ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?

ನೂರೊಂದಾರೋಗ್ಯ ದೋಷವನೆಣಿಸಿ ಉಣುವಾ ಹಾರದೊಳು ಸಾವಯವವೆಂದಾಗ್ರಹಿಸಿದೊಡೇನು? ವರುಷವೈವತ್ತರ ಮೊದಲು ಯಂತ್ರ ತಂತ್ರದ ಬ್ಬರದ ಬದಲಿದ್ದ ಬದುಕೆಲ್ಲ ಸಾವಯವವೆಂ ದರಿತು ಮರಳಿದರಾ ನೆಲಮನದೊಳಿಕ್ಕು ಸಾವಯವ - ವಿಜ್ಞಾನೇಶ್ವರಾ *****

ಎಮ್ಮ ತನು ದಣಿಯದೆ ಸಾವಯವ ಖರೀದಿ ಸಾಧ್ಯವಾ?

ಅಮೃತವು ದಕ್ಕೀತು ಕಡೆಗೋಲು ಮಥಿಸಿದೊಡೆ ಹಮ್ಮನತ್ತಿಕ್ಕಿ ವಿಚಾರದುರುಳನೆಳೆದೊಡೆ ಸುಮ್ಮನುಂಡುದನು ಸಾವಯವವೆಂದೊಡದು ಬುರುಡೆ ಎಮ್ಮ ತನುಮನದೊಳನುದಿನ ಉದಿಪ ವಿಷ ವಮೃತಮಪ್ಪೊಡೆ ಅನಿವಾರ್‍ಯ ಬೆವರ ಬಿಡುಗಡೆ - ವಿಜ್ಞಾನೇಶ್ವರಾ *****

ಶಕ್ತಿ ಮೂಲಗಳೇರದೆ ಪರಿಸರವನುಳಿಸುವುದೆಂತು?

ಶಕ್ತಿ ಯಂತ್ರಗಳೇನೆ ಬಂದರು ತಿನಲಪ್ಪುದ ದಕೊಂದೆ. ಪೆಟ್ರೋಲು ತಪ್ಪಿದರೆ ವಿದ್ಯುತ್ತು ಶಕ್ತ ಜೀವಿಗಳೀ ಜಗದೊಳೆಷ್ಟೊಂದು? ತಿನಲಪ್ಪುದ ದಕೆ ಮಣ್ಣಿಂದ ಹಣ್ಣಿನಾ ತನಕ ಸಾವಿರದೊಂದು ಲೋಕವೀ ಸತ್ಯವನರಿತೊಡದು ಸುಜ್ಞಾನ ಸಾವಯವ - ವಿಜ್ಞಾನೇಶ್ವರಾ *****

ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?

ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ ಗಂಭೀರ ಮುಳ್ಳಿನಾ ತೆರದಿ ಗಾಬರಿಯ ಕಷ್ಟಗಳು ಸಾವಯವ ವೆಂಬೊಂದು ಕೃಷಿಯೊಳಗೆ ಲೋಭದೊಳಾಯ್ಕೆ ಫಲಿಸದು - ವಿಜ್ಞಾನೇಶ್ವರಾ *****

ಆರೊ ದುಡಿದರೆ ಇನ್ನಾರಿಗೋ ಆರೋಗ್ಯ ಸಿಕ್ಕೀತೇ?

ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ - ವಿಜ್ಞಾನೇಶ್ವರಾ *****

ವಿಜ್ಞಾನವೆಂದೊಡೆಂತು? ಜ್ಞಾನ ಮಾರ್ಗ ಸಾವಯವವಾಗದೆ?

ವೈಜ್ಞಾನಿಕವೆಂದೇನೇನೋ ಮಾಳ್ಪರಲಾ ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ ನಿಜದೊಳೇನು ಮಾಡದ ಸಾವಯವದೊಳಿಕ್ಕು ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ - ವಿಜ್ಞಾನೇಶ್ವರಾ *****

ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ?

ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ - ವಿಜ್ಞಾನೇಶ್ವರಾ *****

ಉದ್ದದೀ ಜೀವನಕೆ ಒಂದು ಉಸಿರು ಸಾಕಾ?

ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ - ವಿಜ್ಞಾನೇಶ್ವರಾ *****

ಸಹನೆ ಸಾಧನೆಗಳಿಲ್ಲದೆ ಸಾವಯವವೆಂತು?

ಸಾವಯವವೆಂದೊಡದು ಪರ್‍ಯಾಯನಾಮ ಸಹನೆಯೊಡಗೂಡಿ ತತ್ತ್ವ ಸಾಧನೆಗೆ ಸಹನೆಯದು ಗೆಲು ಮನದ ಮರ್ಮ ಸಾಧನೆಯು ತನುವಿನಾಶ್ರಿತ ಧರ್ಮ ಸಾರ್ಥಕವು ತನುಮನಗಳೊಂದಾದ ಕರ್ಮ - ವಿಜ್ಞಾನೇಶ್ವರಾ *****

ಲೋಕ ತಾನೆ ತಾನಾಗಿರಲು ನಾವು ಮಾಡುವುದೇನು?

ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು ಬಾಯ್ ಕೆರೆದರದುವೆ ಭಾರಿ ಕೃಷಿಯೆಂದನಿಸಿಹುದಿಂದು - ವಿಜ್ಞಾನೇಶ್ವರಾ...