ಕನ್ನಡನಾಡಿನ ಕಾಗಿನೆಲೆಯಲ್ಲಿ
ಬಾಡ ಎನ್ನುವ ಗ್ರಾಮದಲಿ
ಕುರುಬರ ವಂಶದ ಬೀರಪ್ಪನ ಸತಿ
ಬಚ್ಚಮ್ಮನ ಸಿರಿ ಗರ್ಭದಲಿ
ಬಾಲಕ ಜನಿಸಿದ ಭಾಗ್ಯದ ತೆರದಲಿ
ತಿಮ್ಮಪ್ಪ ಎಂಬುವ ಹೆಸರಿನಲಿ!
ತಿಮ್ಮಪ್ಪ ಬೆಳೆದನು ದೊಡ್ಡವನಾದನು
ಸಾಹಸ ಕಾರ್ಯಕೆ ತೊಡಗಿದನು
ಪಾಳೆಯಗಾರರ ವಂಶಕೆ ಕೀರ್ತಿಯ
ತರುವ ಕೃತಿಗೆ ಕೈಹಾಕಿದನು
ವಿಜಯನಗರ ಶ್ರೀಮಂತ ರಾಜ್ಯದಲಿ
ವೀರನಾಗಿ ಹೋರಾಡಿದನು!
ಬೀರಪ್ಪನಾಯಕ ತೀರಿದ ಬಳಿಕ
ತಿಮ್ಮಪ್ಪನಾದನು ನಾಯಕನು
ತನ್ನ ಪಾಳೆಯದ ವೀರರಿಗೆಲ್ಲ
ಪ್ರೀತಿಪಾತ್ರ ಅಧಿನಾಯಕನು
ವಿಜಯನಗರ ಸಾಮ್ರಾಜ್ಯ ಭಾಗದ
ದಂಡನಾಯಕನು ಎನಿಸಿದನು!
ಬಿಜಾಪುರದ ಬಹಮನಿ ಸುಲ್ತಾನರ
ದಾಳಿಯನ್ನು ಹಿಮ್ಮೆಟ್ಟಿಸುತ
ಹಿಂದೂ ಜನರನು ರಕ್ಷಣೆ ಮಾಡುತ
ಮುಸ್ಲಿಮರಿಗೆ ಮಣ್ಮುಕ್ಕಿಸುತ
ವಿಜಯನಗರದ ಅರಸರ ಕಣ್ಮಣಿ
ತಿಮ್ಮಪ್ಪನಾಯಕ ತಾನಾದ!
ಒಮ್ಮೆ ಪಾಳೆಯದ ಕೋಟೆ ನಿರ್ಮಿಸಲು
ಭೂಮಿಯನ್ನು ಅಗೆಯುತ್ತಿರಲು
ದೊರಕಿದ ಅಪಾರ ಕನಕಾಭರಣವ
ದುಡಿಯುವ ವರ್ಗಕೆ ಹಂಚಿರಲು
ಕರೆದರಲ್ಲಿ ತಿಮ್ಮಪ್ಪನಾಯಕನ
’ಕನಕನಾಯಕ’ ಎಂದಾಗ!
ಕನಕನಾಯಕನು ಕಾಗಿನೆಲೆಯಲ್ಲಿ
ಎಲ್ಲರ ಕಣ್ಮಣಿ ತಾನಾಗಿ
ಆರಾಧ್ಯದೈವವು ಆದಿಕೇಶವನ
ಆಲಯವೊಂದನು ನಿರ್ಮಿಸಿದ
ನಿತ್ಯಪೂಜೆ ನೈವೇದ್ಯ ಕಾರ್ಯಗಳ
ನಡೆಯುವಂತೆ ನಿರ್ದೇಶಿಸಿದ!
ಮದುವೆಯಾದ ಕೆಲಕಾಲದಲ್ಲಿಯೇ
ಮಡದಿಯು ಮಕ್ಕಳು ಮಡಿದಿರಲು
ಮಡದಿಯ ಹಿಂದೆಯೇ ಮಾತೆಯು ಮಡಿಯಲು
ಮನವು ನೊಂದಿರಲು ದುಃಖಿಸಿದ
ಬದುಕಿನಲ್ಲಿ ಬಂದೆರಗಿದ ದುಃಖವ
ಮರೆಯಲಾಗದೆ ಬಸವಳಿದ!
ಸಂಸಾರ ನೌಕೆಯು ಮುಳುಗಿದ ಬೆನ್ನಲಿ
ಬಹಮನಿ ಸುಲ್ತಾನರ ದಾಳಿ
ದಾಳಿಯ ಎದುರಿಸಿ ನಿಂತವ ಕಣದಲಿ
ಸೋತನು ವೈರಿಯ ಕೈಯಲ್ಲಿ
ಸಾಯುವ ಹಂತಕೆ ತಲುಪಿದ ನಾಯಕ
ಉರುಳಿದ ಅಲ್ಲಿಯ ನೆಲದಲ್ಲಿ!
ಎಚ್ಚರವಾಗುವ ವೇಳೆಗೆ ನಾಯಕ
ಕಾಗಿನೆಲೆಯ ದೇಗುಲದಲ್ಲಿ
ಅಚ್ಚರಿಯೆನ್ನುವ ರೀತಿಯೊಳಿದ್ದನು
ಆದಿಕೇಶವನ ಎದುರಲ್ಲಿ
ದೈವಭಕ್ತಿ ಅವನೆದೆಯಲಿ ತುಂಬಲು
ಶರಣೆಂದನು ದೇವರಿಗಲ್ಲಿ!
ಬುವಿಯ ವಸ್ತುಗಳು ಭೋಗಭಾಗ್ಯಗಳು
ಅಸ್ಥಿರವೆನ್ನುವ ಅರಿವಾಗಿ
ಭಗವಂತನ ಸಾನ್ನಿಧ್ಯವೆ ಸುಖವು
ಎಂಬುವ ಭಾವವು ಬಲವಾಗಿ
ತನ್ನದು ಎನ್ನುವ ಸಕಲ ವಸ್ತುಗಳ
ದಾನವ ಮಾಡಿದ ವೈರಾಗಿ!
ದೋತರ ಉಟ್ಟು ಕಂಬಳಿ ಹೊದ್ದು
ಸಾಮಾನ್ಯನಂತೆಯೇ ಅವನುಳಿದ
ಏಕತಾರಿ ತಂಬೂರಿಯ ಮೀಟುತ
ಆದಿಕೇಶವನ ಧ್ಯಾನಿಸುತ
ದೇವರ ಭಜಿಸುತ ಕೀರ್ತನೆ ಹಾಡುತ
ವೈರಾಗ್ಯಮೂರ್ತಿಯು ಮುನ್ನಡೆದ!
ವ್ಯಾಸರಾಯರಲಿ ದೀಕ್ಷೆಯ ಪಡೆದು
ದಾಸಕೂಟವನು ಸೇರಿರಲು
ವಾದಿರಾಜ ಪುರಂದರದಾಸರ
ಸಹವಾಸದಲ್ಲಿ ಬೆರೆತಿರಲು
ಕುಲದ ಹಮ್ಮಿನಲಿ ಮೆರೆಯುವವರನು
ಖಂಡಿಸಿ ಕೀರ್ತನೆ ರಚಿಸಿದರು!
ಕುಲ ಕುಲ ಕುಲವೆಂದು
ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ
ಬಲ್ಲಿರಾ.. ಬಲ್ಲಿರಾ?
ಕುಲದ ಬೆನ್ನಿನಲಿ ನಡೆದದ್ದಾದರೆ
ಮಲಿನವಾಗುವನು ಮಾನವನಿಳೆಯೆಲಿ
ಎಂದು ಮಾನವನ ಕಣ್ಣು ತೆರೆಯಿಸಿ
ಇಹ-ಪರ ಸುಖವನು ಹೇಳಿದರು;
ಹಾಗೆಯೇ ಬದುಕಿ ಬಾಳಿದರು!
ಏಕತಾರಿ ತಂಬೂರಿಯ ಮೀಟುತ
ನಾಡಿನ ಎಲ್ಲೆಡೆ ಸಂಚರಿಸುತ್ತ
ದೇವಭಾಷೆಯನು ದೂರಕೆ ತಳ್ಳಿ
ಆಡುಭಾಷೆಯಲಿ ಹಾಡಿದರು
ಮೋಹನ ತರಂಗಿಣಿ, ನಳಚರಿತ್ರೆ
ಕಾವ್ಯಕುಸುಮಗಳ ನೀಡಿದರು!
ರಾಮಧಾನ್ಯ, ಹರಿಭಕ್ತಿಸಾರಗಳ
ಭಕ್ತಿಯಿಂದಲಿ ರಚಿಸಿದರು
ಕನಕದಾಸರು ಎಂಬುವ ಹೆಸರಲಿ
ಜನಮಾನಸದಲಿ ನೆಲೆಸಿದರು!
*****