Home / ಕಥೆ / ಕಾದಂಬರಿ / ಮರಣದಂಡನೆ – ೫

ಮರಣದಂಡನೆ – ೫

ಹುಸೇನ್ ಸಂಭ್ರಮದಲ್ಲಿ ಊರಿಗೆ ಬಂದ. ಮುಖ್ಯಮಂತ್ರಿಗಳ ಸಂದರ್ಶನಕ್ಕೆ ಸಮಯ ಕೊಡಿಸಿದ ಹೆಮ್ಮೆ ಆತನದು. ಗೆಸ್ಟ್ ಹೌಸ್ ಹತ್ತಿರ ರಷೀದ್ ಮತ್ತು ಗೆಳೆಯರನ್ನು ತಲುಪಿಸಿದಾಗ ಅವರು ‘ನೀನು ಹೋಗು’ ಎಂದು ಒತ್ತಾಯಿಸಿದರಂತೆ. ‘ಸಾಧ್ಯವಾದ್ರೆ ಊರಿಗ್ ಬರ್ತೇವೆ. ಇಲ್ದಿದ್ರೆ ಹೀಗೇ ಹೋಗ್ತವೆ. ಬೇಗ ಎಲ್ಲಾ ಕಡೆ ಸುದ್ದಿ ಕಳುಸ್ಬೇಕು’ ಅಂತಾನೂ ಹೇಳಿದ್ರಂತೆ. ಒಟ್ಟಿನಲ್ಲಿ ಎಲ್ಲಾ ವಿವರ ಹೇಳ್ತಾನೇ ಪದಗಳು ಸಿಗದಷ್ಟು ಸಂತೋಷದಲ್ಲಿದ್ದ ಹುಸೇನ್ ‘ಫಾತಿಮಾ, ಕಾಫಿ ಕೊಡಮ್ಮ’ ಎಂದ. ಕಾಫಿ ಕೊಡುವಂತೆ ಕೇಳುವ ರೀತಿಯಲ್ಲೇ ಒಳಗಿನ ಸಂತೋಷ ಕುಣೀತಿತ್ತು. ಹಯಾತ್ ಸಾಬರು ಮಾತನಾಡದೆ ಮಗನನ್ನು ಗಮನಿಸುತ್ತಿದ್ದರು. ಹುಸೇನ್ ತನ್ನನ್ನು ಮೊದಲು ಅಧಿಕಾರಿಗಳು ಕಾಣ್ತಾ ಇದ್ದ ರೀತಿ, ಈಗ ಕಾಣ್ತಾ ಇರೊ ರೀತಿ ಎಲ್ಲವನ್ನೂ ಸಾದ್ಯಂತವಾಗಿ ವಿವರಿಸ್ತಾ ತನ್ನ ಕಿಮ್ಮತ್ತು ಹೆಚ್ಚಾಗಿರುವುದನ್ನು ಮನವರಿಕೆ ಮಾಡುಸ್ತಾ ಹೋದ. ಫಾತಿಮಾ ಕಾಫಿ ಕೊಡುತ್ತಾ, ‘ಈಗ ಮಾತು ಸಾಕು. ಕಾಫಿ ಕುಡಿ’ ಎಂದು ತಮಾಷೆ ಮಾಡಿದಳು. ‘ಮಾತಾಡ್ಲಿ ಬಿಡು ಫಾತಿಮಾ’ ಎಂದು ನಾನೇ ಹುಸೇನ್ ಪಕ್ಷ ವಹಿಸಿದೆ. ಫಾತಿಮಾ ಪಟ್ಟು ಬಿಡಲಿಲ್ಲ, ‘ಮೊದ್ಲು ಕಾಫಿ ಕುಡೀಲಿ. ಆಮೇಲ್ ಮಾತಾಡ್ಲಿ’ ಎಂದಳು. ಹುಸೇನ್ ‘ಆಯ್ತಮ್ಮ ಆಯ್ತು’ ಎಂದು ಕಾಫಿ ಕುಡಿಯಲು ಆರಂಭಿಸಿದ.

ನಾನೂ ಕಾಫಿ ಕುಡೀತಾ ಬೀದಿ ಕಡೆ ಕಣ್ಣು ಹಾಯಿಸಿದೆ. ಟೀಚರಮ್ಮ ರಭಸವಾಗಿ ಬರ್ತಾ ಇದ್ರು, ಅದು ಅವರ ಸಹಜ ನಡಿಗೆ ಅಲ್ಲ. ಅವರು ಹತ್ರ ಬರ್ತಾ ಇದ್ದಂತೆ ನಡಿಗೆಯಲ್ಲಿ, ಮುಖದಲ್ಲಿ ಗಾಬರಿ ಕಾಣಿಸ್ತು. ಬಂದವರೇ ಅವರು ಹೇಳಿದ್ದು: ‘ಮುಖ್ಯಮಂತ್ರಿ ಸತ್ತರು!’

ನಮಗೆಲ್ಲ ದಿಗ್ಭ್ರಮೆ! ಮುಖವೇ ಮಾತಾಗಿ ನೋಡಿದೆವು! ‘ಹೌದು. ಈಗ ಟಿ.ವಿ. ನ್ಯೂಸ್ ಬಂತು. ಸುರಕ್ಷಾ ಗೆಸ್ಟ್ ಹೌಸ್ಗೆ ಬಾಂಬ್ ಇಟ್ಟಿದ್ರಂತೆ. ಇಂಟರ್ವ್ಯೂ ಮಾಡೋಕ್ ಹೋಗಿದ್ರಲ್ಲ ರಷೀದ್- ಅವ್ರ ತಂಡದ್ದೇ ಕೃತ್ಯ ಅಂತೆ. ಎಂಥ ಕೆಲ್ಸ ಆಯ್ತು’-ಟೀಚರಮ್ಮ ಉಸಿರುಕಟ್ಟಿ ಹೇಳಿದರು.

ಹಯಾತ್ ಸಾಬರು ‘ಯೇ ಅಲ್ಲಾ!’ ಎಂದವರು ಮತ್ತೆ ಮಾತಾಡದೆ ದಿಗ್ರ್ಭಾಂತರಾಗಿ ಕೂತರು. ಫಾತಿಮಾ ಗಾಬರಿಗೊಂಡು ಹುಸೇನ್ ಕಡೆ ನೋಡಿದಳು. ಹುಸೇನ್ ತಲ್ಲಣಿಸಿ ಹೋಗಿದ್ದ. ರಷೀದ್ನ ನಡೆ-ನುಡಿಗಳು ನನ್ನೊಳಗೆ ನುಗ್ಗಿ ಬೇರೆ ಅರ್ಥಕೊಡ ತೊಡಗಿದವು. ಟೀಚರಮ್ಮ ದಿಕ್ಕು ಕಾಣದ ದೃಷ್ಟಿಯಲ್ಲಿದ್ದರು.

ಅಷ್ಟರಲ್ಲಿ ಒಂದು ಪೋಲೀಸ್ ವ್ಯಾನ್ ಮತ್ತು ಕಾರು ಬಂದವು. ಅವುಗಳನ್ನೇ ಅನುಸರಿಸಿ ಹಳ್ಳಿ ಮಕ್ಕಳು ಓಡಿ ಬರುತ್ತಿದ್ದರು. ನಾವಿದ್ದಲ್ಲಿಗೆ ಬಂದು ವ್ಯಾನ್ ಮತ್ತು ಕಾರು ನಿಂತಾಗ ಅಕ್ಕಪಕ್ಕದವರೆಲ್ಲ ಗಾಬರಿಗೊಂಡು ಹೊರ ಬಂದರು. ವ್ಯಾನ್ನಿಂದ ಇಳಿದ ಪೋಲೀಸ್ ಪಡೆ ಹಯಾತ್ ಸಾಬರ ಮನೆ ಮುಂದೆ ಜಮಾಯಿಸಿತು. ಕಾರಿನಿಂದ ಪೋಲೀಸ್ ಆಫೀಸರ್ ಮತ್ತು ಜೈಲ್ ಆಫೀಸರ್ ಇಳಿದು ಬಂದರು. ನಾವೆಲ್ಲ ಏನಾಗುತ್ತಿದೆಯೆಂದು ತಿಳಿಯದೆ ಸ್ತಂಭಿತರಾಗಿ ನಿಂತಿದ್ದೆವು. ಜೈಲು ಅಧಿಕಾರಿಯು ಹುಸೇನ್ ಕಡೆ ತೋರಿಸಿ ‘ಇವ್ನೇ ಸಾರ್ ಹುಸೇನ್’ ಎಂದರು. ಪೋಲೀಸ್ ಆಫೀಸರ್ ತಮ್ಮ ಪಡೆಗೆ ಆಜ್ಞಾಪಿಸಿದರು: ‘ಅರೆಸ್ಟ್ ಮಾಡಿ’.

ಅರೆಸ್ಟ್! ಹುಸೇನ್ ಅರೆಸ್ಟ್! ನನಗೆ ರಷೀದ್ ಸಂಚಿನ ಸತ್ಯ ಅರಿವಾಗ್ತಾ ಬಂತು. ಫಾತಿಮಾ ಕಿರುಚಿದಳು: ‘ಯಾಕೆ ಯಾಕ್ ಅರೆಸ್ಟ್ ಮಾಡ್ತೀರ ನಮ್ಮಣ್ಣನ್ನ, ಬ್ಯಾಡ, ಬ್ಯಾಡ.’

ಟೀಚರಮ್ಮ ಕೇಳಿದರು: ‘ಅರೆಸ್ಟ್ ಮಾಡೋಕ್ ಮುಂಚೆ ಕಾರಣ ಹೇಳಿ ಸಾರ್.’

‘ರಷೀದ್ಗೆ ಮುಖ್ಯಮಂತ್ರಿಗಳ ಸಮಯ ಕೊಡ್ಸಿದ್ದು ಈ ಹುಸೇನ್. ರಷೀದ್ ತಂಡ ಸೇಡು ತೀರಿಸ್ಕೊಳ್ಳೋಕೆ ಅಂತಲೇ ಸಂಚು ಮಾಡಿದೆ. ಅಬ್ದುಲ್ ರಜಾಕ್ನ ಹಿಡಿದಿದ್ದಕ್ಕೆ ಪ್ರತೀಕಾರ ತೀರಿಸ್ಕೊಂಡಿದೆ. ಇದಕ್ಕೆಲ್ಲ ಸಹಾಯ ಮಾಡಿದ್ದೂ, ಸಂಚಿನ ರೂವಾರಿ ಆಗಿದ್ದು ಈ ಹುಸೇನ್’ – ಪೋಲೀಸ್ ಆಫೀಸರ್ ವಿವರಿಸಿದರು.

‘ಇಲ್ಲ, ಇದೆಲ್ಲ ನಂಗೇನೂ ಗೊತ್ತಿಲ್ಲ. ನಂಗೇನೂ ಗೊತ್ತಿಲ್ಲ’ – ಹುಸೇನ್ ತಲ್ಲಣಿಸಿ ಹೇಳಿದ.

‘ಗೊತ್ತಿಲ್ದೆ ಇಷ್ಟೆಲ್ಲ ಆಗಲ್ಲ ಕಣಯ್ಯ ಮುಖ್ಯಮಂತ್ರಿ ಮಗಳ ವಿಶ್ವಾಸಾನ ನೀನು ದುರುಪಯೋಗಪಡಿಸ್ಕೊಂಡಿದ್ದೀಯ. ರಷೀದ್ ಜೊತೆ ಸೇರಿ ಸಂಚು ಮಾಡಿದ್ದೀಯ.’

ಮತ್ತದೇ ಮಾತು.

‘ರಷೀದ್ ತಂಡಾನ ಹಿಡೀಬೇಕಿತ್ತು ಸಾರ್’ ಟೀಚರಮ್ಮನ ಕಳವಳದ ನುಡಿ.

‘ಅದನ್ನ ನಿಮ್ಮಿಂದ ಹೇಳಿಸ್ಕೊಳ್ಬೇಕಾಗಿಲ್ಲ. ಅವ್ರೀಗ ತಪ್ಪಿಸ್ಕೊಂಡಿದಾರೆ. ಇವ್ನ್ಗೊದ್ದು ಒಳೀಕ್ ಹಾಕಿದ್ರೆ ಎಲ್ಲಾ ಗೊತ್ತಾಗುತ್ತೆ.’

ಅಷ್ಟರಲ್ಲಿ ಪಟೇಲರು, ಶಾನುಭೋಗರು ದೌಡಾಯಿಸಿ ಬಂದರು. ವಿಷಯ ಗೊತ್ತಾಗಿ ಹುಸೇನ್ ಪರ ವಾದಿಸಿದರು. ‘ನೋಡಿ ಸ್ವಾಮೇರ, ಈ ಹುಸೇನ್ ನಮ್ಮೂರ್ ಹುಡ್ಗ. ಇವ್ನಿಗೆ ನಮ್ಮ ದೇಶಾನೇ ದೇವರು. ಇಂಥೋನು ಅಂಥ ಕೆಲ್ಸ ಮಾಡಿರಲ್ಲ.’ ಎಂದು ಪಟೇಲರು ಪ್ರತಿಪಾದಿಸಿದರೆ, ಶಾನುಭೋಗರು, ‘ಹುಸೇನ್ಗಿಂತ ದೊಡ್ಡ ದೇಶಭಕ್ತ ನಮಿಗ್ ಸಿಗೋದಿಲ್ಲ. ಆ ರಷೀದ್ ತಂಡ ಈತನ್ನ ಬಲಿಪಶು ಮಾಡಿದೆ. ಈತ ತುಂಬಾ ಮುಗ್ಧ ಸಾರ್’ ಎಂದು ವಿವರಿಸಿದರು. ನನಗೂ ಸುಮ್ಮನಿರಲಾಗಲಿಲ್ಲ. ‘ನೋಡಿ ಸಾರ್, ಈ ಹುಸೇನ್ ತಂದೆ ಈ ಹಯಾತ್ ಸಾಬ್ರು ಗಾಂಧಿ, ಅಂಬೇಡ್ಕರ್, ಮೌಲಾನ ಎಲ್ಲನ್ನೂ ತಿಳ್ಕೊಂಡಿರೊ ಮನುಷ್ಯ. ಇವ್ರ ಗರಡೀಲ್ ಬೆಳ್ದಿರೊ ಹುಸೇನ್ಗೆ ಕಪಟ ಗೊತ್ತಿಲ್ಲ. ಭಯೋತ್ಪಾದಕನ ಕೊರಳಿಗೆ ನೇಣು ಹಾಕಿ ಅದೆಷ್ಟು ಸಂಭ್ರಮಿಸ್ಥಾ ಅಂತ ನನಿಗ್ ಗೊತ್ತು’ – ಹೀಗೆ ಹೇಳುತ್ತಿರುವಾಗ, ‘ಕೋರ್ಟಲ್ ಹೇಳೋದ್ನ ಖಾಕಿ ಮುಂದ್ ಹೇಳ್ಬೇಡಿ’ ಎಂದು ಪೋಲೀಸ್ ಆಫೀಸರ್ ಖಂಡತುಂಡವಾಗಿ ನುಡಿದು ಹುಸೇನ್ ಕೈಗೆ ಕೋಳ ತೊಡಿಸಲು ಪೋಲೀಸರಿಗೆ ಹೇಳಿದರು. ನಾನು ತಡೆದು ಹೇಳಿದೆ: ‘ದಯವಿಟ್ಟು ಕೋಳ ತೊಡುಸ್ಬೇಡಿ’

ಪೋಲೀಸ್ ಆಫೀಸರ್ ಹೇಳಿದ: ‘ನಮಗೆ ಕೋಳ ತೊಡ್ಸೋದ್ ಗೊತ್ತು. ಕಡಗ ತೊಡ್ಸೋದ್ ಗೊತ್ತಿಲ್ಲ.’

ಕಡೆಗೂ ಕೋಳ ತೊಡಿಸಿ ಹುಸೇನ್ನನ್ನು ವ್ಯಾನ್ ಹತ್ತಿಸಿದರು. ಹುಸೇನ್ಗೆ ಮಾತು ಬಿದ್ದು ಹೋಗಿತ್ತು. ಕಣ್ಣು ತುಂಬಿಕೊಂಡಿತ್ತು. ಫಾತಿಮಾ ಹಯಾತ್ ಸಾಬರನ್ನು ಹಿಡಿದುಕೊಂಡು ಗೋಳಾಡಿದಳು. ಹಯಾತ್ ಸಾಬರು ಶೂನ್ಯಕ್ಕೆ ತಲುಪಿದಂತೆ ನಿಂತಿದ್ದರು. ಪೋಲೀಸ್ ವ್ಯಾನ್ ಹೋದ ಕೂಡಲೇ ಹಯಾತ್ ಸಾಬರು ‘ಯೇ ಅಲ್ಲಾ!’ ಎಂದು ಕುಸಿದು ಕೂತರು. ಟೀಚರಮ್ಮ ಫಾತಿಮಾಳನ್ನು ಒಳಗೆ ಕರೆದೊಯ್ದರು. ಪಟೇಲರು ಮತ್ತು ಶಾನುಭೋಗರು ಹಯಾತ್ ಸಾಬರ ಬಳಿಗೆ ಬಂದು, ‘ಹೆದ್ರಬೇಡ ಹಯಾತ್- ನಾವ್ ನಿನ್ ಜೊತೆ ಇದ್ದೀವಿ. ನೀನ್ ಒಂಟಿ ಅಲ್ಲ’ ಎಂದರು.

ಊರಿಗೆ ಊರೇ ಮೌನ ಬಡಿದು ಮಂಕಾಗಿತ್ತು. ನಿಧಾನವಾಗಿ ಕತ್ತಲು ಆವರಿಸಿತು. ಕತ್ತಲಲ್ಲಿ ದಾರಿ ಕಾಣದ ಕಣ್ಣುಗಳು ಕಳವಳದಿಂದ ಕಂಗೆಟ್ಟು ಕೂತಿದ್ದವು. ಕಳವಳದ ಕತ್ತಲಲ್ಲಿ ನಾನೂ ಕರಗಿ ಹೋಗುತ್ತಿರುವಾಗ ಒಂದು ಕಾರಿನ ಬೆಳಕು ಕಾಣಿಸಿತು. ಎಲ್ಲರಿಗೂ ಮತ್ತೆ ಗಾಬರಿ. ಇನ್ನು ಯಾರನ್ನು ಹಿಡಿಯಲು ಬರುತ್ತಿದ್ದಾರೊ ಆ ಪೋಲೀಸರು ಅನ್ನೋ ಆತಂಕ. ಹಯಾತ್ ಸಾಬ್ ತಂಗಿಯ ಮಗ ರಷೀದ್ನ ಕೃತ್ಯ ಎಂದು ಕಾರಣ ತೋರಿಸಿ ಹಯಾತ್ ಸಾಬರನ್ನೇ ಅರೆಸ್ಟ್ ಮಾಡಲು ಬಂದಿದ್ದರೆ?

ಇಲ್ಲ; ಹಾಗಾಗಲಿಲ್ಲ. ಕಾರಲ್ಲಿ ಬಂದವರು ಸಮತಾ ಮತ್ತು ತಂಡದವರು. ವಿಷಯ ಗೊತ್ತಾಗಿ ತಕ್ಷಣ ಬಂದಿದ್ದಾರೆ. ಬಂದವರೇ ಟೀಚರಮ್ಮನಿಂದ ಎಲ್ಲಾ ವಿಷಯ ತಿಳಿದುಕೊಂಡರು. ಇಲ್ಲಿಗೆ ಬರೋಕೆ ಮುಂಚೆ ಸುಶೀಲಾರನ್ನ ಭೇಟಿ ಮಾಡಿ ಬಂದಿರೋದನ್ನೂ ಹೇಳಿದರು. ಸುಶೀಲಾ ‘ಹುಸೇನ್ ಅನ್ಯಾಯ ಮಾಡ್ದ’ ಎಂದೇ ಹೇಳಿದ್ರಂತೆ. ಸಮತಾ ‘ಹಾಗಲ್ಲ’ ಅಂತ ಸಮಾಧಾನ ಮಾಡೋಕ್ ಹೋದ್ರೆ ‘ನೀವೆಲ್ಲ ಒಂದೇ’ ಎಂದು ಆರೋಪಿಸಿದರಂತೆ. ಪರಸ್ಪರ ಮಾತುಕತೆ ಮುಗಿದ ಮೇಲೆ ‘ಮುಂದೇನು?’ ಅನ್ನೊ ಪ್ರಶ್ನೆ. ಸಮತಾ ಹೇಳಿದ್ದು ಹೀಗೆ: ‘ನಾವು ಕಾನೂನು ಹೋರಾಟಾನೂ ನಡುಸ್ಬೇಕು. ಜೊತೆಗೆ ಅಮಾಯಕನನ್ನ ಅರೆಸ್ಟ್ ಮಾಡಲಾಗಿದೆ ಅಂತ ಜನಕ್ಕೆ ಮನವರಿಕೇನೂ ಮಾಡ್ಕೊಡ್ಬೇಕು. ಇದು ಎರಡು ರೀತಿ ಹೋರಾಟ.’

ಪಟೇಲರು ಒಂದೇ ಮಾತು ಹೇಳಿದ್ರು; ‘ಎರಡು ರೀತೀನೊ ಮೂರು ರೀತೀನೊ, ನಮ್ದಂತೂ ಒಂದೇ ರೀತಿ, ಹುಸೇನ್ ಬಿಡುಗಡೆ ಆಗ್ಬೇಕು ಅನ್ನೊದೊಂದೇ ನಮ್ ಮಾತು.’ ಶಾನುಭೋಗರೂ ಇದಕ್ಕೆ ದನಿಗೂಡಿಸಿ, ‘ಕಾನೂನು ಹೋರಾಟಕ್ಕೆ ಬೇಕಾದ್ರೆ ನನ್ನ ನೆಂಟ ಒಬ್ಬ ಲಾಯರ್ ಇದಾನೆ; ಹೇಳ್ತಿನಿ’ ಎಂದು ಸೂಚಿಸಿದ್ರು. ಪಟೇಲರು ‘ದುಡ್ಡಿಗೆ ಯೋಚ್ನೆ ಮಾಡಾದ್ ಬ್ಯಾಡ. ನಾನ್ ಕೊಡ್ತೀನಿ. ನಿಮ್ ಸಹಾಯಕ್ಕೆ ನಮ್ ಟೀಚರಮ್ಮನ್ ಕಳುಸ್ತೀವಿ. ಕೋರ್ಟು ಗೀರ್ಟು ಎಲ್ಲಾ ನೀವೇ ನೋಡ್ಕಳಿ’ ಎಂದು ಸಮತಾಗೆ ಹೇಳಿದರು. ಸಮತಾ ನಿರ್ಧರಿಸಿಯೇ ಬಂದಿದ್ದರು. ‘ಹುಸೇನ್ ಬಿಡುಗಡೆ ಆಗೋವರೆಗೆ ನಮಗ್ ವಿಶ್ರಾಂತಿ ಇಲ್ಲ’ ಎಂದು ಒಂದೇ ಮಾತಲ್ಲಿ ಎಲ್ಲವನ್ನೂ ಹೇಳಿದರು.

***

ಮುಖ್ಯಮಂತ್ರಿಗಳು ಭಯೋತ್ಪಾದನಾ ಕೃತ್ಯಕ್ಕೆ ಬಲಿಯಾದದ್ದು, ಹುಸೇನ್ ಬಂಧನವಾದದ್ದು ದೊಡ್ಡ ಸುದ್ದಿಯಾಯ್ತು. ‘ನಿಮ್ಮೂರು ದೇಶಕ್ಕೇ ಗೊತ್ತಾಗೊ ಹಾಗ್ ಮಾಡ್ತೀವಿ ಬಿಡಿ’ ಎಂದು ರಷೀದ್ ಹೇಳಿದ್ದು ಈ ರೀತಿಯಲ್ಲಿ ಸತ್ಯವಾಗಿತ್ತು! ಈ ನಡುವೆ ಸಮತಾ ತಂಡವು, ‘ಹುಸೇನ್ ಮುಗ್ಧ. ರಷೀದ್ ತಂಡದ ಸಂಚಿನ ಬಲಿಪಶು ವಾಗಿರುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈಗಲೇ ಹುಸೇನ್ ಭಯೋತ್ಪಾದಕ ಅನ್ನೊ ತೀರ್ಮಾನಕ್ಕೆ ಬರಬಾರದು’ ಎಂದು ಪತ್ರಿಕಾ ಪ್ರಕಟಣೆ ನೀಡಿತು. ಇದನ್ನು ಆಕ್ಷೇಪಿಸಿ ಕೆಲ ಸಂಸ್ಥೆಗಳು ಹೇಳಿಕೆ ಕೊಟ್ಟಾಗ ಸಮತಾ ತನ್ನ ಪ್ರತಿಪಾದನೆಯನ್ನು ಬಲವಾಗಿಯೇ ಮಂಡಿಸಿದರು.

ಈ ನಡುವೆ ವಕೀಲರ ಜೊತೆ ಸಮತಾ ಮತ್ತು ಟೀಚರಮ್ಮ ಜೈಲಿಗೆ ಹೋಗಿ ಹುಸೇನ್ನನ್ನು ಭೇಟಿಯಾಗಿ ಬಂದರು. ಟೀಚರಮ್ಮ ತಮ್ಮ ಭೇಟಿಯ ವಿವರಗಳನ್ನು ಕಣ್ತುಂಬಿ ವಿವರಿಸಿದರು. ಹುಸೇನ್ ಮಾತಾಡಿದ್ದೇ ಕಡಿಮೆ ಅಂತೆ. ಆತ ಹೇಳಿದ್ದು ಎರಡೇ ಮಾತು: ‘ನನ್ನಿಂದ ನಮ್ಮೂರಿಗ್ ಕೆಟ್ ಹೆಸರು ಬಂತು’ ಅನ್ನೋದು ಒಂದು. ‘ಅಪ್ಪನ್ನ ತಂಗೀನ ಚನ್ನಾಗ್ ನೋಡ್ಕೊಳ್ಳಿ’ ಅನ್ನೋದು ಇನ್ನೊಂದು. ಇದೆಲ್ಲ ಕೇಳಿದ ಪಟೇಲರು, ‘ಎಷ್ಟಾದ್ರು ನಮ್ಮೂರ್ ಹುಡ್ಗ. ಊರಿನ್ ಬಗ್ಗೆ ಎಷ್ಟು ಅಭಿಮಾನ!’ ಎಂದು ಉದ್ಗರಿಸಿದರು. ಈ ಉದ್ಗಾರದಿಂದ ಉತ್ತೇಜಿತರಾಗಿ ಟೀಚರಮ್ಮ, ‘ನೀವು ಊರು ಹಿರಿಯರು. ಒಂದ್ಸಾರಿ ಹುಸೇನ್ನ ನೋಡ್ ಬಂದ್ರೆ ಚೆನ್ನಾಗಿರುತ್ತೆ’ ಎಂದರು. ಆಗ ಪಟೇಲರು, ‘ನೋಡೋಣ ಮುಂದೆ’ ಎಂದು ಮಾತು ಮೊಟಕು ಮಾಡಿದ್ರು. ಶಾನುಭೋಗ್ರು, ‘ಈಗ ಕೋರ್ಟ್ ಕೆಲ್ಸ ಸರ್ಯಾಗ್ ನೋಡ್ಕೊಳ್ಳಿ ಮೊದ್ಲು’ ಎಂದು ಸೂಚಿಸಿದರು.

ಕೋರ್ಟು -ಕಡೆಗೂ ಹುಸೇನ್ ಪರವಾದ ತೀರ್ಪು ಕೊಡಲಿಲ್ಲ. ಆತನನ್ನು ಭಯೋತ್ಪಾದಕ ಅಂತಲೇ ತೀರ್ಮಾನಿಸ್ತು. ಮರಣದಂಡನೆ ಶಿಕ್ಷೆ ವಿಧಿಸಿತು!

ತೀರ್ಪು ಬಂದ ದಿನ ಊರಲ್ಲಿ ಮಾತು ಮತ್ತೆ ಬಿದ್ದು ಹೋಯಿತು. ಸಮತಾ ಊರಿಗೆ ಬಂದರು. ಪಟೇಲರು ಶಾನುಭೋಗರು ತಮ್ಮ ಮನೆ ಹತ್ರ ಕೂತು ಚರ್ಚೆ ಮಾಡೊ ಬದಲು ತಾವಾಗಿಯೇ ಹಯಾತ್ ಸಾಬರ ಮನೆಗೇ ಬಂದರು. ಹಯಾತ್ ಸಾಬರ ಹಜಾರದಲ್ಲಿ ಕೂತು ಊರ ಜನರನ್ನು ಅಲ್ಲಿಗೇ ಕರೆದರು. ಸಮತಾ ಪರಿಸ್ಥಿತಿಯನ್ನು ವಿವರಿಸಿ ‘ಹೈಕೋರ್ಟ್ಗೆ ಹೋಗಬೇಕು’ ಎಂಬ ಅಂಶವನ್ನು ತಿಳಿಸಿದಾಗ ಎಲ್ಲರೂ ಒಪ್ಪಿದರು. ಪಟೇಲರು ತಮ್ಮ ಜೇಬಿಂದ ಒಂದು ಕಟ್ಟು ನೋಟು ತೆಗೆದು ಸಮತಾ ಕೈಗಿತ್ತರು. ಶಾನುಭೋಗರೂ ಹಾಗೇ ಮಾಡಿದರು. ‘ಊರೋರು ಎಷ್ಟೆಷ್ಟು ಆಗುತ್ತೋ ಅಷ್ಟಷ್ಟು ದುಡ್ ಕೊಡ್ರಪ್ಪ’ ಎಂದು ಪಟೇಲರು ಹೇಳಿದಾಗ, ಅನೇಕರು ಅಷ್ಟಿಷ್ಟು ಹಣ ಮುಂದಿಟ್ಟರು. ಹಯಾತ್ ಸಾಬರ ಕಣ್ಣು ತುಂಬಿಕೊಂಡಿತ್ತು. ಊರು ಒಂದಾಗಿತ್ತು.

ಆದರೆ ಹೈಕೋರ್ಟಿನ ತೀರ್ಪು ಹುಸೇನ್ಗೆ ಪ್ರತಿಕೂಲವಾಗಿ ಬಂತು. ಕೆಳಕೋರ್ಟಿನ ತೀರ್ಪನ್ನೇ ಹೈಕೋರ್ಟು ಎತ್ತಿಹಿಡಿಯಿತು.

ಹಯಾತ್ ಸಾಬರ ಮನೆ ಹಜಾರದಲ್ಲಿ ಮತ್ತೆ ಊರಿನ ಸಭೆ. ಕಾನೂನು ಹೋರಾಟ ವಿಫಲವಾಗ್ತಿರೊ ವಿಷಾದ ಎಲ್ಲರಲ್ಲೂ ಹರೀತಾ ಇತ್ತು. ಆದ್ರೆ ಸೋಲೋಕ್ ಯಾರೂ ಸಿದ್ಧರಿರಲಿಲ್ಲ. ಸಮತಾ, ‘ಸುಪ್ರೀಂಕೋರ್ಟಿಗೆ ಹೋಗೋಣ’ ಎಂದರು. ಅದಕ್ಕೆ ಲಕ್ಷಾಂತರ ಖರ್ಚು!

ಪಟೇಲರು ಒಂದೇ ಮಾತು ಹೇಳಿದ್ರು: ‘ನನ್ ಜಮೀನ್ನಾಗೆ ಎರಡು ಎಕ್ರೆ ಮಾರಿ ದುಡ್ ಕೊಡ್ತೀನಿ. ಹುಸೇನ್ ಬಿಡುಗಡೆ ಆಗ್ಬೇಕು. ನಮ್ ಊರಿಗ್ ಬಂದಿರಾ ಕಳಂಕ ಹೋಗ್ಬೇಕು; ಹುಸೇನ್ ಒಳ್ಳೇನು ಅಂತ ಎಲ್ರಿಗೂ ಗೊತ್ತಾಗ್ಬೇಕು’.

ಶಾನುಭೋಗರೂ ಹಿಂದೆ ಬೀಳಲಿಲ್ಲ. ‘ಜಮೀನ್ ಮಾರಿದ್ರೂ ಸರಿ. ನಾನೂ ದುಡ್ ಜೋಡುಸ್ತೀನಿ’ ಎಂದರು. ಆಗ ಪಟೇಲರು, ‘ನೋಡ್ರಪ್ಪ, ಇದ್ರಾಗೆ ಹಯಾತ್ ಸಾಬ್ರು ಮನೆ ಮರ್ವಾದೇನೂ ಅಡಗೈತೆ, ಊರಿನ್ ಮರ್ವಾದೇನೂ ಅಡಗೈತೆ, ಕೈಲಾಗಾರೆಲ್ಲ ಕಾಸ್ ಕೊಡ್ರಪ್ಪ’ ಎಂದು ಕೇಳಿಕೊಂಡರು.

ಆಗ ಒಬ್ಬ ಹೆಂಗಸು ಫಟಾರನೆ ಸಿಡಿದಳು: ‘ಅದ್ಯಾಕ್ ಪಟೇಲಪ್ಪ ಕಾಸ್ ಕೊಡ್ರಪ್ಪ ಅಂಬ್ತ ಬರೀ ಗಂಡುಸ್ರನ್ನೇ ಕೇಳ್ತೀರ. ನಾವ್ ಹೆಂಗುಸ್ರೇನ್ ಮನುಸ್ರಲ್ವ? ಅವ್ರ್ ಕಾಸ್ ಕೊಟ್ರೆ ನಾವ್ ಕಾಸಿನ್ ಸರಾನೇ ಕೊಡ್ತೀವಿ ತಗಳ್ಳಿ’ ಎಂದು ತನ್ನ ಕೊರಳಿನಲ್ಲಿದ್ದ ಚಿನ್ನದ ಕಾಸಿನ ಸರವನ್ನು ತೆಗೆದು ಸಮತಾಳ ಮುಂದೆ ಇಟ್ಟಳು. ರೋಮಾಂಚನದ ಸೆಳೆಮಿಂಚು ಸುಳಿದು ಹೋಯ್ತು. ಊರ ಜನರಲ್ಲಿ ಗುಸುಗುಸು ಆರಂಭವಾಯ್ತು. ಹೆಂಗಸರು ಗಂಡಂದಿರ ಜೊತೆ ಪಿಸುಪಿಸು ಮಾತಾಡಿದರು. ಕೆಲವರು ಕಿವಿಯೋಲೆಗಳನ್ನೇ ಕೊಟ್ಟರು. ಇನ್ನು ಕೆಲವರು, ‘ಇದು ನಾನ್ ಕೂಲಿ ಮಾಡಿ ಸಂಪಾದನೆ ಮಾಡಿದ್ ದುಡ್ಡು. ತಗಳ್ಳಿ’ ಎಂದು ಮುಂದೆ ಇಟ್ಟರು. ಹೆಂಗಸರು, ಗಂಡಸರೆಂಬ ವ್ಯತ್ಯಾಸವಿಲ್ಲದೆ ಕೈಲಾದಷ್ಟು ಸಹಾಯ ಮಾಡಿದರು. ಟೀಚರಮ್ಮ ತಮ್ಮ ಮತ್ತು ಶಾಲೆಯ ಅಧ್ಯಾಪಕರ ಒಂದು ತಿಂಗಳ ಸಂಬಳ ಕೊಡೋದಾಗಿ ಹೇಳಿದರು. ಹಯಾತ್ ಸಾಬರ ಮೌನ ಮುರಿಯಿತು: ‘ಈ ಋಣಾನ ನಾನ್ ಎಷ್ಟು ಜನ್ಮದಲ್ ತೀರಿದ್ರೂ ಸಾಲದು’ ಎಂದು ಎದ್ದು ನಿಂತು ಊರಿನ ಜನಕ್ಕೆ ಕೈ ಮುಗಿದರು.

ಸಮತಾ, ಸಹಾಯ ಮಾಡಿದವರ ಹೆಸರು, ವಸ್ತು ಮತ್ತು ಹಣದ ಪಟ್ಟಿ ಸಿದ್ಧಮಾಡಿದರು. ಸುಪ್ರೀಂಕೋರ್ಟಿನಲ್ಲಿ ಕೇಸ್ ನಡೆಸಲು ಸಾಕಷ್ಟು ಹಣ ಬೇಕಿತ್ತು.

ಉಳಿದ ಹಣವನ್ನು ನಾವ್ ಕೊಡ್ತವೆ ಎಂದು ಪಟೇಲರು ಶಾನುಭೋಗರು ಮತ್ತೊಮ್ಮೆ ಹೇಳಿದರು. ಚಿನ್ನದ ಕಾಸಿನ ಸರ ಕೊಟ್ಟ ಹೆಂಗಸು, ‘ಹುಸೇನಪ್ಪನ್ನ ಒಸಿ ಬ್ಯಾಗ ಕರ್ಕಂಡ್ ಬರ್ರವ್ವ’ ಎಂದು ಕೇಳಿಕೊಂಡಾಗ ಎಲ್ಲರೂ ‘ಹೂಂಕಣವ್ವ’ ಎಂದು ದನಿಗೂಡಿಸಿದರು. ಸಾಮಾನ್ಯವಾಗಿ ಭಾವುಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡೇ ಇರುತ್ತಿದ್ದ ಸಮತಾರ ಕಣ್ತುಂಬಿದ ನೀರು ಕೆನ್ನೆ ಮೇಲೆ ಹರಿದು ಭಾವದ ಬೆಲೆಯನ್ನು ಸಾರಿ ಹೇಳಿತು. ಕ್ಷಣ ಮಾತ್ರದಲ್ಲಿ ಕಣ್ಣೀರು ಒರೆಸಿಕೊಂಡ ಸಮತಾ, ‘ನ್ಯಾಯ ನಮ್ಮದು. ಯಾರೂ ಹೆದ್ರಬೇಡಿ. ಹುಸೇನ್ ಬಂದೇ ಬರ್ತಾನೆ’ ಎಂದು ಹೇಳಿ ಪಟ್ಟಿಯನ್ನು ಓದಲು ಶುರು ಮಾಡಿದಳು. ಆಗ ಕೆಲವರು ‘ಲೆಕ್ಕ ಪಕ್ಕ ಒಪ್ಪಿಸೋದು ನಮಿಗ್ ಬ್ಯಾಡ ಕಣವೊ, ನೀವೇಳ್ದಂಗೆ ನ್ಯಾಯ ಸಿಕ್ಬೇಕು. ನಮ್ಮೂರ್ ಹುಡ್ಗ ನಮಿಗ್ ದಕ್ಬೇಕು. ಊರ್ಗೆ ಒಳ್ಳೆ ಹೆಸ್ರು ಬರ್ಬೇಕು. ಆಟೇಯ’ ಎಂದು ಹೇಳಿ ಪಟ್ಟಿ ಓದುವುದನ್ನು ನಿಲ್ಲಿಸಿದರು. ಫಾತಿಮಾ ಕೆನ್ನೆ ಮೇಲೆ ದುಃಖ ಹರಿದಿತ್ತು. ನನ್ನ ಮನಸ್ಸು ಮೂಕ ಸಾಕ್ಷಿಯಾಗಿತ್ತು.

***

ಈ ಸಾರಿ ಸಮತಾ ಮತ್ತು ಟೀಚರಮ್ಮ ಜೊತೆ ನಾನೂ ಹುಸೇನ್ ಭೇಟಿಗಾಗಿ ಹೋದೆ. ಹುಸೇನ್ ಮುಖದಲ್ಲಿ ಭೀತಿ ಮನೆಮಾಡಿತ್ತು. ಮಾತು ಮುರಿದು ಬೀಳುತ್ತಿತ್ತು. ಮರಣದಂಡನೆಗೆ ಗುರಿಯಾದವರನ್ನು ಸೆಲ್ ಬಾಗಿಲಲ್ಲೇ ಭೇಟಿಯಾಗುವುದು ನಿಯಮ. ಜೊತೆಗೆ ಅಧಿಕಾರಿ ಇದ್ದಾರೆ. ಸೆಂಟ್ರಿ ನಿಂತಿದ್ದಾರೆ. ಹೀಗಾಗಿ ಮನಸ್ಸು ಬಿಚ್ಚಿ ಮಾತಾಡೋಕೆ ಅಳಕು ಇರುತ್ತೆ. ಆದ್ರೂ ನಾನು ಕೇಳಿದೆ: ‘ನೀನ್ ನೋಡಿದ್ರೆ ಭಯ ಬಿದ್ದಿರೊ ಹಾಗ್ ಕಾಣುತ್ತೆ. ಈ ಭಯ ಬೇರೆಯವರಿಗೆ ಮರಣದಂಡನೆ ಆಗುವಾಗ ನಿನಗೆ ಇರಲಿಲ್ವ ಹುಸೇನ್?’

ನಾನು ಕೇಳಿದ ಪ್ರಶ್ನೆಗೆ ಆತ ಇನ್ನಷ್ಟು ಅಧೀರನಾದಂತೆ ಕಂಡ. ಅಲ್ಲದೆ ಸಮತಾ ಮತ್ತು ಟೀಚರಮ್ಮಂಗೆ ನನ್ನ ಪ್ರಶ್ನೆ ಹಿಡಿಸಿದಂತೆ ಕಾಣಿಸಲಿಲ್ಲ. ಆಗ ನಾನು ವಿವರಣೆ ಕೊಡೋಕೆ ಹೋದೆ: ‘ಅಲ್ಲ, ಸಾವಿನ ಭಯ ಹೇಗಿರುತ್ತೆ ಅಂತ ತಿಳ್ಕೊಬೇಕಿತ್ತು. ಮರಣದಂಡನೆ ಮಾಡ್ತಾ ಇದ್ದೋನೇ ಮರಣದಂಡನೆಗೆ ಗುರಿಯಾಗ್ ಬೇಕಾಗ್ ಬಂದಾಗ ಏನೆಲ್ಲ ಆಗುತ್ತೆ ಅಂತ ಅರ್ಥ ಮಾಡ್ಕೊಬೇಕಿತ್ತು’.

ಆಗ ಸಮತಾ ಸ್ವಲ್ಪ ಸಿಡುಕಿನಿಂದಲೇ ಹೇಳಿದ್ರು: ‘ಆತನ ಮುಖ ನೋಡಿ ಅರ್ಥ ಮಾಡ್ಕೊಳ್ಳಿ, ಅರ್ಥಮಾಡ್ಕೊಳ್ಳೋಕೆ ಯಾವಾಗೂ ಮಾತೊಂದೇ ಮಾರ್ಗ ಅಲ್ಲ, ತಿಳ್ಕೊಳ್ಳಿ.’

ಆಕೆಯ ಮಾತು ನಿಜ ಅನ್ನಿಸ್ತು. ನಾನು ಸುಮ್ಮನಾಗ್ಬೇಕು ಅಂದ್ಕೊಳ್ತ ಇರುವಾಗ ಹುಸೇನ್ ಸ್ಫೋಟಗೊಂಡ: ‘ಕೇಳಿ, ಇನ್ನೇನ್ ಕೇಳ್ಬೇಕು ಅಂತ ಇದ್ದೀರ, ಎಲ್ಲಾ ಕೇಳ್ಬಿಡಿ. ನೀವ್ ಕತೆ ಬರೀಬೇಕು. ಅದಕ್ ನನ್ನಿಂದ ಉತ್ರ ಬೇಕು. ಅಷ್ಟೇ ಅಲ್ವ? ಹೌದು; ನಂಗೀಗ ಭಯವಾಗ್ತಾ ಐತೆ. ಸಾವು ಬಂದು- ಬರ್ತೀಯೊ ಇಲ್ವೊ -ಅನ್ತಾ ಹೆದ್ರುಸ್ತಾ ಐತೆ. ನಾನೇ ಹಾಕ್ತಿದ್ದ ನೇಣು ಎದ್ರಿಗ್ ಬಂದಂಗಾಗಿ ಕೆಣುಕ್ತಾ ಐತೆ…. ಇಷ್ಟು ಸಾಕ, ಇನ್ನೂ ಬೇಕಾ?’

‘ಸಮಾಧಾನ ಹುಸೇನ್ ಸಮಾಧಾನ. ಪ್ಲೀಸ್ ಸಿಟ್ಟು ಮಾಡ್ಕೊಬೇಡ’ ಎಂದು ನಾನು ಸಮಾಧಾನಿಸತೊಡಗಿದಾಗ ಆತ ಸೆಲ್ನ ಸರಳುಗಳನ್ನು ಬಿಟ್ಟು ದೂರ ಹೋದ. ಗೋಡೆಯನ್ನು ಗುದ್ದಿದ. ಚಡಪಡಿಸಿದ; ಕಣ್ಣುಮುಚ್ಚಿ ಒಳ ಉರಿಯನ್ನು ತಡೆಯಲು ಯತ್ನಿಸಿದ. ದಿಕ್ಕು ತಪ್ಪಿದವನಂತೆ ಅತ್ತಿತ್ತ ಓಡಾಡಿದ. ಆಗ ಅಧಿಕಾರಿ ‘ಹುಸೇನ್, ಕಂಟ್ರೋಲ್’ ಎಂದು ಜೋರಾಗಿ ಗದರಿದ. ಹುಸೇನ್ ಗೋಡೆಗೆ ಒರಗಿ ನಿಂತು ಏದುಸಿರು ಬಿಡುತ್ತ ಮೊದಲಿನ ಸ್ಥಿತಿಗೆ ಬಂದ.

ಸಮತಾ ಸುಪ್ರೀಂಕೋರ್ಟಿಗೆ ಹೋಗೊ ವಿಷಯ ತಿಳಿಸಿದಾಗ ವಿಷಾದದ ನಗೆ ಬೀರಿದ. ‘ಅದೂ ಕೋರ್ಟೆ ಅಲ್ವ?’ ಎಂದ. ನಾನು ತಕ್ಷಣ ‘ಹಾಗಂದ್ರೆ?’ ಎಂದೆ. ಸಮತಾ ಕೆಂಗಣ್ಣು ಬಿಟ್ಟಾಗ ಸುಮ್ಮನಾದೆ. ಆದ್ರೆ ಸಮತಾ ಸುಮ್ಮನಾಗಲಿಲ್ಲ. ‘ಕತೆಗಾರರಿಗೆ ಮಾತಿನ ಒಳಾರ್ಥ ತಾನೇ ತಾನಾಗ್ ಗೊತ್ತಾಗ್ಬೇಕು. ಓದುಗ್ರಿಗೆ ಮಾತ್ರ ಒಳಾರ್ಥದ ಬಗ್ಗೆ ಭಾಷಣ ಬಿಗುದ್ರೆ ಸಾಲ್ದು’ ಎಂದು ಛೇಡಿಸಿದರು. ಆಗ ಅಧಿಕಾರಿ, ‘ಬೇಗ ಮುಗ್ಸಿ ಮೇಡಂ’ ಎಂದ. ಸಮತಾ ಹುಸೇನ್ ಕಡೆ ತಿರುಗಿ ಸುಪ್ರೀಂಕೋರ್ಟ್ ವಿಷಯ ಎಲ್ಲಾ ಹೇಳಿ ಮುಗಿದ ಮೇಲೆ ಟೀಚರಮ್ಮ ಹುಸೇನ್ ಕೈಹಿಡಿದು ಧೈರ್ಯ ಹೇಳಿದ್ರು, ನಾನು ಅವ್ರಿಬ್ಬರ ಮುಖಾನೇ ನೋಡ್ತಾ ಇದ್ದೆ – ಎಂದಿನಂತೆ. ಮುಖಗಳಲ್ಲಿ ತುಂಬಿತುಳಕುವ ಭಾವ ಕಣ್ಣಲ್ಲಿ ಕೇಂದ್ರೀಕೃತವಾಗ್ತಾ ಇತ್ತು. ಆಮೇಲೆ ನಾವೆಲ್ಲ ಮೌನವಾಗಿ ಹೊರಟೆವು.

ಹೊರಬಂದ ಮೇಲೆ ಸಮತಾ ‘ಸಾರಿ’ ಹೇಳಿದ್ರು, ‘ಹುಸೇನ್ಗೆ ನೋವು ಜಾಸ್ತಿ ಮಾಡೊ ಪ್ರಶ್ನೆ ಕೇಳಿದ್ರಿಂದ ಹಾಗೆಲ್ಲ ಮಾತಾಡ್ಡೆ’ ಅಂತ ಸಮಜಾಯಿಷಿ ನೀಡಿದ್ರು. ‘ಪರವಾಗಿಲ್ಲ ಬಿಡಿ. ನಾನು ಎಲ್ಲಾನು ಅನುಭವ ಅಂದ್ಕೋತೇನೆ’ ಎಂದು ತುಟಿಯಂಚಲ್ಲಿ ನಕ್ಕೆ.
***

ಸಮತಾ ದೆಹಲಿಗೆ ಹೋದರು. ಅಲ್ಲಿನ ಪ್ರಸಿದ್ಧ ವಕೀಲರನ್ನೇ ಗೊತ್ತು ಮಾಡಿ ಬಂದರು. ಪಟೇಲರು – ಶಾನುಭೋಗರಾದಿಯಾಗಿ ಊರ ಜನಕ್ಕೆ ವರದಿ ಮಾಡಿದರು. ಈ ಮಧ್ಯೆ ನನಗೆ ಮುಖ್ಯಮಂತ್ರಿ ಮಗಳು ಸುಶೀಲಾ ಅವರನ್ನು ಭೇಟಿಯಾಗಬೇಕು ಅನ್ನಿಸ್ತು. ಸಮತಾಗೆ ಹೇಳಿದೆ. ‘ಯಾಕೆ ಅವರ ಅಳುವನ್ನೂ ಅಧ್ಯಯನ ಮಾಡ್ಬೇಕ?’ ಎಂದು ಚುಚ್ಚಿದರು. ನಾನು ಅಷ್ಟೇ ತೀಕ್ಷ್ಣವಾಗಿ, ‘ಅಳೂನ ಅಧ್ಯಯನ ಮಾಡೋರು ನೀವಿರಬಹುದು! ನಾನು ಅಳೂನ ಅನುಭವಿಸೋನು’ ಎಂದುಬಿಟ್ಟೆ. ಸಮತಾ ಒಂದುಕ್ಷಣ ತಬ್ಬಿಬ್ಬಾದಂತೆ ಕಂಡರು. ಆಮೇಲೆ ಹೇಳಿದ್ರು: ‘ನೋಡಿ. ಈ ಘಟನೆ ಆದ್ಮೇಲೆ ಆಕೆಗೆ ನಮ್ಮ ಮೇಲಿನ ನಂಬಿಕೆ ಹೋಗ್ಬಿಟ್ಟಿದೆ. ನಾನು ಬರ್ತೀನಿ ಅಂದ್ರೂ ಬೇಡ ಅಂತಾಳೆ. ನೀವೇ ಬೇಕಾದ್ರೆ ಪ್ರಯತ್ನ ಮಾಡಿ’. ನಾನು ಹೇಳಿದೆ: ‘ನಾನು ಹುಸೇನ್ ಊರಿನವನು ಅಂತ ಗೊತ್ತಿರಬಹುದು. ಅಥವಾ ಗೊತ್ತು ಮಾಡಿಯೇ ಟೈಮ್ ಕೇಳ್ ಬೇಕಾಗ್ಬಹುದು. ಆಗ ಆಕೆ ಅವ್ಕಾಶ ಕೊಡ್ದೆ ಇರಬಹುದು’. ‘ಸರಿ, ಅಷ್ಟು ಅರ್ಥ ಮಾಡ್ಕೊಂಡ್ ಸುಮ್ನಿರಿ’ ಎಂದು ಹೇಳಿದ ಸಮತಾ ಸುಪ್ರೀಂಕೋರ್ಟ್ನಲ್ಲಿ ಏನಾಗಬಹುದು ಅಂತ ಟೀಚರಮ್ಮನ ಜೊತೆ ಮಾತುಕತೆಗೆ ಮುಂದಾದರು.

ಸುಪ್ರೀಂಕೋರ್ಟ್ನಲ್ಲಿ ವಿಶೇಷವೇನೂ ಸಂಭವಿಸಲಿಲ್ಲ. ಆ ನಿರೀಕ್ಷೆ ನನಗಂತೂ ಇರಲಿಲ್ಲ, ಯಾಕೇಂದ್ರೆ ಇದು ಮುಖ್ಯಮಂತ್ರಿಯೊಬ್ಬರ ಹತ್ಯೆ ಪ್ರಶ್ನೆ. ಭಯೋತ್ಪಾದನೆಯ ಪ್ರಶ್ನೆ. ರಷೀದ್ ಮತ್ತು ತನ್ನ ಸಂಬಂಧಾನ ಹುಸೇನ್ ಪ್ರಾಮಾಣಿಕವಾಗಿ ಒಪ್ಕೊಂಡಿದಾನೆ. ಸಾಕ್ಷ್ಯಾಧಾರಗಳು ಆತನಿಗೆ ಪ್ರತಿಕೂಲವಾಗಿವೆ. ಇಷ್ಟು ಸಾಕಲ್ಲವಾ ಈತನಿಗೆ ಶಿಕ್ಷೆ ಕೊಡಲು? ಹಾಗೇ ಆಯಿತು. ಸುಪ್ರೀಂಕೋರ್ಟು ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದದ್ದಲ್ಲದೆ ಭಯೋತ್ಪಾದನೆ ವಿಷಯದಲ್ಲಿ ಕಿಂಚಿತ್ತೂ ಕರುಣೆಯ ಅಗತ್ಯ ಇಲ್ಲ ಎಂದು ವಿಶೇಷ ಷರಾ ಬರೆಯಿತು.

ಊರಿಗೆ ಊರೇ ನಡುಗಿತು; ಮೌನ ಮಡುಗಟ್ಟಿತು; ಭೂಮಿ ಬೆವರೊಡೆಯಿತು. ಆದರೂ ಸಮತಾ ಕೈಚೆಲ್ಲಲು ಸಿದ್ಧವಿರಲಿಲ್ಲ. ಹಯಾತ್ ಸಾಬರ ಮನೆಯಲ್ಲಿ ಕೂತು ಎಲ್ಲರ ಕಡೆ ನೋಡಿದಳು. ಕಡೆಗೆ ಗೋಡೆ ಮೇಲಿದ್ದ ಫೋಟೊ ದಿಟ್ಟಿಸಿ, ‘ಇನ್ನೊಂದೇ ಒಂದು ದಾರಿ ಇದೆ’ ಎಂದು ಹೇಳಿದರು. ಈಕೆಯ ಮಾತು ಕೇಳಿದ ಎಲ್ಲರೂ ಆಕೆಯತ್ತ ನೋಡಿದರು. ಆಕೆಯ ದೃಷ್ಟಿ ಇನ್ನೂ ರಾಷ್ಟ್ರಪತಿ ಮತ್ತು ಹುಸೇನ್ ಜೊತೆಗಿದ್ದ ಫೋಟೊ ಮೇಲೆ ನೆಟ್ಟಿತ್ತು.

ಹಯಾತ್ ಸಾಬರು, ‘ಇನ್ನೊಂದೇ ಒಂದು ದಾರಿ ಅಂದ್ರಿ. ಅದು ಸಾವಿನ ದಾರೀನ?’ ಎಂದು ನೋವು ತುಂಬಿ ನುಡಿದಾಗ ಟೀಚರಮ್ಮ, ‘ಹಾಗೆಲ್ಲ ಮಾತಾಡ್ಬೇಡಿ’ ಎಂದರು. ಪಟೇಲರು, ‘ಅದೇನ್ ಹೇಳು ಸಮತಮ್ಮ’ ಎಂದು ಕೇಳಿದರು. ಸಮತಾ ಕ್ಷಮಾದಾನದ ವಿಷಯ ಪ್ರಸ್ತಾಪಿಸಿದರು. ‘ತೀರ್ಪು ಬಂದಮೇಲೆ ಒಂದು ವಾರ ಕಾಲಾವಕಾಶ ಇರುತ್ತೆ. ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸೋಕೆ. ಈ ವಿಷಯಾನ ಅಧಿಕಾರಿಗಳು ಮರಣದಂಡನೆಗೆ ಒಳಗಾಗಿರೊ ಅಪರಾಧೀಗೂ ತಿಳುಸ್ತಾರೆ. ನಾವೀಗ ಕಡೇ ಪ್ರಯತ್ನ ಅಂತ ಕ್ಷಮಾದಾನದ ಅರ್ಜಿ ಸಲ್ಲಿಸೋಣ’ ಇದು ಸಮತಾ ಮಾತಿನ ಸಾರ. ಪಟೇಲರು ಕೂಡಲೇ, ‘ಅದೂ ಒಂದ್ ಮಾಡ್ ಬಿಡವ್ವ, ಹೆಂಗಿದ್ರೂ ರಾಷ್ಟ್ರಪತಿ ಜತೆ ಹುಸೇನ್ ಫೋಟೊ ತಗಿಸ್ಕಂಡವ್ನೆ, ಅದನ್ನೂ ಅವ್ರಿಗೆ ಹೇಳ್ಬಿಡು’ ಎಂದರು. ‘ಅದನ್ನ ರಾಷ್ಟ್ರಪತಿಗಳಿಗೆ ಹೇಳಬೇಕಾದ್ರೆ ದೆಹಲಿಗೆ ಹೋಗ್ಬೇಕು’ ಎಂದು ಸಮತಾ ಹೇಳಿದ್ದಲ್ಲದೆ ‘ಒಂದು ತಂಡ ಕರ್ಕೊಂಡು ಅವ್ರನ್ನ ಭೇಟಿ ಆಗಿ ಮನವರಿಕೆ ಮಾಡ್ಕೊಡೋಣ ಅಂತಾನೂ ಯೋಚ್ನೆ ಮಾಡಿದ್ದೆ’ ಎಂದರು. ‘ದುಡ್ಡಿಗೆ ಹೆದ್ರ ಬ್ಯಾಡ ನಾವಿದ್ದೀವಿ’ ಎಂದು ಧೈರ್ಯ ತುಂಬಿದರು ಪಟೇಲರು. ಹಯಾತ್ ಸಾಬರು ಆಕಾಶ ನೋಡ್ತಾ ಕೂತಿದ್ರು. ಫಾತಿಮಾ ನೆಲ ನೋಡ್ತಾ ಅಳ್ತಿದ್ದಳು.

ಮಾರನೇ ದಿನವೇ ಸಮತಾ ಮತ್ತು ಟೀಚರಮ್ಮ ಹುಸೇನ್ ಭೇಟಿಗೆ ಹೊರಟರು. ನಾನೂ ಬರ್ತೇನೆ ಎಂದಾಗ ‘ಅಲ್ಲಿ ಏನೂ ಮಾತಾಡ್ ಕೂಡ್ದು’ ಎಂದು ಷರತ್ತು ವಿಧಿಸಿದ್ರು, ‘ಇಲ್ಲ. ಮಾತಾಡಲ್ಲ: ಸಾಕ್ಷಿ ಥರಾ ಇರ್ತೇನೆ’ ಎಂದೆ. ‘ಸಾಕ್ಷಿ ಥರಾ ಅಲ್ಲ. ಸಾಕ್ಷೀನೇ ಆಗಿರ್ಬೇಕು’ ಎಂದರು. ಒಪ್ಪಿ ಹೊರಟೆ.

ಜೈಲಿನ ಹತ್ರ ಬಂದಾಗ ದೊಡ್ಡ ಗುಂಪು ಜೈಕಾರ ಕೂಗ್ತಾ ಇತ್ತು. ಯಾರಿಗೆ ಜೈಕಾರ ಅಂತ ಕುತೂಹಲದಿಂದ ಹತ್ರ ಬಂದು ನೋಡಿದ್ರೆ ಒಬ್ಬ ವ್ಯಕ್ತಿ ಕೈಬೀಸ್ತಾ ಹೊರಗಡೆ ಬಂದ. ‘ಬಲವಂತಯ್ಯನವರಿಗೆ ಜಯವಾಗಲಿ’ ‘ಕ್ಷಮಾದಾನ ಕೊಟ್ಟ ರಾಷ್ಟ್ರಪತಿಗಳಿಗೆ ಜಯವಾಗಲಿ’ ಅನ್ನೊ ಘೋಷಣೆ ಮೊಳಗಿದವು. ಸಮತಾ ಸ್ವಲ್ಪ ದೂರದಲ್ಲೇ ನಿಂತರು. ‘ಅವೆಲ್ಲ ಹೋಗ್ಲಿ’ ಎಂದರು. ಗುಂಪು ಕರಗಿದ ಮೇಲೆ ಸಮತಾ ವಿಷಾದದಿಂದ ಹೇಳಿದ್ರು: ‘ನಾನು ಈತನ ವಿರುದ್ಧ ಪ್ರತಿಭಟನೆ ಮಾಡ್ದೆ. ಈಗ ಕ್ಷಮಾದಾನ! ಅತ್ಯಾಚಾರಿಗೆ ಕ್ಷಮಾದಾನ!’

ನನಗೆ ತಕ್ಷಣ ಇನ್ನೊಂದು ಅಂಶ ಹೊಳೀತು: ‘ಒಂದ್ ಮಾತ್ ಹೇಳಲಾ?’ ಅಂತ ಕೇಳಿದೆ. ‘ಹೇಳಿ’ ಅಂದ್ರು. ‘ರಾಷ್ಟ್ರಪತಿಗಳು ಈತನಿಗೇ ಕ್ಷಮಾದಾನ ಕೊಟ್ಟಿದಾರೆ ಅಂದ್ಮೇಲೆ ನಮ್ ಹುಸೇನ್ಗೂ ಕ್ಷಮಾದಾನ ಕೊಡಬಹುದಲ್ವ?’ ಅಂತ ನನ್ನ ತರ್ಕ ಮುಂದಿಟ್ಟೆ ಟೀಚರಮ್ಮಂಗೆ ನನ್ನ ತರ್ಕ ಸರಿ ಅನ್ನಿಸ್ತು. ಸಮತಾಗೂ ಮನವರಿಕೆ ಆದಂತೆ ಕಾಣಿಸ್ತು. ‘ಹಾಗೇ ಆದ್ರೆ ನಮ್ಗಿಂತ ಸಂತೋಷಪಡೋರ್ ಯಾರಿದಾರೆ! ಒಳಗೋಗೋಣ ಬನ್ನಿ’ ಎಂದು ಹೊರಟರು.

ಮೊದಲೇ ಪರ್ಮಿಷನ್ ತಗೊಂಡಿದ್ದರಿಂದ ಅಡೆತಡೆ ಇಲ್ದೆ ಪ್ರವೇಶ ಮಾಡಿದ್ವಿ. ಅಧಿಕಾರೀನ ಭೇಟಿಮಾಡಿ ಹುಸೇನ್ ಸೆಲ್ ಹತ್ರ ಹೋದ್ವಿ, ಹುಸೇನ್ ಪ್ರಾರ್ಥನೆ ಮಾಡ್ತಾ ಕೂತಿದ್ದ, ನಾವು ಸ್ವಲ್ಪ ಹೊತ್ತು ನಿಂತೆವು. ಹುಸೇನ್ ಪ್ರಾರ್ಥನೆ ಮುಗಿಸಿ ಎದ್ದ. ನಮ್ಮನ್ನು ನೋಡಿದ. ಮೌನವಾಗಿ ಹತ್ರ ಬಂದ. ಸಮತಾ ಕ್ಷಮಾದಾನದ ವಿಷಯ ಪ್ರಸ್ತಾಪಿಸಿದರು. ಮೌನವಾಗೇ ಇದ್ದ. ಭಾವನೆಗಳು ಬತ್ತಿಹೋಗಿದ್ದ ಮುಖ, ಅಥವಾ ಭಾವನೆಗಳನ್ನು ನಿಯಂತ್ರಿಸಿದ್ದ ಮನಸ್ಥಿತಿ. ಟೀಚರಮ್ಮ, ‘ಕ್ಷಮಾದಾನ ಕೊಡೋ ಅಧಿಕಾರ ರಾಷ್ಟ್ರಪತಿಗಳಿಗಿದೆ’ ಎಂದು ಹೇಳಿದಾಗ ಆತನ ಮುಖದಲ್ಲಿ ಚಲನೆ ಉಂಟಾಯ್ತು.

ಕಣ್ಣಲ್ಲಿ ಕಿಂಚಿತ್ ಕಾಂತಿ ಕಾಣಿಸ್ತು. ‘ಹೌದು ಹುಸೇನ್, ನೀನ್ ಫೋಟೊ ತೆಗಿಸ್ಕೊಂಡಿದ್ದೆ ನೋಡು, ಈಗ್ಲೂ ಅವ್ರೇ ರಾಷ್ಟ್ರಪತಿಗಳು. ಇದೊಂದು ಪ್ರಯತ್ನ ಮಾಡ್ತೇವೆ’ ಎಂದು ಸಮತಾ ಹೇಳಿದಾಗ, ನಮ್ಮನ್ನೊಮ್ಮೆ ಮೇಲುಗಡೆಗೊಮ್ಮೆ ನೋಡಿದ. ಆಮೇಲೆ ಮೌನವಾಗಿ ಕೈಮುಗಿದ. ನನ್ನನ್ನೊಂದು ಪ್ರಶ್ನೆ ಕಾಡಿಸ್ತು: ನಾನು ಇವರಿಗೆ ಸಾಕ್ಷಿಯಾಗಿದ್ದೇನೊ ಅಥವಾ ನಮಗೆಲ್ಲ ಹುಸೇನ್ ಸಾಕ್ಷಿಯಾಗಿದ್ದಾನೊ? ಅಥವಾ ನಾವು ಪರಸ್ಪರ ಸಾಕ್ಷಿಗಳಾಗಿದ್ದೇವೊ?

***

ಸಮತಾ ಕ್ಷಮಾದಾನದ ಅರ್ಜಿಯನ್ನು ವಕೀಲರಿಂದ ಸಿದ್ದಮಾಡಿಸಿ ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಸಲ್ಲಿಸಿದ್ದಾಯ್ತು. ಆಮೇಲೆ ಪ್ರಗತಿಪರ ಚಿಂತಕರ ತಂಡವೊಂದನ್ನು ಸಂಘಟಿಸಿ ರಾಷ್ಟ್ರಪತಿಗಳ ಭೇಟಿಗಾಗಿ ಸಮಯ ಕೇಳಿ ಪತ್ರ ಬರೆದರು. ಹುಸೇನ್ ವಿಷಯ ಪ್ರಸ್ತಾಪಿಸದೆ ‘ಮರಣದಂಡನೆಯ ವಿಷಯದ ಚರ್ಚೆಗಾಗಿ’ ಎಂದು ಸೂಚಿಸಿದ್ದರು. ನಾನೂ ದೆಹಲಿಗೆ ಬರ್ತೇನೆ ಎಂದೆ. ಟೀಚರಮ್ಮ. ‘ನನ್ನ ಬದ್ಲು ನೀವೇ ಹೋಗಿ’ ಎಂದು ಅವಕಾಶ ಮಾಡಿಕೊಟ್ಟರು.

ರಾಷ್ಟ್ರಪತಿಗಳ ಸಮಯ ನಿಗದಿ ಆಯ್ತು. ಸಮತಾ ನೇತೃತ್ವದಲ್ಲಿ ನಮ್ಮ ತಂಡ ಅವರ ಭೇಟಿಗೆ ಹೊರಟಿತು. ಸಮತಾ, ಹುಸೇನ್ ಮತ್ತು ರಾಷ್ಟ್ರಪತಿಗಳು ಇದ್ದ ಒಂದು ಫೋಟೊ ತಂದಿದ್ದರು.

ರಾಷ್ಟ್ರಪತಿ ಭವನದಲ್ಲಿ ನಮಗೆ ಉಸಿರುಕಟ್ಟುವ ಅನುಭವ ಆಗಲಿಲ್ಲ. ಅವರ ಜೊತೆಗಿನ ಚರ್ಚೆಯೂ ಅಷ್ಟೆ, ಮೊದಲು ಮರಣ ದಂಡನೆ ಬಗ್ಗೆ ಸಾಮಾನ್ಯ ಮಾತುಕತೆ ಆರಂಭವಾಯ್ತು. ಆನಂತರ ಸಮತಾ ಬಲವಂತಯ್ಯನ ವಿಷಯ ಎತ್ತಿದರು. ರಾಷ್ಟ್ರಪತಿಗಳ ಮುಖದಲ್ಲಿ ಬಿಗಿ ಕಾಣಿಸ್ತು. ಐದಾರು ಸೆಕೆಂಡುಗಳಲ್ಲಿ ಬಿಗಿ ಸಡಿಲವಾಯ್ತು. ನಿಟ್ಟುಸಿರು ಹೊರಬಂತು. ‘ನಾನೇನೂ ಮಾಡೋ ಹಾಗಿರ್ಲಿಲ್ಲ. ದಾಖಲೆಗಳು ಆತನ ಪರವಾಗಿದ್ದವು. ಆತ ಅತ್ಯಾಚಾರ ಮಾಡೇ ಇಲ್ಲ ಅನ್ನೋ ಏನೇನೊ ದಾಖಲೆ ಒದಗಿಸಿದ್ರು. ಒಟ್ಟಾರೆ ಸಾಕ್ಷ್ಯ ಆತನ ಪರವಾಗಿತ್ತು. ನನ್ನ ಕೈಕಟ್ಟಿತ್ತು.’ – ಅಂತ ರಾಷ್ಟ್ರಪತಿಗಳು ತುಂಬು ವಿಷಾದದಿಂದ ಹೇಳಿದ್ರು, ಅವರ ಮಾತು ಮತ್ತು ಮುಖದಲ್ಲಿ ಅಸಹಾಯಕತೆ ಎದ್ದುಕಾಡ್ತಾ ಇತ್ತು. ಈ ಸಂದರ್ಭದಲ್ಲಿ ಸಮತಾ, ಹುಸೇನ್ ವಿಷಯ ಎತ್ತಿದರು. ಫೋಟೊ ತೋರಿಸಿದ್ರು, ರಾಷ್ಟ್ರಪತಿಗಳಿಗೆ ನೆನಪಾಯ್ತು. ‘ಓ ಮುಖ್ಯಮಂತ್ರಿ ಹತ್ಯೆ ಕೇಸಲ್ ಸಿಕ್ಕಿದ್ದು ಇದೇ ಹುಸೇನ್!’ ಎಂದು ಅಚ್ಚರಿ ವ್ಯಕ್ತಪಡಿಸಿದರು. ‘ಹೌದು ಸಾರ್, ನೀವ್ ನೋಡಿದ ಹಾಗೆ ಆತ ಮುಗ್ಧ’ ಎಂದರು ಸಮತಾ. ರಾಷ್ಟ್ರಪತಿಗಳು ಮಾತಾಡ್ಲಿಲ್ಲ. ಫೋಟೊ ನೋಡ್ತಾ ಇದ್ದರು. ಸಮತಾ ತಂಡದಲ್ಲಿದ್ದ ಪ್ರತಿಯೊಬ್ಬರೂ ‘ಹುಸೇನ್ ಭಯೋತ್ಪಾದಕ ಅಲ್ಲ; ಭಯೋತ್ಪಾದಕರ ಬಲಿಪಶು’ ಅನ್ನೋದನ್ನ ಮನವರಿಕೆ ಮಾಡಿ ಕೊಡೊ ಪ್ರಯತ್ನ ಮಾಡಿದರು. ಕಡೆಗೆ ರಾಷ್ಟ್ರಪತಿಗಳು ‘ಫೈಲ್ ಬರ್ಲಿ. ನೋಡೇನೆ’ ಎಂದಷ್ಟೇ ಹೇಳಿದರು. ನಾವೆಲ್ಲ ಧನ್ಯವಾದ ಹೇಳಿ ಹೊರಟಾಗ ಅವರು ಆ ಫೋಟೋನ ಕೈಯ್ಯಲ್ಲಿ ಹಿಡ್ಕೊಂಡೇ ಇದ್ದರು; ವಾಪಸ್ ಕೊಡಲಿಲ್ಲ. ನಾನು ಅದಕ್ಕೊಂದು ಅರ್ಥ ಕಲ್ಪಿಸಿಕೊಂಡೆ. ಅದು ಹುಸೇನ್ ಪರವಾದ ಸಹಾನುಭೂತಿಯ ಸಂಕೇತ ಎಂದು ಭಾವಿಸಿದೆ. ಜೊತೆಯಲ್ಲಿದ್ದವರಿಗೆ ವಿಧವಿಧವಾಗಿ ವಿವರಿಸುತ್ತ ‘ಕ್ಷಮಾದಾನ ಸಿಕ್ಕೊ ಸಂಕೇತ’ ಅಂತಲೂ ಹೇಳಿಬಿಟ್ಟೆ. ಆಗ ತಂಡದ ಒಬ್ಬರು ‘ಕ್ಷಮಾದಾನ ಕೊಡೋದು ಕತೆ ಬರೆಯೋ ಹಾಗಲ್ಲ ಮಿಸ್ಟರ್’ ಅಂತ ಹೇಳಿಬಿಟ್ಟರು! ನಾನೂ ಸುಮ್ಮನಿರಲಿಲ್ಲ. ‘ಕತೆ ಬರ್ಯೋದು ಕ್ಷಮಾದಾನ ಕೊಡೋ ಹಾಗಲ್ಲ ಮಿಸ್ಟರ್’ ಎಂದುಬಿಟ್ಟೆ. ಆಗ ಸಮತಾ ಮಧ್ಯಪ್ರವೇಶ ಅನಿವಾರ್ಯ ಆಯ್ತು. ‘ಎರಡ್ರಲ್ಲೂ ಸತ್ಯಕ್ಕೆ ಸ್ಥಾನ ಇರ್ಲಿ. ಈಗ್ ಸುಮ್ನ ಬನ್ನಿ’ ಎಂದರು. ಎಷ್ಟಾದ್ರೂ ಹೆಸರೇ ‘ಸಮತಾ’ ಅಲ್ವ?

***

ನಿರೀಕ್ಷೇಲಿ ದಿನಗಳು ಉರುಳಿದವು. ಈ ಮಧ್ಯೆ ಸಮತಾ ಆಗಾಗ್ಗೆ ಹುಸೇನ್ ಭೇಟಿ ಮಾಡ್ತಾ ಇದ್ರು, ‘ಒಳಗೇ ಹಿಂಸೆ ಅನುಭವಿಸ್ತಾ ಇದಾನೆ. ಇದಕ್ಕೆಲ್ಲ ಯಾವತ್ತು ಬಿಡುಗಡೆ ಆಗುತ್ತೆ’ ಅಂತ ತುಂಬಾ ನೋವಿನಿಂದ ಹೇಳ್ತಾ ಇದ್ರು. ವಿಶೇಷವಾಗಿ ಟೀಚರಮ್ಮನ ಹತ್ರ ಹುಸೇನ್ ಅನುಭವಿಸೊ ಹಿಂಸೆ ವಿಷಯ ಹಂಚಿಕೊಳ್ತಾ ಇದ್ರು. ಮೊದಮೊದ್ಲು ಮಾತಾಡ್ತಾ ಇದ್ದೋನು ಈಗ ಮಾತೇ ನಿಲ್ಸಿದಾನಂತೆ. ಕೂತಲ್ಲೇ ಚಡಪಡಿಸ್ತಾನಂತೆ. ಹಲ್ಲುಕಚ್ಚಿ ಒಳಗಿನ ಹಿಂಸೆ ನುಂಗ್ತಾನಂತೆ. ಒಂದು ದಿನ ಹೀಗಾಯ್ತಂತೆ. ಅಧಿಕಾರಿ-ಒಬ್ಬಾತನ ಜೊತೆ ಸೆಲ್ ಹತ್ರ ಹೋದ್ರು – ‘ನೋಡು ಹುಸೇನ್ ಈತನ್ನ ನಿನ್ ಜಾಗಕ್ಕೆ ತಗೊಂಡಿದ್ದೀವಿ. ನಿನ್ನ ಗಲ್ಲಿ ಗೇರ್ಸೋದು ಈತಾನೇ’ ಎಂದು ಪರಿಚಯ್ಸಿದ್ದೇ ತಡ, ಹಲ್ಲುಕಚ್ಚಿ ಕಿರುಚಿದನಂತೆ. ‘ಹೋಗು, ನನ್ನೆದ್ರಿಗ್ ನಿಂತ್ಕಬ್ಯಾಡ. ಹೋಗು ಅಂದೆ’ ಎಂದು ಅಬ್ಬರಿಸಿದನಂತೆ. ಕಡೆಗೆ ಅಧಿಕಾರಿ ಗದರಿದಾಗ ಸುಮ್ಮನಾದನಂತೆ. ಆದ್ರೆ ಅಧಿಕಾರಿಯ ಜೊತೆಗಿದ್ದಾತನನ್ನು ನೋಡಲಾಗದೆ ಗೋಡೆ ಕಡೆ ಮುಖ ಮಾಡಿ ನಿಂತನಂತೆ. ‘ಅವ್ನನ್ನ ಕರ್ಕಂಡ್ ಹೋಗಿ ಸಾರ್ ಕರ್ಕಂಡ್ ಹೋಗಿ ಇಲ್ಲಿಂದ’ ಎಂದು ನಡಗುತ್ತ ನುಡಿದನಂತೆ. ಇದೆಲ್ಲವನ್ನೂ ಕೇಳಿ ತಿಳಿದುಕೊಂಡ ಸಮತಾ, ಹುಸೇನ್ಗೆ ಸಾಕಷ್ಟು ಸಾಂತ್ವನ ಮಾಡಿ ಬಂದರಂತೆ. ಇಷ್ಟೆಲ್ಲ ವಿಷಯ ತಿಳ್ಕೊಂಡ ನನಗೇ ತಳಮಳ ತಡ್ಯೋಕಾಗ್ತಿಲ್ಲ. ಇನ್ನು ಆ ಹುಸೇನ್ಗೆ ಎಂಥ ತಳಮಳ ಆಗಿರಬೇಡ ಅಂತ ಚಿಂತೆ ಕಾಡಿಸಿತು. ಇಷ್ಟೆಲ್ಲ ವಿಷಯ ಕೇಳಿದ ಟೀಚರಮ್ಮ ಮೌನದ ಮೊರೆ ಹೊಕ್ಕಿದ್ದರು.

ಒಂದು ರಾತ್ರಿ ಹಯಾತ್ ಸಾಬರ ಮನೇಲಿ ನಾವೆಲ್ಲ ನೆರೆದಿದ್ದೆವು. ಇದ್ದಕ್ಕಿದ್ದಂತೆ ಜೈಲು ಅಧಿಕಾರಿಯಿಂದ ಸಮತಾಗೆ ಫೋನ್ ಬಂತು. ಸಮತಾಗೆ ತವಕ. ‘ಹೇಳಿ ಸಾರ್ ಬೇಗ ಹೇಳಿ’ ಎಂದು ಕೇಳಿದರು. ಕೇಳಿಸಿಕೊಂಡರು. ಎಲ್ಲರೂ ಸಮತಾಗೆ ಬಂದ ಸುದ್ದಿ ಏನಿರಬಹುದು ಅಂತ ಕಾಯ್ತಾ ಕೂತಿದ್ದೆವು. ಸಮತಾ ಹೇಳಿದ್ರು; ‘ಹುಸೇನ್ ಕುಟುಂಬದೋರ್ ಸಮೇತ ನಾಳೆ ಜೈಲಿಗ್ ಬನ್ನಿ ಅಂತ ಅಧಿಕಾರಿ ಹೇಳಿದ್ರು. ಇಷ್ಟು ದಿನ ಹುಸೇನ್ ಪಡ್ತಿದ್ದ ಹಿಂಸೆಗೆ ನಾಳೆ ಬಿಡುಗಡೆ ಅಂದ್ರು, ಹೆಚ್ಚೇನೂ ಹೇಳಲಿಲ್ಲ.’

ಬಿಡುಗಡೆ? – ನಾನು ಏನೋ ಅರ್ಥ ಹುಡ್ಕೋಕೆ ಹೊರಟಾಗ ಪಟೇಲ್ರು, ಶಾನುಭೋಗ್ರು ‘ಬೆಳಗ್ಗೆ ಹೊರಟುಬಿಡ್ರಿ. ನಾವು ಇಲ್ಲಿ ಊರ್ ತುಂಬಿಸ್ಕೊಳ್ಳೋಕೆ ಹಬ್ಬದ್ ತರಾ ವ್ಯವಸ್ಥೆ ಮಾಡ್ತೀವಿ’ ಎಂದು ಸಂತೋಷದಿಂದ ಹೇಳಿದರು. ಎಲ್ಲರೂ ಸಂತೋಷದಲ್ಲಿ ಭಾಗಿಯಾದ್ರು, ನಾನು ಭಾಗಿಯಾದ್ರೂ ಭಾಗಿಯಾಗದಂತೆ ಬಿಡುಗಡೆಗೆ ಪ್ರಯತ್ನಿಸ್ತಾ ಇದ್ದೆ.

***

ಪಟೇಲರೇ ಮುಂದೆ ನಿಂತು ಊರೆಲ್ಲ ಸಿಂಗಾರವಾಗುವಂತೆ ಮಾಡಿದರು. ಬಾಳೆಕಂದು, ತೋರಣ ಕಟ್ಟಿಸಿದರು. ಹುಸೇನ್ ಕರೆತರಲು ಸಮತಾ ಜೊತೆ ಟೀಚರಮ್ಮ, ಫಾತಿಮಾ, ಹಯಾತ್ ಸಾಬರು ಹೋಗಿದ್ದರು. ನಾನೊಬ್ಬ ಇಲ್ಲೇ ಇದ್ದೆ.

ಪಟೇಲರು ಹಾರ ತರಿಸಿಟ್ಟಿದ್ದರು. ಮೈಕು ಹಾಕಿಸಿದ್ದರು. ಊರ ಹೊರಗಿನ ದಾರಿಯತ್ತ ನೋಡ್ತಾ ಜನರ ಜೊತೆ ಕೂತು ತಳಮಳಿಸ್ತಾ ಇದ್ದರು. ಇದು ನಿರೀಕ್ಷೆಯ ತಳಮಳ. ಈಗ ಸಮಾಧಾನಿಸುವ ಕೆಲಸ ಶಾನುಭೋಗರದು. ‘ಬಾರ್ತಾರೆ ಇರಿ. ಅಲ್ಲಿ ಏನೇನೋ ಕೆಲ್ಸ ಇರುತ್ತೆ. ಯಾರಾರೊ ಸೈನ್ ಮಾಡ್ಬೇಕಾಗಿರುತ್ತೆ’ ಎಂದು ಬಿಡುಗಡೆಯ ವಿಧಿವಿಧಾನಗಳ ವಿವರಣೆ ಕೊಟ್ಟರು. ಅಷ್ಟರಲ್ಲಿ ಮೈಕ್ನಲ್ಲಿ ‘ಓಹಿಲೇಶ್ವರ’ ಕನ್ನಡ ಸಿನಿಮಾದ ಹಾಡು ಕೇಳಿಸಿತು.

‘ಈ ದೇಹದಿಂದ ದೂರನಾದೆ ಏಕೆ ಆತ್ಮನೆ? ಈ ಸಾವು ನ್ಯಾಯವೆ?’

ಈ ಹಾಡು ಕೇಳಿದ್ದೇ ತಡ ಪಟೇಲರು ಕೆರಳಿದರು. ಕೂತಲ್ಲಿಂದ ಎದ್ದರು. ‘ನಿನಗೇನ್ ಬಂದೈತಲೆ ಕೆಟ್ಟಾಪತ್ತು? ಹುಸೇನ್ ಊರಿಗ್ ಬರ್ವಾಗ ಸಂತೋಷದ ಹಾಡು ಹಾಕೊ ಬದ್ಲು ಸಾವಿನ ಹಾಡ್ ಹಾಕ್ತಾ ಇದ್ದೀಯಲ್ಲೋ? ನಿಲ್ಸು ಮೊದ್ಲು’ ಎಂದು ಕೂಗಾಡಿದರು. ಮೈಕಿನ ಮನುಷ್ಯ ಹಾಡು ನಿಲ್ಲಿಸಿದ – ಅಷ್ಟರಲ್ಲಿ ಒಬ್ಬಾತ ಓಡಿಬಂದು ‘ಎರಡು ಕಾರು ಬತ್ತಾ ಅವೆ ಪಟೇಲ್ರೆ’ ಎಂದ. ಪಟೇಲರು ಆ ಕಡೆ ಧಾವಿಸಿದರು – ಹಾರದ ಸಮೇತ.

ನಿಜ; ಎರಡು ಕಾರು ಬಂದವು; ನಿಂತವು. ಒಂದು ಸಮತಾ ಹೋಗಿದ್ದ ಕಾರು. ಇನ್ನೊಂದು ಅಂಬುಲೆನ್ಸ್! ನನಗೆ ಅಂಬುಲೆನ್ಸ್ ನೋಡಿ ಅಚ್ಚರಿ. ಎಲ್ಲರೂ ನೋಡನೋಡುತ್ತಿದ್ದಂತೆ ಫಾತಿಮಾ ಅಳುತ್ತಾ ಅಂಬುಲೆನ್ಸ್ನಿಂದ ಇಳಿದಳು!! ಜೊತೆಗೆ ದುಃಖಿತ ಟೀಚರಮ್ಮ! ಮುಖವೇ ಮೋಡದಂತಿದ್ದ ಹಯಾತ್ ಸಾಬರು. ಇದ್ದುದರಲ್ಲಿ ಮಾತಾಡುವ ಶಕ್ತಿ ಇದ್ದದ್ದು ಸಮತಾಗೆ ಮಾತ್ರ ಅಂತ ನನಗೆ ಕ್ಷಣದಲ್ಲಿ ಗೊತ್ತಾಯಿತು.

‘ಎಲ್ಲಿ ಹುಸೇನ್ ಎಲ್ಲಿ?’ ಎಂದು ಪಟೇಲರು, ಶಾನುಭೋಗರು ಅಂಬುಲೆನ್ಸ್ ಹತ್ರ ಬರುತ್ತಿದ್ದಂತೆ ಊರ ಜನರೆಲ್ಲ ಮುಗಿಬಿದ್ದರು. ಅಂಬುಲೆನ್ಸ್ನಲ್ಲಿದ್ದ ಇಬ್ಬರು ಹುಸೇನ್ ದೇಹವನ್ನು ಹೊರಗೆ ತಂದಿಟ್ಟರು!

ಹುಸೇನ್ ಇನ್ನಿಲ್ಲ!

ಪಟೇಲರ ಕೈಯಿಂದ ಹಾರ ಕೆಳಗೆ ಬಿತ್ತು. ದಿಗ್ಬ್ರಮೆಯಲ್ಲಿ ನಿಂತ ಜನರ ಉಸಿರು ಕಟ್ಟಿದಂತಾಗಿತ್ತು. ಸಮತಾಗೆ ಮಾತಾಡುವುದು ಅನಿವಾರ್ಯವಾಗಿತ್ತು.

ಹುಸೇನ್ಗೆ ಕ್ಷಮಾದಾನ ಸಿಕ್ಕಿರಲಿಲ್ಲ. ಕೂಡಲೇ ಗಲ್ಲಿಗೇರಿಸಲು ಆದೇಶ ಬಂದಿತ್ತು. ದಿನವೂ ಹುಸೇನ್ ಅನುಭವಿಸ್ತಾ ಇದ್ದ ಒಳ ಹಿಂಸೆಯನ್ನು ಕಣ್ಣಾರೆ ಕಂಡಿದ್ದ ಅಧಿಕಾರಿ ‘ಹುಸೇನ್ಗೆ ಹಿಂಸೆಯಿಂದ ಬಿಡುಗಡೆ’ ಅನ್ನೊ ಒಗಟಿನ ಮಾತು ಹೇಳಿದ್ದರು. ನಾನು ಈ ಮಾತಲ್ಲಿ ಬೇರೆ ಅರ್ಥ ಇರಬಹುದೆ ಅಂತ ಹುಡುಕಲು ಆರಂಭಿಸುವಾಗ್ಲೆ ಪಟೇಲರು ಸಂಭ್ರಮಿಸಿಬಿಟ್ಟಿದ್ದರು. ಸಮತಾ ಜೊತೆ ಇವರೆಲ್ಲ ಜೈಲಿಗೆ ಹೋದಾಗ್ಲೆ ಸತ್ಯ ಗೊತ್ತಾಗಿದ್ದು, ಅಲ್ಲಿ ಹುಸೇನ್ ಹೆಣ ಇವರಿಗಾಗಿ ಕಾದಿತ್ತು. ಈಗ ಇಲ್ಲಿಗೆ ಬಂದಿತ್ತು. ನಾನು ದಿಟ್ಟಿಸಿದೆ. ಹುಸೇನ್ ಹೆಣ ಭಯೋತ್ಪಾದಕರ ಬಲಿಪಶುವೂ ಹೌದು; ವ್ಯವಸ್ಥೆಯ ಕ್ರೌರ್ಯವೂ ಹೌದು. ವ್ಯವಸ್ಥೆಯ ವರವಾದ ಅಸಹಾಯಕತೆಯೂ ಹೌದು. ರಾಷ್ಟ್ರಪತಿಗಳ ಅಸಹಾಯಕತೆಯ ಸಹಿಯನ್ನು ಹುಸೇನ್ ಹೆಣದ ಮೇಲೆ ಕಂಡ ನನಗೆ ಕೇವಲ ಸಾಕ್ಷಿಯಾಗಿ ಇರಲಾಗಲಿಲ್ಲ. ಒಳಗೆ ಹಿಂಸೆಯ ಉರಿ ಎದ್ದಿತು. ಹೊರಗಿನ ಹಿಂಸೆಯನ್ನು ಸುಡಬೇಕೆಂದು ಕೇಳಿತು. ಮರುಗುತ್ತಿದ್ದ ಮನಸ್ಸು ಕೆರಳಿತು. ಎಲ್ಲರೂ ನೋಡುತ್ತಿರುವಂತೆಯೇ ಕಣ್ಣು ಕೆಂಪಾಗಿ ಮುನ್ನುಗ್ಗಿದೆ. ಕಟ್ಟಿದ್ದ ತೋರಣಗಳನ್ನೆಲ್ಲ ಕಿತ್ತೆಸೆದೆ. ಸ್ವಾಗತ ಕಮಾನನ್ನು ಕೆಡವಿದೆ. ಯಾರೂ ತಡೆಯಲಿಲ್ಲ.

ನನ್ನ ಕ್ರಿಯೆಗೆ ಸಾಕ್ಷಿಯಾಗಿ ಜನಸ್ತೋಮ ಸಂಕಟದಲ್ಲಿ ಉರಿಯುತ್ತಿತ್ತು.

***

ಮಾರನೇ ದಿನ ಪತ್ರಿಕೆಗಳಲ್ಲಿ ಸ್ಫೋಟಕ ಸುದ್ದಿಯೊಂದು ಪ್ರಕಟವಾಗಿತ್ತು: ‘ರಾಷ್ಟ್ರಪತಿಯವರ ರಾಜೀನಾಮೆ.’

ಹೌದು; ರಾಷ್ಟ್ರಪತಿಯವರು ರಾಜೀನಾಮೆ ಕೊಟ್ಟಿದ್ದರು. ಅವರು ಅನಿವಾರ್ಯವಾಗಿ ಹುಸೇನ್ಗೆ ಕ್ಷಮಾದಾನ ನಿರಾಕರಿಸಬೇಕಾಗಿ ಬಂದದ್ದೇ ರಾಜೀನಾಮೆಗೆ ಕಾರಣವೆಂದು ಬರೆಯಲಾಗಿತ್ತು. ರಾಜೀನಾಮೆ ಪತ್ರದಲ್ಲಿರುವ ಒಂದು ವಾಕ್ಯ ಸಾಕಷ್ಟು ಅರ್ಥವನ್ನು ಹೊರಡಿಸುತ್ತಿತ್ತು:

‘ಅಪರಾಧಿಗೆ ಕ್ಷಮಾದಾನ ನೀಡುವ, ನಿರಪರಾಧಿಗೆ ಕ್ಷಮಾದಾನ ನಿರಾಕರಿಸುವ ಅಸಹಾಯಕ ಅಧಿಕಾರದಲ್ಲಿ ನಾನು ಮುಂದುವರೆಯಬಾರದೆಂದು ನಿರ್ಧರಿಸಿದ್ದೇನೆ.’

ದಾಖಲೆಗಳು ಮಾತ್ರವೇ ಸಾಕ್ಷಿಯಾಗುವ ಅನಿವಾರ್ಯದಲ್ಲಿ ಅಂತಃಸಾಕ್ಷಿಗೆ ಸ್ಥಾನವೆಲ್ಲಿದೆ? ಅಂತಃಸಾಕ್ಷಿಯಿಲ್ಲದ ಅಧಿಕಾರಕ್ಕೆ ಅಂತಃಕರಣವೆಲ್ಲಿದೆ?

ಪ್ರಶ್ನೆಗಳು ಕಾಡುತ್ತಿರುವಾಗ ಹುಸೇನ್ನನ್ನು ಹುಡುಕಿಕೊಂಡು ಬಂದೆ. ಸಮಾಧಿಯ ಮುಂದೆ ಸಂಕಟವಾಗಿ ನಿಂತಿದ್ದೆ. ಕೆಂಡದ ಕೈಯಿಂದ ಕತೆ ಬರೆಯಬೇಕು ಎಂದುಕೊಂಡೆ.
*****
೨೦೧೪
ಮುಗಿಯಿತು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...