ಮೋಸ ಮೂಲವೆಲ್ಲಿಹುದು? ಮನಸಿನಲ್ಲೊ? ಮರಗೆಣಸಿನಲ್ಲೊ?

ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ - ವಿಜ್ಞಾನೇಶ್ವರಾ *****

ಎಲ್ಲವಿದ್ದು ನಾವಿಷ್ಟಭಿಮಾನ ಶೂನ್ಯರಾಗಬಹುದೇ?

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ - ವಿಜ್ಞಾನೇಶ್ವರಾ *****

ಅಂದಿಲ್ಲದ ಕಷ್ಟವಿಂದ್ಯಾಕೆ ಉಣ್ಣಲಿಕೆ?

ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ - ವಿಜ್ಞಾನೇಶ್ವರಾ *****

ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು - ವಿಜ್ಞಾನೇಶ್ವರಾ *****

ಶುದ್ಧ ಸುಳ್ಳಲ್ಲವೇ? ಯುದ್ಧದೊಳು ಗೆಲುವೇನು?

ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು - ವಿಜ್ಞಾನೇಶ್ವರಾ *****

ರುಚಿಯನರಸುವೊಡೆ ಶುಚಿಯಳಿವ ಭಯವಿರಬೇಡವೇ?

ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? - ವಿಜ್ಞಾನೇಶ್ವರಾ *****

ಹಣದ ಚೈತನ್ಯವನು ಜೀವನ ಚೈತನ್ಯವೆನಬಹುದೇ?

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? - ವಿಜ್ಞಾನೇಶ್ವರಾ *****

ಅದೆಂತು ಕೊರತೆಯಪ್ಪುದು? ಅನ್ನದ ವಿಧಿಯನರಿತರೆ

ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ ಅದಕೆಂದೆ ಇಷ್ಟೊಂದು ಹಸುರುಡುಗೆ ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ ಆದೊಡಂ ಮನಜನಿದಕಪವಾದವಲಾ - ವಿಜ್ಞಾನೇಶ್ವರಾ *****

ಕೃಷಿ ವಿಜ್ಞಾನಿಯಾಗುವುದಿಂದು ಬಲು ಸುಲಭ ಗೊತ್ತಾ?

ವಿಷವನೌಷಧಿಯೆಂದು ಎಮ್ಮನ್ನದಾ ಕೃಷಿಯೊಳದಾವ ಹಿಡಿತವಿಲ್ಲದೆರೆಯುತಿರೆ ಔಷಧ ವಿಜ್ಞಾನಕಿಂದಮಿತದವಕಾಶವಲಾ ವೇಷದೊಳಿಪ್ಪಜ್ಞಾನವನೆ ವಿಜ್ಞಾನವೆನೆ ವಿಶೇಷದವಕಾಶವೆಲ್ಲರಿಗು ಭಲಾ - ವಿಜ್ಞಾನೇಶ್ವರಾ *****

ಬಿಗು ವಿಷವನೌಷಧಿ ಎನಬಹುದೇ?

ಜಗದ ನಗುವಾಗಿ ಸೊಗದ ಬೆಳಕಾಗಿ ಆ ರೋಗ್ಯದಚ್ಚರಿಯೊಳನುದಿನವು ಬಪ್ಪಾ ಉಷೆಯ ಸೊ ಬಗನೆಲ್ಲರೊಳೆಲ್ಲೆಲ್ಲೂ ಉಳಿಸಿದರದನನು ರಾಗದೊಳೌಷಧಿ ಎನಬೇಕಲ್ಲದೊಡಿದೇನು ರೋಗವೋ ಕೃಷಿವಿಷವನೌಷಧಿ ಎನಲು - ವಿಜ್ಞಾನೇಶ್ವರಾ *****