ಕಡಲು ಬೆಟ್ಟಕ್ಕೆ ಹೇಳಿತು:
“ನನ್ನ ತಳ ಮಂದರ,
ನಿನ್ನ ಮುಡಿ ತಾರ,
ನಡುವಿನ ಸ್ವರಸಹಿತ
ನಾನೂ ನೀನೂ ಕೂಡಿ
ಭೂಮಿ
ಏನು ಗಾನಮನೋಹರ!”
ಬೆಟ್ಟ ಕಡಲಿಗೆ ಹೇಳಿತು :
“ಅದಕ್ಕೆಂದೇ ಆಗಸ
ಪ್ರತಿ ರಾತ್ರಿ
ತೊಡಿಸುತ್ತದೆ
ಇಳೆಯ ಕೊರಳಿಗೆ ನಕ್ಷತ್ರಹಾರ :
ಆಗ ಮಂದರದಿಂದ
ತಾರದವರೆಗೆ
ಧಾರಿಣಿಯ ಎದೆ ತುಂಬ
ಕೋಟಿ ಕೋಟಿ ಸ್ವರಸಂಚಾರ;
ಬದುಕಿನಾಚೆಯದನ್ನೂ
ಹಿಡಿಯಲೆಳಸುತ್ತದೆ
ಆಗ
ಮಣ್ಣಿನ ಪಂಜರ.”
*****