ನಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ.
ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ
ಮಲ್ಲಿಗೆ ಅರಳಿಸುತ್ತಾಳೆ.
‘ಅಮ್ಮಾ,, ಬಸಳೇ ಸೊಪ್ಪು ತಂದಿ,
ಏಗಟ್ಟೇ ಮುರ್‍ಕಂಡ ಬಂದಿನ್ರಾ
ತಾಜಾನೇ ಇತು.. ಬರ್ರಾ ಬ್ಯಾಗೆ,
ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕಾಗುಲಾ.’
ಊರುಗೋಲಿನ ಟಕ್ ಟಕ್ ಸದ್ದು
ನೆಲದ ಬಸಿರಿಂದಲೇ ಹುಟ್ಟಿದಂತೆ.
ಒಳಕೋಣೆಯಿಂದ ಒಂಟಿ ದನಿ
‘ಬಂದೇ ತಡಿಯೇ, ಈ ಮುದುಕಿಗೆ
ಕಾಲ ಮುರ್‍ಕಾ ಅಂತ್ಯಾ.. ನಾನೇನ ಹೊಂತಗಾರಿಣ್ಯೇ?’
ಬಾಡಿದ ಮುಖದ ತುಂಬಾ
ಸಿಡಿಲು ಕೊರೆದ ಚೀರು ಚೀರು
ಸೀಳು ಗೆರೆಗಳು ಮುಗುಳ್ನಗುತ್ತವೆ. ಮುದ್ದಾದ
ನಗು ಚೆಲ್ಲುವ ಇವಳ ನೋಡುತ್ತಾ
ಒಂದಾನೊಂದು ಕಾಲ ನೆನಪಾಗುತ್ತದೆ.
ದುಂಡು ಮಲ್ಲಿಗೆ ಧರಿಸಿ ಬಂದ ಆಕೆ
ಹೊತ್ತ ಬುಟ್ಟಿಯ ಕೆಳಗಿಟ್ಟು
ಇರ್‍ಕಿ ತೆಗೆದಿರಿಸಿದಳು
ಬಾಗಿದ ತುರುಬನ್ನು ತಿರುತಿರುಗಿ
ಬಿಚ್ಚಿ ಸರಿ ಮಾಡಿದಳು.
‘ಅಮ್ಮಾ.. ಏನ ಬೇಕ್ರಾ.. ಬಸಳಿ, ಹರ್‍ಗಿ, ಬದನೀ.
ಎಲ್ಲಾ ತಂದಿ’
ಮೃಧುಭಾವಗಳು ವಿನಿಮಯಗೊಳ್ಳುತ್ತ
ಹಸಿರು ತರಕಾರಿಗಳು ನಳನಳಿಸುವಂತೆ
ಬೆವರಿಳಿದ ಮುಖದಲ್ಲೂ ಒಣಗಿದ ಗಂಟಲಲ್ಲೂ
ಉಕ್ಕುತ್ತದೆ ಜೀವದ್ರವ್ಯ. ನುಜ್ಜುಗುಜ್ಜಾದ ಕೈ
ಬೆಲ್ಲ ನೀರುಡಿಸುತ್ತದೆ.
‘ಪಾಪ ಮುದುಕಿ, ನೌಕ್ರಿ ಮಾಡು ಮಕ್ಕಳೆಂತಕೆ,
ನೋಡುದಿಲ್ಲಾ ಬಿಡುದಿಲ್ಲಾ,
ಸುಮ್ನೆ ಈದ ಸಾಯ್ತಿದು ಮುದ್ಕಿ’
ಅಂದುಕೊಳ್ಳುತಾ ಹಣ ಸಂಚಿಗೆ ಸೇರಿಸಿ
ಅಂಗಳವನ್ನೆಲ್ಲಾ ಗುಡಿಸಿಟ್ಟು ಹೋಗುತ್ತಾಳೆ.
‘ಪ್ರಾಯದ ಹೆಣ್ಣು. ಎಷ್ಟೊಂದು ಕಷ್ಟ.
ಅಯ್ಯೋ ಹೆಣ್ಣ ಜನ್ಮವೇ’
ಉಸುಗುಡುತ್ತಾ ಊರುಗೋಲು ಮೆಟ್ಟಿಲೇರಿ
ಕೋಣೆ ಸೇರುತ್ತದೆ.
*****