ಆನಿ ಬಂತಾನಿ
ಯವೂರಾನಿ?
ಸಿದ್ಧಾಪುರದಾನಿ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಹಾದಿ ಯಾಕೆ ತಪ್ಪಿತು?
ಕಬ್ಬಿನಾಸೆ ಎಳೆಯಿತು
ಬಾಲ ಬೀಸಿಕೊಂಡು ಊರ
ನಡುವೆ ಬಂದು ಬಿಟ್ಟಿತು?
ಪುಟ್ಟ ಪುಟ್ಟ ಕಣ್ಣು
ಮುಖವೊ ತಟ್ಟೆ ಹೊನ್ನು
ಮುಕ್ಕಿ ಬಿಡಬೇಕೆನಿಸುವಂಥ
ಕಸಿ ಮಾವಿನ ಹಣ್ಣು;
ಹುಡುಗರೆಲ್ಲ ಬನ್ನಿರೊ
ಕಾಯಿ ಬೆಲ್ಲ ತನ್ನಿರೊ
ಅಕ್ಕಿಬುಟ್ಟಿ ಮುಂದೆ ಇಟ್ಟು
ತಿನ್ನೊ ಮುದ್ದು ಎನ್ನಿರೊ,
ಕಾಯಿಬೆಲ್ಲ ತಿನ್ನುತ
ಚೋಟು ಬಾಲ ಬೀಸುತ
ಮೊರದ ಕಿವಿ ಬಡಿಯುವಾಗ
ಆನೆಗೆ ಜೈ ಅನ್ನಿರೊ.
ಅಲ್ಲ ಅಂಥಿಂಥಾನೆ
ವೆಂಕಟರಮಣ ತಾನೆ
ನಮ್ಮ ಪ್ರೀತಿ ಮೆಚ್ಚಿ
ಮನಸ ನಮಗೆ ಬಿಚ್ಚಿ
ಹೀಗೆ ಬಂದಿದ್ದಾನೆ
ಸೇವೆ ಕೊಳುತಿದ್ದಾನೆ
ಮರಳುಗಾಡಿನಂಥ ಬದುಕ
ಸ್ವರ್ಗ ಮಾಡಿದ್ದಾನೆ.
(“ಆನೆ ಬಂತಾನೆ, ಯಾವೂರಾನೆ” ಎಂಬ ಸಾಲಿನಿಂದ ಆರಂಭವಾಗುವ ಹಿಂದಿನ ಗೀತೆಯೊಂದ್ದಿದ್ದು ಅದು ನಾಲ್ಕೈದು ಸಾಲುಗಳಷ್ಟೇ ಉಳಿದಿದೆ. ಆ ಸಾಲುಗಳನ್ನು ಸೇರಿಸಿಕೊಂಡು ಮುಂದಕ್ಕೆ ಈ ಇಡೀ ಪದ್ಯ ರಚಿಸಲಾಗಿದೆ.)
*****