Home / ಕಥೆ / ಕಾದಂಬರಿ / ಮರಣದಂಡನೆ – ೨

ಮರಣದಂಡನೆ – ೨

‘ಟೆರರಿಸ್ಟು ಅಂದ್ರೆ ಟೆರರಿಸ್ಟ್ ಥರಾ ಸಾರ್? ಉತ್ತರ. ತಕ್ಷಣ ಸಮತಾ ಹೇಳಿದಳು. ಮುಖ್ಯಮಂತ್ರಿಯ ಹಾರಿಕೆ ಉತ್ತರ. ತಕ್ಷಣ ಸಮತಾ ಹೇಳಿದಳು.

‘ಸಾರ್, ದಯವಿಟ್ಟು ತಪ್ತಿಳ್ಕೊಬೇಡಿ, ಹೋರಾಟಗಾರರನ್ನೆಲ್ಲ ಟೆರರಿಸ್ಟು ಅಂತಾನೊ ನಕ್ಸಲೈಟ್ ಅಂತಾನೊ ಆಪಾದನೆ ಮಾಡಿ ಅರೆಸ್ಟ್ ಮಾಡ್ತಾರೆ ಸಾರ್ ಇವ್ರ ಸರ್ಕಾರದಲ್ಲಿ. ನಾನೂ ಇದೇ ಥರಾ ಅರೆಸ್ಟಾಗಿ ಇಲ್ಲಿಗ್ ಬಂದಿದ್ದೀನಿ.’

ಮುಖ್ಯಮಂತ್ರಿ ಏನೋ ಹೇಳಲು ಪ್ರಯತ್ನಿಸುತ್ತಿರುವಾಗ್ಲೆ ರಾಷ್ಟ್ರಪತಿಗಳು ಸನ್ನೆಯಲ್ಲೇ ತಡೆದರು. ಸಮತಾಗೆ ‘ನೀವ್ ಹೇಳಿ, ಏನಾಯ್ತು ಹೇಳಿ’ ಎಂದರು. ಸಮತಾ ಉತ್ಸಾಹಿತಳಾದಳು. ನಡೆದದ್ದನ್ನ ಚಿಕ್ಕದಾಗಿ ಚೊಕ್ಕದಾಗಿ ಮುಂದಿಟ್ಟಳು: ‘ಬಲವಂತಯ್ಯ ಸುಶೀಲ ಅನ್ನೊ ಯುವತಿ ಶೀಲಾನ್ ಕಳ್ದು ಸಾಯೊಹಾಗ್ ಮಾಡಿದ್ರು, ನಾವ್ ಪ್ರತಿಭಟನೆ ಮಾಡಿದ್ವಿ, ಪ್ರತಿಭಟನೆ ಬಲವಾದಾಗ ಬಲವಂತಯ್ಯನ್ನ ಅರೆಸ್ಟ್ ಮಾಡ್ಲೆ ಬೇಕಾಯ್ತು. ನಾವು ಕಾನೂನ್ ಹೋರಾಟಾನೂ ನಡ್ಸಿದ್ವಿ, ಬಲವಂತಯ್ಯರಿಗೆ ಮರಣ ದಂಡನೆ ವಿಧಿಸಿ ತೀರ್ಪು ಬಂತು. ಆದ್ರೆ ಇವರು ಕ್ಷಮಾದಾನಕ್ಕೆ ಪ್ರಯತ್ನ ಮಾಡ್ತಾ ಇದಾರೆ. ನನ್ನನ್ನ ಟೆರರಿಸ್ಟ್ ಸಂಬಂಧ ಇದೆ ಅಂತ ಕೂಡ್ ಹಾಕಿದಾರೆ.’

ಮುಖ್ಯಮಂತ್ರಿ ಮುಖ ಹಳಸಿದ ಅನ್ನ ಆಯ್ತು. ರಾಷ್ಟ್ರಪತಿಗಳ ನೋಟಾನ ಎದುರಿಸಲಾರದೆ ಚಡಪಡಿಸಿದ. ಆದ್ರೆ ತನ್ನನ್ನು ತಾನು ಸಮರ್ಥನೆ ಮಾಡ್ಕೊಳ್ಳಲೇಬೇಕಿತ್ತು: ‘ಈಕೆ ಹೇಳೋದೆಲ್ಲ ನಂಬ್ಬೇಡಿ ಸಾರ್, ಪೊಲೀಸ್ನೋರ್ಗೆ ಅನ್ಮಾನ ಬಂತು. ಬಲವಾದ ಸಾಕ್ಷ್ಯ ಇತ್ತು. ಅರೆಸ್ಟ್ ಮಾಡಿದ್ರು ಅಷ್ಟೇ ಸಾರ್, ಇದ್ರಲ್ಲಿ ನನ್ ಕೈವಾಡ ಏನೂ ಇಲ್ಲ ಸಾರ್.’

ರಾಷ್ಟ್ರತಿಗಳು ಮುಖ್ಯಮಂತ್ರಿ ಮುಖನೋಡಿ ಸುಮ್ಮನಾದರು. ಸಮತಾ ಕಡೆ ತಿರುಗಿ `Take Care’ ಎಂದು ಹೇಳಿ ಮುಂದಕ್ ಹೊರಟ್ರು. ನೇಣುಗಂಬ ತೋರುಸ್ಬೇಕು ಅಂತ ಹುಸೇನ್ ಜೊತೇಲೇ ಇದ್ದ. ಜೈಲ್ ಅಧಿಕಾರಿ ಅದಕ್ಕೆ ಅವ್ಕಾಶ ಕೊಟ್ಟಿದ್ರು. ಇದೊಂದು ಅಪೂರ್ವ ಅವಕಾಶವೇ ಸರಿ. ರಾಷ್ಟ್ರಪತಿಗಳ ಅನೌಪಚಾರಿಕ ನಡವಳಿಕೆಯಿಂದ ಇದು ಸಾಧ್ಯ ಆಗಿತ್ತು ಅಂತ ಪಾಪ- ಹುಸೇನ್ಗೆ ಗೊತ್ತಿಲ್ಲ. ಅವ್ನಿಗೆ ಅವ್ರ್ ಜೊತೆ ಹೋಗಿದ್ದೇ ಹೆಮ್ಮೆ ವಿಷಯ!

ಇನ್ನೊಂದ್ ಸೆಲ್ ಮುಂದೆ ಹಾದು ಹೋಗುವಾಗ ಒಳಗಿದ್ದ ವ್ಯಕ್ತಿ ‘ಗುಡ್ ಮಾರ್ನಿಂಗ್ ಸಾರ್’ ಎಂದು ಕೂಗಿ ಹೇಳಿದ. ‘ಇವ್ನ್ ಯಾರಪ್ಪ ಮಧ್ಯಾಹ್ನದ ಹೊತ್ತು ಮಾರ್ನಿಂಗ್ ಹೇಳ್ತಾ ಇದಾನೆ’ ಅಂಡ್ಕೊಂಡು ರಾಷ್ಟ್ರಪತಿಗಳು ಅತ್ಕಡೆ ನೋಡಿದ್ರು. ಆತ ಹಲ್ಲು ಗಿಂಜುತ್ತ ‘ನಾನು ಬಲವಂತಯ್ಯ ಸಾರ್’ ಎಂದು ಮತ್ತೊಮ್ಮೆ ಕೈಮುಗಿದ. ರಾಷ್ಟ್ರಪತಿಗಳಿಗೆ ಅಲ್ಲಿ ನಿಲ್ಲಬೇಕು ಅನ್ನಿಸಿಲ್ಲ. ಸುಮ್ಮನೆ ಮುಂದಕ್ಕೆ ಹೋದ್ರು, ‘ಸಾರ್ ತಮ್ಮ ದಯೆ ಇರ್ಲಿ ಸಾರ್. ಕ್ಷಮೆ ಸಾರ್ ಕ್ಷಮೆ’ ಎಂದು ಆತ ಜೋರಾಗಿ ಕೇಳುತ್ತಿದ್ದ. ಕಾವಲು ಕಾಯ್ತಿದ್ದ ಸೆಂಟ್ರಿ ‘ಸುಮ್ನೆ ಇರಿ’ ಎಂದು ಗದರಿಸಿದ. ಬಲವಂತಯ್ಯ ಬಲವಂತದಿಂದ ಸುಮ್ಮನಾದ.

‘ನಿಮ್ಮ ರಾಜ್ಯದಲ್ಲಿ ಇದೊಂದೇ ಜೈಲಲ್ಲಿ ನೇಣುಗಂಬ ಇರೋದು ಅಂತ ಕೇಳಿದ್ದೆ, ಹೌದ?’ -ರಾಷ್ಟ್ರಪತಿಗಳು ಕೇಳಿದ ಕೂಡಲೇ ಹುಸೇನ್, ‘ಹೌದು ಸಾರ್, ನಾನೇ ಸಾರ್ ನೇಣ್ ಹಾಕೋನು’ ಎಂದು ಬಿಟ್ಟ. ಅಧಿಕಾರಿ ‘ಶ್!’ ಎಂದು ಗದರಿದ. ರಾಷ್ಟ್ರಪತಿಗಳು, ‘ಮುಗ್ಧ ಇದ್ದ ಹಾಗ್ ಕಾಣುಸ್ತಾನೆ. ಮಾತಾಡ್ಲಿ ಬಿಡಿ’ ಎಂದಾಗ ಹುಸೇನ್ ಮುಖ ಹೋಲಿಕೆಗೆ ಸಿಗದಷ್ಟು ಆನಂದ ಅಭಿವ್ಯಕ್ತಿಸಿತ್ತು.

ರಾಷ್ಟ್ರಪತಿಗಳು ನೇಣುಗಂಬದ ಬಳಿಗೆ ಬಂದರು. ಅಧಿಕಾರಿ ಅದನ್ನು ಹೇಗೆ ಬಳಸಲಾಗುತ್ತೆ ಅನ್ನೋದನ್ನ ವಿವರಿಸಿದರು. ‘ಈತ ಹುಸೇನ್ ಅಂತ, ‘Death Sentence Executor’ ಎಂದು ಪರಿಚಯಿಸಿದರು. ಹುಸೇನ್ ಉತ್ಸಾಹಿತನಾಗಿ ನೇಣಿನ ಕ್ರಿಯೆಯ ಅಣಕು ತೋರಿಸಿದ. ರಾಷ್ಟ್ರಪತಿಗಳು ಹೂಗುಚ್ಛ ಕೊಟ್ಟೇಬಿಟ್ರು. ಈತ ಫೋಟೋ ತೆಗಿಸ್ಕೊಬೇಕೂಂತ ಕೇಳೇಬಿಟ್ಟ. ಹೀಗೆ ನಡೆದಿತ್ತು ರಾಷ್ಟ್ರಪತಿ ಪ್ರಸಂಗ.

***

ಟೀಚರಮ್ಮಂಗೆ ‘ಬರ್ತೀನಿ’ ಅಂತ ಹೇಳಿ ಹುಸೇನ್ ಹೊರಟೇಬಿಟ್ಟ. ಆತನ ನಡಿಗೇಲಿ ಉತ್ಸಾಹ ಇತ್ತು. ಬೈಕ್ ಹತ್ತಿದವನು ನನ್ನನ್ನು ಕರೆದ. ಯಾಕಿರಬಹುದು ಅಂತ ನೋಡ್ತಿರುವಾಗ ಟೀಚರಮ್ಮ, ‘ನಿಮಗೇನೊ ಹೇಳ್ಬೇಕು ಅನ್ಸುತ್ತೆ. ಆತನಿಗೆ ಆನಂದ ಆಗೋದಾದ್ರೆ ಯಾಕ್ ತಡೀಬೇಕು, ಹೋಗಿ’ ಅಂದ್ರು, ಅವರ ಫಿಲಾಸಫಿಗೆ ಎದುರಾಡೋಕ್ ಆಗ್ಲಿಲ್ಲ. ಹುಸೇನ್ ಹತ್ರ ಹೋದೆ. ‘ಬೈಕ್ ಹತ್ತಿ’ ಎಂದ. ‘ಯಾಕೆ?’ ಎಂದೆ. ‘ಅದೆಲ್ಲ ಈಗ್ಲೆ ಕೇಳ್ಬ್ಯಾಡಿ, ಸುಮ್ಕೆ ಬರ್ರಿ ನನ್ ಜತ್ಯಾಗೆ’ ಎಂದ. ನಾನು ಮೀನಾಮೇಷ ಎಣುಸ್ತಿರೋದ್ ನೋಡಿ, ‘ಅಲ್ಲ, ನೀವೇನ್ ರಾಷ್ಟ್ರಪತಿ ಪಕ್ಕದಾಗ್ ನಿಂತು ಫೋಟೋ ತಗಿಸ್ಕಂಡಿದ್ದೀರ? ಇಲ್ಲ ತಾನೇ? ನಾನ್ ತಗಿಸ್ಕಂಡಿರಾನು. ಸುಮ್ಕೆ ಬೈಕ್ ಹತ್ರಿ ಅಂದ್ರೆ ಹತ್ಬೇಕು’ ಎಂದುಬಿಡೋದೆ ಈ ಹುಸೇನ್! ‘ಸರಿಯಪ್ಪ’ ಅಂತ ಹತ್ತಿ ಕೂತೆ. ಆತ ಬೈಕ್ ಓಡಿಸುತ್ತಾ ಹೇಳಿದ: ‘ನಿಮ್ಮನ್ ಯಾಕ್ ಕರ್ಕಿಂಡ್ ಹೋಗ್ತಿದೀನಿ ಗೊತ್ತ? ಇವಾಗ ನಮ್ ಪಟೇಲ್ರುತಾವೋಗ್ತಿನಿ, ಅವ್ರ್ಗೆ ಈ ವಿಷ್ಯ ಹೇಳ್ತಿನಿ, ಅದನ್ನು ನೀವ್ ನೋಡ್ಬೇಕು, ಅದಕ್ಕೇ ಕರಂಡ್ ಹೋಗ್ತಿರಾದು.’

ನಾನು ಒಳಗೇ ನಕ್ಕೆ. ನಗು ಹೊರಡೆ ಬರೋಹಾಗಿಲ್ಲ. ಹಾಗೇನಾದ್ರು ದೊಡ್ಡದಾಗ್ ನಕ್ರೆ ಆತನ್ನ ಅಪಹಾಸ್ಯ ಮಾಡ್ದಂತೆ ಆಗುತ್ತೆ. ನಾನು ಸಿನಿಕ ಆಗ್ಬಿಡ್ತೀನಿ. ಆತನ ಮುಗ್ಧತೆ ಅರ್ಥ ಮಾಡ್ಕೊಂಡ್ರೆ ಕತೆಗಾರ ಆಗ್ತಿನಿ…… ನನಗೆ ನಾನೇ ಹೇಳ್ಕೊಂಡೆ, ನಗೂನ ತಡ್ಕೊಂಡೆ, ಆದ್ರೆ ನನ್ನ ಒಳನಗೂನಲ್ಲೂ ಅಪಹಾಸ್ಯ ಇದ್ದಿರಬಹುದ ಅಂತ ಅನುಮಾನ ಬಂತು. ಛೇ! ಇರಲಾರದು. ಇರಬಾರದು ಅಂತ ನನ್ನನ್ನ ನಾನೇ ಸಮಾಧಾನ ಮಾಡ್ಕೊಳ್ತಾ ಯೋಚುಸ್ತಾ ಇರುವಾಗ ‘ಇಳೀರಿ’ ಅಂದ. ಯಾಕೇಂದ್ರೆ ಪಟೇಲರ ಮನೆ ಬಂದಿತ್ತು.

ಪಟೇಲರ ಮನೇನೇ ಅವರ ಅಂತಸ್ತನ್ನ ಹೇಳೊ ಹಾಗಿತ್ತು. ಗತಚರಿತ್ರೆ ಹೇಳೊ ಹಾಗಿರೊ ಕಂಬಗಳು, ದೊಡ್ಡ ಹಜಾರ, ಧಾನ್ಯದ ಮೂಟೆಗಳು, ಗೋಡೆಗೆ ಮೆತ್ತೆ ದಿಂಬು ಹಾಕಿ ಒರಗಿ ಕೂತ ಪಟೇಲರು; ಜೊತೆಗೆ ಶಾನುಭೋಗರು; ಊರಿನ ಒಂದಷ್ಟು ಜನರು.

ಹುಸೇನ್ ತನ್ನ ಬೈಕನ್ನು ಪಟೇಲರ ಮನೆಯಿಂದ ಸ್ವಲ್ಪ ದೂರದಲ್ಲೇ ನಿಲ್ಲಿಸಿದ. ಊರ ಹಿರಿಯರು, ಯಜಮಾನರು- ಅವರ ಮುಂದೆ ಜುಮ್ಮಂತ ಬೈಕ್ ಬಿಡೋದು ಗೌರವ ಅಂತ ಆತನ ಭಾವನೆ; ಊರೋರ ಭಾವನೇನೂ ಅದೇ ಹೌದು. ಭಾವನೇನೊ ಭಯಾನೊ ಒಟ್ನಲ್ಲಿ ಇದು ಲಾಗಾಯ್ತಿಂದ ಹೀಗೇ ನಡ್ಕಂಡ್ ಬಂದಿತ್ತು. ಇದನ್ನ ಊರ ಜನರು ಹಿರಿಯರಿಗೆ ತೋರೊ ಗೌರವ ಅಂತಾರೆ; ನನ್ನಂಥೋರು ‘ಪ್ಯೂಡಲ್ ಪವರ್’ ಎದುರಿಗಿರೊ ಭಯ ಅಂತೀವಿ. ಜನಗಳ ಪವರ್ ಯಾವಾಗಪ್ಪ ಅರ್ಥಪೂರ್ಣ ಆಗುತ್ತೆ ಅಂತ ಹಂಬಲುಸ್ತೇವೆ. ಹಾಗಂತ ನಮ್ಮೂರ ಪಟೇಲರು ಅಮಾನವೀಯ ಅಲ್ಲ. ಅವರಿಗೂ ಪ್ರಜಾಪ್ರಭುತ್ವ ಅರ್ಥವಾಗ್ತಾ ಇತ್ತು; ಪ್ಯೂಡಲ್ ಪ್ರಭುತ್ವ ಕರಗ್ತಾ ಇತ್ತು. ಹೀಗಾಗಿ ಹೊರಗೆ ಗತ್ತು ಕಾಣ್ಸಿದ್ರೂ ಒಳಗೆ ಅಂತಃಕರಣಕ್ಕೆ ಒಂದು ರೂಪ ಬರೋಕ್ ಶುರುವಾಗಿತ್ತು.

‘ಏನ್ ಹಿಂಗ್ ನಿಂತ್ಕಂಡ್ ಬಿಟ್ರಿ, ಬರ್ರಿ ಮುಂದಕ್ಕೆ’ ಅಂತ ಹುಸೇನ್ ಭುಜ ಅಳ್ಳಾಡಿಸಿದಾಗ್ಲೆ ನನಗೆ ಎಚ್ಚರ. ಅಲ್ಲೀವರೆಗೆ ನಾನು ನನ್ ಒಳ್ಗಡೆ ಹೋಗ್ಬಿಟ್ಟಿದ್ದೆ. ಆತ ಭುಜ ಅಳ್ಳಾಡ್ಸಿದ್ ಮೇಲೆ ‘ನಡ್ಯಪ್ಪ’ ಅಂತ ಹೊರಟೆ.

ಪಟೇಲರು ನೋಡಿದೋರೆ ‘ಬರ್ರಿ ಬರಿ’ ಅಂತ ಕರುದ್ರು, ‘ಏನಯ್ಯ ಹುಸೇನ್ ಸಮಾಚಾರ?’ ಅಂತ ಸಹಜವಾಗಿ ಕೇಳಿದ್ರು. ಹುಸೇನ್ ನನಗೆ ತಿವಿದು, ‘ನೀವೇ ಒಸಿ ಸುರುಮಾಡಿ’ ಎಂದು ಪಿಸುಗುಟ್ಟಿದ. ಬೇರೆ ದಾರಿ ಇಲ್ಲ. ನಾನೇ ಶುರು ಮಾಡ್ದೆ: ‘ಹುಸೇನ್ ನಿಮ್ಹತ್ರ ಒಂದ್ ಸಂತೋಷದ್ ವಿಷ್ಯ ಹಂಚ್ಕಳ್ಳಾಕ್ ಬಂದಿದಾನೆ’ ಅಂತ ಪೀಠಿಕೆ ಹಾಕ್ತಿರುವಾಗ್ಲೆ ಪಟೇಲರು, ‘ಮದುವೆ ಗೊತ್ತಾಯ್ತೆನಯ್ಯ? ಊರೆಲ್ಲ ಒಂದಾಗಿ ಹಬ್ಬದ್ ತರಾ ಮಾಡ್ಬಿಡಾನ ಬಿಡು’ ಎಂದುಬಿಟ್ಟರು. ಶಾನುಭೋಗರು, ‘ನಿಮ್ ಧರ್ಮ ನಮ್ ಧರ್ಮ ಎರಡೂ ಸೇರಂಗೆ ಮಂತ್ರ ಹೇಳೋಣ, ಆಯ್ತ?’ ಎಂದು ಹಸನ್ಮುಖದಿಂದ ಹೇಳಿದಾಗ ನನ್ನ ಕಡೆ ನೋಡಿದ.

ನಿಜ ಹೇಳೋದಾದ್ರೆ, ನಮ್ಮೂರ ಪಟೇಲರು, ಶಾನುಭೋಗರು ಜಾತಿ-ಧರ್ಮ ಅಂತ ತಾರತಮ್ಯ ಮಾಡಿದೋರಲ್ಲ. ಒಟ್ಟಾರೆ ಊರ್ನೋರು ಅವ್ರ್ ಮಾತಿಗ್ ಬೆಲೆ ಕೊಡ್ಬೇಕು ಅಷ್ಟೆ. ಊರು ಒಗ್ಗಟ್ಟಾಗಿರ್ಬೇಕು ಅನ್ನೋದೇ ಅವರ ಕಾನೂನು. ಅದಕ್ಕೇ ಇಬ್ರೂ ಹುಸೇನ್ಗೆ ಹೀಗ್ ಹೇಳಿದ್ದು. ಹುಸೇನ್ ಮತ್ತೆ ತಿವಿದು ನನ್ನ ಎಚ್ಚರಿಸಿದ. ನಾನು, ‘ಮದ್ವೆ ವಿಷಯ ಅಲ್ಲ ಪಟೇಲ್ರೆ, ಇವತ್ತು ಜೈಲಿಗೆ ರಾಷ್ಟ್ರಪತಿಗಳು ಬಂದಿದ್ರಂತೆ…..’ ಎನ್ನುತ್ತಿರುವಾಗ್ಲೆ ‘ಅವ್ರ್ಯಾಕ್ ಬಂದ್ರು ಜೈಲಿಗೆ? ಏನಾಗಿತ್ತು?’ ಅಂತ ಕೇಳ್ಬಿಡೋದ ಈ ಪಟೇಲರು! ಆಗ ನಾನು, ‘ನೋಡೋಕ್ ಬಂದ್ರು ಅಷ್ಟೇ’ ಎಂದೆ. ‘ಹಂಗ್ ಹೇಳಿ ಮತ್ತೆ’ ಅಂತ ಪಟೇಲರು ನುಡಿದ್ಮೇಲೆ ಶಾನುಭೋಗರು ‘ಅದ್ರಲ್ಲೇನ್ ವಿಶೇಷ’ ಎಂದರು. ‘ವಿಶೇಷ ಇದೆ’ ಎಂದ ನಾನು, ‘ನೀನೇ ಹೇಳು ಹುಸೇನ್’ ಎಂದೆ. ಹುಸೇನ್ ರಾಷ್ಟ್ರಪತಿಗಳು ತನಗೆ ಹೂಗುಚ್ಚ ಕೊಟ್ಟಿದ್ದು, ತಾನು ಅವರ ಪಕ್ಕದಲ್ಲಿ ಫೋಟೊ ತಗಿಸ್ಕಂಡಿದ್ದು- ಎಲ್ಲಾನು ಸವಿವರವಾಗಿ ಸಂಭ್ರಮದಿಂದ ಹೇಳಿದ. ಪಟೇಲರು, ‘ಅದ್ಸರಿ, ನಮ್ಮಂತೋರ್ನೆ ಹತ್ರ ಬಿಟ್ಕಳಲ್ಲ, ನಿನ್ನನ್ನ ಪಕ್ಕದಾಗ್ ನಿಲ್ಲಿಸ್ಕಂಡು ಫೋಟೊ ತಗಿಸ್ಕಂಡ್ರ?’ ಎಂದು ಅನುಮಾನಿಸಿದ್ರು. ಇದಕ್ ಸರ್ಯಾಗಿ ಶಾನುಭೋಗರು ‘ಎಲ್ಲಿ ಫೋಟೊ ತೋರ್ಸು’ ಎಂದರು. ‘ಇನ್ನೂ ನನಿಗ್ ಕೊಟ್ಟಿಲ್ಲ’ ಎಂದ ಹುಸೇನ್. ‘ಹಾಗಾದ್ರೆ ಫೋಟೊ ತಂದ್ ತೋರ್ಸು, ಅಲ್ಲೀವರೇ ನಮ್ಗೇನೊ ಅನ್ಮಾನ’ ಎಂದು ಬಿಟ್ಟರು ಶಾನುಭೋಗರು.

ಹುಸೇನ್ ಪೆಚ್ಚಾದ, ‘ಈತ ಮುಗ್ಧ. ಸುಳ್ಳುಪಳ್ಳು ಹೇಳೋನಲ್ಲ’ ಅಂತ ನಾನು ವಾದ ಮಂಡಿಸೋಣ ಅಂತ ಇರುವಾಗ್ಲೆ ಪಟೇಲರು ‘ಕೇಳುಸ್ಲಿಲ್ವ? ಫೋಟೊತಂಗಡ್ಬಾ ಮದ್ಲು. ಸುಮ್ ಸುಮ್ಮೆ ಬೂಸಿ ಬಿಡ್ಬ್ಯಾಡ’ ಎಂದುಬಿಟ್ಟರು. ಶಾನುಭೋಗರು, ‘ರಾಷ್ಟ್ರಪತಿಗಳು ಅಂದ್ರೆ ಸಾಮಾನ್ಯಾನ? ಏನ್ ಸೆಕ್ಯೂರಿಟಿ ಏನ್ ಕತೆ? ಹತ್ರಕ್ ಯಾರಾನ ಸುಳ್ಯಾದುಂಟಾ? ಅದೂ ನಿನ್ನಂತೋರು?’ ಎಂದು ಮಾತು ಮುಂದುವರೆಸುತ್ತಿರುವಾಗ ಪಟೇಲರು, ‘ವೋಗ್ಲಿ ಬಿಡಿ, ನಮ್ಮೂರ್ ಹುಡ್ಗ, ಏನೋ ಹೇಳ್ತಾ ಅವ್ನೆ, ಫೋಟೊತಂದ್ ಮ್ಯಾಲ್ ನಾವೂ ನಂಬಿದ್ರಾಯ್ತು’ ಎಂದು ಮುಕ್ತಾಯ ಹಾಡಿದರು.

ಆದರೆ ಆ ವೇಳೆಗಾಗ್ಲೆ ಹುಸೇನ್ ಅವಮಾನ ಅನುಭವಿಸಿ ಆಗಿತ್ತು. ನನಗೂ ಅನ್ನಿಸ್ತು: ಏನಾಗ್ತಿದೆ ನಮ್ ಜನಕ್ಕೆ? ನಾಲಗೆ ನಂಬದೆ ಇರೋರೇ ನಾಗರೀಕರ?-ಅಂತ ಬೇಸರ ಆಯ್ತು. ಸುಳ್ಳೋ ನಿಜವೊ ಆತ ಹೇಳಿದ್ದಕ್ಕೆ ಸ್ಪಂದಿಸಿದ್ರೆ ಒಂದಷ್ಟು ಸಂತೋಷನಾದ್ರೂ ಆಗ್ತಿತ್ತು ಆತನಿಗೆ. ಆತ ಏನು ಹಾದರದ ಮಾತಾಡ್ಲಿಲ್ಲ, ತನಗಾದ ಸಂತೋಷ ಹಂಚೋಳ್ಳೋಕ್ ಬಂದ. ಆದ್ರೇನ್ ಮಾಡೋದು, ಸಂತೋಷ-ಸತ್ಯ ಹಂಚ್ಕೊಳ್ಳೋದ್ಕಿಂತ ಅಸಂತೋಷ-ಅಸತ್ಯ ಹಂಚೋಳ್ಳೋರೇ ಜಾಸ್ತಿ. ಹಾಗಂತ ನಮ್ಮ ಪಟೇಲರು, ಶಾನುಭೋಗರು ಪೂರ್ತಿ ಹಾಗೇ ನಡ್ಕೋತಾರೆ ಅಂತ ಅಲ್ಲ. ಇದೊಂಥರಾ ಸ್ಥಿತ್ಯಂತರದ ಸಂದರ್ಭ ನೋಡಿ, ಬದಲಾಗ್ತ ಇರೊ ಸಂದರ್ಭಕ್ಕೆ ಇವರು ಹೊಂದ್ಕೊಳ್ತಾ ಇರೋದಂತೂ ನಿಜವಾದ್ರೂ ಒಮ್ಮೊಮ್ಮೆ ಒಳಗಿರೊ ‘ವರ್ಗ’ ಹೊರಗಡೆ ಬರುತ್ತೆ. ಅವರೊಳಗೇ ಹಾವು ಏಣಿಯಾಟ ನಡೀತಾ ಇರುತ್ತೆ….. ಹೀಗೆ ಯೋಚಿಸ್ತಾ ನೋಡ್ತೀನಿ: ಹುಸೇನ್ ಆಗ್ಲೆ ತನ್ನ ಬೈಕ್ ಹತ್ರ ಹೋಗಿ ಒಬ್ಬನೇ ನಿಂತಿದಾನೆ. ನಾನು ತಕ್ಷಣ ಅವ್ನ್ ಹತ್ರ ಹೋದೆ, ‘ಇದಕ್ಕೆಲ್ಲ ಚಿಂತೆ ಮಾಡ್ಬೇಡ. ಈ ದೊಡೋರೆಲ್ಲ ಹೀಗೇನೆ. ಒಂದೊಂದ್ಸಾರಿ ಒಳಗೆ ಉರಿ ಎದ್ಬಿಡುತ್ತೆ. ಆಮೇಲ್ ಅದು ತಣ್ಣಗಾದಾಗ ಸರಿಯಾಗ್ತಾರೆ,’ ಎಂದು ಸಮಾಧಾನಿಸಿದೆ. ಹುಸೇನ್ ಮಾತಾಡ್ಲಿಲ್ಲ. ನಾನೇ ಮತ್ತೆ ಮಾತಾಡ್ಡೆ: ‘ಇದೆಲ್ಲ ಯಾವ್ ದೊಡ್ ವಿಷಯ ಹುಸೇನ್? ಇದು ದಾಖಲೆ ಕೇಳೋ ಕಾಲ, ಸತ್ಯಕ್ಕಿಂತ ಹೆಚ್ಚು ಸಾಕ್ಷ್ಯ ನಂಬೋ ಕಾಲ. ನೀನ್ ಫೋಟೊ ತಂದಾಗ ಅವ್ರೇ ಪೆಚ್ಚಾಗ್ತಾರೆ ಬಿಡು. ಈಗ ನಿನ್ನ ತಂದೆ- ತಂಗಿಗೆ ವಿಷ್ಯ ಹೇಳು. ನಿಜವಾಗ್ಲೂ ಆನಂದಪಡ್ತಾರೆ, ಅವರು ಕರುಳುಬಳ್ಳಿ ಜನ, ದಾಖಲೆ ಕೇಳೊಲ್ಲ, ಸಾಕ್ಷ್ಯಕೇಳೊಲ್ಲ, ನಾಲಗೆ ನಂಬ್ತಾರೆ.’

ಹುಸೇನ್ ಮುಖದಲ್ಲಿ ನಗು ನವಿಲಂತೆ ಬಂತು, ‘ನೀವೂ ನನ್ ಜತೆ ಮನೆತಾವ್ ಬರ್ರಿ’ ಎಂದ, ‘ಓ ಎಸ್’ ಅಂತ ಬೈಕಿನ ಹಿಂದೆ ಕೂತೆ.

ಬೈಕ್ ಸೀದಾ ಮನೆಹತ್ರ ಬಂತು, ತೀರಾ ಚಿಕ್ಕದಲ್ಲದ ಆದ್ರೆ ದೊಡ್ಡದೂ ಅಲ್ಲದ ಮನೆ. ಮನೆ ಮುಂದಿನ ಭಾಗದಲ್ಲಿ ಹಜಾರ. ಹಜಾರದಲ್ಲಿ ಹೊಲಿಗೆ ಮಿಷನ್ ಇಟ್ಕೊಂಡು ಹಯಾತ್ ಸಾಬ್ರು ಬಟ್ಟೆ ಹೊಲೀತಾ ಇದ್ದಾರೆ. ಫಾತಿಮಾ ಕಾಜಾ ಹಾಕ್ತಾ ಕೂತಿದ್ದಾಳೆ. ಹುಸೇನ್ ಬೈಕ್ ಇಳಿದು ‘ಬರ್ರಿ ಬರ್ರಿ’ ಎಂದು ನನ್ನ ಕರೆಯುತ್ತಾ ಮುಂದೆ ಹೋದ. ನಾನು ಬರ್ತಿದ್ದೀನೊ ಇಲ್ವೊ ಅಂತಾನೂ ನೋಡ್ಡೆ, ‘ಫಾತಿಮಾ ಇವತ್ತೇನಾಯ್ತು ಗೊತ್ತ?’ ಎಂದು ಮಾತು ಶುರುಮಾಡಿದ. ‘ಏನಾಯ್ತು? ಯಾರಾದ್ರು ಗಲ್ಲಿಗೇರ್ಸು ಅಂತ ನಿಮ್ ಆಪೀಸರ್ ಹೇಳಿದ್ರ?’ ಎಂದು ನಗುತ್ತಾ ಕೇಳಿದಳು ಫಾತಿಮಾ. ‘ಯೇ ಅದಲ್ಲಮ್ಮ’ ಎಂದ ಹುಸೇನ್.

‘ಮತ್ತಿನ್ನೇನು? ನೀನ್ ಹಿಂಗೆಲ್ಲ ಕುಣ್ದಾಡಾದು ಕೆಟ್ಟೋರ್ ಕೊರಳಿಗೆ ನೇಣ್ ಬಿದ್ದಾಗ ತಾನೆ?’

‘ಅದಲ್ಲ ಅಂತ ಹೇಳಿದ್ನಲ್ಲ?’

‘ಅದಲ್ಲ ಅಂದ್ಮ್ಯಾಗೆ ಬ್ಯಾರೆ ಏನೂಂತ ಹೇಳ್ಬಾರ ಭಯ್ಯಾ?’ ಎಂದು ಫಾತಿಮಾ ಒತ್ತಾಯಿಸಿದ ಮೇಲೆ ಹಯಾತ್ ಅದೇ ಧಾಟೀಲಿ ಕೇಳಿದರು:

‘ನೀನ್ ಹೇಳಿದ್ರಲ್ವೇನಪ್ಪ ಗೊತ್ತಾಗಾದು? ಅದೇನಾಯ್ತು ಹೇಳು.’

ಆಗ ಹುಸೇನ್ ನನ್ ಕಡೆ ನೋಡಿದ, ‘ನೀವೇ ಒಸಿ ಸುರು ಮಾಡಿ’ ಎಂದ. ಸರಿ, ನಾನೇ ಶುರು ಮಾಡಿದೆ. ಆನಂತರ ‘ನೀವ್ ಒಸಿ ನಿಲ್ಲಿ’ ಎಂದ ಹುಸೇನ್ ಉಳಿದದ್ದೆಲ್ಲ ತಾನೇ ಪಟಪಟ ಹೇಳಿಬಿಟ್ಟ, ನನಗೇನೂ ಉಳಿಸಲಿಲ್ಲ. ಸಂಭ್ರಮಿಸಿದ ಫಾತಿಮಾ ‘ಇರು ಬಂದೆ’ ಎಂದು ಚಂಗನೆ ಒಳಹೋದವಳು ಅಷ್ಟೇ ಬೇಗ ಚಿಗರೆಯಂತೆ ಹೊರಬಂದಳು. ಜೊತೆಯಲ್ಲಿ ಸಕ್ಕರೆ ತಂದಳು, ಅಣ್ಣನಿಗೆ ‘ಆ’ ಅನ್ನು ಎಂದಳು. ಬಾಯಿತೆಗೆದ ಹುಸೇನ್ಗೆ ಸಕ್ಕರೆ ಹಾಕಿ ಆನಂದಿಸಿದಳು. ಅದನ್ನು ನೋಡ್ತಾ ಇದ್ದ ಹಯಾತ್ ಸಾಬರ ಕಣ್ಣಂಚಲ್ಲಿ ನೀರು ಕಾಣಿಸ್ತು. ಮನುಷ್ಯ ಸಂಬಂಧ ಅಂದ್ರೆ ಇದೇ ಅಲ್ವ ಅಂತ ನಾನೂ ಭಾವುಕನಾದೆ. ‘ನನಿಗ್ ಸಕ್ಕರೆ ಇಲ್ವಾ ಫಾತಿಮಾ?’ ಅಂದೆ. ‘ನಿಮಗೆ ಬಿಸಿ ಬಿಸಿ ಕಾಫಿ’ ಎಂದು ಚಂಗನೆ ಒಳಹೋದಳು.

ಹಯಾತ್ ಸಾಬರಿಗೆ ಆನಂದವಾಗಿತ್ತು. ‘ಎಲ್ರಿಗೂ ಈ ಅದೃಷ್ಟ ಸಿಗೊಲ್ಲಪ್ಪ, ಅನೇಕರು ಏನೇನೊ ಮಾಡಿ ದೊಡ್ಡರ್ ಪಕ್ಕ ಫೋಟೊ ಇಡಿಸ್ಕಂತಾರೆ. ಅವ್ರತಾವ ಒಂದು ಮಾತ್ ಸಯ್ತಾ ಆಡಿರಲ್ಲ, ಆದ್ರೂ ಹತ್ರದೋರು ಅಂತ ಹೇಳ್ಕೊಂಡು ಫೋಟೋನ ದೊಡ್ಡದ್ ಮಾಡಿ ತಗಲಾಕ್ತಾರೆ. ನಿನಗಾದ್ರೆ ಅವ್ರೇ ಹೂಗುಚ್ಚ ಕೊಟ್ಟು, ಮಾತಾಡ್ಸವ್ರೆ.. ಇಬ್ಬರೇ ಇರಂಗೆ ಫೋಟೊ ಇಡ್ದವ್ರೆ, ಸಂತೋಷಾತು ಬೇಟ!’ ಎಂದು ನಿಧಾನವಾಗಿ, ಆದ್ರೆ ಅಲ್ಪವಿರಾಮವೂ ಇಲ್ದಂತೆ ಹೇಳಿಮುಗ್ಸಿದ್ರು. ಇದ್ರಿಂದ ಉತ್ತೇಜಿತನಾದ ಹುಸೇನ್ ಮತ್ತಷ್ಟು ವಿವರ ಕಟ್ಟಿಕೊಟ್ಟ ಸಮತಾಗೂ ರಾಷ್ಟ್ರಪತಿಗಳಿಗೂ ನಡೆದ ಮಾತುಕತೆ ವಿವರಿಸಿದ. ಸಮತಾನ ಏನೋ ಸಂಚುಮಾಡಿ ಜೇಲಿಗ್ ತಂದ್ ಹಾಕಿದಾರೆ ಅನ್ಸುತ್ತೆ ಅಂತಲೂ ಹೇಳಿದ. ಅಷ್ಟರಲ್ಲಿ ಫಾತಿಮಾ ಕಾಫಿ ತಂದಳು. ‘ಮಾತು ನಿಲ್ಸಿ ಕಾಫಿ ಕುಡಿ’ ಎಂದು ಛೇಡಿಸಿದಳು. ‘ಇವತ್ತು ರಾತ್ರಿ ನಮ್ಮನೇಗೆ ಉಂಬಾಕ್ ಬರ್ರಿ’ ಅಂತ ನನಗೆ ಆಹ್ವಾನವಿತ್ತಳು.

‘ಹಂಗೆ ಮಾಡಿ, ಹೆಂಗಿದ್ರೂ ನೀವೂ ಒಬ್ಬಂಟಿ,’ – ಹಯಾತ್ ಮಾತು ಸೇರಿಸಿದರು.

‘ನಾನ್ಯಾಕೆ ಒಬ್ಬಂಟಿ? ನೀವೆಲ್ಲ ಇದ್ದೀರಲ್ಲ? ಕತೆಗಾರರಿಗೆ ಊರೇ ಮನೆ, ಊರೋರೆಲ್ಲ ಬಂಧು ಬಳಗ, ಅಣ್ಣ-ತಂಗಿ ಎಲ್ಲಾ ನೀವೇ…..’ ಹೀಗೆ ಹೇಳ್ತಾ ಮಾತು ನಿಲ್ಲಿಸಿದೆ. ಅಲ್ಲ ಮಾತು ತಾನಾಗಿ ನಿಂತಿತು. ಗಂಟಲು ಗದ್ಗದಿತವಾಯ್ತು, ಕಣ್ಣು ತುಂಬಿಬಂತು. ಇದನ್ನು ಹಯಾತ್ ಸಾಬರು ಗಮನಿಸಿದ್ರು.

‘ಹಂಗೆಲ್ಲ ನೋವ್ತಿನ್ಬ್ಯಾಡಿ, ನೀವು ಕತೆ ಬರ್ಯೋರು, ಮನಸ್ನಾಗೆ ಒಬ್ಬಂಟೀನೂ ಆಗ್ತಿರ. ಎಲ್ರಜತೇನೂ ಇರ್ತೀರ. ನಾವೆಲ್ಲ ನಿಮ್ಮೋರೇ ಅಲ್ವ? ನೀವೇ ಅಂದಂಗೆ ಊರೇ ಮನೆ ಅಲ್ವ?’ ಹಯಾತ್ ಸಾಬರು ಸಮಾಧಾನಿಸಿದರು.

‘ನಿಜ; ಕತೆಗಾರನ ಕಷ್ಟ ಇದು, ಏಕ-ಅನೇಕ ಎರಡೂ ಆಗಿರ್ಬೇಕು…..’ ಎಂದು ನಾನು ಗಂಭಿರವಾಗಿ ಮಾತಾಡಲು ಶುರು ಮಾಡಿದ್ದೇ ತಡ ಫಾತಿಮಾ, ‘ನಿಮ್ ಮಾತ್ನಾಗೆ ನನ್ ಕಾಫಿ ಒಬ್ಬಂಟಿ ಆಗ್ಬಿಡುತ್ತೆ’ ಅನ್ನೋದ? ಎಲ್ಲರಿಗೂ ನಗೆ ಉಕ್ಕಿ ಬಂತು. ಮನಸ್ಸು ಹಗುರವಾಯ್ತು. ಅದೂ ಇದೂ ಮಾತಾಡ್ತ ನಾನು ನಡುವೆ ಹೇಳಿದೆ: ‘ನಾನ್ ಹೇಳಿದ್ ನಿಜ ಆಯ್ತಲ್ವ ಹುಸೇನ್? ನಿನ್ ತಂಗಿ-ತಂದೆ ಇಬ್ರೂ ಕರುಳ ಬಳ್ಳಿ ಜನ ದಾಖಲೆ ಕೇಳಲ್ಲ, ಸಾಕ್ಷ್ಯ ಕೇಳಲ್ಲ ಅಂತ ಹೇಳಿದ್ದೆ ನೋಡು, ಅದ್ರಂತೇನೆ ಆಯ್ತು, ಇವಿಬ್ರೂ ಫೋಟೊ ಎಲ್ಲಿ ಅಂತ ಕೇಳಲೇ ಇಲ್ಲ.’

ಹುಸೇನ್ ಮಾತಾಡಲಿಲ್ಲ, ಆದ್ರೆ ಹಯಾತ್ ಸಾಬರು ಬಿಡಲಿಲ್ಲ: ‘ಈಗ್ಯಾಕ್ ಬಂತು ಈ ಮಾತು? ಇಲ್ಲಿಗ್ ಬರಾಕ್ ಮುಂಚೆ ಯಾರಾದ್ರೂ ಏನಾದ್ರು ಅಂದ್ರ?’ ಎಂದು ಕೇಳಿದ್ರು. ಹುಸೇನ್ ಹೇಳಲೊ ಬೇಡವೊ ಎಂದು ತುಮುಲಕ್ಕೆ ಬಿದ್ದದ್ದು ಕಂಡು ನಾನೇ ಎಲ್ಲಾ ವಿವರಿಸಿದೆ.

ಹಯಾತ್ ಸಾಬರು ಪ್ರತಿಕ್ರಿಯಿಸಲಿಲ್ಲ, ನಸುನಕ್ಕರು, ಅಷ್ಟೆ!

***

ಮಾರನೇ ದಿನ ಹೋಗುವಾಗ, ‘ಇವತ್ತು ಫೋಟೊ ತತ್ತೇನೆ, ಈ ದೊಡ್ಡರ್ಗೆಲ್ಲ ತೋರುಸ್ತೇನೆ’ ಎಂದು ಹೇಳಿ ಹೋದ ಹುಸೇನ್ ನನಗೆ ಸಿಕ್ಕಿದ್ದು ಊರ ಹೊರವಲಯದ ತೋಪಿನಲ್ಲಿ ಒಂದು ಪೊದೆಯ ಮರೆಯಲ್ಲಿ. ನನಗೆ ಆಶ್ಚರ್ಯವಾಯ್ತು. ಪೊದೆ ಮರೆಯಲ್ಲಿಯೇ ಬೈಕ್ ನಿಲ್ಸಿದಾನೆ, ಅವಿತುಕೊಂಡು ಯಾರ್ನೊ ನೋಡ್ತಾ ಇದಾನೆ! ಇದ್ಯಾಕೆ ಹೀಗೆ ಅಂತ ನಾನು ಮೆಲ್ಲಗೆ ಹೋಗಿ ಮೈಮುಟ್ಟಿದೆ. ಬೆಚ್ಚಿಬಿದ್ದು ಹಿಂತಿರುಗಿ ನೋಡಿದ. ‘ಸದ್ಯ ನೀವಾ?’ ಎಂದು ನಿಟ್ಟುಸಿರು ಬಿಟ್ಟ. ‘ಮತ್ತಿನ್ಯಾರು ಅಂದ್ಕಂಡಿದ್ದೆ?’ ಎಂದು ಕೇಳಿದಾಗ, ದೂರಕ್ಕೆ ತೋರಿಸಿದ. ಅಲ್ಲಿ – ಸ್ವಲ್ಪ ದೂರಲ್ಲಿ ಪಟೇಲು ಶಾನುಭೋಗರು- ಮಾತಾಡ್ತಾ ಬರ್ತಿದ್ರು, ‘ಅವ್ರ್ ಬರ್ತಾ ಇದ್ರೆ, ನೀನ್ಯಾಕ್ ಹಿಂಗ್ ಅವಿತ್ಕೊಬೇಕು?’ ಎಂದು ಕೇಳಿದಾಗ, ಆತ ಹೇಳಿದ ಉತ್ತರ: ‘ಅವರು ರಾಷ್ಟ್ರಪತಿ ಜತೆ ಫೋಟೊ ಎಲ್ಲಿ ಅಂತ ಕೇಳ್ಬಿಟ್ರೆ ಅಂತ ಅಳಕು. ಇವತ್ತು ನಮ್ ಆಪೀಸರ್ ಫೋಟೊಕೊಡ್ತೀನಿ ಅಂದಿದ್ರು, ಆದ್ರೆ ಕೊಡ್ಲೆ ಇಲ್ಲ.’

‘ಅದನ್ನೇ ಹೇಳಿದ್ರಾಗಿತ್ತು.’

‘ನೀವೇ ನೆನ್ನೆ ಹೇಳಿದ್ರಲ್ಲ ದಾಖಲೆ ಕೇಳೋರು ಅಂತ? ಇವತ್ತು ಫೋಟೊ ಕೊಡಾಕಾಗ್ಲಿಲ್ಲ, ನಾಳೆ ಕೊಡ್ತೇನೆ ಅಂತ ಆಪೀಸರ್ ತಾವ ಬರಿಸ್ಕಂಡ್ ಬರಾಕಾಯ್ತದ? ಹೇಳಿ ಮತ್ತೆ?’

ನನ್ನ ಮಾತು ನನಗೇ ಬಂದ್ ಬಡೀತು. ನಿಜದ ನುಡಿ ಯಾವಾಗ್ಲೂ ಹೀಗೇನೆ, ಮೊದ್ಲು ನಮ್ಮನ್ನೇ ಜಗ್ಗಿಸ್ ಕೇಳುತ್ತೆ, ನಮ್ಮನ್ನೇ ಒರೆಗಲ್ಲಾಗ್ ಮಾಡ್ಕೊಳ್ಳುತ್ತೆ. ಆದ್ರೂ ನಾನು ಅಷ್ಟಕ್ಕೆ ಸುಮ್ಮನಾಗ್ಲಿಲ್ಲ.

‘ದಾಖಲೆ ಕೇಳ್ತಾರೆ ಅಂತ ಅವಿತೊಳ್ಳಾದುಂಟ? ನೇರವಾಗಿ ಎದ್ರಿಗೇ ಹೇಳ್ಬೇಕು, ನನ್ನ ನಾಲ್ಲೆ ನಂಬ್ತಿರೊ ದಾಖಲೆ ನಂಬ್ತೀರೊ ಅಂತ ಕೇಳ್ಬೇಕು.’

‘ಸರ್ ಸರಿ ಸಣ್ಣದ್ಕೆಲ್ಲ ಎದ್ರು ಬಿದ್ರೆ ನಾವ್ ಸಣೋರಾಗ್ತಿವಿ. ಅದ್ರ ಬದ್ಲು ದೊಡ್ಡೋರ್ ಸಣ್ತನ ನೋಡ್ಕಂಡು ಸುಮ್ಮಿರಾನ.’

ಎಲಾ ಇವ್ನ! ಎಂಥ ಫಿಲಾಸಫಿ ಹೇಳ್ಬಿಟ್ಟ! ಆದ್ರೂ ಮತ್ತೆ ಕೇಳಿದೆ:

‘ಹಾಗಾದ್ರೆ ಈ ದೊಡೋರೆಲ್ಲ ಸಣ್ತನ ತೋರುಸ್ತಾರೆ ಅಂತೀಯೇನು?’

‘ಯಾವತ್ತೂ ಅವ್ರು ಸಣ್ಣದಾಗ್ ನಡ್ಕಂಡೇ ಇಲ್ಲ. ಆದ್ರೆ ಈ ವಿಷ್ಯದಾಗ್ ಯಾಕೊ ನನ್ನ ನಂಬ್ಲಿಲ್ಲ, ಅದಕ್ಕೆ ನನ್ ನಾಲ್ಗೆ ಒಸಿ ಉದ್ದ ಆಯ್ತು.’

‘ಅವ್ರ್ ಹಾಗೆಲ್ಲ ಮಾತಾಡಿದ್ರೆ ಅವ್ರಷ್ಟೇ ಕಾರಣ ಅಲ್ಲ ಹುಸೇನ್, ಅಧಿಕಾರ-ಅಂತಸ್ತು ಅನ್ನೋದು ಇನ್ನೂ ಅಂತಃಕರಣ ಆಗೊ ದಾರೀಲಿದೆ. ಅದಕ್ಕೆ ಅವರೂ ಗೊಂದಲದಾಗಿದಾರೆ.’

‘ಅದೆಲ್ಲ ನನ್ನಂತ ಅಬ್ಬೇಪಾರಿಗೆ ಅರಿವಾಗಾಕಿಲ್ಲ ಬಿಡ್ರಿ. ಎಷ್ಟಾದ್ರೂ ದೊಡೋರ್ ದೊಡ್ಡೋರೇ.’

‘ಸರಿ ಬಿಡು, ಅವರು ಆ ಕಡೆ ಹೋದ್ರು, ಊರೊಳೀಕ್ ಹೋಗೋಣ ಬಾ.’

‘ನಿಮ್ತಾವ್ ಮಾತಾಡಿ ಒಸಿ ಸಮಾಧಾನ ಆತು, ಬರ್ರಿ ಹೋಗಾನ.’

‘ನಡಿ, ಟೀಚರಮ್ಮನ ಮನೇಗ್ ಹೋಗಿ ಒಂದಷ್ಟು ಮಾತಾಡಿದ್ರೆ ನಿಂಗೆ ಮತ್ತಷ್ಟ್ ಸಮಾಧಾನ ಆಗುತ್ತೆ, ನೆನ್ನೆ ನಿಮ್ ಮನೆ ಕಾಫಿ; ಇವತ್ತು ಟೀಚರಮ್ಮನ ಮನೆ ಕಾಫಿ.’

ಅತ್ತಿತ್ತ ನೋಡಿ ಬೈಕ್ ಸ್ಟಾರ್ಟ್ ಮಾಡಿದ.

***

ಟೀಚರಮ್ಮನ ತಾಯಿ ಕಾವೇರಮ್ಮ ತಂದಕೊಟ್ಟ ಕಾಫಿ ಕುಡೀತಾ ಮಾತು ಶುರುವಾಯ್ತು. ಟೀಚರಮ್ಮ ಕೇಳಿದ್ರು; ‘ಯಾಕ್ ಇವತ್ತು ಫೋಟೊ ಸಿಗ್ಲಿಲ್ಲ?’

‘ಅಯ್ಯೋ ಅದೊಂದ್ ಕತೆ ಟೀಚರಮ್ಮ, ಆಪೀಸರು ಅಂದ್ರೆ ದೊಡ್ಡಾರು ನೋಡಿ, ಅವ್ರ್ಗೆ ರಾಷ್ಟ್ರಪತಿ ಪಕ್ಕ ನಿಂತ್ಕಂಡು ಫೋಟೊ ತಗಿಸ್ಕಳ್ಳಾಕ್ ಆಗ್ಲಿಲ್ಲವಲ್ಲ, ಅದಕ್ ಹೊಟ್ಟೆ ಉರಿ ಅನ್ಸುತ್ತೆ, ಫೋಟೊ ಕೊಡುಸ್ರಿ ಸಾರ್ ಅಂದ್ರೆ ಸಾಕು ಎಗ್ರಿಬೀಳ್ತಾರೆ.’-ಅಂತ ಹೇಳ್ತಾ ಹುಸೇನ್ ದೊಡ್ಡವರ ಸಣ್ಣತನವನ್ನು ಸಾದರಪಡ್ಸೋಕ್ ಶುರುಮಾಡ್ಡ.

‘ಫೋಟೊ ತಗುದ್ರಲ್ಲ, ಆತ ಗೊತ್ತಿಲ್ವ ನಿನಗೆ?’- ಟೀಚರಮ್ಮ ಕೇಳಿದ್ರು.

‘ಅವ್ರನ್ ಕರ್ಸಿದ್ದೂ ಆಪೀಸರ್ರೆ ಅಲ್ವ? ನಾವ್ ಕೇಳಿದ್ರೆ ಕೋಡ್ತಾರ ಅವ್ರು?’

‘ಹಾಗಾದ್ರೆ ಯಾವತ್ತೂ ಕೊಡೋದೇ ಇಲ್ವ ನಿಮ್ ಆಪೀಸರ್ರು?’

‘ಕೊಡ್ಡೆ ಏನು ಖಾರ ಅರ್ಕಂಡ್ ಕುಂತಿರ್ತಾರ ಟೀಚರಮ್ಮ? ನಾಳೆ ಆ ರೌಡಿ ರಾಜೇಶನ್ನ ಗಲ್ಲಿಗ್ ಹಾಕ್ಬೇಕಂತೆ, ಮದ್ಲು ಆ ಕೆಲ್ಸ ಮುಗ್ಸು, ಆಮೇಲೆ ಫೋಟೊಕೊಟ್ರಾತು ಅಂತ ಕೆಕ್ಕರಿಸ್ಕಂಡ್ ಹೇಳಿದ್ರು,’

ರೌಡಿ ರಾಜೇಶ್! ನನ್ನ ನೆನಪು ಚಿಮ್ಮಿ ಬಂತು, ಇತ್ತೀಚೆಗೆ ಪತ್ರಿಕೆಗಳಲ್ಲಿ ಆತನ ಸುದ್ದಿ ಸಾಕಷ್ಟು ಬಂದಿತ್ತು, ದೊಡ್ ದೊಡ್ ರಾಜಕಾರಣಿಗಳ ಬಂಟ ಅಂತಾನೂ ವರದಿ ಆಗಿತ್ತು. ಸುಪಾರಿ ಕೊಲೆಗಾರ ಅಂತಾನೇ ಈತ ಪ್ರಸಿದ್ದಿ. ಹೇಗೊ ಬಚಾವ್ ಆಗ್ತಾ ಬದುಕ್ತಿದ್ದ. ಈತನ್ನ ಬಳಿಸ್ಕೊಂಡೋರ್ ಕೈ ಬಿಟ್ರು ಅಂತಾನೊ ಏನೊ ಜೈಲ್ ಸೇರ್ದ. ಕೊಲೆಗಾರ ಅಂತ ಕೋರ್ಟ್ ತೀರ್ಪುಕೊಟ್ಟು ಮರಣದಂಡನೆ ವಿಧಿಸ್ತು. ಅಪೀಲ್ ಹೋಗೋಕು ಆಗಲಿಲ್ಲ. ಯಾಕೆ ಅಂದ್ರೆ ಬಳಿಸ್ಕಂಡೋರ್ ಯಾರೂ ಮುಂದೆ ಬರ್ಲಿಲ್ಲ! ಸತ್ತರೂ ಸಾಯ್ಲಿ ಅಂತ ಸುಮ್ಮನಾದ್ರು ಅಂತ ಸುದ್ದಿ. ಆತನಿಗೀಗ ನಾಳೆ ಗಲ್ಲುಶಿಕ್ಷೆ! ನೇಣು ಹಾಕೋದು ನಮ್ ಹುಸೇನ್!

‘ಎಷ್ಟು ಹೊತ್ತಿಗೆ?’ ಅಂತ ಕೇಳಿದೆ.

‘ಇನ್ನು ಎಷ್ಟು ಹೊತ್ತಿಗೆ? ಬೆಳಿಗ್ಗೆ. ಯಾವಾಗೂ ಗಲ್ಲಿಗೇರ್ಸಾದು ಬೆಳಿಗ್ಗೆ ಹೊತ್ತೇ, ಅಲ್ವ? ಇವತ್ತೇ ಉಳಿದ್ಕೆಲ್ಸ ಎಲ್ಲಾ ಮುಗ್ಸಿರ್ತಾರೆ.’- ಹುಸೇನ್ ಹೇಳಿದ.

‘ಉಳಿದ್ ಕೆಲ್ಸ ಅಂದ್ರೆ?’

‘ಆತಂಗ್ ವಿಸ್ಯ ತಿಳ್ಸಾದು, ಆತನ್ ಮನೆಯವ್ರಿಗ್ ತಿಳ್ಸಾದು – ಇವೆಲ್ಲಾ ಇರುತ್ತಲ್ಲ, ನಾನೂ ಹಗ್ಗಕ್ಕೆ ಬೆಣ್ಣೆ ಹಚ್ಚಿ ರೆಡಿ ಮಾಡಿಟ್ಟಿವ್ನಿ’

`ಬೆಣ್ಣೆ?’

‘ಹೂ ಮತ್ತೆ; ಅದೇನೊ ವ್ಯಾಕ್ಸೋ ಗೀಕ್ಸೊ ಅಂತಾರಲ್ಲ, ಅದನ್ನ ಹಚ್ಬೇಕು; ಇಲ್ಲ ಬೆಣ್ಣೆ ಹಚ್ಚಿ ಸವರೇಕು, ಎಲ್ಲಾ ರೆಡಿ ಮಾಡಿವ್ನಿ, ಎಷ್ಟು ಜನ ಸಾಯ್ಸಿದ್ನೋ ಅವ್ನು, ನಾಳೆ ನನ್ ಕೈಯ್ಯಾಗ್ ಸಾಯ್ತಾನೆ, ಸಾಯ್ಲಿ ಬಿಡಿ’.

ಒಂದು ನಿಮಿಷ ಮೌನ. ಯಾರೂ ಮಾತಾಡ್ಲಿಲ್ಲ; ಕಡೆಗೆ ಹುಸೇನೇ ಮಾತಾಡ್ದ.

‘ಯಾಕ್ ಸುಮ್ನೆ ಕುಂತ್ಕಂಡ್ರಿ? ಸಾವು ಅಂದ್ರೆ ಸುಮ್ನಾಗ್ಬಿಡಾದ? ಯಾರ್ ಸಾವು, ಎಂಥ ಸಾವು, ಯಾಕ್ ಸಾವು ಅಂತ ಕೇಳ್ಕೊಬೇಕಲ್ವ? ರೌಡಿ ರಾಜೇಶ ಏನ್ ಕಡ್ಮೆ ಆಸಾಮೀನ? ನಂಗೇ ಕೋಟಿ ಕೊಡ್ತೀನಿ ಅಂದಿದ್ದ.’

ಎಲ್ಲರ ಮುಖದಲ್ಲಿ ಕುತೂಹಲ, ಹುಸೇನ್ ಕಡೆ ನೋಡಿದ್ರು.

‘ಕೋಟಿ ಕೊಡ್ತಿದ್ನೊ ಬಿಡ್ತಿದ್ನೊ, ಒಂದ್ ಸಾರಿ ನಂಗೇಳ್ದ- ಹೆಂಗಾರ ತಪ್ಪಿಸ್ಕಳ್ಳೋ ದಾರಿತೋರ್ಸು, ನಿಂಗ್ ಕೋಟಿ ರೂಪಾಯ್ ಬೇಕಾದ್ರು ಕೊಡ್ತೀನಿ. ನೀನ್ ಇದ್ಕಡೆ ದುಡ್ ಬಂದ್ ಬೀಳ್ತೈತೆ- ಅಂದ. ಅನ್ನ ಕೊಡೊ ಕೆಲ್ಸಕ್ಕೆ ಕನ್ನಹಾಕೊ ಬುದ್ದಿ ನಂಗಿಲ್ಲ ಅಂದ್ಬಿಟ್ಟೆ’

ಹುಸೇನ್ ಬಗ್ಗೆ ಹೆಮ್ಮೆ ಅನ್ನಿಸ್ತು. ಎಲ್ಲರ ಮುಖದಲ್ಲೂ ಹೆಮ್ಮೆಯ ಭಾವ ಮಿಂಚಂತೆ ಬಂತು.

‘ನಿಂಗೆ ಅವ್ರ್ ಜತೆ ಮಾತಾಡೋಕೆಲ್ಲ ಅವಾಶ ಕೊಡ್ತಾರ?’

‘ನನ್ ಮೇಲೆ ನಂಬ್ಕೆ ಜಾಸ್ತಿ, ನಾನ್ ಎಲ್ ಓಡಾಡಿದ್ರು ಯಾರೂ ಕೇಳಲ್ಲ. ಅವ್ನು ಈ ಮಾತು ಕೇಳಿದ್ದು ಕೋರ್ಟು ಮರಣದಂಡನೆ ವಿಧಿಸೋಕ್ ಮುಂಚೆ, ನಾನು ಅವ್ನ್ ಸೆಲ್ತಾವ ಹೋಗ್ತಾ ಇದ್ದಾಗ ಕರ್ದು ಕೇಳಿದ್ದ.’

‘ಮರಣದಂಡನೆ ವಿಧಿಸೋಕ್ ಮುಂಚೆ ಅಂತ ಯಾಕ್ ಪ್ರತ್ಯೇಕವಾಗ್ ಹೇಳ್ದೆ.’

‘ಮರಣದಂಡನೆ ಅಂತ ಆದ್ಮೇಲೆ ಸೆಲ್ ಮುಂದೆ ಕಾವಲಿಗೆ ಸೆಂಟ್ರಿ ಹಾಕ್ತಾರೆ.

ಎರಡು ಗಂಟೆಗೊಂನ್ಸಾರಿ ಸೆಂಟ್ರೀನ ಬದಲಾಯಿಸ್ತಾರೆ. ಇದು ಕಾನೂನು. ನನ್ನನ್ನು ಕರ್ದು ಕೇಳ್ವಾಗ ಅಲ್ಲಿ ಸೆಂಟ್ರಿ ಹಾಕಿರ್ಲಿಲ್ವಲ್ಲ, ಅದಕ್ಕೆ ಮರಣದಂಡನೆ ವಿಧಿಸೋಕ್ ಮುಂಚೆ ಅಂತ ಹೇಳಿದ್ದು.’

‘ನಿನ್ನಿಂದ ಸಾಕಷ್ಟು ವಿಷ್ಯ ಗೊತ್ತಾಯ್ತು ಹುಸೇನ್. ನಾನಿನ್ ಬರ್ತೀನಿ.’

ತಕ್ಷಣ ಕಾವೇರಮ್ಮ ಹೇಳಿದ್ರು : ‘ಇರಪ್ಪ, ಒಂದೇ ಸಾರಿ ಉಂಡ್ಕಂಡ್ ಹೋಗು.’

ಟೀಚರಮ್ಮ ದನಿಗೂಡ್ಸಿದ್ರು; ‘ಹೌದು ಇವತ್ತಿಲ್ಲೇ ಊಟಮಾಡಿ. ನಮ್ಮನೇಲ್ ಊಟಮಾಡಿ ಆಗ್ಲೆ ಹದಿನೈದು ದಿನವಾಯ್ತು.’

‘ನನ್ ಊಟಾನ ನಾನೇ ಅಡುಗೆ ಮಾಡ್ಕಂಡ್ ಉಂಡ್ರೆ ಚೆಂದ’ ಅಂತ ನಾನು ಹೇಳೋಕ್ ಶುರು ಮಾಡಿದ್ ಕೂಡ್ಲೆ ‘ಕತೆಗಾರರು ಸ್ವಂತ ಅಡಿಗೆ ರುಚೀನೂ ಅನುಭವಿಸ್ಬೇಕು, ಕಂಡೋರ್ ಅಡಿಗೆ ರುಚೀನೂ ಅನುಭವಿಸ್ಬೇಕು. ಒಂದೇ ರುಚಿ ಅಂದ್ರೆ ಏಕ ಆಗುತ್ತೆ; ಅನೇಕ ಆಗೊಲ್ಲ, ಎಚ್ಚರ ಇರ್ಲಿ’ ಎಂದು ಟೀಚರಮ್ಮ ತಮಾಷೆ ದಾಟೀಲೆ ಮೀಮಾಂಸೆ ಮಂಡಿಸ್ದಾಗ ಮೌನವಲ್ಲದೆ ಇನ್ನೇನು ಸಾಧ್ಯ?’

ಹುಸೇನ್, ‘ನನ್ ತಂಗಿ ಕಾಯ್ತಾ ಇರ್ತಾಳೆ’ ಎಂದು ಹೊರಟು ನಿಂತ.

‘ನಿನ್ ತಂಗಿ ಫೋಟೊ ಕೇಳೊದಿಲ್ಲ, ಧೈರ್ಯವಾಗಿರು’ ಅಂತ ನಾನು ತಮಾಷೆ ಮಾಡಿದೆ.

ಎಲ್ಲರೂ ಬಾಯ್ತುಂಬ ನಕ್ಕರು.

*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...