ಅವಳು ಅವನು ಮತ್ತು ಪ್ರೇಮ

ಅವಳು ಅವನು ಮತ್ತು ಪ್ರೇಮ

ಚಿತ್ರ: ಬೆನ್ ಕರ್‍ಸಕ್
ಚಿತ್ರ: ಬೆನ್ ಕರ್‍ಸಕ್

ಅವಳಿಗೆ ಹಳೆಯ ಲೌಲಿ ದಿನಗಳಿನ್ನೂ ನೆನಪಿದೆ. ಹಳೆಯದೆಂದರೆ ಬಹಳ ಹಳೆಯವೇನಲ್ಲ ಕೇವಲ ಎರಡು ವರ್ಷಗಳ ಹಿಂದಿನ ಕಲರ್ಫುಲ್ ದಿನಗಳವು. ಅವಳು ಅವನೂ ತುಂಬಾ ಹಚ್ಚಿಕೊಂಡಿದ್ದ ಕ್ಷಣಗಳವು. ಹೊಸದಾಗಿ ಕಛೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಅವಳು ಕಟ್ಟಡವನ್ನು ನೋಡಿಯೇ ತಬ್ಬಿಬ್ಬಾಗಿದ್ದಳು. ಇನ್ನೂ ಅಲ್ಲಿನ ಟೇಬಲ್ ಮೇಲೆ ಕುಳಿತ ಕಡತಗಳು ಬೀರುವಿನ ತುಂಬಾ ತುಂಬಿಕೊಂಡಿರುವ ಹಳೆ ರಾಶಿ ರಾಶಿ ಕಡತಗಳು. ಟೈಪ್‍ರೈಟರ್ಗಳ ಟಕಟಕವೆಂಬ ನಿರಂತರ ಸದ್ದಿಗೇ ಅವಳ ತಲೆಯ ನರಗಳು ಸಿಡಿದು ಸಣ್ಣಗೆ ನೋವು. ಸಿಡುಕಲೆಂದೇ ಹುಟ್ಟಿ ಬಂದಂತಿರುವ ಆಫೀಸ್ ಮೇನೇಜರ್ ಅವನ ಗಂಟುಮೋರೆ. ಆಗಾಗ ಸಾಹೇಬನ ಕರೆಗಳು, ಅವನಿಂದ ಬೈಸಿಕೂಂಡು ಬರುವ ಗುಮಾಸ್ತರು ತಮ್ಮ ಸೀಟಿಗೆ ಬಂದ ಮೇಲೆ ನಡೆಸುವ ವೀರಲಾಪ. ‘ಸಾಹೇಬ ಅನ್ನೋ ಬೋಳೀಮಗ ಒಂದು ಗಂಟೆನಲ್ಲಿ ಪೇಪರ್ಸ್ ಎಲ್ಲಾ ರೆಡಿಮಾಡಿ ತಂದುಬಿಡು ಅಂತಾನೆ. ಎಕ್ಸ್‍ಪೆಂಡೀಚರ್ ಟ್ಯಾಲಿ ಆಗೋದು ಬ್ಯಾಡವೇ? ಸ್ಟೇಟ್‍ಮೆಂಟ್ ಪ್ರಿಪೇರ್ ಆಗೋದು ಬ್ಯಾಡ್ವೆ?’ ಡ್ರಾಫ್ಟ್ ಅಪ್ರೂವಲ್ ಟೈಪಿಂಗ್ ಕರೆಕ್ಷನ್ನು ಮಣ್ಣು ಮಸಿ ಅಂತ ಒಂದು ದಿನವಾದರೂ ಹಿಡಿಯುತ್ತೆ ಆ ನನ್ಮಗನಿಗೇನು ಗೊತ್ತು ಪ್ರಾಕ್ಟಿಕಲ್ ಡಿಫಿಕಲ್ಟೀಸ್’ ಗುಮಾಸ್ತನ ಹಪಹಪಿಕೆ. ‘ಈ ಸಾಹೇಬಂದು ಅತಿಯುಯ್ತು ಕಣ್ರಿ, ಕಂಟ್ಟಾಕ್ಟರ್ ಹತ್ತಿರ ದುಡ್ಡು ಕೇಳಿದರಂತಲ್ರೀ? ಲಂಚ ತಗೊಳ್ಳೋದು ಅಪರಾಧ ಅಂತ ಗೊತ್ತಿಲ್ವೇನ್ರಿ? ಅವನಾಗಿ ಕೊಟ್ಟರೆ ತಗೋಳ್ಳಿ, ಡಿಮ್ಯಾಂಡ್ ಮಾಡಿದರೆ ನಿಮ್ಮ ಮೇಲೆ ಆಕ್ಷನ್ ತಗೋಬೇಕಾಗುತ್ತೆ ಅಂತ ನನ್ನೇ ದಬಾಯಿಸ್ತಾನಲ್ಲಾರೀ. ಇವನೇನು ಸಾಚಾನಾ? ಕಂಟ್ಟಾಕ್ಟರ್ ಹತ್ತಿರ ನಾನು ತಗೊಂಡಿದ್ದು ಯಕಶ್ಚಿತ್ ಎರಡು ಸಾವಿರ. ಇವನು ತಗೊಳ್ಳೋದು ಇಪ್ಪತ್ತು ಸಾವಿರ. ವಾರದ ಹಿಂದೆ ನಾನು ಪುಟ್‌ಅಪ್ಪ್ ಮಾಡಿದ ಫೈಲ್ಗೆ ಕಂಟ್ರಾಕ್ಟರ್ ಕಾಣಿಕೆ ಸಲ್ಲಿಸಿದ ಮೇಲೆಯೇ ಇವನು ಸಹಿ ಜಡಿದಿದ್ದು. ದುಡ್ಡಿಗಾಗಿ ರಣಹದ್ದಿನಂಗೆ ಬಾಯಿ ಬಿಟ್ಕೊಂಡು ಕೂತಿರ್ತಾನೆ ರ್‍ಯಾಸ್ಕಲ್’ ಇನ್ನೊಬ್ಬ ಗುಮಾಸ್ತನ ಕೋಪತಾಪ.

‘ಸಾಕು ಸುಮ್ನೆ ಬಾಯಿ ಮುಚ್ಕೊಂಡು ಕೆಲಸ ಮಾಡ್ರಿ’ ಮೇನೇಜರನ ಗದರಿಕೆ, ಲಂಚ ಟೇಬಲ್ ಕೆಳಗೆ ಆನ್ನೋದು ಹಳೆ ಕತೆಯಾಯ್ತು ಈಗ ಟೇಬಲ್ ಮೇಲೆ, ಒಂದು ಫೈಲಿಗೆ ಇಂತಿಷ್ಟು ಅಂತ ರೇಟ್ ಫಿಕ್ಸ್ ಮಾಡಿ ಮುಲಾಜಿಲ್ಲದೆ ವಸೂಲಿ ಮಾಡುವ ಗುಮಾಸ್ತರನ್ನು ನೋಡಿ ಅವಳು ಬೆಪ್ಪಾದಳು. ಒಂದೆರಡು ದಿನ ಅವರಿಪರ ಟೇಬಲ್ ಬಳಿ ಕೂತು ಕಾಲ ಕಳೆದಳು. ಲೇಡೀಸ್ ಟೈಪಿಸ್ಟ್ ಜೊತೆ ಕಾಫೀಗೆಂದು ಒಂದೆರಡು ಸಲ ಹೋಗಿ ಬಂದಳು. ತೂಕಡಿಸಿದಳು ಆಫೀಸಿನಲ್ಲಿ ಯಾರಿಗೂ ಅಂತಹ ಕೆಲಸವಿದ್ದಂತೆ ತೋರಲಿಲ್ಲ ಅವರಲ್ಲಿಯೇ ಕಾನ್ವೆಂಟಿಗೆ ಮಕ್ಕಳನ್ನು ಬಿಟ್ಟು ಬರುವ ಡ್ಯಾಡಿಗಳು ಹೆಂಡತಿಯನ್ನು ಬೈಕಲ್ಲೊಯ್ದು ಅವಳ ಕಟೇರಿ ಬಳಿ ಡಂಪ್ ಮಾಡಿ ಬರುವ ಎಂಪಾಲ್ಲೆಯ್ಡ್ ಹೆಂಡಿರ ಗುಲಾಮ ಗಂಡರು. ಇವರ ನಡುವೆ ಕಾಫಿಗೆಂದು ಹೋದರೆ ತಿರುಗಿ ಬರುವ ಗ್ಯಾರಂಟಿಯೇ ಇಲ್ಲದ ಅಬ್ಬೇಪಾರಿಗಳು. ಮಧ್ಯಾಹ್ನದ ಊಟ ಮುಗಿಸಿಯೇ ತಾಂಬೂಲ ಮೆಲ್ಲುತ್ತಾ ನಿಧಾನವಾಗಿ ಬರುವವರು ಕೆಲವರಾದರೆ, ಹಲವರು ತಮ್ಮ ಊಟದ ಖರ್ಚನ್ನೂ ಕೆಲಸ ಮಾಡಿಕೊಳ್ಳಲು ಬರುವವರ ತಲೆಯ ಮೇಲೆಯೇ ಎಳೆವ ನಿಸ್ಸೀಮರು. ತರಾವರಿ ಸರ್ಕಾರಿ ಸೌಕರರನ್ನು ಕಂಡ ಅವಳು ದಂಗು ಬಡಿದಳು. ಇವರೆಲ್ಲರ ಮಧ್ಯೆ ಕ್ಯಾಷ್ ಸೆಕ್ಷನ್ ಡೀಲ್ ಮಾಡುತ್ತಿದ್ದ ಅವನು ಮಾತ್ರ ಭಿನ್ನವಾಗಿ ಕಂಡಿದ್ದ.

ಅವನಿನ್ನೂ ಯುವಕ. ಸದಾ ಕೆಲಸದಲ್ಲಿ ನಿರತ. ಸಿಡುಕು ಕಡಿಮೆ. ಹೆಚ್ಚು ನಗುತ್ತಲೇ ಕರ್ತವ್ಯ ನಿಭಾಯಿಸುವ ಅವನೆಂದರೆ ಎಲ್ಲರಿಗೂ ಇಷ್ಟ. ಎರಡು ದಿನ ಸುಮ್ಮನೆ ಕುಳಿತ ಅವಳಿಗೋ ಇನ್ನಿಲ್ಲದ ಮುಜುಗರ. ಯಾವ ಸೆಕ್ಷನ್ ಕೊಡುತ್ತಾರೋ ಎಂಬುದವಳ ಪಾಲಿಗೆ ಚಿದಂಬರ ರಹಸ್ಯ.

ಸಾಹೇಬನೂ ಅವಳನ್ನು ಕರೆಸಿ ಮಾತನಾಡಿದ್ದ ‘ಎಲ್ಲಾದರೂ ಕೆಲಸ ಮಾಡಿದ ಎಕ್ಸ್‌‍ಪೀರಿಯನ್ಸ್ ಇದೆಯೋ?’ ಎಂದು ಪ್ರಶ್ನಿಸಿದ. ಅವಳು ಇಲ್ಲವೆಂಬಂತೆ ತಲೆಯಾಡಿಸಿದ್ದಳು. ‘ನಿಮ್ಮಂತವರೆಲ್ಲಾ ಕೆಲಸಕ್ಕೆ ಯಾಕ್ರಿ ಬರ್ತಿರಾ?’ ಎಂದು ಗದರಿದ್ದ. ‘ಈಕೆಗೆ ಏನಾದ್ರೂ ಕೆಲಸ ಕೊಡ್ರಿ… ಸುಮ್ನೆ ಕೂರಿಸ್ಬೇಡಿ’ ಮೇನೇಜರನ್ನೂ ಗದರಿಕೊಂಡಿದ್ದ. ಅವಳತ್ತ ನೋಡಿ, ‘ಏನು ಸರಿಯಾಗಿ ಕೆಲಸ ಮಾಡ್ಕೊಂಡು ಹೋಗು… ಅಂಡರ್‌ಸ್ಟಾಂಡ್’ ಅಂದು ಅಸಹಜ ದರ್ಪವನ್ನು ಪ್ರದರ್ಶಿಸಿದ್ದ ಮೇನೇಜರ್ ಅಳೆದು ಸುರಿದು ಅವಳನ್ನು ಕ್ಯಾಷಿಯರ್ಗೆ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿದ್ದ. ‘ನನಗೇನು ಅಸಿಸ್ಟೆಂಟ್ ಅಗತ್ಯವಿಲ್ಲ… ಐ ವಿಲ್ ಮ್ಯಾನೇಜ್’ ಅಂದಿದ್ದ ಅವನು. ‘ಸಾಹೇಬರು ಹೇಳವರಯ್ಯ’ ಮೇನೇಜರ್ ಸಿಡುಕಿದ ಮೇಲೆ ಅಸಮಾಧಾನದಿಂದಲೇ ‘ಸರಿಬಿಡಿ’ ಅಂದ. ಅವಳತ್ತ ನೋಡಿದ. ಅವಳೋ ಮಳೆಯಲ್ಲಿ ಮಿಂದ ಗುಬ್ಬಚ್ಚಿತರಾ ನಿಂತಿದ್ದಳು ‘ಕೂತ್ಕೊಳ್ರಿ ಕ್ಷಮಾ’ ಎಂದು ಚೇರ್ ಹಾಕಿಸಿದ ಅವನು ಅಂದೆಲ್ಲ ಒಂದಿಷ್ಟು ಬಿಗುವಾಗೆ ಇದ್ದ. ಯಾವ ಕೆಲಸವನ್ನು ಹೇಳಲಿಲ್ಲ. ಇವಳು ಪಿಳಿಪಿಳಿ ಕಣ್ಣು ಬಿಡುತ್ತಾ ಟೈಂ ಕಿಲ್ ಮಾಡಿದಳು. ಟೈಪಿಸ್ಟ್ ಶೈಲಜ ಕಾಫಿಗೆ ಕರೆದಾಗ ಅವನ ಮೋರೆ ನೋಡಿದಳು ‘ಹೋಗಿ’ ಎಂದಿದ್ದ ನಿನ್ನ ಅಗತ್ಯ ತನಗಿಲ್ಲವೆಂಬಂತೆ, ಕ್ಯಾಂಟಿನ್‌ನಲ್ಲಿ ಶೈಲಜ ಅವನ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದಳು. ಒಳ್ಳೆ ಕೆಲಸಗಾರ ವೆರಿ ಪಂಕ್ಚುಯಲ್ ಹಾನೆಸ್ಟ್, ಒಂದಿಷ್ಟೂ ಅಹಂ ಇಲ್ಲ. ಬಿಡುವಿಲ್ಲದಷ್ಟು ಕೆಲಸವಿರೋದ್ರಿಂದ ಅವನು ಮಾತಿಗೆ ಸಿಗೋದೆ ಕಷ್ಟ. ಮಾತಾಡಿದ್ರೆ ಮಾತಲ್ಲೇ ಎಂಥವರನ್ನೂ ಮರುಳು ಮಾಡ್ತಾನೆ ಎಂದೆಲ್ಲ ಶೈಲಜ ಹೇಳುವಾಗ ಅವಳು ನಗುತ್ತಾ ಕೇಳಿದ್ದಳು.

‘ನಿಮ್ಮನ್ನು ಮರುಳು ಮಾಡಿದ್ದುಂಟಾ?’

‘ಶೂರ್, ನನಗೆ ಮದುವೆ ಆಗ್ದೆ ಇದ್ದಿದ್ದರೆ ನಾನು ಅವನಿಗೆ ಖಂಡಿತ ಟ್ರೈ ಮಾಡ್ತಿದ್ದೆ’ ಎಂದವಳು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಳು. ಶೈಲಜ ಮಾಡಿದ ಅವನ ಗುಣಗಾನದಲ್ಲಿ ಅವಳ ಮನದಾಳಕ್ಕೆ ಇಳಿದಿದ್ದು ಆಚ್ಚರಿ ಮೂಡಿಸಿದ್ದು ಅವನು ನಾನ್ ಕರೆಪ್ಟಿವ್. ಯಾರಿಂದಲೂ ಎಂಜಲು ಕಾಸು ಮುಟ್ಟುವವನಲ್ಲ ಎಂಬ ಸಂಗತಿ, ಮರುದಿನ ಅವಳು ಕಚೇರಿಗೆ ಬಂದಾಗಲೂ ಸುಮ್ಮನೆ ಕೂರಬೇಕಾಯಿತು. ಅವಳ ಸಹನೆ ಕಟ್ಟೆಯೊಡೆದಿತ್ತು. ನನಗೇನಾದ್ರೂ ಕೆಲಸ ಕೊಡಿ ಸಾರ್? ಅವನನ್ನು ನೇರವಾಗಿ ಕೇಳಿದ್ದಳು. ಏನ್ ಕೊಡ್ಲಿ ಹೇಳಿ… ಕ್ಯಾಷ್ ಬುಕ್ ಬರಿತೀರಾ? ನಿರ್ಲಿಪ್ತ ಮುಖಭಾವವಿಲ್ಲದ ಕೊಂಕು ಪ್ರಶ್ನೆ.

‘ಹೇಳಿಕೂಟ್ಟರೆ ಬರಿತೀನಿ’ ಅವಳದು ದಿಟ್ಟ ಉತ್ತರ.

‘ನಿಮಗೆ ಹೇಳಿ ಆರ್ಥ ಮಾಡ್ಸಿ ಬರೆಸೋಕೆ ಇವತ್ತೆಲ್ಲಾ ಬೇಕು. ಅದರ ಬದ್ಲು ನಾನು ಬರೆಯೋದೇ ವಾಸಿ’

ಅವಳಿಗೆ ಅಪಮಾನವೆನಿಸಿತ್ತು ‘ನೀವೇನ್ ಎಲ್ಲಾ ಕೆಲಸ ಕಲಿತೇ ಬಂದ್ರಾ? ಬಂದ್ದೇಲೆ ಕಲಿತ್ರಾ?’ ಕೇಳಿದ್ದಳು. ಅವನು ನಕ್ಕುಬಿಟ್ಟಿದ್ದ

‘ಈ ರಿಜಿಸ್ತರಗೆ ರೂಲ್ ಹಾಕಿ’ ಎಂದು ರೂಲರ್, ಪೆನ್ಸಿಲ್ ಕೊಟ್ಟಿದ್ದ.

ದಪ್ಪನೆ ರಿಜಿಸ್ಟರ್‍ನ ನೆಟ್ಟಗೆ ಕೂರಿಸಿ ರೂಲರ್ ಇಟ್ಟು ಪನ್ನಿಲ್ನಿಂದ ರೊಲ್ ಹಾಕೋದು ಒಂದು ಘನಂದಾರಿ ಕೆಲಸವೇ ಅಂದುಕೂಂಡ ಅವಳಿಗೆ ರೂಲ್ ನೆಟ್ಟಗೆ ಹಾಕಲೂ ಬಾರದೆ ವಕ್ರವಾದಾಗ ಮೋರೆ ಸಣ್ಣದಾಗಿತ್ತು ಅವನೇ ರೂಲರ್ ಅನ್ನು ಹ್ಯಾಗೆ ಇಟ್ಟು ಎಲ್ಲಿ ಹಿಡಿದು ಉರುಳಿಸುತ್ತಾ ಪೆನ್ಸಿಲ್ನಿಂದ ರೂಲ್ ಹಾಕಬೇಕೆಂಬುದನ್ನು ಹೇಳಿಕೊಟ್ಟಿದ್ದ. ಬರಬರನೆ ರೂಲ್ ಎಳೆವ ಅವನ ಚಾಕ ಚಕ್ಯತೆಗೆ ಬೆರಗಾಗಿದ್ದಳು. ಆಮೇಲೆ ರಶೀದಿ ಹಾಕುವುದನ್ನು ತೋರಿಸಿಕೊಟ್ಟ ಬಿಲ್ಗಳಿಗೆ ಟೋಕನ್ ಹಾಕುವುದು ಎನ್ಕಾಷ್ಮೆಂಟ್ ರಿಜಿಸ್ಟರ್‍ಗೆ ಎಂಟ್ರಿ… ಹೀಗೆ ಒಂದೂಂದಾಗಿ ಹೇಳಿಕೊಡುತ್ತಾ ಸದಾ ಮಂಕಾಗಿ ಕುಳಿತಿರುತ್ತಿದ್ದ ಅವಳಲ್ಲಿ ಲವಲವಿಕೆ ಮೂಡಿಸಿದ. ‘ತುಂಬಾ ಶಾರ್ಪ್ ಆಗಿದೀರಾ ಕಣ್ರಿ’ ಎಂದು ಪ್ರಶಂಸಿಸುತ್ತಾ ‘ಏನ್ ಓದಿದ್ದೀರಾ?’ ಎಂದೂ ಕೇಳಿದ್ದ. ಆವಳು ‘ಎಂ.ಎ’ ಅಂದಾಗ ಆವಕ್ಕಾಗಿದ್ದ, ‘ಎಂ.ಎ. ಓದಿ ಗುಮಾಸ್ತಿಕೆ ಮಾಡೋಕೆ ಬಂದ್ರಾ!?’ ಅಚ್ಚರಿಪಟ್ಟಿದ್ದ.  ‘ಸುಮ್ನೆ ಕೆ.ಪಿ.ಎಸ್.ಸಿ. ಎಕ್ಸಾಂ ಕಟ್ಟಿದ್ದೆ ಸೆಲೆಕ್ಟ್ ಆದೆ… ಮನೇಲಿ ಕೂತು ಏನ್ ಮಾಡೋದು ಅಂತ ಬಂದೆ, ಒಳ್ಳೇ ಜಾಬ್ ಸಿಕ್ಕರೆ ಈ ಕೆಲಸಕ್ಕೆ ಗುಡ್ಬೈ ಹೇಳ್ತೀನಿ’ ಅವಳಂದಳು.

ಅವನು ಬರೀ ಎಸ್. ಎಸ್. ಎಲ್. ಸಿ ಪಾಸು, ಪಿಯೂಸಿನಲ್ಲಿ ಫೇಲು ಅಂತ ಅವನ ಎಸ್‌ಆರ್ ನೋಡಿ ಪತ್ತೆ ಹಚ್ಚಿದ್ದಳು. ‘ಆಫೀಸ್ ಕೆಲಸಗಳಲ್ಲಿ ಡಿಗ್ರಿಗಳಿಗಿಂತ ಎಫೀಶಿಯನ್ಸಿ ಮುಖ್ಯವಮ್ಮ’ ಎಂದಿದ್ದ ಮೇನೇಜರ್. ಮಾತಿನಲ್ಲಿ ವ್ಯಂಗ್ಯವಿದ್ದರೂ ಸತ್ಯವಿದೆ ಅನ್ನಿಸಿತ್ತು. ಅದಕ್ಕೆ ಕ್ಯಾಷ್ ಡೀಲ್ ಮಾಡುತ್ತಿದ್ದ ಅವನೇ ಸಾಕ್ಷಿಯಾಗಿದ್ದ. ಅವನು ಯಾರಿಂದಲೂ ಬಿಡಿಗಾಸು ಮುಟ್ಟದೆ ತ್ವರಿತ ಗತಿಯಲ್ಲಿ ಕೆಲಸ ಮಾಡಿಕೊಡುವ ರೀತಿ, ತಾನು ಪ್ರಾಮಾಣಿಕ ಎಂಬ ಅಹಂನಿಂದ ಬೇರೆಯವರ ಬಗ್ಗೆ ಉಡಾಫೆ ಮಾಡದೆ ತನ್ನ ಪಾಡಿಗೆ ತಾನಿರುತ್ತಿದ್ದ ಭಾವ ಯಾರ ವ್ಯವಹಾರಗಳಿಗೂ ತಲೆ ತೂರಿಸದಿದ್ದ ಅವನ ಸ್ವಭಾವ ಅವಳಿಗೆ ಹಿಡಿಸಿತ್ತು. ಅವನ ಮನೆ ಕಡೆ  ಅನುಕೂಲವಿರಬಹುದೆಂದು ಕೊಂಡಳಾದರೂ ನಂಬಿಕೆ ಬರಲಿಲ್ಲ. ಯಾವಾಗಲೂ ಅವನೂಂದೆರಡು ಜೊತೆ ಬಟ್ಟಿಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ. ಹೆಚ್ಚಾಗಿ ಕಾಫೀಗೂ ಹೋಗುವವನಲ್ಲ. ಪೈಸೆ ಪೈಸೆಗೂ ಲೆಕ್ಕ ಹಾಕುತಿದ್ದ. ಇಷ್ಟಾದರೂ ಅವನೇಕೆ ಲಂಚ ತೆಗೆದುಕೊಳ್ಳುವುದಿಲ್ಲ? ತಲೆ ತುರಿಸಿಕೊಂಡಳು. ಅವನು ಮನಸ್ಸು ಮಾಡಿದರೆ ಕೈ ತುಂಬಾ ಕಾಸು ಸಿಗುವ ಕ್ಯಾಷ್ ವಿಭಾಗದಲ್ಲಿದ್ದ. ಎಸ್ಟಾಬ್ಲಿಷ್ಮೆಂಟ್ ಸೆಕ್ಷನ್ ಅರವಿಂದನಂತೆ ಅವನೂ ದಿನಕ್ಕೂಂದು ಬಣ್ಣದ ಬಟ್ಟೆ ತೊಟ್ಟು ಬರಬಹುದಿತ್ತು. ಕ್ಲಬ್ಬಿಗೋ ಬಾರ್‍ಗೋ ಹೋಗಿ ಶೋಕಿ ತೀರಿಸಿಕೊಳ್ಳಬಹುದಿತ್ತು. ಅವನು ಸಿಗರೇಟ್ ಸೇದಿದ್ದೂ ಇವಳು ಕಂಡಿಲ್ಲ.

ಅವನು ಮಾಂಸ ತಿನ್ನುವ ಕುಟುಂಬದವನಾದರೂ ಸಸ್ಯಹಾರಿಯಂತೆ! ಇದೆಲ್ಲಾ ಕೇಳಿ ಅವಳಿಗೆ ಹೆಮ್ಮೆ ಎನಿಸಿರಲಿಲ್ಲ. ಗಂಡಸಾದವನು ತೀರಾ ಮಡಿ ಹೆಂಗಸಿನಂತೆ ಇರಬಾರದು ಎಂದೇ ಅಂದುಕೊಂಡಿದ್ದಳು. ಜೀವನದಲ್ಲಿ ಎಲ್ಲಾ ಸುಖವನ್ನು ಅನುಭವಿಸಬೇಕು ಯಾವುದಕ್ಕೂ ಅಂಟಿಕೊಳ್ಳಬಾರದಷ್ಟೇ, ಒಂದೂ ದುಶ್ಚಟವಿಲ್ಲದವನು ಪುಕ್ಕಲನೆಂದೇ ಅವಳ ಭಾವನೆ. ಅವನ ಬಗ್ಗೆ ಅವಳಿಗೀಗ ಅಸಡ್ಡೆ. ಅವಳು ಬೇಕೆಂದೇ ಅಸಡ್ಡೆ ತೋರಿಸಿದರೂ ಅವನಿಗರ್ಥವಾಗದಿದ್ದಾಗ ಅವಳಿಗೇ ಮುಜುಗರ. ಅವನೀಗ ತನ್ನ ಮೇಲೆ ಆಸಕ್ತಿ ತೋರುತ್ತಿದ್ದಾನೆಂದು ಅವಳಿಗೀಗ ಅನುಮಾನ – ಅಹಂ. ತಾನೇ ಹೇಳಿ ಆವಳಿಂದ ಕ್ಯಾಷ್ ಬುಕ್ ಬರೆಸುತ್ತಿದ್ದ ‘ನಿಮ್ಮ ಹ್ಯಾಂಡ್ ರೈಟಿಂಗ್ ನಿಮ್ಮ ಹಾಗೆ ಬ್ಯೂಟಿಪುಲ್’ ಅನ್ನುತ್ತಿದ್ದ.

ರೇಗಬೇಕೆನಿಸಿ ಅವನ ಮುಖ ನೋಡಿದರೆ ಅವನ ದೃಷ್ಟಿಯಲ್ಲಾ ಕ್ಯಾಷ್ ಬುಕ್ ಮೇಲೆ. ಕಚೇರಿ ವೇಳೆ ಮುಗಿದ ನಂತರ ಕಾಮ್ ಆಗಿ ಕುಳಿತು ಕ್ಯಾಷ್ಬುಕ್ ಬರೆಯುವುದು ಅವನ ಪದ್ಧತಿ. ಇದರಿಂದಾಗಿ ಅವಳಿಗೆ ಕಸಿವಿಸಿ. ಎಲ್ಲರೂ ಹೋಗಿ ಜವಾನ ಮಾತ್ರ ಕಾದಿರುತ್ತಿದ್ದ “ಹೋಗೋದಾದ್ರ ನೀವು ಹೋಗಿ” ಎಂಬ ಅವನ ಒಗ್ಗರಣೆ ಬೇರೆ. ದಂಡಿ ಕೆಲಸ ಅವನು ಮಾಡುವಾಗ ಹೋಗುವುದಾದರೂ ಹೇಗೆ? ಹಾಗೆ ಹೋದರೆ ಕೆಲಸ ಕಲಿಯುವುದೆಂತು, ಸುಮ್ಮನೆ ಕೂತು ಅವರಿವರಂತೆ ಹರಟೆ ಕೊಚ್ಚಿ ಹೋಗುವ ಜಯಮಾನ ತನ್ನದಲ್ಲ. “ಪರ್ವಾಗಿಲ್ಲ ಮುಗಿಸಿಯೇ ಹೋಗೋಣ” ಎಂದು ಸಣ್ಣ ನಗೆ ತುಳುಕಿಸುತ್ತಿದ್ದಳು.

ಕಚೇರಿ ವೇಳೆ ಮುಗಿದ ನಂತರವೂ ಒಂದೂವರೆ ಗಂಟೆ ಎಕ್ಸ್‍ಟ್ರಾ ದುಡಿಮೆ. ಅವಳಿಗೆ ಒಳಗೇ ಕೋಪ. ಕೋಪವನ್ನು ಮುಖದಲ್ಲೇ ಕಕ್ಕಿದರೂ ಅವನಿಗೆ ಅರ್ಥವಾಗಬೇಕಲ್ಲ. ಅರ್ಥವಾದರೂ ಆಗದವನಂತೆ ನಟಿಸುತ್ತಾನೋ ಎಂಬ ಗುಮಾನಿ, ಅಸಹನೆಗಳ ನಡುವೆಯೂ ಅವನ ಜೊತೆ ದುಡಿವುದು ಮಾತ್ರ ಹಿಂಸೆ ಎಂದೇನೂ ಅನಿಸಿದ್ದಿಲ್ಲ. ಎಂದೂ ವ್ಯತಿರಿಕ್ತವಾಗಿ ನಡೆದುಕೂಂಡವನಲ್ಲ. ಒಂದಳತೆಗೆ ಮಸ್ತಾಗಿದ್ದ. ನಕ್ಕಾಗ ಅವನ ಕಾಣ್ಣುಗಳಲ್ಲೂ ನಗೆ ತುಳುಕುವುದನ್ನವಳು ಹೆಚ್ಚು ಇಷ್ಟಪಡುತ್ತಿದ್ದಳು. ಆಗೆಲ್ಲಾ ಅವಳಿಗೆ ಪುಟ್ಟ ಮಗುವಿನ ನೆನಪು. ಸಂಜೆ ಒಂದೊಂದ್ಸಲ ಕಾಫಿಗೆ ಕರೆದೊಯ್ಯುತ್ತಿದ್ದ. ಎಷ್ಟು ಬೇಡಿದರೂ ಕೇಳದೆ ತಾನೆ ಬಿಲ್ ಪೇ  ಮಾಡುತ್ತಿದ್ದ. ಸಂಬಳದ ದಿನವಾದರೆ ಮಸಾಲೆ ದೋಸೆ ಕೊಡಿಸುವಷ್ಟು ಧಾರಾಳಿ. ಕತ್ತಲಾದಾಗ ನಾನು ಸ್ಕೂಟಿ ಏರಿದರೆ ಅವನು ಊರಾಚೆ ಇರುವ ಮನೆಗೆ ನಡೆದೇ ಹೋಗುತ್ತಿದ್ದ. ಕಛೇರಿಯಲ್ಲಿ ಅವನೂಬ್ಬ ಪ್ರಚಂಡ ಬುದ್ದಿವಂತನೆಂಬ ಭಾವನೆಯನ್ನು ಎಲ್ಲರಲ್ಲೂ ಮೂಡಿಸಿಬಿಟ್ಟಿದ್ದ. ಕೆ.ಸಿ.ಎಸ್.ಆರ್., ಕೆ.ಎಫ್.ಸಿ, ಸಿ.ಸಿ.ಎ. ರೂಲ್ಸ್‍ಗಳನ್ನಂತು ಬಾಯಿಪಾಠ ಮೊಡಿದಂತಿದ್ದ. ಸಾಹೇಬನಿಗೂ ಅವನೆಂದರೆ ಗೌರವ. ಮಿತಭಾಷಿಯಂತೆ ತೋರುತ್ತಿದ್ದ ಆವನು ಕಚೇರಿ ಹೊರಗೆ ರಾಜಕೀಯ ಸಾಹಿತ್ಯ ಸಂಗೀತ ಬಂಡಾಯ ಎಲ್ಲದರ ಬಗ್ಗೆ ಮಾತನಾಡಬಲ್ಲವನಾಗಿದ್ದ. ಕ್ಯಾಂಟಿನ್‍ನಲ್ಲಿ ಕೂತಾಗ ಅವನ ವಾಕ್ ಚಾತುರ್ಯ ವ್ಯಕ್ತವಾಗುತ್ತಿತ್ತು. ಅವಳು ತಿಳಿದಂತೆ ಅವನು ಆಫೀಸ್ ಗೆದ್ದಲು ಅಲ್ಲವೆನ್ನಿಸಿದಾಗ ಮನೆಸ್ಸೇಕೋ ಅರಳಿಕೊಂಡಿತ್ತು. ಕಛೇರಿ ಹೊರಗೆ ಅವನೆಂದೂ ಡಿ.ಎ. ಬಿಲ್, ಡಿ.ಸಿ. ಬಿಲ್, ಪೇ, ಇನ್ಕ್ರಿಮೆಂಟ್ ಇತ್ಯಾದಿಗಳ ಬಗ್ಗೆ, ಮಾತನಾಡಿದವನಲ್ಲ. ಕುವೆಂಪು ಬೇಂದ್ರ ಕಾರಂತ ಆಡಿಗರ ಬರಹಗಳ ಬಗ್ಗೆ. ಬುದ್ಧ ಬಸವ, ಅಂಬೇಡ್ವರ್ ವಿಚಾರಗಳೆನ್ನಲ್ಲ ಕುರಿತು ಮಾತನಾಡುವಾಗ ಅವನು ಹೆಚ್ಚು ಇಷ್ಟವಾಗುತ್ತಿದ್ದ. ಅವನ ಕುಟುಂಬದ ಬಗ್ಗೆ ಆವಳಿಗೀಗ ತಿಳಿದುಕೂಳ್ಳುವ ಆಸಕ್ತಿ. ಮನೇಲಿ ತಾಯಿ ಇಬ್ಬರು ತಂಗಿಯರು, ಒಬ್ಬ ತಮ್ಮ ಇದ್ದಾನೆ ಎನ್ನುತ್ತಿದ್ದ ಅವನು, “ನಾವು ಬಡವರು ಕಣ್ರಿ… ಬಯಸಿದ ಜೀವನ ನಮಗೆಲ್ಲಾ ಸಿಗೋದಿಲ್ಲ. ಸಿಕ್ಕಿದ್ದನ್ನೇ ದಕ್ಕಿಸಿಕೊಳ್ಳಬೇಕು” ಅನ್ನುತ್ತಿದ್ದ. ಮುಖದಲ್ಲಿ ನಿರಾತೆ ಎಂತದೂ ಕಾಣುತ್ತಿರಲಿಲ್ಲ.

“ಅಂದರೆ… ನಿಮ್ಮ ಜೀವನ ಹೇಗಿರಬೇಕು ಅಂತ ನಿಮ್ಮ ಬಯಕೆ?” ಅವಳಿಗೆ ಕುತೂಹಲ.

“ಎರಡು ಬೆಡ್‍ರೂಂ, ದೊಡ್ಡ ಹಾಲ್ ಇರುವ ಒಂದು ಮನೆ, ರೈಡಿಂಗ್‍ಗೆ ಒಂದು ಸ್ಕೂಟರ್, ಖರ್ಚು ಮಾಡಿ ಮುಗಿಸುವಷ್ಟು ಸಂಬಳ ಬರುವಂತ ಕೆಲಸ, ಇವೆಲ್ಲಾ ಬೇಕು ಅನ್ನೋದು ನನ್ನ ಬಯಕೆ ಖಂಡಿತ ಅಲ್ಲ…”

“ಹಾಗಾದ್ರೆ ಮತ್ತೇನು? ಈಗ ನೀವು ಬಯಸುವಂತಹ ಜೀವನ ನಿಮಗೆ ಸಿಕ್ಕಿಲ್ಲವೆ?” ಅವಳ ಕಳಕಳಿ.

ಬಡತನ ಇದೆ ಜವಾಬ್ದಾರಿಗಳಿವೆ. ತಂಗಿಯರ ಮದುವೆ ತಮ್ಮನ ಓದು ಇದೆಲ್ಲಾ ನನ್ನ ದುಡಿಮೆಯಿಂದಲೇ ಆಗಬೇಕಿದೆ… ಆಮೇಲೆಯೇ ನನ್ನ ಮದುವೆ ಯೋಚನೆ”

“ನೀವು ಬಯಸುಪ ಹೆಣ್ಣು ಹೇಗಿರಬೇಕು”

“ಯು ಮೀನ್… ಅವಳಿಗೆ ಅವಳದ್ದೇ ಆದ ಬಯಕೆಗಳೇ ಇರಬಾರದೇ?”

“ಈಡೇರದ ಬಯಕೆಗಳನ್ನು ಯಾರೇ – ಇಟ್ಟುಕೊಂಡರೂ ಜೀವನದ ಸಂತೋಷವನ್ನೇ ಮಿಸ್ ಮಾಡ್ಕೋತಾರೆ. ನನ್ನಂತವರನ್ನು ಮದುವೆಯಾಗೋಳು ಅಲ್ಪತ್ರ್‍ಅಪ್ತಳಾಗಿರಬೇಕು”

“ನಿಮ್ಮ ಆದರ್ಶಗಳಿಗಾಗಿ ಆಕೆ ಬಡತನದ ತೆಕ್ಕೆ ಬೀಳಬೇಕೆನ್ನಿ?”

“ಬಡತನ ಅಂದ್ರೇನು ಹೇಳಿ?” ಅವನು ಅವಳನ್ನೇ ಕೇಳಿದ.

“ಬಯಸಿದ್ದೆಲ್ಲ ಸಿಗದೇಹೋದ್ರೆ ಇನ್ನೇನು?”

“ಅದಕ್ಕೆ ನಾನು ಹೇಳಿದ್ದು ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿದರೆ ಬಡತನ ಕೂಡ ಆಷ್ಟೂಂದು ದ್ವೇಷಿಸುವಂತದ್ದಲ್ಲ…”

“ನೀವು ಲಂಚ ಮುಟ್ಟೋದಿಲ್ಲ… ಒಳ್ಳೇದೆ, ಅವರಾಗಿ ಖುಷಿಯಾಗಿ ಕೊಟ್ಟರೆ ಯಾಕೆ ತಗೋಬಾರದು?”

“ಖುಷಿಯಿಂದ ಯಾರೂ ಕೊಡೋದಿಲ್ಲ. ತಿರುಕರಿಗೆ ತಂಗಳನ್ನು ಹಾಕುವಾಗ ನೊಂದುಕೊಂಡೇ ಹಾಕ್ತಾರೆ. ಸರ್ಕಾರ ಕೊಡುವ ಸಂಬಳದಲ್ಲೇ ಖಂಡಿತ- ಜೀವನ ಮಾಡಬಹುದು… ಮಜಾ ಮಾಡೋಕಾಗಲ್ಲ ಅಷ್ಟೇ”.

“ಲೈಫ್ ಈಸ್ ಟು ಎಂಜಾಯ್ ಆಲ್ವೆ?”

“ಯು ಮೀನ್… ಬಂಗ್ಲವಾಸ ಕಾರಲ್ಲಿ ಪ್ರಯಾಣ ಕಾಸ್ಟ್‍ಲೀ ಡ್ರಸ್ಸಿಂಗ್ ಕುಡಿಯೋದು ತಿನ್ನೋದು ಎಕ್ಸ್ ಟ್ರಾ ಈಸ್ ಇಟ್?”

“ಹಾಗಲ್ಲ ಸಂತೋಷವಾಗಿರಬೇಕು ಅಂದ್ರೆ ದುಡ್ಡು ಬೇಕೇಬೇಕಲ್ವೆ?”

“ದುಡ್ಡಿನಿಂದ ಸಂತೋಷ ಪಡ್ಕೋಳ್ಳೋಕೆ ಸಾಧ್ಯ ಅಂತೀರಾ?”

“ಇಂತಹ ಮಾತುಗಳು ಪ್ರಾಕ್ಟಿಕಲ್ ಅನ್ಸೋಲ್ಲ”

“ನೋದಿ, ಟು ಬಿ ಪ್ರಾಂಕ್ ವಿಥ್ ಯು… ಈಗ ನಿಮ್ಮನ್ನು ನೋಡಿದ್ರೆ ಸಂತೋಷವಾಗುತ್ತೆ… ದುಡ್ಡು ಎಣಿಸೋದ್ರಿಂದ ನನಗೆ ಸಂತೋಷವಾಗೋದಿಲ್ಲ”

“ನನ್ನನ್ನು ನೋಡಿವ್ರೆ ನನ್ನ ಜೊತೆ ಮಾತನಾಡಿದ್ರೆ ಸಿಗೋ ಸಂತೋಷ ಶಾಶ್ವತವಾದುದಲ್ಲ ಅನ್ನೋದು ಕಟು ವಾಸ್ತವ?”

“ಯಾಕೆ ಶಾಶ್ವತವಾದುದಲ್ಲ?”

“ನಾವು ಜೀವನ ಪೂರಾ ಹೀಗೇ ಒಟ್ಟಿಗೆ ಇರೋಕೆ ಸಾಧ್ಯವೆ?”

ಸಾಧ್ಯ!!

“ಅದು ಹೇಗೆ?” ಆವಳು ತಡವರಿಸಿದಳು.

“ಈ ದೇಶದಲ್ಲಿ ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ಇರೋದಿಕ್ಕೆ ಸಾಧ್ಯವಿಲ್ಲವಲ್ಲ. ಸೋ ಮನಸ್ಸು ಮಾಡಿದರೆ ನಾವು ಮದುವೆಯಾಗಬಹುದಲ್ಲ” ತಲೆ ಕೊಡವಿದಳು.

“ಮದುವೆಗೆ ಹಿರಿಯರ ಒಪಿಗೆ ಬೇಕಲ್ಲ?”

“ನಿಮಗೆ ನಾನು ನನಗೆ ನೀವು ಇಷ್ಟವಾದರೆ ಹಿರಿಯರ ಒಪ್ಪಿಗೆ ಇಲ್ಲದೆಯೂ ಒಂದಾಗ ಬಹುದಲ್ಲ.”

“ನಾನು ನಿಮ್ಮನ್ನು ಇಷ್ಟಪಡ್ತೀನಿ ಅಂತ ನಿಮಗೇಕೆ ಆನ್ನಿಸ್ತು?” ಅವಳ ಸಿಡುಕು.

“ಗೊತ್ತಿಲ್ಲ” ಅವನ ಶಾಂತ ಸ್ವರ.

ಹೀಗೆ ಅವರ ಮಾತುಗಳು ಎಲ್ಲೆಲ್ಲಿಯೋ ಸುತ್ತಾಡಿ ಪ್ರೇಮದ ವಿಷಯ ಬಂದಾಗ ನುಣುಚಿಕೊಳ್ಳುತ್ತಿದ್ದವು. ಆದರೆ ಇಬ್ಬರಿಗೂ ತಾವು ಒಬ್ಬರನ್ನೊಬ್ಬರು  ಪ್ರೀತಿಸುತ್ತಿದ್ದೇವೆಂಬ ಅಸಲಿಯತ್ತಿನಲ್ಲಿ ಅನುಮಾನವೇ ಇರಲಿಲ್ಲ. ಅವನ ಬಡತನ ಅವಳಿಗಿಷ್ಟವಾಗದಿದ್ದರೂ ಅವನ ಆದರ್ಶಾ ವಿಚಾರಗಳು ಅವಳಿಗಿಷ್ಟ. ತಾವಿಬ್ಬರೂ ಮದುವೆಯಾದರೆ ಜೀವನವೇನು ದುರ್ಬಲವೆನ್ನಿಸದು ಎಂಬ ಆತ್ಮವಿಶ್ವಾಸವೂ ಅವಳಲ್ಲಿತ್ತು. ಅವನ ನೇರವಂತಿಕೆಯೇ ಒಮ್ಮೊಮ್ಮೆ ದಿಗಿಲು ಹುಟ್ಟಿಸುವಂತಿತ್ತು. ಒಂದು ವರ್ಷವೆಂಬುದು ಆಡಾಡುತ್ತಲೇ ಕಳೆದುಹೋಗಿತ್ತು. ಅವನ ಅವಳ ಮಧ್ಯೆ ಸ್ನೇಹಕ್ಕಿಂತ ಹೆಚ್ಚಿನೆದೇನೋ ಇದೆ ಎಂಬ ಶಂಕೆ ಕಛೇರಿಯಲ್ಲಿ ಉದ್ಭವಿಸಿತ್ತು. ‘ಏನಪ್ಪಾ ಯಾವಾಗಯ್ಯ ಮದುವೆ?’  ಗಂಟುಮೋರೆ ಮೇನೇಜರ್ ‘ನಮ್ಮಂತಹ ಗುಮಾಸ್ತರನ್ನು ಯಾವ ಹುಡುಗಿ ತಾನೆ ಮನೆಸಾರೆ ಮೆಚ್ಚಿ ಮದುವೆಯಾಗ್ತಾಳೆ ಮದುವೆಯಾಗೋಕೆ ಅಸಲು ಒಪ್ತಾಳಾ ಹೇಳಿ ಸಾರ್’ ಅವನ ನಿವೇದನೆ.

‘ನಮ್ಮದೆಲ್ಲಾ ಮದುವೆ ಆಗಿಲ್ವೇನಯ್ಯಾ? ಹುಡುಗೀರ ಕನಸಲ್ಲಿ ಡಾಕ್ಟರ್ ಎಂಜಿನಿಯರ್ ಲೆಕ್ಚರರ್‍ಸ್ ಬಂದರೂ ಅವರೆಲ್ಲಾ ಹೆಚ್ಚು ಗಂಟು ಕೆಳ್ತಾರೆ. ಕೊನೆಗೇ ನಮ್ಮಂತೋರೆ ಗತಿ ಕಣಯ್ಯ’ ಗಹಗಹಿಸುತ್ತಿದ್ದ ಮೇನೇಜರ್.

‘ಸೊ… ನಮ್ಮನ್ನೂ ಹುಡುಗೀರು ಒಪ್ತಾರೆ ಅಂತಿರಾ ಸಾ…?’ ಅವನ ಸಂದೇಶ.

‘ಹಿರಿಯರು ಇರೋದೇಕಯ್ಯ ಒಪ್ಪಿಸ್ತಾರೆ. ಈ ದೇಶದಲ್ಲಿ ಹೆಣ್ಣಿನ ಒಪ್ಪಿಗೆ ಯಾರಯ್ಯ ಕೇಳ್ತಾರೆ? ಅಷ್ಟಕ್ಕೂ ಅಂಗೈನಲ್ಲಿ ಬೆಣ್ಣೆ ಮಡಕ್ಕೊಂಡು ತುಪ್ಪಕ್ಕೆ ಯಾಕ್ ತಮ್ಮಾ ಅಲಿತಿಯಾ’ ಗಂಟುಮೋರೆ ವಿನೋದವಾಡುತ್ತಾ ಅವಳತ್ತ ನೋಡಿ ನಗುವಾಗ ಅವಳಿಗೆ ನಾಚಿಕೆ. ಆವನಿಗೋ ಉಭಯ ಸಂಕಟ. ಮೌನವೇ ಸಧ್ಯದ ಪರಿಹಾರ. ಕಛೇರಿಯವರ ದೃಷ್ಟಿಯಲ್ಲಂತೂ ಅವರಿಬ್ಬರು ಭಾವಿದಂಪತಿಗಳು.

ಅವಳ ಮನೆಯಲ್ಲಿ ಅನುಕೂಲವಿತ್ತು. ತಂದೆ ರಿಟೈರ್ಡ್ ತಹಶೀಲ್ದಾರ ಅಣ್ಣಂದೀರೆಲ್ಲಾ ಒಳ್ಳೇ ಉದ್ಯೋಗಸ್ಥರು. ಅಕ್ಕಂದಿರಿಬ್ಬರ ಮದುವೆಯಾಗಿತ್ತು. ಅವಳ ದುಡಿಮೆಯಿಂದಲೇ ಮನೆ ನಡೆಯಬೇಕಿರಲಿಲ್ಲ. ಸಂಬಳವನ್ನು ಕೊಡದಿದ್ದರೂ ಆಕ್ಷೇಪಿಸುವವರಿಲ್ಲ. ಅವಳಿಗೂ ಅವನನ್ನು ಕಂಡರೆ ಅದೂಂದು ಬಗೆಯ ಸೆಳೆತ. ಬಡತನವನ್ನು ಕೇರ್ ಮಾಡದೆ ನಗುನಗುತ್ತಾ ದಿನಕಳೆವ ಅವನ ಉತ್ಸಾಹ ಬಡತನವನ್ನೇ ಪ್ರೀತಿಸುವ ಎದೆಗಾರಿಕೆ ಅವಳಿಗೆ ಮೆಚ್ಚುಗೆ. ನಿಮ್ಮನ್ನು ಇಷ್ಟ ಪಡ್ತೀನಿ ಅನ್ನೋದನ್ನ ಅವಳ ಬಳಿ ಅವನು ಮಾತ್ರ ನೇರವಾಗಿಯೇ ನಿವೇದಿಸಿದ್ದ.

ಕಡೆಗಣಿಸಲೂ ಅಂತಹ ಸಕಾರಣಗಳಿರಲಿಲ್ಲ. ಇಬ್ಬರ ದುಡಿಮೆಯಲ್ಲೂ ಅವನ ಮನೆ ಜವಾಬ್ದಾರಿಯನ್ನು ಪೂರೈಸಬಹುದೆಂದು ಛಲ ಅವಳಲ್ಲಿ ಬಲವಾಗುತ್ತಿತ್ತು.
*     *     *     *

ಇದೇ ದಿನಗಳಲ್ಲಿ ಅವನ ತಂಗಿಯನ್ನು ನೋಡಲು ವರನೊಬ್ಬ ಬಂದ. ಒಪ್ಪಿಕೂಂಡ್ಡ. ಐವತ್ತು ಸಾವಿರ ವರದಕ್ಷಿಣೆ ಕೇಳಿದ. ವರದಕ್ಷಿಣೆ ತಗೊಳ್ಳೋದು ಕೊಡೋದು  ಎರಡೂ ಅಪರಾಧ ಎಂದವನು ವಾದಕ್ಕಿಳಿದ. ಬಂದವರು ಟವಲ್ ಕೊಡವಿಕೊಂಡೆದ್ದು ಹೋದರು. ಅವನಿಗೋ ಈ ಸಾಹಾಸವನ್ನು ತನ್ನವಳ ಬಳಿ ಹೇಳಿಕೊಳ್ಳುವ  ಉಮೇದು. ಕಛೇರಿಗೆ ಎಲ್ಲರಿಗಿಂತಲೂ ಮೊದಲೇ ಬಂದ. ಎಲ್ಲರೂ ಬಂದರೂ ಅವಳೇ ಬರಲಿಲ್ಲ ರಜವೂ ಹಾಕಿಲ್ಲ! ‘ಆಬ್ಸೆಂಟ್ ಮಾರ್ಕ್ ಮಾಡ್ರಿ… ಇರ್ರೆಸ್ಪಾನ್ಸಿಬಲ್ ಹುಡ್ಗಿ’ ಮೇನೇಜರ್ ಕೂಗಾಡುತ್ತಿದ್ದ. ಇವನಿಗೋ ತಳಮಳ ಮೈ ಹುಷಾರಿಲ್ಲವೆ ಎಂಬ ಕಳವಳ. ಅವಳ ಮನೆಗೇ ಹೋಗೋಣವೆಂದು ಕಛೇರಿ ವೇಳೆ ಮುಗಿಯುವುದನ್ನೇ ಕಾದು ಕುಳಿತು ಹೊರಗಡಿಯಿಟ್ಟ ನಂತರ ಮನಸ್ಸು ಕರೆದೂಯ್ದಿದ್ದು ತನ್ನ ಮನೆಗೆ.

ಮರುದಿನವೂ ಅವಳ ಸುಳಿವಿಲ್ಲ. ಅವನಿಗಂತೂ ಊಟವೇ ಸೇರಲಿಲ್ಲ. ಬೆಳಗಾಗುವುದನ್ನೇ ಚಾತಕದಂತೆ ಕಾದು ಕಛೇರಿಗೆ ಓಡಿಕೂಂಡು ಬಂದ. ಅವಳಾಗಲೇ ವಿರಾಜಮಾನಳಾಗಿದ್ದಳು. ಎಲ್ಲರೂ ‘ಕಂಗ್ರಾಟ್ಸ್’ ಹೇಳುತ್ತಿದ್ದುದ್ದನ್ನು ಕಂಡು ವಿಸ್ಮಯಗೊಂಡ. ‘ನೋಡಪ್ಪಾ ರಮೇಶಾ, ನಿನ್ನ ಆಸಿಸ್ಟೆಂಟ್ ಕೆಲಸಕ್ಕೆ ರಾಜೀನಾಮೆ ಬರೆದು ಒಗೆದಾಳೆ’ ಗಂಟು ಮೋರೆ ನಕ್ಕಿತು.

‘ಅರೆ! ಅದಕ್ಕೆ ನೀವೆಲ್ಲಾ ಕಂಗ್ರಾಟ್ಸ್ ಹೇಳೋದಾ!’ ಚಕಿತನಾದ.

‘ನಿಮಗೊಂದು ಸರ್ಪರೈಸ್ ಕಣ್ರಿ, ಕ್ಷಮಾಗೆ ಕಾಲೇಜ್ ಲೆಕ್ಟರರ್ ಆಗಿ ಅಪಾಯಂಟ್ ಆಗ್ಯದೆ, ಡ್ಯೂಟಿ ಜಾಯಿನ್ ಆಗಿ ಬಂದು ರೆಸಿಗ್ನೇಶನ್ ಬರ್ದಾರೆ’ ಅಂದಳು ಟೈಪಿಸ್ಟ್ ಶೈಲಜ. ‘ಕಂಗ್ರಾಟ್ಸ್’ ಎಂದು ಅವನು ಜಿಗಿದಾಡಿದ.

‘ಇನ್ನೇನು ಅಮ್ಮ ಅವರಿಗೆ ಕೈ ತುಂಬಾ ಸಂಬಳ… ಈ ಬಡವನ್ನ ಮರಿಬ್ಯಾಡಿ’ ಅಂದ. ಆಕೆ ಕಣ್ಣುಗಳಲ್ಲಿ ನೀರಾಡಿದಾಗ ಅವನಿಗೊಂದು ಬಗೆಯ ಹೆಮ್ಮೆ. ತನ್ನ ತಂಗಿಗೆ ಗಂಡು ಗೊತ್ತಾಗಿದ್ದು ಗಂಡು ವರದಕ್ಷಿಣೆ ಕೇಳಿದಾಗ ತಾನು ದಬಾಯಿಸಿ ಕಳಿಸಿದ್ದನ್ನು ಹೇಳಿಕೊಂಡು ಬೀಗಿದ. ಅವಳಿಗೆ ಏನಂತ ಪ್ರತಿಕ್ರಿಯಿಸಬೇಕೋ ತೋಚಲಿಲ್ಲ.

‘ನಾನು ಮಾಡಿದ್ದು ಕರೆಕ್ಟ್ ಅಲ್ವೇನ್ರಿ?’ ಅವನೇ ಅಭೀಪ್ರಾಯಕ್ಕಾಗಿ ಕಾದು ನಿಂತ.

‘ಆದರ್ಶಗಳು ನಿಮಗಿರಲಿ, ಆದರೆ ಬೇರೆಯವರಿಂದಲೂ ಆದರ್ಶವನ್ನು ನಿರೀಕ್ಷಿಸುವ ಹಕ್ಕು ನಿಮಗಿಲ್ಲ. ವರದಕ್ಷಿಣೆ ಸಮಸ್ಯೆ ಹೆಣ್ಣಿನ ಮನೆಯವರಿಂದ ಬಗೆಹರಿಸುವಂತದಲ್ಲ. ಗಂಡು ಮತ್ತವನ ಮನೆಯವರು ದೊಡ್ಡ ಮನಸ್ಸು ಮಾಡಿದರೆ ಮಾತ್ರ ಸಾಧ್ಯ’ ಅವಳಂದಳು. ಅವನು ತಲೆತಗ್ಗಿಸಿದ.

‘ಆದರ್ಶ ನಿಮಗಿರಬೇಕು ನಿಜ. ಆದರ ಅವೇ ನಮ್ಮ ಬಾಳಿಗೆ ಮುಳ್ಳಾಗಬಾರದಲ್ವೆ?’ ಅವಳ ದನಿ ತೇವವಾಗಿತ್ತು.

‘ಯಾರೂ ನಡೆಯದ ಹಾದಿಯಲ್ಲಿ ಮುಳ್ಳು ಕಲ್ಲುಗಳಿರ್ತಾವೆ. ಹಾಗಂತ ಗುರಿ ಮುಟ್ಟೋದನ್ನ ಬಿಡ್ಲಿಕ್ಕೆ ಆದೀತಾ? ಮುಳ್ಳು ಸವರಿಕೊಂಡು ನಡಿಬೇಕಪ್ಪಾ’ ಅವನು ಮುಗುಳ್ನಕ್ಕು, ‘ನಾನು ಬರ್ತೀನಿ ಕಾಲೇಜಿಗೆ ಟೈಮ್ ಆಯ್ತು’ ಅವಳು ಮೇಲೆದ್ದಳು. ಮತ್ತೆ ತಮ್ಮ ದರುಶನ? ಅವನ ಕಂಠ ಗದ್ದದಿತವಾದುದನ್ನವಳು ಗ್ರಹಿಸಿದಳು. ‘ಬಿಡುವಾದಾಗ ಬರ್ತೇನೆ’ ನಸುನಕ್ಕಳು. ಎಲ್ಲರೂ ಆವಳನ್ನು ಕಛೇರಿಯ ಗೇಟಿನವರೆಗೂ ಬಿಟ್ಟು ಬಂದರು. ‘ಇನ್ನೇನಪ್ಪಾ ನಿನಗಿಂತ ನಿನ್ನ ವುಡ್ ಬಿ ಸಂಬಳ ಮಸ್ತು ಬರ್ತೇತೆ ಸುಖವಾಗಿರ್ತಿಯಾ ಮಗ್ನೆ’ ಎಸ್ಟಾಬ್ಲಿಷ್‍ಮೆಂಟ್ ಅರವಿಂದ ಪುಸಕ್ಕನೆ ನಕ್ಕ, ಅವನಿಗೆ ನಗಬೇಕಿನಿಸಲಿಲ್ಲ.

ವಾರಗಳು ಉರುಳಿದರೂ ಅವಳು ಬರಲಿಲ್ಲ. ಅವನಿಗೋ ಅವಳದ್ದೇ ಚಿಂತೆ. ಕ್ಯಾಷ್‍ಬುಕ್ ಟ್ಯಾಲಿ ಆಗಲಿಲ್ಲ. ಅವಳಿಗೂ ಅವನನ್ನು ನೋಡುವ ಕಾತುರವಿದ್ದಿತಾದರೂ ಸಮಯಾಭಾವ. ಲೆಸೆನ್ಸ್ ಸಿದ್ಧಪಡಿಸಿಕೊಳ್ಳಬೇಕು ಹೊಸ ಪರಿಸರ ಹೊಸ ಹೊಸ ವಿದ್ವಾಂಸರ ಒಡನಾಟ. ದೊಡ್ಡ ಲೈಬ್ರರಿಯ ಸಹವಾಸ. ದಾಹವನ್ನು ತಣಿಸುವ ಬಗೆಬಗೆಯ ಪುಸ್ತಕಗಳು. ಚರ್ಚೆಗೆ ಯುವಕ ಯುವತಿಯರ ಆ ಲೋಕವೇ ಅಂತದ್ದು. ಅಲ್ಲಿ ಸಿಗುವ ಆನಂದದ ಸೌರಭವೇ ಬೇರೆ. ಪ್ರೊಫೆಸರ್ ತ್ಯಾಮಸುಂದರ ಇವಳ ಸರಳ ಸ್ನಿಗ್ಧ ಸೌಂದರ್ಯಕ್ಕೆ ಮಾರು ಹೋಗಿದ್ದ. ಅವನಿಗೆ ಕಾಲೇಜಿನಲ್ಲಿ ಒಳ್ಳೆ ಹೆಸರಿತ್ತು. ಅವನ ಲೆಕ್ಚರ್‍ಗೆ ಜೇನ್ನೊಣಗಳಂತೆ ವಿದ್ಯಾರ್ಥಿಗಳು ಮುತ್ತುತ್ತಿದ್ದರು. ಪ್ರಗತಿಪರ ಚಿಂತಕ ಬೇರೆ. ಜೊತೆಗೆ ‘ಕಾರಂತರ ಬದುಕು ಬರಹ ಒಂದು ಅಧ್ಯಯನ’ ಎಂಬ ಥೀಸಿಸ್ ಬರೆದು ಡಾಕ್ಟರೇಟ್ ಗಿಟ್ಟಿಸಿದ್ದ. ಒಳ್ಳೆ ಎತ್ತರ ಬಣ್ಣ ಗೌರವಪೂರ್ಣ ನಡವಳಿಕೆ- ಹೊಸದಾಗಿ ವೃತ್ತಿಗೆ ಬಂದಿದ್ದ ಅವಳಿಗೆ ಪ್ರೊಫೆಸರನೇ ಮಾರ್ಗದರ್ಶಿ. ‘ನೀವು ಪಿ.ಹೆಚ್.ಡಿ ಮಾಡಿ ಮೇಡಂ ನಾನ್ ಗೈಡ್ ಮಾಡ್ತೀನಿ’ ಅನ್ನುವ ಒತ್ತಾಸೆ ಬೇರೆ. ಕುಂಡದಲ್ಲಿಯೇ ಬೆಳೆದ ಗಿಡವೆಲ್ಲಿ ಕಾಡಿನ ಗಾಳಿ ಕುಡಿದು ಮಳೆಯಲ್ಲಿ ಮಿಂದು ಮಣ್ಣಿನ ಸಾರವನ್ನೆಲ್ಲಾ ಹೀರಿಕೊಂಡು ಸುಪುಷ್ಟವಾಗಿ ಬೆಳೆವ ಮರವೆಲ್ಲಿ. ಎತ್ತಣ ಕಛೇರಿ ಎತ್ತಣ ಕಾಲೇಜು! ದಿನಕಳೆದಿದ್ದೇ ಗೊತ್ತಾಗಿರಲಿಲ್ಲ. ಪ್ರೊಫೆಸರ್ ಸ್ಟಾಫ್ ರೂಮಲ್ಲಿ ಅವಳಿಗೆ ಲೆಸನ್ಸ್ ಬಗ್ಗೆ  ಟೀಚ್ ಮಾಡುವಾಗ ಕಟುವಾಸನೆ ರಾಚುತ್ತಿತ್ತು. ಬೆರಳತುದಿಯಲ್ಲಿ ಯಾವಾಗಲೂ ಉರಿವ ಸಿಗರೇಟ್ ಬೇರೆ. ‘ಏನ್ಸಾರ್ ವಾಸನೆ?’ ಅವಳು ಮುಖ ಕಿವುಚಿಕೊಳ್ಳುತ್ತಿದ್ದಳು. ರಾತ್ರಿ ಕುಡಿದಿದ್ದು ಕಾಣ್ರಿ. ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಪಾರ್ಟಿ ಇತ್ತು… ಇದೆಲ್ಲಾ ಸೊಫಿಸ್ಟಿಕೇಟೆಡ್ ಲೈಫಲ್ಲಿ ಕಾಮನ್ ಮೇಡಂ, ಟೇಕ್ ಇಟ್ ಈಸಿ’ ಅನ್ನುತ್ತಿದ್ದ. ಅವಳೂ ಈಸಿಯಾಗಿಯೇ ತೆಗೆದುಕೊಂಡಳು. ಅವಳ ಜೀವನ ವಿಧಾನವೇ ಬದಲಾಗಿತ್ತು. ತನ್ನ ಅವನನ್ನು ನೋಡಲಾಗದ ತೊಳಲಾಟವಂತೂ ಮನದಲ್ಲಿತ್ತು. ಒಂದು ಸಂಜೆ ಆಕಸ್ಮಿಕವೆಂಬಂತೆ ಅವನೇ ಅವಳಿಗೆ ಮಜೆಸ್ಟಿಕ್ನಲ್ಲಿ ಕಂಡ. ಹಳೆ ಪುಸಗಳ ಅಂಗಡಿ ಬಳಿ ನಿಂತಿದ. ಅವಳ ಆನಂದಕ್ಕೆ ಪಾರವೇಯಿಲ್ಲ. ಅವನಿಗೂ ಅಷ್ಟೇ, ಇಬ್ಬರೂ ಪಕ್ಕದ ಹೋಟೆಲ್ಗೆ ನುಗ್ಗಿ ಫ್ಯಾಮಿಲಿ ರೂಮಲ್ಲಿ ಕೂತು ಕಾಫಿ ಹೀರಿದರು. ಅವಳು ತನ್ನ ಕಾಲೇಜು ಲೆಸನ್ಸ್ ಲೈಬ್ರರಿ ಸ್ಟೂಡಂಟ್ಸ್ ಪ್ರೊಫೆಸರ್ ಶ್ಯಾಮಸುಂದರ ಇತ್ಯಾದಿಗಳ ಬಗ್ಗೆ ಗಂಟೆಗಟ್ಟಲೆ ಹೇಳಿಕೊಂಡಳು. ಕ್ಯಾಷ್ಬುಕ್ ಟ್ಯಾಲಿ ಮಾಡಲು ಬಾರದಿದ್ದ ಹುಡುಗಿ ಈಗ ಪ್ರಬುಧಳಂತೆ ಕಂಡಳು, ಅವನ ಬಾಯಿಂದ ಮಾತೇ ಹೂರಡಲಿಲ್ಲ. ಒಳ್ಳೆ ಶೋತೃವಾದ. ಆವಳೇ ಬಿಲ್ಲು ಕೊಟ್ಟಳು. ‘ಸೀಯು ಎಗೇನ್’ ಎಂದು ಸ್ಕೂಟಿ ಏರಿ ಅಂತರ್ಧಾನಳಾದಳು. ಮುಂದೇನಯ್ಯ ಅವನ ಮನಸ್ಸು ಕೇಳಿತು, ‘ಗೊತ್ತಿಲ್ಲವೇ’ ಅಂದ.
*     *     *      *     *

ಆವಳು ಮನೆಗೆ ಬಂದಾಗ ಪ್ರೊ.ಶ್ಯಾಮಸುಂದರ್ ಕೂತಿದ್ದ ಸಿಗರೇಟ್ ವಾಸನೆ ಪಸರಿಸಿತ್ತು. ಆತ ಅವಳ ತಂದೆಯ ಸ್ನೇಹಿತನ ಮಗನಂತೆ. ಅವಳೂ ಬಂದು ಮಾತಿಗೆ  ಕೂತಳು. ಮತ್ತೊಂದು ಡೋಸ್ ಕಾಫಿಯೂ ಬಂತು. ಪ್ರೊಫೆಸರನ ಮಾತು ಕೇಳೋದೆ ಚೆಂದ. ಅವನು ಹೊರಟು ನಿಂತ. ಅವಳು ಬಾಗಿಲವರೆಗೂ ಕಳಿಸಲು ಹೋದಳು. ‘ತಾವು ಬಂದಿದ್ದು ಸಂತೋಷ ಸಾರ್. ಆಗಾಗ ಬರ್ತ ಇರಿ’ ಅಂದಳು. ‘ಯಾಕೆ ದಿನವೂ ಬರಬಾರದೆ’ ಎಂದ. ಆತ ನಗುತ್ತಾ ಕರು ಏರಿದ. ಅವಳಿಗೆ ನಗು ಬಂತು. ಕೈಯಾಡಿಸಿ ಒಳ ಬಂದಳು. ತಂದೆ ಕರೆದಾಗ ಹೋಗಿ ಪಕ್ಕವೇ ಕೂತಳು. ‘ನಿಮ್ಮ ಪೊಫೆಸರ್ ಬಗ್ಗೆ ನಿನ್ನ ಅಭಿಪ್ರಾಯವೇನು ಮಗಳೆ?’ ತಂದೆ ಆವಳ ಕೈಹಿಡಿದು ಕೇಳಿದರು.

‘ಹಿ ಈಸ್ ಜೀನಿಯಸ್’ ಅವಳ ಕಣ್ಣುಗಳೂ ಹೊಳೆದವು.

‘ಜಿನಿಯಸ್ ಅಷ್ಟೇ ಅಲ್ಲ, ಸ್ಥಿತಿವಂತರು. ಅವರ ಮದುವೆ ಬಗ್ಗೆ ಮಾತನಾಡಲು ಬಂದಿದ್ದರು. ವಿಧವೆ ತಾಯಿ ಅವರೂ ಇಬ್ಬರೆ ಮನೆಯಲ್ಲಿ’

‘ಮದುವೇನಾ! ಯಾವಾಗಂತೆ?’ ಅವಳು ಪುಟಿದಳು

‘ಮದುವೆ ಹೆಣ್ಣು ಒಪ್ಪಬೇಕಲ್ಲ?’

‘ಒಪ್ಪದೆ ಏನ್ ದ್ಯಾಡ್, ನಮ್ಮ ಪ್ರೊಫೆಸರನ ಮದುವೆ ಆಗೋಕೆ ಅವಳು ಖಿಂಡಿತಾ ಪುಣ್ಯ ಮಾಡಿರಬೇಕು. ಹೆಣ್ಣು ಯಾರಂತ ಹೇಳಿ ನಾನ್ ಒಪ್ಪಿಸ್ತೀನಿ’

‘ಅವರು ಒಪ್ಪಿದ್ ಹೆಣ್ಣು ನೀನೇನಮ್ಮ.  ಅವರಾಗಿ ಸಂಬಂಧ ಬೆಳೆಸಲು ಬಂದಿದ್ದಾರೆ. ಮನುಷ್ಯ ಯೋಗ್ಯ, ಯೋಚನೆ ಮಾಡಿ ಹೇಳು ಕಂದಾ…. ಬಲವಂತವೇನಿಲ್ಲ’

ಅವಳು ತುಟಿ ಬಿಚ್ಚಲಿಲ್ಲ. ನೇರ ತನ್ನ ಕೋಣೆಗೆ ಬಂದು ವಿಪರೀತ ಆಯಾಸಗೊಂಡವಳಂತೆ ಮೆತ್ತೆಯಲ್ಲಿ ಉರುಳಿದಳು. ಹಾಗಾದರೆ ತನ್ನ ಪ್ರೇಮ? ತನ್ನ ಆ! ಅವನು? ಹೌದು ಅವನನ್ನು ಪ್ರೀತಿಸುತ್ತೇನೆ ಎಂದು ನಾನೆಲ್ಲಿ ಹೇಳಿದ್ದೆ? ಅವನು ಇಷ್ಟಪಡುತ್ತಿದ್ದನಲ್ಲ? ನಿಜ, ನಾನೂ ಇಷ್ಟಪಡುತ್ತಿದ್ದೆ ಹಾಗಂತ ಇಷ್ಟಪಡುವವರನ್ನೆಲ್ಲಾ ಮದುವೆಯಾಗಲು ಸಾಧ್ಯವೇ. ಬಾಳಿಗೆ ಸುಭದ್ರತೆಯನ್ನು ಒದಗಿಸೋ ಮದುವೆ ವಿಚಾರದಲ್ಲಿ ಬೇಜವಾಬ್ದಾರಿ ತೀರ್ಮಾನ ಸರಿಯಿಲ್ಲವೆಂದುಕೊಂಡಾಗ ಅವನೂ ಅವನ ಆದರ್ಶಗಳ ಮುಳ್ಳು ಕಲ್ಲಿನ ಹಾದಿಯಂತೆಯೇ ಭಾಸವಾದವು. ಪೊಫೆಸರ್ಗೆ ದುಶ್ಚಟಗಳಿವೆಯಲ್ಲೆ? ಎಂದಿತವಳ ಮನ. ಮುಳ್ಳುಗಳಿವೆ ಅಂತ ಗುಲಾಬಿ ಗಿಡವನ್ನು ಯಾರಾದರೂ ಕಿತ್ತಸೆದಾರೆ? ಮನವನ್ನೇ ಪ್ರತ್ನಿಸಿದಳು. ನೀನು ನನಗೆ ಮೋಸ ಮಾಡಿದೆ ಅಂತ ಅವನು ಕೇಳಿದರೆ ಏನು ಹೇಳುತ್ತಿ? ‘ಡ್ಯಾಮ್ ಇಟ್. ಆದರ್ಶಗಳೇ ಜೀವನ ಅಂತ ಮೋಸ ಹೋಗಬೇಡ. ನಿನ್ನನ್ನು ನಂಬಿದ ಅಮಾಯಕರಿಗೂ ಮೋಸ ಮಾಡ್ಬೇಡ ಕಣೇ. ಜೀವನದಲ್ಲಿ ಸಂತೋಷ ಕಾಣೋಕೆ ಯತ್ನಿಸು… ಲೈಫ್ ಈಸ್ ಶಾರ್ಟ್ ಮೇಕ್ ಇಟ್ ಸ್ವೀಟ್ ಅಂತ ಲೆಕ್ಟರ್ ಕೊಡ್ತೀನಿ…’ ಮನಸ್ಸು ಮೌನವಾಯಿತು. ಆಕಳಿಕೆಗಳ ಮೇಲೆ ಆಕಳಿಕೆಗಳು ಬಂದವು.
*****

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶ್ರಯ
Next post ಮಿಂಚುಳ್ಳಿ ಬೆಳಕಿಂಡಿ – ೨೭

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys