ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ
ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ
ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ
ಅಕ್ಷಯ ರೂಪಿಗಳು. ನೋಡ ನೋಡುತ್ತ
ಕರಿಯ ಮೊಡಗಳೆದ್ದು ಹರಿಹಾಯ್ದು
ಸರಿ ರಾತ್ರಿಯಲಿ ಮಳೆ ಬಂತೇ ಬಂತು
ತಣ್ಣನೆ ಗಾಳಿ ಹಿತವಾದ ಸೀರಣಿ ಇನ್ನೊಮ್ಮೆ
ಬಣ್ಣದ ಕನಸುಗಳೆ ಹೆಣೆಯುತ್ತ ಸುಖದ
ಮಬ್ಬಿನಲಿದ್ದೆವು ಯಾರು ಯಾರನ್ನೋ ಬಾಚಿ
ತಬ್ಬಿ ಮಲಗಿದ್ದೆವು.
ಮರುದಿನದ ಮಾತು
ಮಳೆಯದೆ. ಕೆಲವರೆಂದರು ಇದು ಯಾವ
ಬೆಳೆಗೂ ಒಳಿತಲ್ಲವೆಂದು. ಇನ್ನು ಕೆಲವರು
ನಾವು ಮೊದಲೇ ಹೇಳಿರಲಿಲ್ಲವೆ ಬೇಸಿಗೆಯ
ಕಾವು ಹೀಗೆ ಏರಿದರೆ ಮತ್ತಿನ್ನೇನು? ಅದು
ನಾಳೆಯೂ ಬರುವುದೆ? ಅಥವ ಇದೇ ಸಂಜೆಯ
ವೇಳೆ ಮತ್ತೆ ಬರುವುದೆ? ಆದರೇನು-
ಬಂದ ಕುರುಹೂ ಇಲ್ಲದಂತೆ ಮಾಯವಾಗುವುದು
ಬೆಂದು ಬಳಲಿದ ನೆಲದಲ್ಲಿ ಎಲ್ಲವೂ. ನಮ್ಮ
ನಿದ್ದೆಯಲಿ ಕಂಡವರು ಎಂದಾದರೂ ಇಲ್ಲಿ
ಇದ್ದವರೆ? ಒಡೆದ ಮಾತ್ರಕ್ಕೆ ನೀರ ಗುಳ್ಳೆ
ಎದ್ದು ಅಂಗಳ ತುಂಬ ತುಂಬಿದುದು ಸುಳ್ಳೆ?
*****