
ಮಾನವಾಗಿ ತಾನು ಬದುಕಿ,
ಹೀನ ಬಡತನವೇನೆ ಇರಲಿ,
ನಾಚಿಕೊಳುವ ನೀಚತೊತ್ತ
ಆಚೆನೂಕು, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಕಷ್ಟನಿಷ್ಟುರವೇನೆ ಇರಲಿ,
ಮೆರೆವ ಪದವಿ ವರಹಮುದ್ರೆ,
ಆಳು ಚಿನ್ನ, ಏನೆ ಇರಲಿ!
ಹೊಟ್ಟೆಗಿಷ್ಟು ಹಿಟ್ಟು ಗಂಜಿ,
ಬಟ್ಟೆ ಚಿಂದಿ, ಏನೆ ಇರಲಿ,
ಸೊಗಸು ಬೆಡಗು ತೆಗೆದು ಮಡಗು,
ಮಿಗುವುದಾಳು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಥಳಕುಪಳಕುಗಳೇನೆ ಇರಲಿ,
ಯಾರು ಸಾಜ, ಅವನೆ ರಾಜ,
ಭಂಗ, ಬಡತನ, ಏನೆ ಇರಲಿ!
ಅಕ್ಕೊ ಬಸುವ, ಸೊಕ್ಕಿ ಮೆರೆವ
ಲಕ್ಕಮುಕ್ಕ , ಏನೆ ಇರಲಿ;
ಅರಿತು ಕಣ್ಣ , ಹರಿವರಣ-
ಬೆಪ್ಪ, ಬಿಡೆಲಾ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಉಡಿಗೆತೊಡಿಗೆಗಳೇನೆ ಇರಲಿ,
ತನ್ನ ಬುದ್ದಿ ತನಗೆ ಸಿದ್ಧಿ
ಎನ್ನಬೇಡಾ, ಏನೆ ಇರಲಿ?
ಅರಸ ಕರಸಿ, ಬಿರುದ ಹೊರಿಸಿ,
ಮೆರಸಬಲ್ಲ, ಏನೆ ಇರಲಿ;
ಸಾಜಗಾರ ಎನಿಸಲಾರ,
ತೇಜವಿಲ್ಲ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಹಮುಹಮ್ಮೆಗಳೇನೆ ಇರಲಿ.
ತಿರುಳಿನರಿವು, ಹಿರಿಯ ನಡತೆ,
ಮೇಲುಸಾಲು, ಏನೆ ಇರಲಿ.
ಅರಿವು, ನಡತೆ, ಧರೆಯೊಳೆಲ್ಲ
ಮೆರೆವ ಕಾಲ, ಏನೆ ಇರಲಿ,
ಬರಲಿ ಬೇಗ, ಹರಸು ಈಗ;
ಬರದೆ ಇರದು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಬಂದೆ ಬರುವುದು, ಏನೆ ಇರಲಿ,
ಅಣ್ಣ ತಮ್ಮದಿರಾಗಿ ಎಲ್ಲಾ
ಇರುವ ಕಾಲ, ಏನೆ ಇರಲಿ.
*****
BURNS (1759 -1796) : A Man’s a man for a `that














