ಕಲ್ಲು ಮುಳ್ಳಿನ ನಡುವೆ ಒಮ್ಮೆ ಹೀಗೆ ಮಾತುಕತೆ ನಡೆದಿತ್ತು. ಕಲ್ಲು ಬಂಡೆಗೆ ಆತು ಬೆಳದಿದ್ದ ಮುಳ್ಳಿನ ಪೊದೆ ಹೇಳಿತು-
“ಏಕೆ ನನ್ನ ಬಗಲಲ್ಲಿ ಇರುವೆ? ನಾನು ನಿನ್ನ ಸನಿಹಕ್ಕೆ ಕರೆಯಲಿಲ್ಲ.”
“ನಿನ್ನ ಚೂಪು ಮುಳ್ಳಿನ ಮೂಗು ಯಾರಿಗೂ ಬೇಡ. ನನ್ನ ಹತ್ತಿರ ಬರುವ ಮನುಷ್ಯರು ನೀನಿದ್ದರೆ, ಹೆದರುತ್ತಾರೆ. ನನ್ನ ಸಂಗ ಮಾಡದೆ ದೂರ ಹೋಗುತ್ತಾರೆ. ಅದಕ್ಕೆ ನೀನು ಎಲ್ಲಿಗಾದರೂ ಹೋಗಿ ನಿನ್ನ ದಾರಿ ನೋಡಿಕೊ” ಎಂದಿತು ಕಲ್ಲು ಬಂಡೆ. ಮುಳ್ಳು ಮುನಿಸಿ ಓಡಿ ಬಂದು ದಾರಿಯಲ್ಲಿ ತನ್ನ ನೆಲೆ ನಿಲ್ಲಿಸಿತು. ಹೋಗಿ ಬರುವ ಪಥಿಕರೆಲ್ಲರೂ ಬೈಗಳ ಸುರಿಮಳೆ ಸುರಿದು ಕಾಲಿಗೆ ಚುಚ್ಚಿದ ಮುಳ್ಳನ್ನು ಕಿತ್ತೆಸೆಯುತ್ತಿದ್ದರು. ಮುಳ್ಳಿನ ಮನಕೆ ಬಹಳ ನೋವಾಯಿತು.
“ದೇವರೇ! ನಾನು ಯಾರಿಗೂ ಬೇಡದವನನ್ನಾಗಿ ಏಕೆ ಸೃಷ್ಟಿಸಿದೆ? ಎಲ್ಲರಿಂದಲೂ ನನಗೆ ಬೈಗಳು ನನ್ನ ಮೆಚ್ಚಿಕೊಳ್ಳುವವರಾರು ಇಲ್ಲ. ನಾನು ಏನು ಮಾಡಲಿ? ನನ್ನ ಜೀವನ ಸಾರ್ಥಕವಾಗಲಿಲ್ಲ. ನಾನು ಬದುಕಿದ್ದರೇನು ಫಲ?” ಎಂದು ಪರಿತಪಿಸಿತು. ಮುಳ್ಳಿನ ಆರ್ತಾಲಾಪವನ್ನು ಕೇಳಿದ ಮಹಾದೇವ ಹೇಳಿದ-
“ಅಳಬೇಡ ಮುಳ್ಳೆ! ನಿನ್ನ ಬಾಳ ಸಾರ್ಥಕತೆಗೆ ಒಂದು ದಾರಿ ಇದೆ” ಎಂದು.
ಮುಳ್ಳು ಮುಸಿ ಮುಸಿ ನಕ್ಕು ಹಲ್ಲುಕಿರಿಯಿತು. ಧನ್ಯತೆಯನ್ನು ಸೂಚಿಸಿತು. ತನ್ನ ಬಾಳಿಗೆ ದಾರಿ ತೋರಲು ಕೇಳಿತು.
“ನಾನು ಸೃಷ್ಟಿಸಿದ ಎಲ್ಲದರಲ್ಲೂ ಜೀವ ಚೇತನವಿದೆ. ಯಾವುದೂ ಸಾರ್ಥಕ, ನಿರರ್ಥಕ ಎಂದು ಪರಿಗಣಿಸಲಾಗುವುದಿಲ್ಲ. ಜಗದ ಮುಳ್ಳು, ಕಲ್ಲು, ಹುಲ್ಲು, ಗಿಡ, ಮರ, ಹೂವು ಇನ್ನು ಎಲ್ಲಾ ಸರ್ವಸ್ಯವೂ ದೈವ ಸೃಷ್ಟಿಯೇ. ನೀನು ಇನ್ನು ಮೇಲೆ ಮರುಗಬೇಡ.
ನಿನ್ನನ್ನು ನಾನು ಅಂಗರಕ್ಷಕನಾಗಿ ನೇಮಿಸುವೆ”- ಎಂದ ಮಹಾದೇವ.
“ಬೇರೆಯವರನ್ನು ಚುಚ್ಚಿವಿನೆಂಬ ಕಳಂಕ ಹೊತ್ತ ನಾನು, ಅಂಗರಕ್ಷಕನಾಗಲು ಸಾಧ್ಯವೇ? ಅದು ಯಾರಿಗೆ, ಹೇಗೆ ಎಂದು ಕೇಳಿತು? -ಮುಳ್ಳು
“ಸುಂದರ ಗುಲಾಬಿ ಹೂವಿಗೆ ಇನ್ನು ಮೇಲೆ ನೀನು ಅಂಗರಕ್ಷಕ, ಗುಲಾಬಿ ಸೌಂದರ್ಯ ಭಕ್ಷಕರಿಗೆ ನೀನು ಮುಳ್ಳು ಚುಚ್ಚಿ ರಕ್ಷಣೆ ಮಾಡು” ಎಂದ ಮಹದೇವ.
ಮುಳ್ಳಿನ ಮನಸ್ಸು ಹರ್ಷೋಲ್ಲಾಸಿತವಾಯಿತು. ಗುಲಾಬಿ ಸುಮನದ ಬಳಿ ಸ್ಥಾನ ಕೊಟ್ಟ ದೈವಕ್ಕೆ ಚಿರ ಋಣಿಯಾಗಿ ನಮಿಸಿತು.
*****

















