ಬೀದಿ ಗುಡಿಸುವ ಆ ಹುಡುಗಿ
ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ
ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ
ಕನಸು ಹೊತ್ತು ಕಸವ ರಸ ಮಾಡುತ್ತಾ
ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ
ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ
ಎಳೆದು ಬಿಡುತ್ತಾಳೆ.
ಅವಳ ಮನ ದೀನತೆಯ
ಕಂದಕದಲ್ಲಿಯ ಮನೆ
ನಳನಳಿಸಿ ಚಿಗುರು ಚೆಲ್ಲುವ ಹಸ್ತವೆಲ್ಲ
ಬಿರುಸು ಕೊರಡಿನ ಹಾಗೆ
ಆದರೂ ನಾಳೆಯ ರಥವೇರುತ್ತಾಳೆ
ದಕ್ಕಿಸಿಕೊಂಡು
ಮನೋವೇಗದ ಕುದುರೆ ಕುಗ್ಗುವುದಿಲ್ಲ
ಪಾರಿಜಾತ ಹೂಗಳೇ
ಶ್ವೇತ ಸೀರೆಯ ತುಂಬೆಲ್ಲಾ
ಸಿಂಧೂರ ಬೈತಲೆಯ ನಡು ನಟ್ಟಿದೆ.
ಗಿಡದ ಬುಡದಲ್ಲಿ ಹೂ ಮಂಟಪ ಕಂಡು
ಉಲ್ಲಸಿತ ವದನ.
ಕಟ್ಟುತ್ತಾ ಹಾಡು, ಪೋಣಿಸಿ ಮಾಲೆ
ಮರೆಯಾಗುತ್ತದೆ ಪಾರಿಜಾತ
ಮಂದಾರ ಪರ್ವತದ ಮಗ್ಗುಲಿಗೆ
ಛೀದ್ರಗೊಂಡ ಭಗ್ನ ಅವಶೇಷಗಳ
ನಡುವೆ ಮಂಡಿಯೂರಿ ರೋಧಿಸುವ ಮುಖ
ನಿರಾಶೆ ಮಡಿಲ ಒಡವೆ ವ್ಯಥೆ ಉಸುರುತ್ತವೆ
ಹೆಜ್ಜೆಗಳು ಕಿತ್ತೇಳುವುದಿಲ್ಲ
ಕಂಪು ನಾಸಿಕದ ಆಳ ಸೇರಿದೆ
ಪುಟಿದೆದ್ದಿವೆ ಗಿಡದ ಮೈದುಂಬಿ
ಕೆಂಪು ಹೊಕ್ಕಳ ಹೊತ್ತ
ಬಿಳಿಮೈಯ ಪಾರಿಜಾತಗಳು
ಫಳಫಳನೆ ಹೊಳೆಯುತ್ತಿವೆ..
*****