ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು
ಸಡಿಲವಾಗಿಲ್ಲ. ದೀಪದ ಮಾದಕ ಮತ್ತು
ಆಫೀಮು ತುಂಬಿದ ಸೀಸೆ
ಅಮೃತ ಶಿಲೆಯ ಕಣ್ಣುಗಳಲ್ಲೂ
ಕಡುಕಪ್ಪು ಗೋಲ
ನಿದ್ದೆ ಭರಿಸದ ಯಾವುದೋ ಮಾಯೆ.
ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ
ಅರೆ ತೆರೆದ ಎದೆಯ ಆಕೆಯದಷ್ಟೇ
ಅಲ್ಲ. ಮೂರಂತಸ್ತಿನ ಮಹಡಿಯ ಕೊನೆ
ಕೋಣೆ ನೀಲಿ ಆಕಾಶಕ್ಕೆ ಕೈ ಚಾಚಿದೆ.
ಉರಿದುರಿದು ಬತ್ತಿ ಕರಟಿ
ಒಳಸರಿದರೂ
ತೈಲದ ಋಣ ಹರಿದರೂ
ಹಣತೆ ಮತ್ತು ಜ್ವಾಲೆ ಸದಾ
ಕಾಯುವ ಭ್ರಮರಿಯರು
ಮಾಯಾ ಕನ್ನಡಿಯ ಒಳಬಿಂಬದಲ್ಲಿ
ಅದ್ಯಾವ ರಂಗೋಲಿ ಮೇಳೈಸಿದ
ಬಣ್ಣ ಬಣ್ಣದ ಚಿತ್ತಾರಗಳು.
ಈಗೇನೂ ಬೇಡ ತಂಗದಿರ್‍ನ
ತಂಪು ಕರುಣೆಯ ಹಾಲು.
ದಿನಪನ ಉರಿಯ ಉಂಡುಂಡು
ಚರ್ಮ ರೋಗಗಳೆಲ್ಲ ವಾಸಿ.
ಮತ್ತಿನ್ನೇನು? ಅಗೋ! ನೋಡು,
ಸಾಗರನ ಮೇಲೂ ಇಡುವ ಹೆಜ್ಜೆ
ಗುರುತು ನೆಡುವ ಆಶೆ.
ತೆಕ್ಕೆಯೊಳಗಿಳಿದ ಪದಗಳ
ಉಸಿರೊಳಗೆ ಬಚ್ಚಿಟ್ಟುಕೊಂಡೇ
ಕಾಯ್ದುಕೊಂಡೇ
ಹಾಡು ಹೆಣೆಯುವುದೆಂದರೆ
ರಾತ್ರಿಯಲ್ಲೂ ಹಗಲಿನ ಪಾಳಿ.
*****