ನಾವು ತಿನ್ನುವುದಕ್ಕೆ
ಅನ್ನ ಕೇಳಿದೆವು
ಅವರು ಹುಳ ಬಿದ್ದ
ಅಕ್ಕಿ ಕೊಟ್ಟರು
ನಾವು ಹುಳ ದೇವರಿಗೆ ಕೊಟ್ಟು
ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು
ಅನ್ನ ಮಾಡಿ ಉಂಡೆವು!
ಈಗ
ಅವರು ತಿನ್ನುವ ಅನ್ನಕ್ಕೇ
ಹುಳ ಬಿದ್ದಿದೆ
ಅವರು ಹುಳುಗಳನ್ನು
ನಿಷ್ಕಾರುಣ್ಯವಾಗಿ ಕೊಂದುಬಿಟ್ಟು
ಅನ್ನಕ್ಕಾಗಿ ದೇವರಿಗೇ
ಕೈ ಚಾಚುತ್ತಿದ್ದಾರೆ!
ಸಾಯುವಾಗ
ನಾವು ಕುಡಿಯುವುದಕ್ಕೆ
ನೀರು ಕೇಳಿದೆವು
ಅವರು ಆಕಾಶದಲ್ಲಿ ನಿಂತು
ಪಾತಾಳಕ್ಕೆ ನೀರು ಸುರಿದರು
ಸುರಿದ ನೀರಲ್ಲಿ
ನಾವು ದಣಿವಾರಿಸಿಕೊಂಡು
ಉಳಿದ ನೀರಲ್ಲಿ
ಕಣ್ಣೀರ ತೊಳೆದುಕೊಂಡೆವು
ಈಗ
ಅವರಿಗೆ ಸಾಯುವಾಗ
ಬಾಯಲ್ಲಿ ನೀರು ಬಿಡುವವರಿಲ್ಲ
ಅವರು ಸಾಕಿ ಸಲಹಿದ ಮಕ್ಕಳು
ಆಕಾಶದಲ್ಲಿ ಹಾರಿ
ದೂರ ದೇಶ ಸೇರಿದ್ದಾರೆ
ಅವರ ನೆನಪಿನಲ್ಲಿಯೇ ಇವರು
ಕಣ್ಣೀರು ಸುರಿಸುತ್ತಾ
ಪಾತಾಳಕ್ಕೆ ಇಳಿದು ಹೋಗಿದ್ದಾರೆ!
ನಮಗೇನಾದರೂ ಕೊಡುತ್ತಲೇ
ನಮ್ಮಗಳ
ಜೀವ, ಮಾನ, ಪ್ರಾಣಗಳ
ಉಳಿಸಿದ ಅವರ
ನಾವು ಶಪಿಸುವುದೂ ತರವಲ್ಲ!
ಮಾನವನೆದೆ ಬರಡೇನಲ್ಲ
ಪ್ರೀತಿ ಪ್ರೇಮಗಳ
ದವಸ ತುಂಬಿದ ಕಣಜ
ಹಂಚಿ ಉಟ್ಟುಣ್ಣುವ
ಸುಖದ ನಿಜ
ತಿಳಿಯಬೇಕಿದೆ ಮನುಜ!
*****