Home / ಕವನ / ಅನುವಾದ / ವಸಂತಾಂತ್ಯದಲ್ಲಿಯ ಮಳೆಯು

ವಸಂತಾಂತ್ಯದಲ್ಲಿಯ ಮಳೆಯು

ಡಾ. ರವೀಂದ್ರನಾಥ ಠಾಕೂರರವರ ಕವಿತೆಗಳ ಭಾವಾನುವಾದವು.

ವಾ.ಷ.

ಬಿಸಿಲ ಬಲುತಾಪದಿಂ ಬಸವಳಿದ ಮನುಜರುಂ, !
ಹಸುರು ನೆಲಮಂ ಕಾಣದರಸರಸಿ ಬೇಸರಿದು |
ಹೊಸ ಚಿಗುರ ತಳೆದೊಡಂ ನಸುಬಾಡಿ ನಿಂತಿರ್ದಗಿಡದ ನೆಳಲು ಸೇರುತ ||
ಬಿಸಿಯುಸುರ ಬಿಡುತಿರ್ಪ ದನಗಳುಂ ಕರುಗಳುಂ |
ಎಸೆವಸಮ ನಸುನೀಲ-ವರ್ಣದಾಗಸವನುರೆ |
ಮುಸುಕುತಿರೆ ನೋಡಿ ಮೋಡಂಗಳಂ, ಘನಕೃಷ್ಣ ವರ್ಣದಿಂದೊಪ್ಪತಿರ್ಪ || ೧ ||

ಅಸಮಸಂತೋಷದಿಂ ನಲಿವುತಿರೆ ಭರದಿಂದ |
ಹೊಸಮಳೆಯ ಪೇರ್ವನಿಗಳುದುರತೊಡಗಿದವಹಹ! |
ದೆಸೆದೆಸೆಗಳೊಳು ಹೊಳೆಯೆ ಕೋಲ್ಮಿಂಚು ಜಗವ ನಡುಗಿಸುವಂತೆ ಗುಡುಗುಜಡಿಯೆ||
ಲಸದಮಲ ವಜ್ರದಂತೆಸೆವಾಲಿಕಲ್ಗಳಾ |
ಗಸದಿಂದಲುದುರುತಿರೆ ಬಾಲಕರು ಕಾಣುತದ |
ನೊಸೆದು ಕುಣಿದಾಡಿ ಸವಿದರು, ಮನಸಿಗುರೆ ಸೋಂಪು ಕಣ್ಣಿಂಪು ತಣ್ಪುಗೋಡಲು || ೨ ||

ವನವನಾವಳಿಗಳಂ ನಡುಗಿಸುವ ಬಿರುಗಾಳಿ |
ಜನರಿಗುರೆ ಭೀತಿಯಂ ಬೀರುತ್ತ ಬೀಸುತಿರೆ |
ವನಧಿಯೇ ಭೋರ್ಗರೆವ ಪರಿಯಾಯ್ತು; ನೀರುಂಡು ಕಳೆಯೇರೆ ಸಕಲಜಗಕೆ ||
ಘನತರದ ತಾಪದಿಂದುರೆ ಬೆಂದು ನೆರೆನೊಂದು |
ಕನವರಿಸಿ ಬೇನೆಯಿಂದಳಲುತಿಹ ಬಳಲುತಿಹ |
ಮನುಜನಾನಂದದಿಂ ಚಂದದಿಂ ನೋಳ್ಪನೀಬಿರುವಳೆಯ ಪೇರ್ವನಿಗಳ ||೩||

ಉರಿವ ಕೂರ್ಬೇಸಗೆಯ ತಾಪದಿಂ ಬರೆತಿರ್ದ |
ಕೆರೆಗಳುಂ ತೊರೆಗಳುಂ ನೆರೆತುಂಬಿ ಹರಿವುತಿರೆ |
ವರರಾಜಮಾರ್ಗಂಗಳೆಡಬಲದ ಕಾಲುವೆಗಳೊಳು ನೀರು ಹೊರಸೂಸುತಿರಲು ||
ನೆರೆಯ ನೆಲವೆಳೆಗರಿಕೆಯಿಂ ಮುಸುಕಿ ಹಸುರಾಗೆ |
ನೆರೆಯ ಸಾಲ್ಗಿಡಗಳುರೆ ಮೆರೆಯೆ ವೊಸ ತೇಜದಿಂ |
ಕರದಿ ಛತ್ರವ ಪಿಡಿದು ಸಲೆಯುಡುಗಿ ಪಧಿಕರಾನಂದದಿಂ ನಡೆವುತಿಹರು || ೪ ||

ಭರದಿಂದ ಸುರಿವ ಮಳೆಯಂ ಕಂಡು ಸಂತಸದ |
ಭರದಿಂದ ಲೊಕ್ಕಲಿಗರಾಯುಧಂಗಳ ಕೊಂಡು |
ಹೊರಟರು ಹೊಲಕೆ ಹೆಗಲನೊಗದೊಡನೆ ನಡೆಯುವೆಳೆಗೂಳಿಗಳ ಜೋಡಿಗೂಡಿ ||

ಹರುಷದಿಂ ಕೋಲೆತ್ತಿ ಬೆದರಿಸುತ ಗೂಳಿಗಳ |
ತರತರದಿ ಹಾಡುತ್ತ ಬಿತ್ತಿದರು ಹೊಲಗಳನು |
ವರಮಾತೆ ಭೂದೇವಿ ಸೊಗಸಾದ ಹಸುರುಡುಗೆಯನ್ನುಟ್ಟು ಶೋಭಿಸಿದಳು || ೫ ||

ಸ್ಫುಟ

ಭಾ.ಷ.

ಕರಿಯ ಬಣ್ಣದ ಪಕ್ಷಿಯೊಂದನು |
ಅರಿಯದಲೆ ಕಲ್ಲೊಗೆದು ನಾನಿ- |
ಷ್ಠರದಿ ಬೆದರಿಸೆ ಹಾರಿ ಹೋಯಿತು, ಕೂಗಿ, ಕಲರವದೆ ||
ಅರರೆ! ಮೋಸವದಾಯಿತೆಂದಾಂ |
ಕರೆದೆನೈ ಮರುದಿವಸವೊಂದನು |
ಬಿರಿದುದೆನ್ನಯ ಹೃದಯವದರಾ ಕ್ರೂರ ಕಟು ರವದೆ ||
ಕರಿಯ ಬಣ್ಣದಿ ಕಾಗೆ ಕೋಗಿಲೆ |
ನೆರೆಯೊಳಿರುವವು ತಿಳಿಯದಂದದಿ |
ಹರಿಯೆ, ನಿನ್ನಯ ಸೃಷ್ಟಿ ಚೇಷ್ಟೆಯನೆಂತು ಬಣ್ಣಿಪೆನು ||
*****

Tagged:

Leave a Reply

Your email address will not be published. Required fields are marked *

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...