ರಾತ್ರಿ ಬಯಲಿನಲ್ಲಿ ಚಂದ್ರನ
ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು
ಕಪ್ಪಾದ ನೆರಳು ಕ್ಷಿತಿಜದ ತುಂಬ
ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು.
ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ
ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ
ಮುಗಿಲು ಹರಿದ ದಾರಿ ತುಂಬ ಕನಸುಗಳು
ಮತ್ತೆ ಮೈಯ ಹೊದ್ದ ಚಾದರು ಮುದುಡಿಕೊಂಡಿತ್ತು.
ಅರಮನೆಯ ಅಂಗಳದಲಿ ಪ್ರೀತಿ
ಹುಟ್ಟಿ ಹಾಲೆರೆಯುವ ಪಾಣಿಗ್ರಹಣ
ಕತ್ತಲೆಯ ಒಡ್ಡೋಲಗದಲ್ಲಿ ಸೀರೆ
ಸೆಳೆದುಕೊಂಡ ದ್ರೌಪತಿ ಬತ್ತಲಾದಳು.
ಸುಟ್ಟ ಗಾಯಗಳ ಆಕಾಶ ಪರ್ವ
ಚೆಲ್ಲಿಕೊಂಡ ಮನಸ್ಸುಗಳ ಅಗರ
ಯಾರು ಪೊರೆದರೋ ಇರಿದರೋ
ಕಣ್ಣು ಕಕ್ಷೆಯ ಬೆಳಕು ಕಳೆದುಕೊಂಡ ಗಾಂಧಾರ.
ಕತ್ತಲಿಗೆ ಒಂದು ಶಕ್ತಿ ನಿಗೂಢ
ಬೆಳಕಿನಲಿ ಆಗದ ಕೆಲಸಗಳು
ಒಳಗೊಳಗೆ ಹೊತ್ತಿ ಉರಿವ ಭೂತ ಭಯ
ಲಜ್ಜೆದಾಟದ ಕಣ್ಣು ಮುಚ್ಚಿದ ಕೌ ನೆರಳು ಇರುಳು.
*****