ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ.
ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ.
ಹಸಿಹಿಟ್ಟು ತಟ್ಟಿತಟ್ಟಿ ಒಂದೇ ಪದರದ ರೊಟ್ಟಿ ಹಾಳೆ. ಕಾವಲಿಯ ಮೇಲೆ ಬೇಯಲಿಕ್ಕಿದ್ದೇ ಉಬ್ಬಿದೆರಡು ಪದರ. ರೊಟ್ಟಿ ಒಂದೇ ಪದರವೆರಡು. ಆಂತರ್ಯ ನಿರ್ವಾತ ಬಹಿರ್ಮುಖ ಸಾಂಗತ್ಯ ಹಸಿವೆಗೆ ಅನೂಹ್ಯ.