿಡೇರೆಯೊಳಗೆ
ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು
ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ
ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ
ಕಾಲಡಿಯಲ್ಲಿ ಬೆಳವಡಿಯ ವೀರರರಕ್ತ
ಹರಿದು ಹೆಪ್ಪುಗಟ್ಟಿ ಕೆಂಪು ಕಪ್ಪು ನೀಲಿಯಾಗಲು
ಸೋದರಿಯರ ನೋವು ಮಡುಗಟ್ಟಿತು
ಅಸಹನೆ ತಳಮಳಗಳ ಒಡ್ಡು ಒಡೆದದ್ದೇ ಕ್ಷಣ
ಪಣತೊಟ್ಟು ನಿಂತಿತು ನಾಡರಕ್ಷಣೆಗೆ
ಮಹಿಳಾಮಣಿಗಳ ಆವೇಶ ಕೆಚ್ಚೆದೆಯ ಶಕ್ತಿ
‘ಆಯುಷ್ಯ ರಾಜ್ಯ ಬೇಕೇನೋ ಶಿವರಾಮ
ನಿನ್ನ ಕನಸಿನ ಸುಳ್ಳಿನ ಚೀಲ ತುಂಬಲು
ದೇವಿಭಕ್ತ ನೀನು ಭವಾನಿಯೇ ನಾನಾಗಿ….
ರುಂಡಚೆಂಡಾಡಿ ರಕ್ತ ಹೀರುವೆ’
ಏನೋ ಕ್ಷುಲ್ಲಕ ಘಟನೆ ಅರಿಯದ ತಪ್ಪು
ಎಂಥದೋ ಸಿಡಿಲು ಯಾಕೋ ಗುಡುಗು
‘ಕ್ಷಮಿಸು ತಾಯೆ ಕ್ಷಮಿಸು’ – ಶಿರಬಾಗಿ
ಬೊನಿನೊಳಗೆ ಬಿದ್ದ ಹುಲಿಯ ಮಾತುಗಳು
ಸಂಧಾನ ಸಂಧಾನ ಸಂಧಾನ
ತಪ್ಪೊಪ್ಪಿಗೆಗೆ ಸೋದರಿಭಾವನೆ ಸ್ವೀಕಾರ
ನಾಡ ರಕ್ಷಣೆಗೆ ಪ್ರಾಣವೇ ಪಣಕ್ಕಿಟ್ಟು ಹೋರಾಡಿದ
ತಾಯಿದೇವಿ ಕನ್ನಡದ ಮುಕುಟ ಮಣಿಯೇ
ನಿನ್ನ ಸೇವೆಗೆ ಸದಾಸಿದ್ಧ, ಸದಾಕಾವಲು
ಶಿವಾಜಿ, ಬೆಳವಡಿಯ ಬಾಂಧವ್ಯ ಅಜರಾಮರ
ಧರ್ಮರಕ್ಷಕರ ಕೊಂಡಿ ಅನಂತ.
*****
ಪುಸ್ತಕ: ಇರುವಿಕೆ