ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ
ಎರಗಲಿರುವ ಗರುಡ, ಬಾಣ
ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ
ಜಿಗಿಯಲರ್ಹತೆಯಿದ್ದ ಜಾಣ.
ಹೋಮಧೂಮದ ಗಾಳಿ ವೇದಘೋಷದ ಪಾಳಿ
ಎಂದೂ ತಪ್ಪಿರದ ಮನೆ ಈಗ ಖಾಲಿ.
ತಾಯಿ, ಎಳೆತನದಲ್ಲೇ ಗಾಳಿಗಾರಿದ ಬೆಳಕು,
ತಂದೆ ಕೀರ್ತಿಗೆ ಸಂದ ಮೊನ್ನೆ
ಕೈ ಹಿಡಿದ ಹೆಣ್ಣು ತವರಿನಲ್ಲೇ ಇರುವ ಪುಟ್ಟ ಸಸಿ ಇನ್ನೂ
ಮನೆಯು ಬರಿದೋ ಬರಿದು, ಮನವು ಕೂಡ;
ಹೇಗಿದ್ದೀತು ಹೇಳಿ ಘೀಳಿಟ್ಟು ಗರ್ಜಿಸದೆ ಮಿಡುಕು ಮೈ ತುಂಬಿರುವ
ಭಾರಿ ಸಲಗ?
ಹೇಗಿದ್ದೀತು ಹೇಳಿ ನಭದಾಳದಿಂದ
ಪಾರಿವಾಳಕೆ ಎರಗದಂತೆ ಗಿಡುಗ ?
ಸಂತೆಹುಚ್ಚಿನ ಹುಡುಗ ನಿಂತ ಕಾಲಲ್ಲೆ
ಅಂತೂ ಹೊರಟೇ ಬಿಟ್ಟ ಗೊತ್ತು ಗುರಿಯಿಲ್ಲದ ಪುಂಡು ಅಲೆತಕ್ಕೆ,
ಬಯಕೆ ಬೆನ್ನೇರಿ ಹಾರಿ, ದಿಗಂತಗಳ ಕದ ಬಡಿದು
ಹೊಸಲೋಕದಾಳಕ್ಕೆ ಧುಮುಕಲಿಕ್ಕೆ,
ಸುಳಿ ಮಡುವು ಮೊಸಳೆ ಜೊತೆ ಕಾದಲಿಕ್ಕೆ.
* * * *
ಬಾಣ ಹೇಳಿದ್ದು:
“ನನಗೆ ಜೊತೆ ಸಿಕ್ಕದ್ದು ಬದುಕ ಬಗೆಯಲು ಹೊರಟ
ದೊಡ್ಡ ದಂಡು,
ಹತ್ತೆಂಟು ಜಾತಿ, ಇಪ್ಪತ್ತೆಂಟು ವಿದ್ಯೆ
ನೂರೆಂಟು ಕನಸುಗಳ ಹುಚ್ಚು ಹಿಂಡು.
ಒಬ್ಬೊಬ್ಬನೂ ಪ್ರಚಂಡ,
ನೀತಿ ಮಡಿ ಮೈಲಿಗೆಯ ಕೋಟೆ ಹಾರಿ
ಶುದ್ಧಬದುಕಿಗೆ ಕುದಿವ ಗಟ್ಟಿಪಿಂಡ
ಬುಸುಗುಡುವ ಹಾವನ್ನೆ ಬರಿಗೈಲಿ ಬಾಚುವ ವಿಷವಿದ ಮಯೂರಕ
ಸರ್ಪಗಳ ಗೂಡಲ್ಲಿ ದಿನವಿಡೀ ನಿದ್ದೆ ಹೊಡೆಯಬಲ್ಲ;
ಹುಲ್ಲು ಗಿಡ ಮೂಲಿಕೆ ವನಸ್ಪತಿ ವಿಶ್ವದಲಿ ಉಯ್ಯಾಲೆಯಾಡುವ ಮಂದಾರಕ
ತುಂಬೆಗಿಡದಿಂದ ತಾಳವೃಕ್ಷದವರೆಗೆ
ಎಲ್ಲದರ ಕ್ರಿಯೆ ಇವಗೆ ಕರತಲಾಮಲಕ;
ಕಥೆಯ ಕಡಲುಗಳನ್ನೆ ಸ್ಮೃತಿಯಿಂದ ಹೊರಸುರಿವ ಬೆರಗು ಜಯಮಲ್ಲ;
ಭರತನಾಟ್ಯದ ಶಿಖಂಡಕನ ರೂಪಕ್ಕೋ
ಅದಾವ ಮನ್ಮಥ ಎದುರು ನಿಲ್ಲಬಲ್ಲ?
ಅವನು ಕುಣಿವುದೆ ಹೆಣ್ಣಿನೆದೆಯ ಮೇಲೆ
ಆರ್ದ್ರವಾಗುವುವೆಲ್ಲ ಹೆಣ್ಣುಗಳು ಒಳಗೊಳಗೆ ಅವನ ನೋಟಕ್ಕೆ
ಸಾಧ್ವಿಯರ ಕುಪ್ಪಸದ ಗಂಟೂ ಸಡಿಲುವುವವನ ಹಾವ ಭಾವಕ್ಕೆ!
ಮಧುಕರನ ಕೊಳಲಲ್ಲೋ ಮಧುವೆ ಹರಿಯುವುದು,
ಕೇಳುವವರದೆಯಿರಲಿ, ಕಲ್ಲೂ ಕರಗುವುದು
ಗುಡುಗ ನುಡಿಸುವುದು, ಜೀಮೂತನ ಮೃದಂಗ:
ರಾಜಸಭೆ ಪಂಡಿತರ ಆಡ್ಡಡ್ಡ ನುಂಗುವ ಶಾರದೆಯ ಮೋಡಿ
ವಾರ-ವಾಸರ ಜೋಡಿ.
ಇಂಥವರು ಮಾತ್ರವೇ ಎನ್ನಬೇಡಿ
ಪುಂಡರೂ ಭಂಡರೂ ಕೆಂಡವನೆ ನುಂಗುವ
ಲಂಡರೂ ಏರಿದ್ದರೆಮ್ಮ ಗಾಡಿ!
* * * * *
ಬೆಟ್ಟಗಳ ಹತ್ತುತ್ತ ಹುಟ್ಟುಗಳ ಮೀಟುತ್ತ
ಒರಗಿದೆವು ಕಲ್ಲು ತುಪ್ಪಳದ ಗಾದಿ,
ಬಿಸಿಲು ಚಳಿ ಮಳೆ ಗಾಳಿ ಕಾಡು ಕತ್ತಲೆ ಕಣಿವೆ
ಕಡೆದು ನಡೆದೆವು ನಾವೆ ನಮ್ಮ ಬೀದಿ.
ಅಲೆದೆವು ಒಲಿದೆವು ಆಳದಲಿ ಉಲಿದೆವು
ಗುಟ್ಟುಗಳ ಸುಲಿದೆವು, ಬದುಕು ಭಾಗ್ಯ!
ಹೂವುಗಳ ನಾಭಿಯಲಿ ಝೇಂಕರಿಸಿ ತೂರಿದೆವು
ಚಪ್ಪರಿಸಿ ಮಕರಂದ, ಉರಿಗೆ ಆಜ್ಯ.
ದಾಳಗಳ ಉರುಳಿಸಿ ಕಾಯಿಗಳ ಕೆರಳಿಸಿ
ಸೋತು ಸೋಲಿಸಿ ಬಂತು ಟಾಳ ಗೆಲುವು,
ಹೊರಳುತ್ತ ಅರಳುತ್ತ ಎಣ್ಣೆಯಲಿ ಮರಳುತ್ತ
ಸುಖದ ನರಳಿಕೆಯಲ್ಲಿ ಬಾಳ ಚೆಲುವು.
ಕದ್ದದ್ದು ಗೆದ್ದದ್ದು ಕಾಣದೆಲೆ ಮೆದ್ದದ್ದು
ಲೆಕ್ಕಕ್ಕೆ ಹತ್ತಿದ್ದು ಅಷ್ಟೊ ಇಷ್ಟೋ,
ಬೇಕೆಂದು ನೆಗದರೂ ನಿಲುಕದೇ ಹೋದದ್ದು
ಕನಸಾಗಿ ಕಾಡಿದ್ದು ಕೂಡ ಎಷ್ಟೋ”
* * * *
“ಕುರಂಗಿ, ಹೆಸರಿಗೆ ತಕ್ಕ ಜಿಂಕೆಗಣ್ಣಿನ ಹುಡುಗಿ
ಯಾರನೂ ಬಾಚಿ ಕುಡಿವಂಥ ಬೆಡಗಿ
ನನ್ನಂಥ ಗಂಡಿಗೆ ಹೇಗೆ ಮರುಳಾದಳೋ
ಕಂಡೊಡನೆ ಎದೆ ಕನ್ನವಿಟ್ಟ ತುಡುಗಿ?
ಮಾತು ಕವಿತೆಗೆ ಸೋತು ಬಂದಳಂತೆ
ಕವಿತೆಯಲಿ ಮಿಂಚುಗಳು ಹರಿವುವಂತೆ!
ಈ ಹರಟೆಮಲ್ಲಿಯಾ ಬೆಂಕಿಮುತ್ತುಗಳ ಬಿಸಿ
ಇದೆ ಇನ್ನೂ ಕೆನ್ನೆಯಲಿ,
ಜೇನು ಜೊಲ್ಲಿಗೆ ಬೆರೆಸಿ ಜಗಿದು ತಿನ್ನಿಸಿದ
ತಂಬುಲದ ರುಚಿ ಇನ್ನೂ ನಾಲಗೆಯಲಿ.
ಅವಳಂತೆ ಕೇರಳಿಕೆ ಹರಿಣಿ ಕೂಡ
ಕಾಡ ಗೂಢಕ್ಕೊಯ್ದರೆನ್ನ ಜಾಡ.
ವಿಧವೆ ಸನ್ಯಾಸಿನಿ ಚಕ್ರವಾಕಿ
ವಿಫಲ ಪ್ರೇಮದ ಒರೆಗೆ ಮಸೆದ ಚೂರಿ.
ಪ್ರಣಯದೊಲೆಗಿಟ್ಟು ಕುದಿಸಿದರು ಎಸರ
ಗುರುವಂತೆ ಕಲಿಸಿದರು ಗುಟ್ಟು ಹಲವ!
ವೈದಿಕರ ಮಡಿಯಲ್ಲಿ ಮರ್‍ಯಾದೆ ಗಡಿಯಲ್ಲಿ
ಇಡಿಲೋಕ ಕಾಣುವುದು ಎನುವ ಬೆಪ್ಪ,
ಅದು ಇದೆನ್ನದೆ ಕೂಡಿ ಎಲ್ಲ ಪದಗಳ ಹಾಡು
ಇಲ್ಲದಿರೆ ಮಾಡೀಯೆ ತಪ್ಪುಲೆಕ್ಕ!”
* * * *
ಮತ್ತೆ ಮರಳಿದ್ದಾನೆ ಬಾಣಕವಿ ತವರಿಗೆ
ಬಳ್ಳಿ ಪಾತಿಗೆ ಹೂವ ಸುರಿದ ಹಾಗೆ,
ಯುದ್ಧಕ್ಕೆ ತೆರಳಿದ್ದ ಗಂಡು ಲೂಟಿಯ ಸಹಿತ
ಹಿಡಿದು ಬಂದಿದ್ದಾನೆ ಜಯಪತಾಕೆ.
ಹರ್ಷನಾಸ್ಥಾನದಲಿ ಪ್ರಭುಪಕ್ಕದಲೆ ಪೀಠ
ಬಿರುದು ಬಾವಲಿ ಹೊನ್ನ ಕಡಗ ಕೈಗೆ,
ಎದುರಲ್ಲಿ ಸಾಮಂತ ಸೇನಾಧಿಪರ ದಂಡು
ಬೆರಗಿನಲಿ ಅವನನ್ನ ನೋಡುತ್ತಿದೆ.
ಎದ್ದು ನಿಲ್ಲುತ್ತಾನೆ ಹರ್ಷ ಮೆಚ್ಚುಗೆಯಿಂದ
‘ವಶ್ಯವಾಣೀ ಚಕ್ರವರ್ತಿ’ ಬಿರುದ
ಸ್ವತಃ ಘೋಷಿಸಿ ಬಾಣನತ್ತ ತಲೆಬಾಗುತ್ತಾನೆ
ತಾನೆ ತಾಂಬೂಲ ಗೌರವವ ಸಲಿಸಿ.
“ನಮ್ಮ ಈ ರಾಜ್ಯಗೀಜ್ಯಗಳೆಲ್ಲ ಮುಂದೊಮ್ಮೆ
ಹುಡಿಗೂಡಿ ಹೋಗುವುದು ಕಾಲನಿಂದ
ನಿಮ್ಮ ಕೃತಿಕೋಟೆಯೊಳು ಕರೆದುಕೊಂಡಿರಿ ನನ್ನ
ಕಾಪಾಡಿದಿರಿ ಯಮನ ದಾಳಿಯಿಂದ!”
*****
ಬನ್ನಂಜೆಯವರ ‘ಮಹಾಶ್ವೇತಾ’ ಆಧರಿಸಿ