ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ
ಪಕ್ಕಾಗಿದ್ದೇನೆ.
ಅನ್ಯಥಾ ನೀರಿನಲೆಗಳ ನಡುವೆ
ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು
ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು.
ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು
ನನ್ನೊಂದಿಗೆ ಮಾತುಬಿಟ್ಟವು. ಆದರೂ
ಬಯಲ ಗಾಳಿಗೆ ಬೇಲಿ ಹಾಕಲು ಕಂಬಗಳ
ಜೋಡಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನೊಂದಿಗೆ ನಿನ್ನುಸಿರ ಬೆಸೆದುಕೊಂಡಿದ್ದೇನೆ.
ಅನ್ಯಥಾ ಕಾಲಬೆರಳಿಂದ ನೆಲವ ಬಗಿಯುತ್ತ
ನಿಂತ ನೀರೆಯರಂತೆ ನಿನ್ನ ಕೆಂಗಣ್ಣಿಗೆ
ನಖಶಿಖಾಂತ ನಡುಕದ ಶಾಲು ಹೊದ್ದುಕೊಳ್ಳಲಾರೆ ನಾನು.
ಉರಿವಾಗ್ನಿಯಾಗೇ ಪ್ರಜ್ವಲಿಸಬಲ್ಲವಳು.
ಗಂಡಿಗಿಲ್ಲದ ಕೊಬ್ಬಿನವಳೆಂದು ಅನೇಕ ಹೂಮುಡಿಗಳು
ಹಂಗಿಸಿ ಮುಖತಿರುವಿದವು. ಆದರೂ
ಮನೆಯ ಜಂತಿಯ ನಾಜೂಕಾಗೇ ಜೋಡಿಸುತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ನನ್ನ ದೇಹದ ತುಂಬಾ ನಿನ್ನತ್ತರಿನ
ಪರಿಮಳವ ಪೂಸಿಕೊಂಡಿದ್ದೇನೆ.
ಅನ್ಯಥಾ ನಿನ್ನ ಕಣ್ಣೋಟದಂಚಲ್ಲಿಯ
ಅಪರಿಮಿತ ವಿಪರೀತ ವಾಂಛೆಯ ಅರಿಯದೇ
ಕೆರೆಯ ದಂಡೆಯ ಅಲೆಗಳಿಗೆ ಅಳಿಸಿಹೋಗುವ
ಮರಳ ಹೆಜ್ಜೆಯಾಗಲಾರೆ ನಾನು.
ನನ್ನೊಳಗಿನ ಒರತೆಗೆ ನಾನೇ ಸೆಲೆಯಾಗಬಲ್ಲವಳು
ಪ್ರಾಯದ ಹೆಣ್ಣಿನ ಪರಕಾಯ ಪ್ರವೇಶವೆಂದು ಅನೇಕ
ನೆರೆತ ಕೂದಲ ಹೆಪ್ಪುಗಟ್ಟಿದ ಕೈಗಳು
ಕೊಂಕು ನುಡಿದು ಮರೆಯಾದರು. ಆದರೂ
ಉಷ್ಣವಲಯದ ಬಿಸಿಗೆ ಬೆಣ್ಣೆಯ ಕಾಯಲಿಟ್ಟಿರುವೆ
ತುಪ್ಪದ ಘಮ ಬೆರೆಸಲು.
ನನ್ನೊಂದಿಗೆ ನೀವು ಬರುವಿರೇನು?

ನನ್ನ ಹೃದಯರಾಗ ಮೀಟುವ ತಂಬೂರ ನೀನು
ಅನ್ಯಥಾ ನೀರೆ ನಿಯಾಮಕಳಲ್ಲ
ಎಂಬ ನಿನ್ನ ಎತ್ತಿದ ಕಂಠದ ಕುಹಕ ಗಾನಕ್ಕೆ
ಕಿವುಡಾಗಲಾರೆ ನಾನು.
ನಿನಗಾಗೇ ಕಂಚಿನ ಕಂಠವ ಎರವಲು ಪಡೆದವಳು.
ನಯನಾಜೂಕಿನ ನಕಲು ಪಡೆದ ಹೆರಳುಗಳು
ತುಟಿಕೊಂಕಿಸಿ ಬೆನ್ನು ತಿರುವಿದರು. ಆದರೂ
ರಾಗಮಾಲಿಕೆಯ ಮಧುರ ಮಂಜುಳಗಾನಕ್ಕೆ
ತಾಲೀಮು ರಂಗವನ್ನು ಸಿದ್ಧಗೊಳಿಸುತ್ತಿರುವೆ.
ನನ್ನೊಂದಿಗೆ ನೀವು ಬರುವಿರೇನು?

ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ
ಮುಖಕ್ಕೆ ಬಳಿಯುತ್ತ ನಗುತ್ತಿವೆ
ಬೆಂಕಿಯನ್ನು ಎದೆಗಿಳಿಸುವುದನ್ನೇ ಕಲಿತು ಬಂದ
ತೊಗಟೆ ಕೈಗಳು ಕುತ್ತಿಗೆ ಹಿಸುಕುತ್ತಿವೆ.
ಮೃದ್ವಂಗಿಯ ಮೆತ್ತಗೆ ಹಿಡಿದು ಹಸ್ತದೊಳಗೆ
ಜೋಪಾನ ಎನ್ನುತ್ತಾ ಅಲ್ಲೆ ಅದುಮಿ ಬಿಡುವ
ಹಸ್ತಗಳದೇ ಭಯ.
ಮೈತುಂಬಾ ಬಿರುಬಿಸಿಲ ನೀರ ಬೊಕ್ಕೆಗಳು.
ತೈಲ ಮಾಲೀಷು ಕೂಡಾ ಶಮನಗೈಯದಂತೆ
ಮೈಮನದ ಹಾಲಾಹಲ ಹೆಚ್ಚುತ್ತಲೇ ಇದೆ.
ಉಪಶಮನಕ್ಕೆ ನಿಮ್ಮಲ್ಲಿ ಮದ್ದುಂಟೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೆ ನನ್ನ ಬೊಬ್ಬರ್ಯ
Next post ಕಾಶ್ಮೀರದ ಒಂಟಿ ಬದುಕು

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…