ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ
ಆದ್ದರಿಂದಲೇ
ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ.
– ಅಜ್ಞಾತ
ಬದುಕಿದ್ದಾಗ ಸರ್ವಾಧಿಕಾರಿಗೆ
ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ
ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ
ಇರಲಿಲ್ಲ ಒಂದು ಕಲ್ಲು
– ಅಜ್ಞಾತ
ಕದ್ದೋಡಿ ಬಂದ ಡೆಮಿಟ್ರಿಯಸ್
ಕಾಳಗದಿಂದ
ಎಸೆದು ಭಲ್ಲೆ ಗುರಾಣಿ ನಿರ್ಲಜ್ಜೆಯಿಂದ.
ಬಾಗಿಲು ತೆರೆದ ತಾಯಿ
ಇರಿದು ಕೂಗಿದಳು “ನಾಯಿ!
ನಿನ್ನ ಧೈರ್ಯಕ್ಕೆ ಊರು ನಾಚೀತು, ಸಾಯಿ!’
– ಇರೀಸಿಯಸ್. ಕ್ರಿ.ಪೂ. ಒಂದನೆಯ ಶತಮಾನ
ಕೇಶ ದಂತ ಬಣ್ಣ ಸುಣ್ಣ
ಏನೆಲ್ಲ ಕೊಂಡೆ ಚೆನ್ನೆ
ಕೊಳ್ಳಬಹುದಿತ್ತಲ್ಲೆ ಅದರ ಬದಲು
ಭರ್ಜರಿ ಮುಖವನ್ನೆ!
– ಲ್ಯುಸಿಲಿಯಸ್, ಕ್ರಿ.ಪೂ. ಒಂದನೆಯ ಶತಮಾನ
ನಾನು ಮುತ್ತಿಟ್ಟಿದ್ದು ತಪ್ಪು, ಪಾಪ ಎನ್ನಿಸಿದರೆ ನಿನಗೆ
ಶಿಕ್ಷಿಸಿಬಿಡು ಕೂಡಲೆ
ಅದನ್ನು ಹಿಂತಿರುಗಿಸಿ ನನಗೆ
– ಸ್ಟ್ರ್ಯಾಟೊ. ಕ್ರಿ.ಪೂ. ಎರಡನೆಯ ಶತಮಾನ
ಪರಿಚಯ ಕೊಲ್ಲುತ್ತದೆ ಪ್ರೀತಿಯನ್ನ
ಇಲ್ಲ, ಕಾಲ ಮೆಲ್ಲುತ್ತದೆ ನಿಧಾನ
ಎರಡಕ್ಕೂ ತಗ್ಗದಿದ್ದರೆ ಬೆಂಕಿ
ಸ್ವಾಗತಿಸುತ್ತಾನೆ ಪ್ರೇಮಿ ನೇಣನ್ನ
– ಕ್ರೇಟ್ಸ್, ಕ್ರಿ.ಪೂ. ಎರಡನೆಯ ಶತಮಾನ
ವಾಗ್ಮಿಗಳೇ ಬನ್ನಿ ಈಗ
ಬೇಕಾದಷ್ಟು ವಾಕ್ಚಾತುರ್ಯ ತೋರಿ
ಮಹಾವಾಗ್ಮಿ ಆಂಫಿಲೋಕಸನ
ತುಟಿಯನ್ನು ಹೊಲಿದಿದ ಈ ಗೋರಿ
– ಸೇಂಟ್ ಗ್ರಿಗರಿ, ಕ್ರಿ.ಶ. ನಾಲ್ಕನೆಯ ಶತಮಾನ
ಬಡವನಿಗೆ ಸಾವೇ ಇಲ್ಲ.
ಏಕೆಂದರೆ ಅವನು ಬದುಕಿರಲೇ ಇಲ್ಲ;
ಉಸಿರಾಡಲಿಲ್ಲವೆ ಎಂದರೆ
ಅದು ಒಡಲೆನ್ನುವ ಗೋರಿಯಲ್ಲಿ
ಹಣವಿಲ್ಲದೆ ಸಾವು ಸಹ ಸಿಕ್ಕೀತು ಎಲ್ಲಿ?
– ಪಾಲಡಾಸ್, ಕ್ರಿ.ಶ. ಐದನೆಯ ಶತಮಾನ
ನಾಲಿಗೆ ಇಲ್ಲದ ಛಾವಣಿ
ಮಿದುಳಿಲ್ಲದ ಬೋಗುಣಿ
ಆಲಿಯಿರದ ಖಾಲಿಚಿಪ್ಪು
ತಳವಿಲ್ಲದ ಭರಣಿ
ಮೊನ್ನೆ ಹಾಗೆ ಉರಿದ ಬದುಕು
ಈಗ ಬರೀ ಬುರುಡ
ನಾಯಿ ಹೊಯ್ದು ಹೋದರು ಸಹ
ಕಚ್ಚಲಿಲ್ಲ ದವಡೆ!
– ಅಜ್ಞಾತ
*****















