ಈಗಷ್ಟೆ ಮುಗಿದಿದೆ ಉರಿಬೇಸಿಗೆ
ಸೀದುಹೋಗಿದೆ ನೆಲ ಅದರ ಧಗೆಗೆ
ಮೇಲೆ ತೇಲುವ ಮುಗಿಲು
ಕೆಳಗೆ ಥಣ್ಣಗೆ ಸುರಿದು
ತನ್ನ ಉಳಿಸುವುದೆಂದು ಧರೆ ನಂಬಿದೆ
ಹಾಗೇ ನಾನೂ ನಿನಗೆ ಕಾಯುತಿರುವೆ.
ತಾಗಿತೋ ಹೇಗೆ ಈ ನೆಲದ ವಿರಹ?
ಬಾನಲ್ಲಿ ಮೂಡುತಿದೆ ಮಳೆಯ ಬರೆಹ!
ಕರಿಯ ಗಿರಿಗಳ ದಂಡು
ಓಡಿ ಬರುವುದ ಕಂಡು
ನಾಚಿ ಕೆಂಪಾಗಿದೆ ನೆಲದ ಮೋರೆ
ಹಾರುತಿದೆ ಗಾಳಿಗ ಉಟ್ಟ ಸೀರೆ!
ತುಂಬಿ ಹರಿದಿದೆ ನದಿ ದಡಕೆ ತುಡಿದು
ಅಪ್ಪಿಕೊಳುತಿದೆ ಬಾಚಿ ಒಲವ ನುಡಿದು
ಹೂಗೊಂಚಲನು ನೀಡಿ
ಗಾಳಿ ತಂದಿದೆ ಗಂಧ
ತಬ್ಬೋ ಗಿರಿಧರ ಬಂದು ಒಳಗಿನಿಂದ
ಉಸಿರುಗಟ್ಟಿಸು ನಿನ್ನ ಬಿಗಿತದಿಂದ.
*****