ದೀಪಾ ನೋಡೊ ನಿನ್ನೊಳು ದೀಪಾ ನೋಡೋ
ಹೊಳೆಹೊಳೆ ಹೊಳೆಯುವ ತಿಳಿವೆಳಗಿನ ದೀಪ
ದೀಪಾ ನೋಡೊ
ಬೆಳ್ಳಿಯ ದೀಪಾ ನೋಡೊ||

ಈ ಚಿಪ್ಪು ತಲಿಯಾಗ ಉಪ್ಪುಪ್ಪು ನೀರಾಗ
ಈ ಸೆಳವು ಆ ಸೆಳವು ತಿರುಗೂಣಿ ಮ್ಯಾಗೊ
ದೀಪಾ ನೋಡೂ
ಏಂಚಂದ ದೀಪಾ ನೋಡೊ||

ನಗುನಗು ನಗತೈತೆ ಬೆಳೆಬೆಳೆ ಬೆಳೆದೈತೆ
ತಿಪ್ಪಿಯ ಮೇಲೊಂದು ತುಪ್ಪದ ದೀಪೈತೆ
ದೀಪಾ ನೋಡೊ
ಸುಂದರದ ದೀಪಾ ನೋಡೊ||

ತಾರಕಂಬಾವಿಲ್ಲ ಎಣ್ಣಿ ಬತ್ತಿಗಳಿಲ್ಲ
ತಂತಂ ತಾನಾಗಿ ತಂಪಾಗಿ ಮಿನುಗೈತೆ
ದೀಪಾ ನೋಡೊ
ಕಪ್ಪರದ ದೀಪಾ ನೋಡೊ||

ಕೆಳಗುಂಟು ಬಿರುಗಾಳಿ ಕೂಗಾಟ ಮೇಲಾಟ
ಮೇಲೀನ ಮೇಲೋ ಮಾತಂದಿ ಮಗುವೋ
ದೀಪಾ ನೋಡೊ
ಆತೂಮ ದೀಪಾ ನೋಡೊ||
*****