ಮಾರನೇ ದಿನ ಹುಸೇನ್ ಊರಿಗೆ ಬಾರ್ವಾಗ ಖುಷಿಯಾಗಿದ್ದ. ನಾನಾದ್ರೂ ಶಾಲೆ ಹತ್ರಾನೇ ಠಳಾಯಿಸ್ತಿದ್ದೆ. ಆತ ಏನೇ ಖುಷಿ ಇದ್ರೂ ಮೊದ್ಲು ಹೇಳೋದು ಟೀಚರಮ್ಮಂಗೆ ಅಂತ ನಂಗೊತ್ತಿತ್ತು. ಒಂದೊಂದ್ಸಾರಿ ನಂಗನ್ನುಸ್ತಿತ್ತು : ಇವರಿಬ್ಬರ ಸಂಬಂಧ ಎಂಥಾದ್ದು? ಯಾಕಿಷ್ಟು ಆತ್ಮೀಯತೆ? ಇವರ ಮನಸ್ಸಲ್ಲೇನಿರಬಹುದು? ಛೇ! ಮನಸ್ಸಲ್ಲೇನಿರಬಹುದು ಅನ್ನೋದೆ ಮುಖ್ಯವಾಗ್ತಿದೆ ಅನ್ನಿಸಿ ಬೇರೆ ರೀತಿ ಯೋಚಿಸೋಕ್ ಶುರು ಮಾಡ್ಡೆ. ಗಂಡು-ಹೆಣ್ಣು ಆತ್ಮೀಯವಾಗಿದ್ದ ಕೂಡ್ಲೆ ಅದು ಪ್ರೇಮಾನೇ ಆಗಿರ್ಬೇಕ? ಅದನ್ನು ಮೀರಿದ ಮಿಡಿತಾನೂ ಇರಬಹುದಲ್ವೆ? ಇರುತ್ತೆ ಅಲ್ವೆ? ಹೀಗೆ ಪ್ರಶ್ನೆ ಮಾಡ್ಕೊಂಡೆ. ಜೊತೆಗೆ ಅನ್ನಿಸ್ತು-ಮನಸ್ಸಿನಲ್ಲಿ ಅವರಿಗೇ ವಿವರಿಸ್ಕೊಳ್ಳೋಕೆ ಆಗದೆ ಇರೊ ಆಕರ್ಷಣೆ ಇರಬಹುದು. ಅದೇ ಆತ್ಮೀಯತೆ ಆಗಿರಬಹುದು. ಶಬ್ದಕ್ಕೆ ಸಿಗದೆ ಇರೊ ಸೆಳೆತಕ್ಕೆ ಯಾವ ಹೆಸರು ಕೊಡೋದು? ಅಲ್ವ? ನಾನ್ ಕಂಡಂತೆ ಇಷ್ಟಂತೂ ನಿಜ: ಟೀಚರಮ್ಮ ಹುಸೇನ್ ಹಿಂದಿನ ನೈತಿಕ ಮೌಲ್ಯ ಹುಸೇನ್ಗಷ್ಟೇ ಅಲ್ಲ ಊರಿನ ನೈತಿಕ ಮೌಲ್ಯ. ಅದು ವೈಯತ್ತಿಕ ನೈತಿಕತೆ ಅಷ್ಟೇ ಅಲ್ಲ, ಆಕೆ ಬದುಕೊ ರೀತೀನೆ ಒಂದು ಮೌಲ್ಯದಂತೆ ಕಾಡ್ತಾ ಇದೆ. ಅದ್ರಲ್ಲಿ ಸಮಾಜದ ಒಳಿತು ಒಂದಾಗಿದೆ. ಅದಕ್ಕೇ ಊರು ಅವ್ರನ್ನ ಒಂದ್ ಮಾಡ್ಕೊಂಡಿದೆ. ಅದಕ್ಕೆ ಹುಸೇನ್ ಮತ್ತು ಟೀಚರಮ್ಮನ ಆತ್ಮೀಯತೇನ ಯಾರೂ ಅಪಾರ್ಥ ಮಾಡ್ಕೊಂಡಿಲ್ಲ.
ಅದೇನೇ ಇರ್ಲಿ, ಹುಸೇನ್ ಖುಷಿಯಾಗ್ ಬಂದ. ನನ್ ನೋಡಿದ ‘ಟೀಚರಮ್ಮಂತಾವ್ಲೆ ನೀವೂ ಬರ್ರಿ’ ಎಂದು ಕರೆಯುತ್ತಲೇ ಮುಂದೆ ಹೋದ. ದುಷ್ಟನನ್ನ ಗಲ್ಲಿಗೇರಿಸಿ ಬಂದ ವೀರನ ಶೈಲಿಯಲ್ಲಿ ಆತನ ಕರೆ ಇತ್ತು. ನನಗೆ ಬೇರೆ ದಾರಿ ಇರ್ಲಿಲ್ಲ! ಆತನ ಹಿಂದೇನೇ ಹೋದೆ.
ಟೀಚರಮ್ಮನ ಹತ್ರ ಹೋದವನೆ ರೌಡಿ ರಾಜೇಶನ ಕೊರಳಿಗೆ ನೇಣು ಹಾಕಿದ್ದನ್ನ ಹೇಳಿ ಸಂತೋಷಪಟ್ಟ, ಆನಂತರ ಬ್ಯಾಗಿನಿಂದ ಒಂದು ಫೋಟೊ ತೆಗೆದ. ಅದು ರಾಷ್ಟ್ರಪತಿಗಳ ಜೊತೆ ತಾನು ಇರುವ ಫೋಟೊ! ಒಂದೇ ಸಾರಿ ಕಟ್ಟು ಗ್ಲಾಸು ಹಾಕಿಸ್ಕೊಂಡೇ ತಂದಿದ್ದ. ತೋರಿಸಿ ಸಂಭ್ರಮಿಸಿದ. ಈ ಸಂಭ್ರಮವನ್ನು ಟೀಚರಮ್ಮ ಸರಿಯಾಗಿಯೇ ಹಂಚಿಕೊಂಡರು. ಇಡೀ ಶಾಲೆಗೇ ಹಂಚಿದರು. ಅಧ್ಯಾಪಕರನ್ನೆಲ್ಲ ಕರೆದ್ರು, ತೋರ್ಸಿದ್ರು, ವಿದ್ಯಾರ್ಥಿಗಳನ್ನು ಕರೆದು ಕೂಡ್ಸಿದ್ರು. ಫೋಟೊ ತೋರ್ಸಿ ವಿವರಿಸಿದ್ರು. ಹುಸೇನ್ಗಾಗಿ ಚಪ್ಪಾಳೆ ತಟ್ಟಿ ಅಂತ ಹೇಳಿದ್ರು, ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿದಾಗ ಹುಸೇನ್ ಆನಂದಕ್ಕೆ ಪದಗಳಿರಲಿಲ್ಲ.
ಆಮೇಲೆ ಟೀಚರಮ್ಮ ಹೇಳಿದ್ರು; ‘ಈಗ ಈ ಫೋಟೋನ ಮೊದ್ಲು ಊರ ಹಿರಿಯರಿಗ್ ತೋರ್ಸು.’
ಹುಸೇನ್ ಥಟ್ಟನೆ ಹೊರಟ. ಟೀಚರಮ್ಮ ನಿಲ್ಲಿಸಿ ಮತ್ತೆ ಹೇಳಿದ್ರು- ನನ್ನ ತೋರ್ಸಿ: ‘ಇವ್ರನ್ನ ಜತೇಲ್ ಕರ್ಕಂಡ್ ಹೋಗು, ನನ್ಬದ್ಲು ನಿನ್ ಬೆಂಬಲಕ್ಕೆ ಇವ್ರ್ ಇರ್ತಾರೆ ಅಂತ ತಿಳ್ಕೊ.’
ನಾನ್ ಕೇಳಿದೆ: ‘ಇದೇನ್ ಟೀಚರಮ್ಮ – ಬೆಂಬಲ – ಅಂತ ಪದ ಬಳ್ಸಿದ್ರಲ್ಲ?’
ಆಕೆ ಹೇಳಿದ್ರು; ‘ನೀವ್ ಸಾಹಿತ್ಯದೋರ್ ಹೀಗೇ ನೋಡಿ, ಪ್ರತಿ ಪದಾನೂ ಹಿಡ್ಕೊಂಡ್ ಬಿಡ್ತೀರ! ಮೊನ್ನೆ ಹುಸೇನ್ ಅವಮಾನ ಅನುಭವಿಸಿದ್ದುಂಟಲ್ವ, ಅದಕ್ಕೆ ಆತನಿಗೆ ಅಳುಕಾಗದೆ ಇರ್ಲಿ ಅಂತ ಬೆಂಬಲಕ್ಕೆ ಇದ್ದಾರೆ ಅಂತ ನಿಮ್ಮನ್ ತೋರಿಸ್ದೆ; ತಪ್ಪಾ?’
‘ತಪ್ಪು ಅನ್ನೋಕಾಗುತ್ತ? ನಿಮ್ಮ ನೈತಿಕತೆ ದೊಡ್ಡದು’ ಅಂತ ನಾನ್ ಹೇಳ್ದಾಗ ಅವರು ಮರು ಮಾತಾಡಲಿಲ್ಲ, ನಸುನಕ್ಕರು.
ನಾವು ಬೈಕ್ ಹತ್ತಿ ಹೊರಡೋವರೆಗೂ ನೋಡ್ತಾ ನಿಂತಿದ್ರು.
ಪಟೇಲರ ಮನೆ ಮೂಲೇಲಿ ಹುಸೇನ್ ಬೈಕ್ ನಿಲ್ಲಿಸಿದ. ಅದೃಷ್ಟಕ್ಕೆ ಪಟೇಲರ ಜೊತೆ ಶಾನುಭೋಗರೂ ಇದ್ದರು. ಹಳ್ಳಿ ಆಡಳಿತ ವ್ಯವಸ್ಥೆಲಿ ಮೊದಲಿಂದ ಜೊತೇಲಿದ್ದೋರು, ಈಗ್ಲೂ ಹಾಗೇ ಇದಾರೆ. ಊರು ಸೂರು ಅಂತ ಮಾತಾಡ್ಕಂಡು ಕಾಲ ಕಳೀತಾರೆ.
ನಾನು- ಹುಸೇನ್, ಪಟೇಲರ ಮುಂದೆ ನಿಂತ ಕೂಡ್ಲೆ ಪಟೇಲರು, ‘ಬಾರಯ್ಯ ಬಾ, ನೆನ್ನೆ ಎಲ್ ಕಾಣುಸ್ಲೇ ಇಲ್ಲ. ಫೋಟೊ ಬೇಕು ಅಂತ ರಾಷ್ಟ್ರಪತಿಗಳ್ತಾವೋಗಿದ್ಯ? ಎಂದು ಹುಸೇನನನ್ನು ಕೇಳಿದಾಗ ಶಾನುಭೋಗ್ರು, ‘ಅಪದ್ದ ನುಡ್ಯೋರೆಲ್ಲ ಅಪಹಾಸ್ಯಕ್ ಈಡಾಗ್ತಾರೆ ಅಂತ ಇವ್ನಿಗ್ ಗೊತ್ತಿಲ್ಲ ಅಂತಕಾಣ್ಸುತ್ತೆ’ ಎಂದು ಹಗುರವಾಗಿ ಮಾತಾಡಿದ್ರು. ಪಾಪ! ಹುಸೇನ್ ಮುಖ ಹಸಿಹುಣಸೇ ಹಣ್ಣು ತಿಂದಂಗಾಯ್ತು, ನನಗ್ಯಾಕೊ ತಡ್ಕೊಳ್ಳಾಕಾಗ್ಲಿಲ್ಲ; ಹುಸೇನ್ ಕೈಯಾಗಿದ್ದ ಫೋಟೋ ತಗಂಡು ಅವಿಬ್ರ ಮುಖಕ್ ಹಿಡಿದೆ. ‘ನೋಡಿ, ಇಲ್ನೋಡಿ, ಯಾರಿದಾರೆ ಇದ್ರಲ್ಲಿ’ ಎಂದು ತುಸು ಕೋಪದಿಂದ್ದೇ ಹೇಳಿದೆ. ಪಟೇಲರು – ಶಾನುಭೋಗ್ರು ಮುಖಮುಖ ನೋಡ್ಕೊಂಡ್ರು. ಶಾನುಭೋಗ್ರು ‘ಇವಾಗದೇನೊ ಮಾಡ್ತಾರಂತಲ್ಲ ಎರಡು ಫೋಟೊ ಸೇರ್ಸಿ ಒಂದೇ ಮಾಡಾದು, ಹಾಗಲ್ಲ ತಾನೆ ಇದು?’ ಎಂದು ಪ್ರಶ್ನಿಸಿದರು. ಕೂಡಲೇ ಪಟೇಲು ‘ಇದಕ್ಕೇಳ್ರಿ ಮತ್ತೆ’ ಎಂದು ಹುಬ್ಬು ಹಾರಿಸಿದ್ರು.
ನನಗೆ ತಡೆಯಲಾಗಿಲ್ಲ, ‘ಊರೋರೆಲ್ಲ ಒಂದೇ ಅಂತೀರ, ಹೀಗೆಲ್ಲ ಮಾತಾಡ್ತೀರ, ಇದ್ ಸರೀನ? ನಮ್ಮೂರ್ ಹುಸೇನನ್ನ ರಾಷ್ಟ್ರಪತಿಗಳು ಚೆನ್ನಾಗ್ ಕಂಡ್ಕೊಂಡ್ರು ಅಂತ ಆನಂದ ಪಡೋ ಬದ್ಲು ಒಳ್ಳೇ ಉರ್ಕಂತೀರಲ್ಲ, ನೀವ್ ದೊಡ್ ಮನುಷ್ಯರ, ನಿಮ್ಮೊಳ್ಗಿರೊ ಉರಿ ಮೇಲ್ ನೀರ್ ಸುರ್ಕಂಡು ಸಮಾದಾನ್ವಾಗ್ ಈ ಫೋಟೊ ನೋಡಿ. ನೀವ್ ಹೆಮ್ಮೆ ಪಟ್ರೆ ದೊಡ್ ಮನುಷ್ಯರು; ಹೊಟ್ಟೆ ಉರ್ಕಂಡ್ರೆ ಸಣ್ ಮನುಷ್ಯರು…..’ ಎಂದು ಒಂದೇ ಸಮ ಝಾಡಿಸಿದೆ.
ಶಾನುಭೋಗರು, ‘ಅದಂಗಲ್ಲಪ್ಪ…..’ ಎಂದು ಏನೋ ಸಮಾಜಾಯಿಷಿ ಕೊಡೊ ಪ್ರಯತ್ನ ಮಾಡಿದ್ರೂ ನಾನು ಬಿಡಲಿಲ್ಲ. ‘ಸುಮ್ನೆ ಮಾತಾಡ್ಬೇಡಿ, ನಿಮ್ಗಿನ್ನೂ ವರ್ಣ-ವರ್ಗ ಬಿಟ್ಟಿಲ್ಲ. ದೊಡ್ಡತನ ಒಳ್ಗಿಂದ ಹುಟ್ಟೋ ಭಾವನೆ, ಹೊರಗಡೆ ಹೊದ್ಯೋ ಬುದ್ದೀ ಅಲ್ಲ’ ಎಂದು ದಬಾಯಿಸಿದೆ.
ಶಾನುಭೋಗರಿಗೆ ಬೇಗ ಅರ್ಥ ಆಯ್ತು : ‘ನೀನ್ ಹೇಳೋದ್ರಲ್ಲೂ ನಿಜ ಇದೆ, ಆದ್ರೆ ನಾವು ದುಷ್ಟರಲ್ಲ, ಏನೋ ಒಂದ್ ಕ್ಷಣ ಒಳ್ಗಡೆ ಉರಿ ಓಡಾಡ್ತು, ತುಟಿಮೀರ್ ಮಾತಾಡಿದ್ವಿ. ಅದೆನ್ನೆಲ್ಲ ಬೆಳ್ಸೋದ್ ಬೇಡ’ ಎಂದು ನನಗೂ ಸಮಾಧಾನ ಮಾಡ್ತಾ ತಾವೂ ಸಮಾಧಾನ ಮಾಡ್ಕೊಳ್ಳೋಕ್ ಪ್ರಯತ್ನ ಮಾಡಿದ್ರು. ಪಟೇಲೂ ಸುಮ್ಮನಿರಲಿಲ್ಲ. ‘ನೀನ್ ಇಷ್ಟೆಲ್ಲ ಅಂದ್ರೂ ಸುಮ್ನೆ ಇದ್ದೀವಲ್ಲ, ಇದೇ ಸಾಕಲ್ವ ನಾವ್ ಮೊದ್ದಿನಂಗಿಲ್ಲ ಅನ್ನಾಕೆ?’ ಎಂದು ಪ್ರಶ್ನಿಸಿದರು. ‘ಆದ್ರೆ ಇಷ್ಟೆಲ್ಲ ಅನ್ನಿಸ್ಕಳ್ ಬೇಕಾಗಿರ್ಲಿಲ್ಲ ನೀವು’ ಎಂದು ನಾನೂ ಸಿಟ್ಟು ಕಡಿಮೆ ಮಾಡಿಕೊಂಡು ಹೇಳಿದೆ. ಆಗ ಪಟೇಲರು, ‘ಫೋಟೋದಾಗ್ ತುಂಬಾ ಚಂದಾಗ್ ಕಾಣ್ತೀಯ ಕಣಯ್ಯ’ ಎಂದು ಹುಸೇನನನ್ನು ಹೊಗಳಿದರು. ‘ರಾಷ್ಟ್ರಪತಿಗಳ ಪಕ್ಕ ನಿಂತ್ಕಂಡಿರೋದು ನಮ್ಗೂ ಹೆಮ್ಮೆ ಕಣಯ್ಯ’ ಎಂದು ಶಾನುಭೋಗರು.
ಪಟೇಲರು ತಮ್ಮ ಪತ್ನಿನ ಕರೆದರು. ಒಳಗಿಂದ ಬಂದ ಪತ್ನಿಗೆ ಫೋಟೊ ತೋರ್ಸಿ, ‘ನಮ್ ಹುಸೇನ್ ಅದೃಷ್ಟ ನೋಡು’ ಎಂದು ಸಂತೋಷ ತೋರ್ಸಿದ್ರು. ಜೊತೆಗೆ ‘ಒಳ್ಳೆ ಕಾಫಿ ಮಾಡ್ಕೊಂಡ್ ಬಾ’ ಎಂದು ಸೇರಿಸಿದರು. ಆಕೆ ಫೋಟೊ ದಿಟ್ಟಿಸಿ ನೋಡಿ, ‘ಹುಸೇನ್ ಏಟಾದ್ರೂ ನಮ್ಮೂರ್ ಹುಡ್ಗ ಅಲ್ವ’ ಎಂದು ಮೆಚ್ಚುಗೆ ಸೂಚಿಸಿ ಕಾಫಿ ಮಾಡಲು ಒಳಹೋದರು. ಪಟೇಲರು ‘ಕೂತ್ಕೊಳಯ್ಯ’ ಎಂದು ಹುಸೇನ್ಗೆ ಹೇಳಿದರು. ನನಗೆ ಹೇಳದಿದ್ರೂ ಕೂತ್ಬಿಟ್ಟೆ ಹುಸೇನ್ ಹಿಂಜರಿದ. ಪಟೇಲ್ರು- ಶಾನುಭೋಗ್ರು ಒತ್ತಾಯಿಸಿದ ಮೇಲೆ ಕೂತ. ಅಷ್ಟರಲ್ಲಿ ಕಾಫಿ ಬಂತು. ಖುಷಿಯಾಗಿ ಕುಡಿದು ಅಲ್ಲಿಂದ ಹೊರಟೆವು.
ಹುಸೇನ್ ಮನೆಗೆ ಬಂದಾಗ ನನಗೆ ಮಾತಾಡುವ ಕೆಲಸ ಬೀಳಲೇ ಇಲ್ಲ. ಹುಸೇನ್ ತಾನೇ ಆ ಕೆಲಸ ಮಾಡಿದ. ಫೋಟೊ ತೋರಿಸಿ ಸಂಭ್ರಮಿಸಿದ. ತಂಗಿ, ತಂದೆ ತಮ್ಮ ಸಂತೋಷಾನ ಯಾವ ಮಾತುಗಳಲ್ಲಿ ಹೇಳಬಹುದು ಅಂತ ಅವರ ಮುಖಾನೇ ನೋಡಿದ. ಫಾತಿಮಾ ಮುಖ ಮಾತಾಯ್ತು! ಹಯಾತ್ ಸಾಬರ ನೋಟ ನುಡೀತು!
ಫಾತಿಮಾ ಫೋಟೊ ತೆಗೆದುಕೊಂಡು ಒಳಹೋದಳು, ಗೋಡೆಗೆ ಮೊಳೆ ಹೊಡೆದಳು. ಫೋಟೋನ ತಗಲಿ ಹಾಕಿ ಕಣ್ಣರಳಿಸಿ ನೋಡಿದಳು. ಆಗ ಹಯಾತ್ ಸಾಬರು ಫೋಟೊ ಹತ್ರ ಹೋದರು. ರಾಷ್ಟ್ರಪತಿಗಳನ್ನು ಮುಟ್ಟಿ ಕೈಮುಗಿದರು. ಇಬ್ಬರದು ಎಂಥ ಭಾವ! ಭಾವಗಳಿಗೆ ಎಲ್ಲ ಸಂದರ್ಭದಲ್ಲೂ ಸರಿಯಾದ ಪದ ಸಿಗೋದಿಲ್ಲ. ಬುದ್ಧಿ ವಿಷಯ ಹಾಗಲ್ಲ, ಬುದ್ದಿಯನ್ನು ಪದಗಳಲ್ಲಿ ಹಿಡಿದಿಡಬಹುದು. ಫಾತಿಮಾ ಮತ್ತು ಹಯಾತ್, ಪದಗಳು ಸಿಕ್ಕದ ಭಾವದಲ್ಲಿ ಕಂಡರು. ಕಂಡದ್ದು ನನಗೆ, ಪದಗಳು ಸಿಕ್ಕದೇ ಹೋದದ್ದೂ ನನಗೆ! ಕತೆಗಾರನ ಸ್ಥಿತಿ ನೋಡಿ, ಹೇಗಾಯ್ತು! ಆದ್ರೆ ಇಷ್ಟು ಮಾತ್ರ ನಿಜ. ಅವರಿಬ್ಬರ ಭಾವ ನನ್ನೊಳಗೆ ಬಂದುಬಿಟ್ಟಿತ್ತು. ಮಾತಿಲ್ಲದೆ ಮೂಕವಾದ ಮನಸ್ಸು! ಅದೇ ಕತೆಯ ಮನಸ್ಸು!
***
ಮಾರನೇ ದಿನ ಸಾಯಂಕಾಲ ಸಿಕ್ಕಿದಾಗ ಹುಸೇನ್ ಅಷ್ಟು ಖುಷಿಯಾಗಿರಲಿಲ್ಲ, ‘ಯಾಕಪ್ಪ ಹೀಗೆ’ ಅಂದ್ರೂ ಬಾಯಿ ಬಿಡಲಿಲ್ಲ, ಆದ್ರೆ ನಾನೂ ಬಿಡಲಿಲ್ಲ, ಒತ್ತಾಯ ಮಾಡ್ಡೆ. ‘ಅಲ್ಲ, ನೆನ್ನೆ ಪಟೇಲ್ರು ಮನೆ ಹತ್ರ ನಿನಗಾಗಿ ಅಷ್ಟೆಲ್ಲ ಮಾತಾಡಿದ್ದೀನಿ, ನನ್ ಹತ್ರ ಮನಬಿಚ್ಚಿ ಮಾತಾಡೋಕ್ ಹಿಂದೇಟ್ ಹಾಕ್ತಿಯಲ್ಲ’ ಎಂದು ಒಂದು ಪಟ್ಟು ಹಾಕಿದೆ. ಆತ ‘ಬೈಕ್ ಮ್ಯಾಲ್ ಕುಂತ್ಕಳಿ’ ಎಂದ. ಕೂತೆ. ಸೀದಾ ಟೀಚರಮ್ಮನ ಮನೆ ಹತ್ರ ಬಂದ. ‘ಇಳೀರಿ’ ಅಂದ. ಇಳಿದೆ. ‘ಒಳೀಕ್ ಬರ್ರಿ’ ಅಂದ. ಹೋದೆ.
ಆ ವೇಳೆಗೆ ಟೀಚರಮ್ಮ ಸ್ಕೂಲಿಂದ ಬಂದಿದ್ದರು. ಕಾವೇರಮ್ಮ ಕಾಫಿ ಮಾಡ್ತಿದ್ದರು. ಒಳಹೋದವನೇ ಹುಸೇನ್ ಮೇಲೆ ಕಂಪ್ಲೆಂಟ್ ಮಾಡ್ದೆ. ‘ಏನೊ ಗುಟ್ಟು ಮಾಡ್ತಿದಾನೆ’ ಎಂದೆ. ಆತ ‘ಟೀಚರಮ್ಮನ್ ಹತ್ರ ಎಂತಾ ಗುಟ್ಟು’ ಎಂದ. ಆಕೆ ನಸುನಕ್ಕಳು. ನನಗೆ ಏನೇನೋ ಅನುಮಾನ. ಇವರಿಬ್ಬರದು ಏನಾದ್ರು ಗುಟ್ಟು? ಹೀಗೆ ನಾನು ಒಳಗೇ ಹೂತು ಹೊಗ್ತಾ ಇದ್ದಾಗ, ಹುಸೇನ್ ‘ನಿಮ್ಗೊಂದ್ಸಾರಿ ಟೀಚರಮ್ಮಂಗೊಂದ್ಸಾರಿ ಹೇಳಾದ್ ಯಾಕೆ, ಒಂದೇ ಸಾರಿ ಇಬ್ರಿಗೂ ಹೇಳಾನ ಅಂತ ಕರ್ಕಂಡ್ ಬಂದೆ’ ಎಂದು ವಿವರಣೆ ಕೊಟ್ಟು ನನ್ನಲ್ಲಿ ಗೊಂದಲ ಮೂಡ್ಸಿದ್ದ. ಆತ ಗೊಂದಲ ಮೂಡಿಸಿದ್ನೋ ಈ ಕತೆಗಾರನೇ ಗೊಂದಲ ಮಾಡ್ಕೊಂಡನೊ ಹೇಗೆ ಕಂಡ್ಕೊಳ್ಳೋದು ಅಂತ ಯೋಚಿಸ್ತಾ ಇರುವಾಗ ‘ಇವತ್ತು ಜೇಲ್ನಾಗೆ ಸಮತಾ ಅವ್ರು ನನ್ತಾವ ಏನೇನೊ ಮಾತಾಡಿದ್ರು’ ಅನ್ನಬೇಕೆ ಈ ಹುಸೇನ್! ಇದೇನು ಟೀಚರಮ್ಮನ ವಿಷಯಾನೊ ಸಮತಾ ವಿಷಯಾನೊ ಬೇಗ ಪೂರ್ತಿ ಹೇಳ್ಬಾರ್ದ ಅಂತ ನಾನು ಚಡಪಡಿಸಿದೆ.
ಹುಸೇನ್ ತನ್ನ ಚಿಂತೆಗೆ- ಗೊಂದಲಕ್ಕೆ ಕಾರಣವಾದ ಪ್ರಸಂಗಾನ ಹೇಳಿದಾಗ, ನನ್ನ ಕೆಟ್ಟ ಕುತೂಹಲ ಕೂತಲ್ಲೇ ಕಳೆದುಹೋಯ್ತು!….
ಹುಸೇನ್ ರಾಷ್ಟ್ರಪತಿಗಳ ಜೊತೆಗಿನ ಫೋಟೋನ ಸಮತಾಗೆ ತೋರಿದ್ದ. ಆಕೆಗೂ ಸಂತೋಷ ಆಯ್ತು. ಇನ್ನೊಂದ್ ಫೋಟೋಗೆ ಕಟ್ಟುಗ್ಲಾಸು ಹಾಕ್ಸಿ ಮನೆ ಗೋಡೇಗ್ ತಗ್ಲಾಕಿದ್ದೀನಿ ಅಂತಾನೂ ಹೇಳ್ದ. ‘ಒಳ್ಳೇದು’ ಅಂದಳು. ಆನಂತರ ರೌಡಿ ರಾಜೇಶ್ಗೆ ನೇಣು ಬಿಗಿದ ವಿಷಯಾನೂ ಹೇಳಿ ಸಂಭ್ರಮಿಸಿದ. ಆಕೆ ಮೌನವಾಗಿದ್ದಳು. ಈತನಿಗೆ ಅರ್ಥವಾಗ್ಲಿಲ್ಲ. ಆಮೇಲೆ ಸಮತಾ ಕೇಳಿದ್ದು ಹೀಗೆ: ‘ಒಂದ್ ವೇಳೆ ನನ್ನನ್ನ ಗಲ್ಲಿಗೇರ್ಸೊ ಸಂದರ್ಭ ಬಂದ್ರೆ, ಆಗ್ಲೂ ಹೀಗೇ ಸಂತೋಷ ಪಡ್ತೀಯಾ?’
ಹುಸೇನ್ ತಬ್ಬಿಬ್ಬಾದ! ನಿರೀಕ್ಷೆ ಮಾಡದ ಪ್ರಶ್ನೆ. ಸಮತಾ ಅಲ್ಲಿಗೇ ಸುಮ್ಮನಾಗ್ಲಿಲ್ಲ. ಮತ್ತೆ ಅದೇ ಪ್ರಶ್ನೆ ಕೇಳಿದಳು. ಆಗ ‘ನಿಮಗ್ಯಾಕ್ ಗಲ್ಲುಶಿಕ್ಷೆ ಆಗ್ತೈತೆ? ಸುಮ್ ಸುಮ್ಕೆ ಇದೆಲ್ಲ ಹೇಳ್ಬ್ಯಾಡಿ’ ಎಂದು ಉತ್ತರಿಸಿದ. ಆಕೆ ಬಿಡಲಿಲ್ಲ. ‘ಒಂದ್ ವೇಳೆ ಗಲ್ಲು ಶಿಕ್ಷೆ ಆಯ್ತು ಅಂತ ಇಟ್ಕೊ’ ಎಂದು ಮತ್ತೆ ಕೆಣಕಿದಳು. ‘ನಿಮ್ಗೆ ಗಲ್ ಶಿಕ್ಷೆ ಆಗಲ್ಲ ಅಂತ ಹೇಳಿದ್ನಲ್ಲ’ ಎಂದು ಈತನದು ಮತ್ತದೇ ಉತ್ತರ. ‘ನೀನೇನು ನ್ಯಾಯಾಧೀಶಾನ?’ ಸಮತಾ ಮರುಪ್ರಶ್ನೆ. ‘ಅಲ್ಲ’ – ಹುಸೇನ್ ಹೇಳಿದ – ‘ಆದ್ರೆ ನನ್ ಮನ್ಸು ಹಂಗಂತ ಹೇಳ್ತಾ ಐತೆ’
ಸಮತಾ ನಸು ನಕ್ಕಳು. ‘ನ್ಯಾಯ ಅನ್ನೋದು ಮನಸ್ಸಿನ ಮಾತ್ ಕೇಳುತ್ತೋ? ಮೆದುಳಿನ್ ಮಾತ್ ಕೇಳುತ್ತೋ?’ – ಎಂದು ಕೇಳಿದಳು. ‘ಅಯ್ಯೋ ನಂಗ್ ಆಟಂದೆಲ್ಲ ಗೊತ್ತಾಗಂಗಿದ್ರೆ ಕೋರ್ಟ್ನಾಗ್ ಕುರ್ಚಿ ಮ್ಯಾಲ್ ಕುಂತಿರ್ತಿದ್ದೆ. ಇಲ್ ಯಾಕ್ ಇರ್ತಿದ್ದೆ’ ಎಂದು ಹುಸೇನ್ ಉತ್ತರಿಸಿದ.
‘ನನಿಗ್ ಗಲ್ಲು ಶಿಕ್ಷೆ ಆಗಲ್ಲ ಅಂತ ನಿನ್ ಮನಸ್ಸು ಹೇಳುತ್ತೆ ಅಂದ್ಯಲ್ಲ, ಅದೇ ಮನಸ್ಸಿಂದ ನಂಗೊಂದ್ ಸಹಾಯ ಮಾಡ್ತೀಯ?’ – ಸಮತಾ ನಿರೀಕ್ಷೆಯ ನೋಟದಿಂದ ನುಡಿದಾಗ, ಹುಸೇನ್ಗೆ ಕುತೂಹಲ. ‘ಅದೇನ್ ಹೇಳಿ’ ಎಂದು ಥಟಕ್ಕನೆ ಹೇಳಿದ.
‘ನೋಡು ಹುಸೇನ್, ನಾನು ಆ ಬಲವಂತಯ್ಯನ್ ವಿರುದ್ಧ ಹೋರಾಟ ಮಾಡ್ದೆ ಅಂತ ಕೊಲೆಗಿಲೆ ಸುಳ್ಳು ಕೇಸ್ ಹಾಕಿ ಇಲ್ಲಿ ಕೂಡ್ ಹಾಕಿದಾರೆ. ಬಲವಂತಯ್ಯನ್ ವಿರುದ್ಧ ಹೋರಾಟ ಮಾಡ್ದಾಗ ಗಲಭೆ ಆಗಿ ಒಂದಿಬ್ಬರು ಸತ್ತು ಹೋದ್ರಲ್ಲ, ಅದನ್ನ ಕೊಲೆ ಅಂತ ಮಾಡಿ ನನ್ನನ್ನ ಭಯೋತ್ಪಾದಕಿ ಅಂತ ಕರೆದು ಕೇಸ್ ಹಾಕಿದಾರೆ. ಈ ಕೇಸ್ ಹೀಗೇ ಮುಂದುವರುದ್ರೆ ಒಂದಲ್ಲ ಒಂದ್ ದಿನ ನಾನು ನಿನ್ ಕೈಯ್ಯಲ್ಲೇ ಸಾಯ್ಬೇಕಾಗುತ್ತೆ….’ ಎಂದು ಸಮತಾ ಹೇಳುತ್ತಿರುವಾಗ ನಡುವೆಯೇ ಬಾಯಿ ಹಾಕಿದ ಹುಸೇನ್ ‘ಬಿಡ್ತು ಅನ್ನವ್ವ, ಅಲ್ಲಾ ನಿಮ್ಮನ್ ಕೈ ಬಿಡಾಕಿಲ್ಲ’ ಎಂದ. ಸಮತಾ ಮಾತು ಮುಂದುವರೆಸಿದಳು: ‘ಒಂದು ವೇಳೆ ಹಾಗೇನಾದ್ರು ಆದೀತು ಅಂತಲೇ ನಿನ್ನ ಸಹಾಯ ಕೇಳ್ತಿದ್ದೀನಿ. ಮುಖ್ಯಮಂತ್ರಿ ಮಗಳು ಸುಶೀಲ ನನ್ನ ಗೆಳತಿ. ಆಕೆ ಸಹಾಯ ಮಾಡಿದ್ರೆ ನನ್ ಮೇಲಿನ್ ಕೇಸ್ ವಾಪಸ್ ತಗೊಳ್ಳೋಕ್ ಸಾಧ್ಯ. ನಾನೊಂದ್ ಪತ್ರ ಬರ್ಕೊಡ್ತೀನಿ. ಸುಶೀಲ ಫೋನ್ ನಂಬರ್ ಕೊಡ್ತೀನಿ. ಪತ್ರ ತಲುಪುಸ್ತೀಯ?’
…..ಹುಸೇನ್ ಇಷ್ಟು ವಿಷಯ ನಿರೂಪಿಸೋವಾಗ ನಾನು ಥಟ್ಟನೆ ಕೇಳಿದೆ: ‘ಪತ್ರ ಬರ್ಕೊಡೋಕೆ ಪೆನ್ನು, ಪೇಪರು? ಅದನ್ನ ಕೇಳಿದ್ರೆ ಕೊಡೊ ಕಾನೂನು ಇದ್ಯಾ?’ ಹುಸೇನ್ ಹೇಳಿದ ಪ್ರಕಾರ ಅಪಾಯಕಾರಿ ವಸ್ತುಗಳನ್ನು ಬಿಟ್ಟು ಪುಸ್ತಕ, ಪೆನ್ನು, ಪೇಪರು- ಇಂಥಾದ್ದೆಲ್ಲ ಕೈದಿಗಳಿಗೆ ಕೊಡಬಹುದು; ಮರಣದಂಡನೆ ಶಿಕ್ಷೆ ಘೋಷಣೆ ಆಗಿರೊ ಕೈದಿಗಳಿಗೂ ಈ ಸೌಲಭ್ಯ ಉಂಟು. ಇಷ್ಟು ವಿವರ ತಿಳ್ಕೊಂಡ ಮೇಲೆ ‘ಸರಿ ಮುಂದುವರ್ಸು ಹುಸೇನ್’ ಎಂದೆ. ಮುಂದಿನ ವಿವರ ಮುಂದಿನಂತಿತ್ತು…..
…..ಹುಸೇನ್ಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ; ಗೊಂದಲಕ್ ಬಿದ್ದ. ಸಮತಾ ಮತ್ತೆ ಕೇಳಿದಳು: ‘ನನಗೆ ಗಲ್ಲು ಶಿಕ್ಷೆ ಆಗಲ್ಲ ಅನ್ನೋದೇ ನಿನ್ನ ನಂಬಿಕೆ ಆಗಿದ್ ಪಕ್ಷದಲ್ಲಿ ನಾನು ಅಂಥ ತಪ್ ಮಾಡಿಲ್ಲ ಅಂತ ಆಯ್ತು ಅಲ್ವ? ಇಷ್ಟಕ್ಕೂ ತಪ್ಪಿಸ್ಕೊಂಡು ಹೋಗೋಕ್ ಸಹಾಯ ಮಾಡು ಅಂತ ನಾನ್ ಕೇಳ್ತಾ ಇಲ್ಲ; ಮೊಬೈಲ್ ಫೋನ್ ತಂದ್ಕೊಡು ಕದ್ದುಮುಚ್ಚಿ ಫೋನ್ ಮಾಡ್ತೀನಿ ಅಂತಾನೂ ಕೇಳ್ತಾ ಇಲ್ಲ. ಒಂದು ಪತ್ರ ತಲುಪಿಸು ಅಂತ ಕೇಳ್ತಿದ್ದೀನಿ. ಇಲ್ಲಿದ್ರೆ ನನ್ನನ್ ಗಲ್ಲಿಗ್ ಹಾಕೊ ಕೆಲ್ಸ ನಿನಗೇ ಬರಬಹುದು. ಯೋಚ್ನ ಮಾಡು.’
ಹುಸೇನ್ ನಿಂತಲ್ಲೇ ನಡುಗಿದ. ಸಮತಾನ ಗಲ್ಲಿಗೆ ಹಾಕೋದ? ನ್ಯಾಯಾಲಯ ಹೇಳಿದ್ರೆ ಹಾಕ್ಲೇ ಬೇಕು. ಆದ್ರೆ ಈಕೆ ಅಂಥ ತಪ್ಪು ಮಾಡಿಲ್ಲ ಅಂತ ಈತನಿಗೆ ಮನವರಿಕೆ ಆಗಿದೆ. ಅದ್ರಲ್ಲೂ ಅವತ್ತು ರಾಷ್ಟ್ರಪತಿಗಳೇ ಖುದ್ದು ಅಷ್ಟೊಂದ್ ಮಾತಾಡಿದಾರೆ, ಈಕೆ ಜೊತೆ. ಅಂದ್ಮೇಲೆ ಈಕೆ ಅಂಥ ತಪ್ಪು ಮಾಡಿಲ್ಲ ಅಂತಾನೇ ಅರ್ಥ… ಹೀಗೆ ಹುಸೇನ್ ಮನಸ್ಸು ಮಾತಾಡ್ತಾ ಇರುವಾಗ ಆ ಕಡೆಯಿಂದ ಅಧಿಕಾರಿ ಬರ್ತಾ ಇರೋದ್ ನೋಡ್ದ. ಅವರ ಜೊತೆ ಬಲವಂತಯ್ಯನ ಶಿಷ್ಯರು ಇದ್ದರು. ಅವರನ್ನು ಕರ್ಕೊಂಡ್ ಬಾರ್ತಾ ಇದ್ದದ್ದನ್ನು ನೋಡಿದವನೆ ಸಮತಾಗೆ ಹೇಳಿ ಸರಕ್ಕನೆ ಅಲ್ಲಿಂದ ಹೊರಟುಬಿಟ್ಟ.
ಆನಂತರ ಅದೇ ಚಿಂತೆ. ಯಾವತ್ತೂ ಯಾವ ಕೈದಿಗೂ ಕಿಂಚಿತ್ತು ಸಹಾಯ ಮಾಡ್ಡೆ ಇರೋನು, ಸಮತಾಗೆ ಈ ಸಹಾಯ ಮಾಡಬಹುದ? ಸಹಾಯ ಮಾಡಿದ್ರೆ ಆಕೆ ಪ್ರಾಣ ಉಳೀಬಹುದು, ಇಲ್ದಿದ್ರೆ ಹೋಗ್ಬಹುದು ಅಂತ ಆಕೇನೇ ಹೇಳ್ತಾ ಇದಾರೆ. ‘ಅಲ್ಲಾ! ಏನು ಮಾಡ್ಲಿ?’ ಅಂತ ಚಡಪಡಿಸ್ತಾನೇ ಊರಿಗೆ ಬಂದಿದ್ದ.
….ನಾನು ಆತನ ಚಿಂತೆ ಕಂತೆ ಎಲ್ಲಾ ಬಿಟ್ಟು, ‘ಅಲ್ಲ, ಆ ಬಲವಂತಯ್ಯನ ಶಿಷ್ಯರ ಸೆಲ್ ಹತ್ರ ಯಾಕ್ ಕರ್ಕಂಡ್ ಬಂದ್ರು? ಸೆಪರೇಟಾಗಿ ಭೇಟಿ ಮಾಡುಸ್ಬಹುದು, ಅಲ್ವ?’ ಎಂದು ಕೇಳಿದೆ. ಆಗ ಹುಸೇನ್ ಹೇಳಿದ: ‘ಮರಣದಂಡನೆ ಅಂತ ಹೇಳಿದ್ ಮ್ಯಾಲೆ ಹಂಗೆಲ್ಲ ಮಾಡಂಗಿಲ್ಲ. ಸೆಲ್ ಹತ್ರಾನೇ ಕರ್ಕಂಡ್ ಹೋಗ್ಬೇಕು.. ಮಾತು ಮುಗ್ಯೋವರ್ಗೂ ಆಪೀಸರು ಅಲ್ಲೇ ನಿಂತಿರ್ಬೇಕು.’
‘ಬಲವಂತಯ್ಯನ್ ವಿಷ್ಯ ಬಿಡಿ. ಸಮತಾ ವಿಷ್ಯಕ್ ಬನ್ನಿ’ – ಎಂದು ಟೀಚರಮ್ಮ ಹೇಳಿದಾಗ ನನ್ನ ಪ್ರಶ್ನೆಗಳಿಗೆ ವಿರಾಮ ಕೊಟ್ಟೆ, ಸಮತಾ ಬಗ್ಗೆ ನನಗೆ ಗೊತ್ತಿತ್ತು. ಆಕೆ ಪ್ರಾಮಾಣಿಕ ಹೋರಾಟಗಾರ್ತಿ; ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇರೊ ಸಾಮಾಜಿಕ ಕ್ರಿಯಾಶೀಲೆ. ವಿಶೇಷವಾಗಿ ಮಹಿಳೆಯರಿಗೆ ಅನ್ಯಾಯ ಆದಾಗ ಪ್ರತಿಭಟನೆ ಹಮ್ಮಿಕೊಂಡು ಸಮಾಜದ, ಸರ್ಕಾರದ ಗಮನ ಸೆಳೀತಾ ಬಂದಿರೊ ಸಮತಾ ಬಗ್ಗೆ ಪತ್ರಿಕೆಗಳಲ್ಲಿ, ಟಿ.ವಿ. ವಾಹಿನಿಗಳ ಚರ್ಚೆಗಳಲ್ಲಿ ಸಾಕಷ್ಟು ಗಮನಿಸಿದ್ದೆ. ಆದ್ರೂ ನಾನೇ ಮೊದ್ಲು ಪ್ರತಿಕ್ರಿಯಿಸೊ ಬದ್ಲು ಟೀಚರಮ್ಮಂಗೇ ಮೊದಲ ಅವಕಾಶ ಬಿಟ್ಟುಕೊಟ್ಟೆ. ಹುಸೇನ್ ಮೊದಲ ಆದ್ಯತೇನೂ ಟೀಚರಮ್ಮ ತಾನೆ?
‘ಸಮತಾ ಅವರು ತಪ್ಪು ಮಾಡಿದಾರೆ ಅಂತ ನನಗೆ ಅನ್ಸೋದಿಲ್ಲ. ಅವ್ರ ಬಗ್ಗೆ ಸಾಕಷ್ಟು ಓದಿದ್ದೀನಿ. ಯಾವತ್ತಾದ್ರು ನಮ್ ಸ್ಕೂಲಿಗೆ ಕರ್ಸಿ ಭಾಷಣ- ಸಂವಾದ ಏರ್ಪಡಿಸ್ಬೇಕು ಅಂತೂ ಆಸೆ ಪಟ್ಟಿದ್ದೀನಿ. ಆದ್ರೆ ಇಲ್ಲಿರೊ ಪ್ರಶ್ನೆ ಹುಸೇನ್ ಗುಟ್ಟಾಗಿ ಈ ಸಹಾಯ ಮಾಡೋದು ಸರೀನ ಅಂತ. ಅದು ಕಾನೂನನ್ನು ಮೀರ್ದಂತೆ ಆಗುತ್ತೆ ಅಲ್ವ?’ – ಟೀಚರಮ್ಮ ತಮ್ಮ ವಿಚಾರ ಮುಂದಿಟ್ಟರು.
‘ಕಾನೂನನ್ನ ದುರುಪಯೋಗ ಮಾಡ್ಕೊಂಡು ಜೈಲಿಗ್ ಹಾಕಿದಾರೆ ಅಂತ ಮನವರಿಕೆ ಆಗಿದ್ರೆ ಸಹಾಯ ಮಾಡೋದು ತಪ್ಪಲ್ಲ. ಅವರು ಪ್ರಾಣ ಕಳ್ಯೋಕೆ ಕಾನೂನ್ ಉಲ್ಲಂಘಿಸಿದಾರೆ ಅಂದ್ ಮೇಲೆ ಪ್ರಾಣ ಉಳ್ಸೋಕ್ ಉಲ್ಲಂಘನೆ ಮಾಡೋದು ನೈತಿಕವಾಗ್ ಸರಿ’ ಎಂದು ನಾನು ಖಚಿತವಾಗಿ ಹೇಳಿದೆ. ಕಾನೂನು ನೈತಿಕವಾಗಿಯೇ ಇರಬೇಕು. ಆದ್ರೆ ಅದರ ಬಳಕೆ ನೈತಿಕ ಅಲ್ಲ ಅಂತ ಖಚಿತವಾದ್ರೆ ಪರ್ಯಾಯ ನೈತಿಕತೆ ಹುಡುಕಬೇಕು; ಕಾನೂನು ಕುರುಡಾದಾಗ ನೈತಿಕ ನಿಲುವು ಕಣ್ಣಾಗ್ಬೇಕು-ಹೀಗೆ ನನ್ನೊಳಗು ನುಡೀತಾ ಇತ್ತು. ಒಳಗಿನ ನುಡೀನ ಹೊರಗೆ ತಂದೆ. ಟೀಚರಮ್ಮ ಮತ್ತು ಹುಸೇನ್ ಮುಂದೆ ಮಂಡಿಸಿದೆ. ಟೀಚರಮ್ಮಂಗೆ ಮನವರಿಕೆ ಆಯ್ತು. ಆದ್ರೆ ಹುಸೇನ್ಗೆ ಧೈರ್ಯ ಬರಲಿಲ್ಲ. ತಾನು ತಪ್ಪು ಮಾಡ್ತಿರಬಹುದಾ ಅನ್ನೊ ಅಳುಕು ಕಾಡುಸ್ತಾ ಇತ್ತು. ಆಗ ಟೀಚರಮ್ಮ ಹೇಳಿದರು: ‘ನೋಡು ಹುಸೇನ್, ಅಪರಾಧಿಗಳಿಗೆ ಶಿಕ್ಷೆ ಆಗಿದ್ರೂ ಪರವಾಗಿಲ್ಲ, ನಿರಪರಾಧಿಗಳಿಗೆ ಶಿಕ್ಷೆ ಆಗ್ಬಾರ್ದು ಅನ್ನೋದು ನಮ್ಮ ನ್ಯಾಯದ ನೀತಿ. ಆದ್ರಿಂದ ನೀನು ಸಮತಾಗೆ ಸಹಾಯ ಮಾಡ್ಬೇಕು.’
ಟೀಚರಮ್ಮನ ಮಾತಿನಲ್ಲಿ ಖಚಿತತೆ ಇತ್ತು; ಒತ್ತಾಯ ಇತ್ತು. ಹುಸೇನ್ಗೆ ಇಲ್ಲವೆನ್ನಲು ಆಗಲಿಲ್ಲ. ‘ನಾಳೆ ಪತ್ರ ಈಸ್ಕೊಂಡ್ ಬಾ. ನಾನೇ ಮುಖ್ಯಮಂತ್ರಿ ಮಗಳಿಗೆ ಫೋನ್ ಮಾಡ್ತೀನಿ’ ಅಂತಾನೂ ಟೀಚರಮ್ಮ ಹೇಳಿದರು. ಹುಸೇನ್ಗೆ ಮತ್ತಷ್ಟು ಧೈರ್ಯ ಬಂತು. ‘ಆಯ್ತು’ ಎಂದ. ಆಗ ಕಾವೇರಮ್ಮ, ‘ಈಗ್ಲಾದ್ರು ಕಾಫಿ ಕುಡೀರಿ’ ಎಂದು ತಮಾಷೆ ದಾಟಿಯಲ್ಲಿ ಹೇಳಿದಾಗ ನಾವೆಲ್ಲ ನಸು ನಕ್ಕೆವು.
***
ಮಾರನೇ ದಿನ ಸಂಜೆ ಹುಸೇನ್ ಸಮತಾ ಕೊಟ್ಟ ಪತ್ರ ಮತ್ತು ಫೋನ್ ನಂಬರ್ ಸಮೇತ ಬಂದ. ಮತ್ತೆ ಟೀಚರಮ್ಮನ ಮನೆಯಲ್ಲಿ ಸೇರಿದೆವು. ಪತ್ರವನ್ನು ಕವರಲ್ಲಿಟ್ಟೇನೂ ಕೊಟ್ಟಿರಲಿಲ್ಲ. ಹೀಗಾಗಿ ಟೀಚರಮ್ಮ ಓದಿದರು. ಅದರಲ್ಲಿ ತನ್ನನ್ನು ಬಂಧಿಸಿದ ಹಿನ್ನೆಲೆಯನ್ನು ಸಮತಾ ವಿವರಿಸಿದ್ದರು. ಬಲವಂತಯ್ಯನ ವಿರುದ್ಧದ ಹೋರಾಟದ ಕಾರಣಕ್ಕಾಗಿ ಮತ್ತು ಬಲವಂತಯ್ಯನ ಒತ್ತಡದಿಂದಾಗಿ ಮುಖ್ಯಮಂತ್ರಿಗಳು ತಪ್ಪು ಹೆಜ್ಜೆ ಇಟ್ಟಿರುವುದಾಗಿ ಮನವರಿಕೆ ಮಾಡಿಕೊಟ್ಟಿದ್ದರು. ಬಲವಂತಯ್ಯ ಅರೆಸ್ಟ್ ಆದಾಗ ಸಂಭವಿಸಿದ ಗಲಭೆ, ಸಾವು ನೋವುಗಳನ್ನು ಹೇಗೆ ಸಮತಾ ತಲೆಗೆ ಕಟ್ಟಲಾಯಿತು ಎಂಬ ಸವಿವರ ನಿರೂಪಣೆ ಮಾಡಿದ್ದರು. ಇಷ್ಟೆಲ್ಲ ಹೇಳಿ ಕಡೆಗೆ ಆಕೆ ಕೇಳಿದ್ದು ಇಷ್ಟು:
‘ನೋಡು ಸುಶೀಲ, ನಾನು ನಿಜವಾಗಿಯೂ ತಪ್ಪು ಮಾಡಿದ್ದರೆ, ಒಂದು ವೇಳೆ ಭಯೋತ್ಪಾದಕಿಯೇ ಆಗಿದ್ದರೆ ನಿನ್ನ ಸಹಾಯ ಕೇಳ್ತಾ ಇರಲಿಲ್ಲ. ಭಯೋತ್ಪಾದಕರು ಸಾಯೋಕೆ ಸಿದ್ಧವಾಗಿಯೇ ತಯಾರಾದವರು. ನನ್ನನ್ನು ಮತ್ತು ಈ ಮೂಲಕ ಹೋರಾಟಗಳನ್ನು ಮುಗಿಸಲು ಮಾಡಿದ ಷಡ್ಯಂತ್ರಕ್ಕೆ ನಾನೀಗ ಬಲಿಪಶುವಾಗಿದ್ದೇನೆ. ನನಗೇನೂ ಜೀವ ಭಯವಿಲ್ಲ. ಆದರೆ ಹೋರಾಟಗಳ ಜೀವ ಹೋದೀತೆಂಬ ಭಯ ಇದೆ. ಸರ್ಕಾರ ಮನಸ್ಸು ಮಾಡಿದರೆ ಸೂಕ್ತ ಸಾಕ್ಷ್ಯ ಇಲ್ಲವೆಂದು ನ್ಯಾಯಾಲಯಕ್ಕೆ ಹೇಳಿ ಕೇಸ್ ವಾಪಸ್ ಪಡೆಯಬಹುದು. ಮನಸ್ಸಿದ್ದರೆ ಮಾರ್ಗ ಇರುತ್ತದೆ. ನೀನು ನಿಮ್ಮ ತಂದೆಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನಿನ್ನ ಒತ್ತಾಯದಿಂದಾದರೂ ಮುಖ್ಯಮಂತ್ರಿಗಳಿಗೆ ಸತ್ಯ ಗೊತ್ತಾಗಬಹುದೆಂಬ ನಂಬಿಕೆ ನನ್ನದು. ಇದನ್ನು ಗೆಳತಿಯ ಪತ್ರ ಎನ್ನುವ ಬದಲು ಒಬ್ಬ ಪ್ರಜಾಸತ್ತಾತ್ಮಕ ಹೋರಾಟಗಾರ್ತಿಯ ಪತ್ರ ಎಂದು ಭಾವಿಸು ಅಥವಾ ಅದಷ್ಟೇ ನಿನಗೆ ಸಾಧ್ಯವಾಗದಿದ್ದರೆ ಹೋರಾಟಗಾರ್ತಿ ಮತ್ತು ಗೆಳತಿಯ ಪತ್ರ ಎಂದು ಭಾವಿಸು. ನಾನು ನೆಲದ ನ್ಯಾಯವನ್ನು ಕೇಳುತ್ತಿದ್ದೇನೆ. ಭಾವನಾತ್ಮಕ ಬ್ಲಾಕ್ಮೇಲ್ ಮಾಡುತ್ತಿಲ್ಲ. ದಯವಿಟ್ಟು ಅರ್ಥಮಾಡಿಕೊ…..’
ಸಮತಾ ಪತ್ರದ ಒಕ್ಕಣೆ ನನಗೆ ನಿಜಕ್ಕೂ ಇಷ್ಟವಾಯ್ತು. ಓದಿದ್ದಾದ ಮೇಲೆ ಟೀಚರಮ್ಮ ‘ಸುಶೀಲ ಅವರಿಗೆ ಫೋನ್ ಮಾಡೋಣವಾ?’ ಎಂದು ಹುಸೇನ್ನನ್ನು ಕೇಳಿದರು. ಹುಸೇನ್ ‘ಬೇಡ’ ಎಂದ. ಆಶ್ಚರ್ಯವಾಯ್ತು. ‘ಇದು ಪಾಪದ ಕೆಲಸ ಅಲ್ಲ ಹುಸೇನ್’ ಎಂದರು ಟೀಚರಮ್ಮ. ಹುಸೇನ್ ಆಗ ಹೇಳಿದ್ದೇನು ಗೊತ್ತ?- ‘ಹಂಗಲ್ಲ ಟೀಚರಮ್ಮ, ನಮ್ಮಪ್ಪಂಗೆ, ತಂಗಿಗೆ ಹೇಳೆ ನಾನು ಯಾವ್ ಕೆಲ್ಸಾನೂ ಮಾಡಲ್ಲ. ಈ ಕೆಲ್ಸಾನೂ ಅಷ್ಟೆ. ಒಂದ್ ಮಾತು ಅವ್ರಿಗ್ ಹೇಳ್ಬಿಟ್ಟು ಆಮ್ಯಾಕ್ ತೀರ್ಮಾನ ಮಾಡಾನ.’
ನಮಗೆ ಬಾಯಿ ಕಟ್ಟಿತು. ಭಾವನೆಗಳು ಬಂದು ಬಾಯಿಗೆ ಬೀಗ ಹಾಕಿದ್ದವು. ಆಗ ಮಾತಾಡಿದ್ದು ಕಾವೇರಮ್ಮ- ‘ಹುಸೇನ್ ಹೇಳಾದ್ ಸರ್ಯಗೇ ಇದೆ. ಮನೆ ಮಂದಿ ಹತ್ರ ಮುಚ್ಚಿಟ್ಟು ಯಾವ ಕೆಲ್ಸಾನೂ ಮಾಡ್ಬಾರದು.’
ಸರಿ, ನಾನೂ, ಹುಸೇನ್, ಟೀಚರಮ್ಮ ಮೂವರೂ ಹಯಾತ್ ಸಾಬರನ್ನು ಕಾಣಲು ಹೊರಟೆವು. ಅಲ್ಲಿಗೆ ಹೋದಾಗ ನಾನೇ ಎಲ್ಲವನ್ನೂ ವಿವರಿಸಬೇಕೆಂದು ಟೀಚರಮ್ಮ ಹೇಳಿದರು. ನಾನು ಹೇಳಿದೆ- ‘ಬೇಡಿ ಟೀಚರಮ್ಮ. ನಾನು ಸಾಕ್ಷಿ ತರಾ ಇದ್ದೇನೆ’. ಅವರು ಅಂದ್ರು- ‘ಸಾಕ್ಷಿ ಆಗೋಕ್ ಇಲ್ಲಿ ಯಾವೂ ಮೊಕದ್ದಮೆ ಇಲ್ವಲ್ಲ?’. ನಾನು ತಕ್ಷಣ ತಿದ್ದಿಕೊಂಡೆ: ‘ಸಾಕ್ಷಿಪ್ರಜ್ಞೆ ಥರಾ ಇದ್ದೇನೆ’. ಅವರು ತಮಾಷೆ ಮಾಡಿದರು: ‘ಕತೆಗಾರರ ಸವಾಸ ಸುಲಭ ಅಲ್ಲ’ ಆಮೇಲೆ- ‘ಆದ್ರೂ ಹೇಳ್ತೇನೆ. ನೀವು ನಮ್ ಜೊತೆ ಇರ್ಬೇಕು.’ – ಅಂತ ಒತ್ತಾಯದ ದನೀಲಿ ಹೇಳಿದ್ರು. ‘ನಾನೀಗ್ಲೂ ಜೊತೇಲೇ ಇದ್ದೀನಲ್ಲ? ನ್ಯಾಯ ಇರೊ ಕಡೆ ನಾನು’ ಎಂದು ಹೇಳುತ್ತಲೇ ನನಗೆ ನಾನೇ ದೃಢಪಡಿಸಿಕೊಂಡೆ.
ಹಯಾತ್ ಸಾಬರಿಗೆ ಟೀಚರಮ್ಮ ಸಾದ್ಯಂತವಾಗಿ ವಿವರಿಸಿದರು. ಎಲ್ಲವನ್ನೂ ಸಮಾಧಾನದಿಂದ ಕೇಳಿದ ಹಯಾತ್ ಸಾಬರು ನನ್ನ ಕಡೆ ನೋಡಿ, ‘ನೀವೇನಂತೀರ ಕತೆಗಾರರು?’ ಅಂತ ಕೇಳಿದರು. ‘ನಾನೇನ್ ಹೇಳೋದು? ನೀವ್ ಹೇಳಿದ್ ಕೇಳೋದೇ ನಮ್ಮ ಕತೆ’ ಎಂದೆ. ‘ನಿಮ್ ಜಾಣತನ ನನ್ ಹತ್ರ ಇಲ್ಲ. ನೀವೊ ಕತೆ ಹೆಂಗ್ ಶುರು ಮಾಡ್ಬೇಕು, ಹೆಂಗ್ ಬೆಳುಸ್ಬೇಕು, ಹೆಂಗ್ ಮುಕ್ತಾಯ ಮಾಡ್ಬೇಕು ಅಂತ ಅಳೆದು ಸುರಿದೂ ಅಕ್ಷರಕ್ ತರ್ತೀರ. ನಮ್ಗೆಲ್ಲ ನಿಮ್ ಕಷ್ಟ ಇಲ್ಲ’ ಮನ್ಸ್ ಹೇಳ್ದಂಗ್ ಕೇಳೊ ಮನುಷ್ಯರು ನಾವು. ಈಗ ಸಮತಾ ಕತೆ ಒಂದ್ ಹಂತಕ್ ಬೆಳ್ದೈತೆ. ಮುಕ್ತಾಯ ಹಾಡ್ಬೇಕು ಅಷ್ಟೆ’ ಎಂದು ಹಯಾತ್ ಸಾಬರು ದೃಢವಾಗಿ ಹೇಳಿದ್ರು, ಆದ್ರೆ ನನ್ನ ಬುದ್ದಿ ಬಿಡಬೇಕಲ್ಲ? ‘ಮುಕ್ತಾಯ ಹಾಡೋದು ಅಂದ್ರೆ?’ ಎಂದೆ. ‘ಮುಕ್ತಾಯ ಹಾಡೋದು ಅಂದ್ರೆ ಅವ್ರ್ ಜೈಲಿಂದ ಹೊರಗ್ ಬರೋದು. ನಾನು ಎಷ್ಟೆಲ್ಲ ಗಮನುಸ್ತಾ ಬೆಳೆದಿವ್ನಿ ನಿಮಗ್ ಗೊತ್ತಲ್ಲ? ನ್ಯಾಯ – ಅನ್ಯಾಯ ನೋಡಿದ್ದೀನಿ; ಓದಿದ್ದೀನಿ; ಈಗ್ ಹೊಲೀತಾ ಕುಂತಿದ್ದೀನಿ. ನನ್ಮಗ ಆ ಸಮತಾ ಅವ್ರ್ಗೆ ಸಹಾಯ ಮಾಡ್ಲೇಬೇಕು. ಅದೇ ನ್ಯಾಯ.’ – ಅಂತ ನಿಚ್ಚಳ ನುಡಿಗಳಲ್ಲಿ ಹಯಾತ್ ಸಾಬರು ಹೇಳಿದಾಗ ಅದು ಆದೇಶದಂತೆ ಕೇಳಿಸಿತು. ಹುಸೇನ್ ಮುಖ ಅರಳಿತು.
ಟೀಚರಮ್ಮ ಕೂಡಲೇ ಕಾರ್ಯ ಪ್ರವೃತ್ತರಾದರು. ‘ಹಾಗಾದ್ರೆ ಈಗ್ಲೆ ಮುಖ್ಯಮಂತ್ರಿ ಮಗಳಿಗೆ ಫೋನ್ ಮಾಡ್ಲ?’ ಎಂದು ಕೇಳಿದರು. ‘ಮಾಡಿ ಟೀಚರಮ್ಮ. ಅದೇನಾಗುತ್ತೊ ನಮ್ಮ ಮನೆ ಇಂದ್ಲೇ ಶುರುವಾಗ್ಲಿ’ ಎಂದರು ಹಯಾತ್ ಸಾಬರು. ಟೀಚರಮ್ಮ ‘ಫೋನು…. ಮೊಬೈಲ್ ಮನೇಲೆ ಬಿಟ್ ಬಂದೆ’ ಎಂದು ತಮಗೆ ತಾವೇ ಹೇಳಿಕೊಳ್ಳುತ್ತಿರುವಾಗ ನನ್ನ ಜೇಬಿಂದ ಮೊಬೈಲ್ ಫೋನ್ ತೆಗೆದು ಅವರಿಗೆ ಕೊಟ್ಟೆ.
ಟೀಚರಮ್ಮ ಎರಡು ಸಾರಿ ಫೋನ್ ಮಾಡಿದರೂ ಆ ಕಡೆ ಸುಶೀಲ ತಗೊಳ್ಳಲೇ ಇಲ್ಲ. ಇವರು ಮತ್ತೆ ಮಾಡಿದರು. ಆಗ ಅವರು ಫೋನ್ ರಿಸೀವ್ ಮಾಡಿದ್ರು: ‘ಯಾರ್ರಿ ಅದು?’ ಎಂದು ಬೇಸರದಿಂದ ಕೇಳಿದಂತಾಯ್ತು. ಟೀಚರಮ್ಮ ಸಾದ್ಯಂತ ವಿವರಿಸಿದರು. ಆದ್ರೆ ಪತ್ರದಲ್ಲೇನಿದೆ ಅಂತ ಹೇಳಲಿಲ್ಲ. ‘ಸಮತಾ ಕೊಟ್ಟಿರೊ ಪತ್ರಾನ ತಲುಪಿಸ್ಬೇಕು ಅದಕ್ಕಾಗಿ ಸಮಯ ಕೊಡಿ’ ಅಂತ ಕೇಳ್ಕೊಂಡರು. ಮಾರನೇ ದಿನ ಬೆಳಗ್ಗೇನೇ ಬನ್ನಿ ಅನ್ನೊ ಆಹ್ವಾನ. ಸರಿ ಹುಸೇನ್ ಮತ್ತು ಟೀಚರಮ್ಮ ಹೋಗೋದು ಅಂಡ್ಕೊಂಡ್ರು, ಆಗ ಹಯಾತ್ ಸಾಬರು ‘ಈ ಕತೆಗಾರನ್ನೂ ಕರ್ಕೊಂಡ್ ಹೋಗಿ. ಸರ್ಯಾಗ್ ಮಾತಾಡ್ತಾರೆ’ ಎಂದರು. ನಾನು ಹೋಗಲೊ ಬೇಡವೊ ಅಂತ ಒಂದುಕ್ಷಣ ಯೋಚಿಸಿ ಮರುಕ್ಷಣದಲ್ಲೇ ‘ಬತ್ತೇನೆ’ ಎಂದುಬಿಟ್ಟೆ. ನಿಜ ಏನು ಅಂದ್ರೆ ಟೀಚರಮ್ಮ ‘ಬನ್ನಿ’ ಅಂತ ಕರದೇ ಇರ್ಲಿಲ್ಲ. ಆಮೇಲ್ ಅನ್ನಿಸ್ತು : ಅಲ್ಲ, ಅವರು ಇನ್ನೂ ಕರದೇ ಇರಲಿಲ್ಲ; ನಾನೇ ಬರ್ತೀನಿ ಅಂದೆ. ಇವಿಬ್ರ ನಡುವೆ ನಾನು- ಶಿವ ಪೂಜೇಲ್ ಕರಡಿ? ಛೇ! ಛೇ! ಮತ್ತದೇ ಗುಮಾನಿ ಬುದ್ದಿ; ಅಪಾರ್ಥ! ಆಗ ಟೀಚರಮ್ಮ, ‘ನಮಗೇನೊ ಕರ್ಯೋಕ್ ಇಷ್ಟ, ಆದ್ರೆ ಇವ್ರು ಇದ್ದೂ ಇಲ್ದಂತೆ ಇರ್ತಾರಲ್ಲ, ಅದಕ್ಕೆ ಬಾರ್ತಾರೊ ಇಲ್ವೊ ಅಂತ ಅನುಮಾನ ಬಂತು. ನೀವ್ ಹೇಳಿದ್ದು ಒಳ್ಳೇದೇ ಆಯ್ತು ಹಯಾತ್ ಸಾಬ್’ ಎಂದು ನನ್ನ ಕಡೆ ನೋಡಿದ್ರು. ಅದ್ಯಾಕೊ ಅವರ ನೋಟಾನ ಎದುರಿಸೋಕೆ ಆಗದೆ ಹಯಾತ್ ಸಾಬರ ಕಡೆ ನೋಡಿದೆ. ‘ಇದ್ದೂ ಇಲ್ದಂತೆ ಇರೋದು ಬಾಳ ಕಷ್ಟ ಟೀಚರಮ್ಮ. ಇದು ಸತ್ಯ ಹುಡ್ಕೋರ್ ಕಷ್ಟ’ ಎಂದು ಹಯಾತ್ ಸಾಬರೇ ವಿವರಣೆ ಕೊಟ್ಟಾಗ, ಟೀಚರಮ್ಮ ‘ಸತ್ಯ ಸಿಕ್ಕಿದ್ ಮೇಲೂ ಹುಡುಕ್ಬಾರ್ದು. ಅಲ್ವ?’ ಅಂತ ಕೇಳ್ಬಿಡೋದ? ಆಗ ನಾನು ‘ಸಿಕ್ಕಿದ್ದೆಲ್ಲ ಸತ್ಯಾನೇ ಆಗಿರಬೇಕಲ್ಲ?’ ಎಂದು ಪ್ರಶ್ನಿಸಿದೆ. ‘ಅಂತಿಮ ಸತ್ಯ ಒಂದ್ ಇದ್ಯಾ? ಅದು ಸಾಯೋವರ್ಗೂ ಸಿಗಲ್ಲ. ಅವತ್ತವತ್ತಿಗೆ ಸತ್ಯಗಳು ಸಿಗ್ತಾ ಇರುತ್ತೆ, ಅರ್ಥ ಮಾಡ್ಕಂಡ್ ಮುಂದಕ್ ಹೋಗ್ಬೇಕು’ ಎಂದು ಟೀಚರಮ್ಮ ಖಚಿತ ದನಿಯಲ್ಲಿ ಹೇಳ್ದಾಗ, ‘ಸರಿ ಬಿಡಿ, ನಾಳೆ ಮುಂದಕ್ ಹೋಗೋಣ’ ಅಂತ ಜೋಕಲ್ಲದ ಜೋಕ್ ಮಾಡಿದೆ. ಅವರೂ ನನ್ನ ಸಮಾಧಾನಕ್ಕೆ ನಕ್ಕಂತಿತ್ತು.
ಈಗ ಇನ್ನೊಂದು ಪ್ರಶ್ನೆ ಎದುರಾಯ್ತು. ಇದು ಟೀಚರಮ್ಮ ಎತ್ತಿದ ಪ್ರಶ್ನೆ. ಸಮತಾ ಪರವಾಗಿ ಮಾಡ್ತಿರೊ ಪ್ರಯತ್ನದ ವಿಷಯಾನ ಪಟೇಲರು, ಶಾನುಭೋಗರಿಗೆ ಹೇಳಬೇಕೊ ಬೇಡವೊ? ಇದು ಪ್ರಶ್ನೆ. ತಾನು ಕೆಲ್ಸ ಮಾಡ್ತಿರೋದು ಅವಿಬ್ರು ನಡುಸ್ತಿರೊ ಪ್ರೌಢಶಾಲೇಲಿ ಅನ್ನೋದು ಅವರ ಇಕ್ಕಟ್ಟು. ಹಯಾತ್ ಸಾಬರಿಗೆ ಇನ್ನೊಂದು ರೀತಿ ಇಕ್ಕಟ್ಟು; ಊರ ಹಿರಿಯರಿಗೆ ಒಂದು ಮಾತು ಹೇಳೋದು ಒಳ್ಳೇದಲ್ಲವೆ? ಒಂದೇ ತಾಯಿ ಮಕ್ಕಳ ಥರಾ ಬದುಕ್ತಿರೊ ಊರಲ್ಲಿ ಗುಟ್ಟು ಮಾಡೋದು ಸರೀನ?
ಕಡೆಗೆ ಪ್ರಶ್ನೆ ನನ್ನ ಅಂಗಳಕ್ಕೆ ಬಂತು. ನನಗೂ ಖುಷಿಯಾಯ್ತು. ಈಗ ನಾನು ಹೇಳಿದ್ದನ್ನ ಅವರು ಕೇಳ್ತಾರಲ್ಲ ಅಂತ ಒಳಗೊಳಗೇ ಹೆಮ್ಮೆಪಡ್ತಾ ಯೋಚಿಸಿದೆ ಅಥವಾ ಯೋಚಿಸುವಂತೆ ಮುಖ ಮಾಡಿಕೊಂಡೆ; ಕೈ ಹಿಸುಕಿಕೊಂಡೆ. ಆಮೇಲೆ ಮೊದ್ಲೇ ಅಂದ್ಕೊಂಡಿದ್ದನ್ನ ಹೇಳಿದೆ: ‘ಇಂಥ ವಿಷಯಗಳಲ್ಲಿ ಗುಟ್ಟು ಮಾಡೋದೇ ಸರಿ ಅನ್ಸುತ್ತೆ. ಮುಂದೆ ಮತ್ತೇನೊ ಆಗಿ ಹುಸೇನ್ಗೆ ತೊಂದ್ರೆ ಆಗಬಾರದು’. ಹುಸೇನ್ ಖುಷಿಯಾಗಿ, ‘ಸರ್ಯಾಗ್ ಹೇಳಿದ್ರಿ. ಇದು ನಮ್ ನಡುವೇನೇ ಇರ್ಬೇಕು. ಅಪ್ಪಿತಪ್ಪಿನೂ ಯಾರೂ ಹೇಳಬಾರದು’ ಎನ್ನುತ್ತಾ ಫಾತಿಮಾ ಮುಖ ನೋಡಿದ. ಫಾತಿಮಾ, ‘ನನ್ ಕಡೀಕ್ ಯಾಕ್ ನೋಡ್ತೀಯ? ನಾನ್ ತುಟಿಪಿಟಕ್ಕನ್ನಲ್ಲ. ನಿಂದೂ ಆ ದೊಡ್ ಮನುಸ್ರೂದು ಫೊಟೋ ಐತಲ್ಲ, ಅದನ್ ಮುಟ್ಟಿ ಮಾತ್ ಕೊಡ್ಲ?’ ಎಂದು ಹುಸಿ ಮುನಿಸು ತೋರಿ ನುಡಿದಳು. ಹುಸೇನ್, ‘ಆಣೆ ಪ್ರಮಾಣ ಏನೂ ಬೇಡಮ್ಮ. ನಿನ್ ಮಾತೇ ಸಾಕು’ ಎಂದ. ಎಲ್ಲರ ಮನದಲ್ಲಿ ಮಂದಹಾಸ.
*****
ಮುಂದುವರೆಯುವುದು


















